Advertisement

ಯಾರಿಗೆ ಒಲಿಯಲಿದೆ ಮಂತ್ರಿ ಭಾಗ್ಯ?

10:46 AM May 20, 2018 | Team Udayavani |

ಕಲಬುರಗಿ: ಬಿಜೆಪಿ ನೇತೃತ್ವದ ಸರ್ಕಾರ ಬಹುಮತ ಸಾಬೀತುಪಡಿಸದೇ ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್‌.ಯಡಿಯೂರಪ್ಪ ರಾಜೀನಾಮೆ ನೀಡಿದ್ದರಿಂದ ರಾಜ್ಯದಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ
ಬರುತ್ತಿರುವುದರಿಂದ ಜಿಲ್ಲೆಯಿಂದ ಸಚಿವರು ಯಾರಾಗ್ತಾರೆ ? ಯಾರಿಗೂ ಒಲಿಯುವುದು ಸಚಿವ ಸ್ಥಾನದ ಭಾಗ್ಯ ಎನ್ನುವುದರ ಕುರಿತು ಚರ್ಚೆ ನಡೆದಿದೆ.

Advertisement

ನೆರೆಯ ಬೀದರ್‌ ಜಿಲ್ಲೆಯಿಂದ ಜೆಡಿಎಸ್‌ನ ಬಂಡೆಪ್ಪ ಕಾಶಂಪೂರ ಸಚಿವರಾಗುವುದು ನೂರಕ್ಕೆ ನೂರು ಖಚಿತವಿರುವುದರಿಂದ ವಿಭಾಗೀಯ ಕೇಂದ್ರ ಹೊಂದಿರುವ ರಾಜ್ಯ ರಾಜಕೀಯದಲ್ಲಿ ತನ್ನದೇಯಾದ ಮಹತ್ವ ಪಡೆದಿರುವ ಕಲಬುರಗಿ ಜಿಲ್ಲೆಯಲ್ಲಿ ಜೆಡಿಎಸ್‌ ಒಂದೂ ಸ್ಥಾನ ಪಡೆಯದೇ ಇರುವುದರಿಂದ ಕಾಂಗ್ರೆಸ್‌ಗೆ ಸಚಿವ ಸ್ಥಾನ ಸಿಗುವುದು ಬಹುತೇಕ ನಿಶ್ಚಿತ ಎನ್ನಲಾಗುತ್ತಿದೆ. ಕಾಂಗ್ರೆಸ್‌ನಿಂದ ಜಿಲ್ಲೆಯಿಂದ ಐವರು ಶಾಸಕರಾಗಿ ಆಯ್ಕೆಯಾಗಿದ್ದು, ಯಾರಿಗೆ ಒಲಿಯುತ್ತೇ ಮಂತ್ರಿ ಭಾಗ್ಯ ಎನ್ನುವಂತಾಗಿದೆ.

ಜೇವರ್ಗಿಯಿಂದ ಡಾ| ಅಜಯಸಿಂಗ್‌, ಅಫಜಪುರದಿಂದ ಎಂ.ವೈ. ಪಾಟೀಲ, ಚಿಂಚೋಳಿಯಿಂದ ಡಾ| ಉಮೇಶ ಜಾಧವ್‌, ಚಿತ್ತಾಪುರದಿಂದ ಪ್ರಿಯಾಂಕ್‌ ಖರ್ಗೆ, ಕಲಬುರಗಿ ಉತ್ತರದಿಂದ ಖನೀಜಾ ಫಾತೀಮಾ ಶಾಸಕರಾಗಿ ಚುನಾಯಿತರಾಗಿದ್ದು, ಇವರಲ್ಲಿ ಈಗ ಮಂತ್ರಿ ಸ್ಥಾನ ಡಾ| ಅಜಯಸಿಂಗ್‌ ಅವರ ಪಾಲಾಗಲಿದೆ ಎನ್ನಲಾಗುತ್ತಿದೆ. ಪ್ರಾದೇಶಿಕ ಹಾಗೂ ವರ್ಗವಾರು ಎಲ್ಲವನ್ನು ಅವಲೋಕಿಸಿದಾಗ ಡಾ| ಅಜಯಸಿಂಗ್‌ ಅವರೇ ಸಚಿವರಾಗಲಿದ್ದಾರೆ ಎನ್ನಲಾಗುತ್ತಿದೆ. ಅದೇ ರೀತಿ ಪ್ರಿಯಾಂಕ್‌ ಖರ್ಗೆ ಅವರೂ ಮಂತ್ರಿ ಆಗಬಹುದು ಎಂದು ಮತ್ತೂಂದು ನಿಟ್ಟಿನಲ್ಲಿ ವಿಶ್ಲೇಷಿಸಲಾಗುತ್ತಿದೆ.

