Advertisement

ಕೋಚಿಮುಲ್ನ ಕೆಎಂಎಫ್ ಪ್ರತಿನಿಧಿ ಯಾರಾಗ್ತಾರೆ?

12:39 PM Jun 12, 2019 | Suhan S |

ಕೋಲಾರ: ಪ್ರತಿಷ್ಠಿತ ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಿಂದ ಕೆಎಂಎಫ್ ಪ್ರತಿನಿಧಿಯಾಗಿ ಆಯ್ಕೆಯಾಗುವವರು ಯಾರು? ಈ ಪ್ರಶ್ನೆ ಈಗ ಹಾಲು ಒಕ್ಕೂಟದ ಆಡಳಿತ ಮಂಡಳಿ ನಿರ್ದೇಶಕರಲ್ಲಿ ಪೈಪೋಟಿಗೆ ಕಾರಣವಾಗಿದೆ.

Advertisement

ಮೇ 13 ರಂದು ನಡೆದ ಚುನಾವಣೆಯಲ್ಲಿ ಒಟ್ಟು 13 ಸ್ಥಾನಗಳ ಪೈಕಿ 10 ಸ್ಥಾನ ಕಾಂಗ್ರೆಸ್‌ಗೆ, 2 ಸ್ಥಾನ ಜೆಡಿಎಸ್‌ಗೆ ಮತ್ತು ಒಂದು ಸ್ಥಾನ ಚಿಂತಾಮಣಿ ಸುಧಾಕರರೆಡ್ಡಿ ಬಣಕ್ಕೆ ದಕ್ಕಿತ್ತು. ಮೇ 25 ರಂದು ನಡೆದ ಅಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಮಾಲೂರು ಶಾಸಕ ಕೆ.ವೈ.ನಂಜೇಗೌಡ ಮೈತ್ರಿ ಸರ್ಕಾರದ ಸರ್ವಸಮ್ಮತ ಅಭ್ಯರ್ಥಿಯಾಗಿ ಕೋಚಿಮುಲ್ ಅಧ್ಯಕ್ಷರಾಗಿ ಪುನರಾಯ್ಕೆಯಾಗುವಲ್ಲಿ ಯಶಸ್ವಿಯಾಗಿದ್ದರು.

ಇದೀಗ ಕೋಚಿಮುಲ್ನಿಂದ ಕೆಎಂಎಫ್ ಪ್ರತಿನಿಧಿಯಾಗಿ ಯಾರು ಆಯ್ಕೆಯಾಗುತ್ತಾರೆಂಬ ಬಗ್ಗೆ ಕುತೂಹಲ ಉಂಟಾಗಿದ್ದು, ಜೂ.12 ರಂದು ಕೋಚಿಮುಲ್ ಆಡಳಿತ ಮಂಡಳಿ ಸಭೆಯಲ್ಲಿ ಕೆಎಂಎಫ್ ಪ್ರತಿನಿಧಿಯ ಆಯ್ಕೆಯಾಗಬೇಕಾಗಿದೆ.

ಚಿಕ್ಕಬಳ್ಳಾಪುರಕ್ಕೆ ಅವಕಾಶ: ಕೋಚಿಮುಲ್ ಕಾರ್ಯ ವ್ಯಾಪ್ತಿಯು ಕೋಲಾರ ಮತ್ತು ಚಿಕ್ಕಬಳ್ಳಾಪುರ ಎರಡೂ ಜಿಲ್ಲೆಗಳಿಗೆ ಒಳಪಟ್ಟಿದೆ. ಅಲಿಖೀತ ಒಪ್ಪಂದದ ಪ್ರಕಾರ ಒಮ್ಮೆ ಕೋಲಾರ ಜಿಲ್ಲೆಯ ಭಾಗದವರಿಗೆ ಅಧ್ಯಕ್ಷ ಸ್ಥಾನದ ಅವಕಾಶ ದೊರೆತರೆ ಮತ್ತೂಂದು ಬಾರಿ ಚಿಕ್ಕಬಳ್ಳಾಪುರ ಭಾಗದವರಿಗೆ ಅಧ್ಯಕ್ಷ ಸ್ಥಾನ ನೀಡಲಾಗುತ್ತಿತ್ತು.