ಎಂ.ವೈ. ಪಾಟೀಲ ಕೊನೆ ಘಳಿಗೆಯಲ್ಲಿ ಕಾಂಗ್ರೆಸ್‌ ಗೆ ಬಂದು ಶಾಸಕರಾಗಿದ್ದಾರೆ. ಆದರೆ ಮಾಲಿಕಯ್ಯ ಗುತ್ತೇದಾರ ವಿರುದ್ಧ ಜಯ ಸಾಧಿಸಿದ್ದರಿಂದ ಹಾಗೂ ಹಿರಿಯರು ಎನ್ನುವ ದೃಷ್ಟಿಕೋನದಿಂದ ಸಚಿವ ಸ್ಥಾನಕ್ಕೆ ಪರಿಗಣಿಸುವ ಸಾಧ್ಯತೆಯೂ ಇದೆ. ಜತೆಗೆ ಖನೀಜಾ ಫಾತೀಮಾ ಮೊದಲ ಬಾರಿಗೆ ಶಾಸಕರಾಗಿದ್ದಾರೆ. ಜತೆಗೆ ಆಡಳಿತ ಅನುಭವ ಇರದೇ ಇರುವ ಹಿನ್ನೆಲೆಯಲ್ಲಿ ಇವರ ಹೆಸರು ಮುಂಚೂಣಿಯಲ್ಲಿಲ್ಲ. ಚಿಂಚೋಳಿಯ ಡಾ| ಜಾಧವ್‌ ಹೆಸರೂ ಸಹ ಮಂತ್ರಿ ಸ್ಥಾನಕ್ಕೆ ಕೇಳಿ ಬರುತ್ತಿಲ್ಲ. 

ಪ್ರಿಯಾಂಕ್‌ ಖರ್ಗೆ ಈ ಹಿಂದೆ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರಿಂದ ಜತೆಗೆ ಸಂಸದ ಖರ್ಗೆ ಮಗನಿಗೆ ಸಚಿವ ಸ್ಥಾನ ನೀಡಿ ಹಿರಿಯ ಶಾಸಕರನ್ನು ಕಡೆಗಣಿಸಿದ್ದರು ಎಂಬ ಆರೋಪ ಕೇಳಿ ಬಂದಿರುವುದನ್ನು ಅವಲೋಕಿಸಿದರೆ ಎರಡನೇ ಬಾರಿಗೆ ಜೇವರ್ಗಿಯಿಂದ ಆಯ್ಕೆಯಾಗಿರುವ ಡಾ| ಅಜಯಸಿಂಗ್‌ ಅವರಿಗೆ ಮಂತ್ರಿ ಭಾಗ್ಯ ಸಿಗುವುದು ಬಹುತೇಕ ನಿಶ್ಚಿತ ಎನ್ನಲಾಗುತ್ತಿದೆ. ಡಾ| ಅಜಯಸಿಂಗ್‌ ಅವರಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ
ಸಿಗಲಿದೆ ಎಂದು ಹೇಳಲಾಗುತ್ತಿದೆ. ಆದರೆ ಮಗದೊಂದು ಆಧಾರದ ಮೇಲೆ ಪ್ರಿಯಾಂಕ್‌ ಖರ್ಗೆ ಅವರಿಗೂ ಸಚಿವ ಸ್ಥಾನ ಸಿಕ್ಕರೂ ಆಶ್ಚರ್ಯವಿಲ್ಲ ಎನ್ನಲಾಗುತ್ತಿದೆ.

Advertisement

ಸಚಿವ ಸ್ಥಾನದ ಆಕಾಂಕ್ಷಿ ಬಗ್ಗೆ ಡಾ| ಅಜಯಸಿಂಗ್‌ ಅವರನ್ನು ಉದಯವಾಣಿ ಸಂಪರ್ಕಿಸಿದಾಗ, ಮೊದಲು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆ. ನಂತರ ಸಂಪುಟ ವಿಸ್ತರಣೆ ಸಾಧ್ಯತೆಯಿದೆ. ತಮ್ಮ ಹೆಸರು ಮಂತ್ರಿ ಪಟ್ಟಿಯಲ್ಲಿ ಕೇಳಿ ಬರುತ್ತಿದೆ. ಒಟ್ಟಾರೆ ತಮಗೆ ಮಂತ್ರಿ ಸ್ಥಾನ ನೀಡುವ ವಿಚಾರ ಪಕ್ಷದ ವರಿಷ್ಠರಿಗೆ ಬಿಟ್ಟಿದ್ದು ಎಂದು ಉತ್ತರಿಸಿದ್ದಾರೆ. ಈ ಹಿಂದೆ ಕಲಬುರಗಿ ಜಿಲ್ಲೆಯಿಂದ ಡಾ| ಶರಣಪ್ರಕಾಶ ಪಾಟೀಲ ಹಾಗೂ ಪ್ರಿಯಾಂಕ್‌ ಖರ್ಗೆ ಸಚಿವರಾಗಿದ್ದರು. ಆದರೆ ಈಗ ಸಮ್ಮಿಶ್ರ ಸರ್ಕಾರ ಇರುವುದರಿಂದ ಒಬ್ಬರಿಗೆ ಮಾತ್ರ ಸಚಿವ ಸ್ಥಾನ ಸಿಗುವ ಸಾಧ್ಯತೆಗಳಿವೆ. ಹೀಗಾಗಿ ಡಾ| ಅಜಯಸಿಂಗ್‌ ಇಲ್ಲವೇ ಪ್ರಿಯಾಂಕ್‌ ಖರ್ಗೆ ಸಚಿವರಾಗುವ ಅವಕಾಶಗಳೇ ಹೆಚ್ಚು. ಒಟ್ಟಾರೆ ಇದಕ್ಕೆ ಒಂದೆರಡು ದಿನದಲ್ಲಿ ಉತ್ತರ ಸಿಗಲಿದೆ. 2004 ರಲ್ಲಿ ಚಿಂಚೋಳಿ ಕ್ಷೇತ್ರ ಗೆದ್ದ ಶಾಸಕರು ಅಧಿಕಾರಕ್ಕೆ ಮತ್ತೂಮ್ಮೆ ಸಾಬೀತು: ಜಿಲ್ಲೆಯ ಚಿಂಚೋಳಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗುವ ಪಕ್ಷವೇ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತದೆ ಎಂಬುದು ಈಗ ಮತ್ತೆ ಸಾಬೀತಾದಂತಾಗಿದೆ. ಚಿಂಚೋಳಿ ಕ್ಷೇತ್ರ ಗೆದ್ದ ಶಾಸಕರ ಪಕ್ಷವೇ ಆಡಳಿತದ ಚುಕ್ಕಾಣಿ ಹಿಡಿದಿದೆ. ಈ ಹಿಂದೆ ಚಿಂಚೋಳಿಯಿಂದ ಗೆದ್ದ ವಿರೇಂದ್ರ ಪಾಟೀಲ, ವೀರಯ್ಯ ಸ್ವಾಮಿ, ವೈಜನಾಥ ಪಾಟೀಲ, ಸುನೀಲ ವಲ್ಲ್ಕಾಪುರೆ, ಕಳೆದ ಸಲ ಹಾಗೂ ಈಗ ಡಾ| ಉಮೇಶ ಜಾಧವ್‌ ಆಯ್ಕೆಯಾಗಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಿರುವುದೇ ಇದಕ್ಕೆ ಸಾಕಿ

ವರಿಷ್ಠರಿಗೆ ಬಿಟ್ಟಿದ್ದು ತಮ್ಮ ಹೆಸರು ಸಚಿವ ಸ್ಥಾನದ ಆಕಾಂಕ್ಷಿಯಲ್ಲಿ ಕೇಳಿ ಬರುತ್ತಿದ್ದರೂ ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದಲ್ಲಿ ತಮ್ಮನ್ನು ಮಂತ್ರಿಯಾಗಿಸುವುದು ಪಕ್ಷದ ವರಿಷ್ಠರಿಗೆ ಬಿಟ್ಟ ವಿಷಯ. ಪಕ್ಷ ನೀಡುವ ಯಾವುದೇ
ಜವಾಬ್ದಾರಿ ಸಮರ್ಪಕವಾಗಿ ನಿರ್ವಹಿಸುವೆ. 
 ಡಾ| ಅಜಯಸಿಂಗ್‌,  ಶಾಸಕರು, ಜೇವರ್ಗಿ ಮತಕ್ಷೇತ್ರ

Advertisement

Udayavani is now on Telegram. Click here to join our channel and stay updated with the latest news.

Next