ಆದರೆ, ಹಿಂದಿನ ಅವಧಿಗೆ ಕೋಚಿಮುಲ್ ಅಧ್ಯಕ್ಷರಾಗಿದ್ದ ಮಾಲೂರು ಶಾಸಕ ಕೆ.ವೈ.ನಂಜೇಗೌಡರು, ಈ ಅವಧಿಗೂ ಪೈಪೋಟಿಯಲ್ಲಿ ನಿರ್ದೇಶಕರಾಗಿ ಆಯ್ಕೆಯಾದುದಲ್ಲದೆ, ತಮ್ಮ ಶಾಸಕ ಸ್ಥಾನದ ಆಧಾರದ ಮೇಲೆ ಮೈತ್ರಿ ಸರ್ಕಾರದ ಬೆಂಬಲದೊಂದಿಗೆ ಕೋಚಿಮುಲ್ ಅಧ್ಯಕ್ಷರಾಗಿ ಪುನರಾಯ್ಕೆಯಾದರು. ಇದರಿಂದ ಕೆಎಂಎಫ್ ಪ್ರತಿನಿಧಿಯಾಗುವ ಅವಕಾಶ ಸದ್ಯಕ್ಕೆ ಈ ಬಾರಿ ಚಿಕ್ಕಬಳ್ಳಾಪುರ ಜಿಲ್ಲೆಯ ನಿರ್ದೇಶಕರಿಗೆ ದಕ್ಕಬೇಕೆಂಬ ಕೂಗೆದ್ದಿದೆ. ಆದರೆ, ಕೋಲಾರ ಜಿಲ್ಲೆಯ ನಿರ್ದೇಶಕರು ಮೈತ್ರಿ ಸರಕಾರದಲ್ಲಿ ತಮಗೂ ಹಕ್ಕುಂಟು ಎಂಬಂತೆ ಕೆ.ಎಂ.ಎಫ್ ಪ್ರತಿನಿಧಿಯಾಗಲು ಪ್ರಯತ್ನಿಸುತ್ತಿದ್ದಾರೆ.

Advertisement

ಯಾರ ನಡುವೆ ಪೈಪೋಟಿ: ಕೆ.ಎಂ.ಎಫ್ ಪ್ರತಿನಿಧಿಯಾಗಲು ಕೋಲಾರ ಜಿಲ್ಲೆಯಲ್ಲಿ ಕಾಡೇನಹಳ್ಳಿ ನಾಗರಾಜ್‌ ಮತ್ತು ಶ್ರೀನಿವಾಸಪುರದ ಹನುಮೇಶ್‌ ಇತರರು ಕಾತುರರಾಗಿದ್ದಾರೆ. ಇದೇ ರೀತಿಯಲ್ಲಿ ಚಿಕ್ಕಬಳ್ಳಾಪುರ ತಾಲೂಕಿನ ನಳ್ಳಕದಿರೇನಹಳ್ಳಿ ಎಂ.ಸಿ.ವೆಂಕಟೇಶ್‌, ಚಿಂತಾಮಣಿ ಊಲವಾಡಿಯ ವೈ.ಬಿ.ಅಶ್ವತ್ಥನಾರಾಯಣ, ಗೌರಿಬಿದನೂರು ತೊಂಡೇಬಾವಿಯ ಜೆ.ಕಾಂತ್‌ರಾಜ್‌ ಮತ್ತು ಬಾಗೇಪಲ್ಲಿ ಪುಟ್ಟಪರ್ತಿಯ ವಿ.ಮಂಜನಾಥರೆಡ್ಡಿಯ ನಡುವೆ ಕೆ.ಎಂ.ಎಫ್ ಪ್ರತಿನಿಧಿಯಾಗಲು ಪೈಪೋಟಿ ನಡೆದಿದೆ.

ಪಕ್ಷವಾರು ಪೈಪೋಟಿ: ಕೆಎಂಎಫ್ ಅಧ್ಯಕ್ಷರಾಗಲು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಪ್ರಯತ್ನಿಸುತ್ತಿರುವುದರಿಂದ ಚಿಕ್ಕಬಳ್ಳಾಪುರ ಅಥವಾ ಕೋಲಾರ ಜಿಲ್ಲೆಯಿಂದ ಆಯ್ಕೆಯಾಗಿರುವ ಜೆಡಿಎಸ್‌ ಬೆಂಬಲಿತ ನಿರ್ದೇಶಕ ನಳ್ಳಕದಿರೇನಹಳ್ಳಿಯ ಎಂ.ಸಿ.ವೆಂಕಟೇಶ್‌ ಅಥವಾ ಮುಳಬಾಗಿಲು ತಾಲೂಕಿನ ಕಾಡೇನಹಳ್ಳಿ ನಾಗರಾಜ್‌ರನ್ನು ಆಯ್ಕೆ ಮಾಡಿ ಕಳುಹಿಸುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮೌಖೀಕವಾಗಿ ಸೂಚನೆ ನೀಡಿದ್ದಾರೆನ್ನಲಾಗಿದೆ.

ಆದರೆ, ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಕಾಂಗ್ರೆಸ್‌ ನಿರ್ದೇಶಕರು ಆಯ್ಕೆಯಾಗಿರುವುದರಿಂದ ಕಾಂಗ್ರೆಸ್‌ ಪಕ್ಷದಿಂದಲೇ ಕೆ.ಎಂ.ಎಫ್ ಪ್ರತಿನಿಧಿ ಆಯ್ಕೆ ಮಾಡುತ್ತೇವೆ. ಅವರಿಂದಲೇ ಮೈತ್ರಿ ಸರಕಾರದ ಅಭ್ಯರ್ಥಿಗೆ ಮತವನ್ನು ಹಾಕಿಸುತ್ತೇವೆ ಎಂದು ಕೋಲಾರ ಚಿಕ್ಕಬಳ್ಳಾಪುರದ ಕಾಂಗ್ರೆಸ್‌ ಶಾಸಕರು ವಾದ ಮಂಡಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಸರ್ವ ಸಮ್ಮತ ಅಭ್ಯರ್ಥಿಯಾದರೆ ಕಾಂಗ್ರೆಸ್‌ ಬೆಂಬಲಿತ ನಿರ್ದೇಶಕರು ಕೆಎಂಎಫ್ ಪ್ರತಿನಿಧಿಯಾಗುವುದು ಖಚಿತವಾಗಿದೆ. ಆದರೆ, ಇದಕ್ಕೆ ಕಾಂಗ್ರೆಸ್‌ ಪಕ್ಷದೊಳಗಿನ ಗುಂಪುಗಳು ಒಗ್ಗೂಡಬೇಕಾಗಿದೆ.

ಪಕ್ಷೇತರರ ಪ್ರಯತ್ನ: ಪಕ್ಷೇತರರಾಗಿದ್ದರೂ ಲೋಕಸಭಾ ಚುನಾವಣೆಯಲ್ಲಿ ಸ್ಪೀಕರ್‌ ರಮೇಶ್‌ ಕುಮಾರ್‌ ಬಣದೊಂದಿಗೆ ಗುರುತಿಸಿಕೊಂಡು ಕೆ.ಎಚ್.ಮುನಿಯಪ್ಪರ ಸೋಲಿಗೆ ಪ್ರಮುಖ ಕಾರಣಕರ್ತರಾದ ಚಿಂತಾಮಣಿಯ ಸುಧಾಕರರೆಡ್ಡಿ, ಈ ಬಾರಿ ಕೆಎಂಎಫ್ ಪ್ರತಿನಿಧಿಯಾಗುವ ಅವಕಾಶ ಚಿಂತಾಮಣಿಯ ತಮ್ಮ ಬೆಂಬಲಿಗ ವೈ.ಬಿ.ಅಶ್ವತ್ಥನಾರಾಯಣ ಅವರಿಗೆ ಸಿಗಬೇಕೆಂದು ಪ್ರಯತ್ನಿಸುತ್ತಿದ್ದಾರೆ. ಈ ಪ್ರಯತ್ನಕ್ಕೆ ಜೋಡಿ ಜಿಲ್ಲೆಯ ಕಾಂಗ್ರೆಸ್‌ ಶಾಸಕರು ಹೇಗೆ ಸ್ಪಂದಿಸುತ್ತಾರೋ ಕಾದು ನೋಡಬೇಕಾಗಿದೆ.

‘ಕೈ’ ಗೇ ಪ್ರತಿನಿಧಿ ಸ್ಥಾನ ಸಿಗಲು ಸಿದ್ದು ಫ‌ರ್ಮಾನು:

ಕೆಎಂಎಫ್ ಪ್ರತಿನಿಧಿ ಆಯ್ಕೆಗೆ ಆಡಳಿತ ಮಂಡಳಿಯಲ್ಲಿ ಆಂತರಿಕ ಚುನಾವಣೆ ನಡೆದಲ್ಲಿ, ಫ‌ಲಿತಾಂಶ ಹೀಗೆ ಇರುತ್ತದೆಯೆಂದು ಹೇಳಲು ಸಾಧ್ಯವಿಲ್ಲ. ಚುನಾವಣೆಯಾದಲ್ಲಿ ಕಾಂಗ್ರೆಸ್‌ ಗುಂಪುಗಾರಿಕೆಯ ಲಾಭವನ್ನು ಪಡೆದುಕೊಂಡು ಜೆಡಿಎಸ್‌ ಗೆಲುವು ಸಂಪಾದಿಸಿದರೂ ಅಚ್ಚರಿ ಪಡಬೇಕಾಗಿಲ್ಲ. ಈಗಾಗಲೇ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಕಾಂಗ್ರೆಸ್ಸಿಗರಿಗೆ ಸ್ಪಷ್ಟವಾದ ಸೂಚನೆಯನ್ನು ನೀಡಿದ್ದು, ಯಾವುದೇ ಕಾರಣಕ್ಕೂ ಎಚ್.ಡಿ.ರೇವಣ್ಣ ಕೆ.ಎಂ.ಎಫ್ ಅಧ್ಯಕ್ಷ ರಾಗುವುದನ್ನು ತಡೆಯಬೇಕು, ಇದಕ್ಕಾಗಿ ಪ್ರತಿ ಜಿಲ್ಲೆಯಿಂದಲೂ ಕಾಂಗ್ರೆಸ್‌ ಬೆಂಬಲಿತ ನಿರ್ದೇಶಕರೇ ಪ್ರತಿನಿಧಿಯಾಗಿ ಆಯ್ಕೆಯಾಗಬೇಕೆಂದು ಫ‌ರ್ಮಾನು ಹೊರಡಿಸಿರುವುದು ಸುದ್ದಿಯಾಗಿದೆ. ಆದರೆ, ಲೋಕಸಭಾ ಚುನಾವಣೆಯಲ್ಲಿ ಛಿದ್ರವಾಗಿರುವ ಕೋಲಾರ, ಚಿಕ್ಕಬಳ್ಳಾಪುರ ಕಾಂಗ್ರೆಸ್‌ ಗುಂಪುಗಳು ಹೇಗೆ ಸಿದ್ದರಾಮಯ್ಯರ ಸೂಚನೆಗೆ ಸ್ಪಂದಿಸುತ್ತವೆ ಎನ್ನುವುದೇ ಕುತೂಹಲದ ಸಂಗತಿ. ಇಷ್ಟಕ್ಕೂ ಕೆಎಂಎಫ್ ಪ್ರತಿನಿಧಿ ಆಯ್ಕೆ ವಿಚಾರ ಚುನಾವಣೆಯಲ್ಲಿ ನಿರ್ಧಾರವಾಗುವಂತಾದರೆ, ಮೈತ್ರಿ ಸರ್ಕಾರದಿಂದ ಆಡಳಿತ ಮಂಡಳಿಗೆ ನೇಮಕಗೊಂಡಿರುವ ಮೂವರು ಅಧಿಕಾರಿಗಳು ಹಾಗೂ ಕೆ.ಎಚ್.ಮುನಿಯಪ್ಪ ಗುಂಪಿನ ಬೆಂಬಲದೊಂದಿಗೆ ಜೆಡಿಎಸ್‌ನ ನಿರ್ದೇಶಕರ ಪೈಕಿ ಕಾಡೇನಹಳ್ಳಿ ನಾಗರಾಜ್‌ ಅಥವಾ ಚಿಕ್ಕಬಳ್ಳಾಪುರದ ವೆಂಕಟೇಶ್‌ ಆಯ್ಕೆಯಾಗುವ ಸಾಧ್ಯತೆಗಳು ದಟ್ಟವಾಗಿದೆ. ಇಲ್ಲವೇ ಕಾಂಗ್ರೆಸ್ಸಿಗರು ಒಗ್ಗೂಡಿ ಕೆಎಂಎಫ್ ಪ್ರತಿನಿಧಿಯನ್ನು ಆಯ್ಕೆ ಮಾಡಿಕೊಂಡರೆ ಚಿಕ್ಕಬಳ್ಳಾಪುರ ಜಿಲ್ಲೆಯ ನಿರ್ದೇಶಕರ ಪೈಕಿ ಒಬ್ಬರು ಕೆಎಂಎಫ್ ಪ್ರತಿನಿಧಿಯಾಗುವ ಸಾಧ್ಯತೆಗಳಿವೆ.
ಒಮ್ಮತದ ಆಯ್ಕೆಗೆ ನಾಯಕರು ಸಭೆ ಸೇರಲಿಲ್ಲ:

ಸಾಮಾನ್ಯವಾಗಿ ಕೋಚಿಮುಲ್ ವಿಚಾರದಲ್ಲಿ ಉಭಯ ಜಿಲ್ಲೆಯ ಶಾಸಕರು, ಸಚಿವರು ಒಂದೆಡೆ ಕುಳಿತು ಯಾರನ್ನು ಆಯ್ಕೆ ಮಾಡಬೇಕೆಂದು ಪೂರ್ವಭಾವಿಯಾಗಿ ನಿರ್ಧರಿಸುತ್ತಿದ್ದರು. ಆದರೆ, ಕೆ.ಎಂ.ಎಫ್ ಪ್ರತಿನಿಧಿ ವಿಚಾರದಲ್ಲಿ ಯಾರೂ ಮಂಗಳವಾರ ಸಂಜೆಯವರೆಗೂ ಸಭೆ ಸೇರಿರಲಿಲ್ಲ. ಆದರೂ, ಚಿಕ್ಕಬಳ್ಳಾಪುರ ಮೆಗಾ ಡೇರಿ ಸಭೆಯಲ್ಲಿ ಕೆ.ಎಂ.ಎಫ್ ಪ್ರತಿನಿಧಿ ಆಯ್ಕೆ ವಿಚಾರದ ಪ್ರಸ್ತಾಪವಾಗಿದೆ. ಸ್ಪೀಕರ್‌ ರಮೇಶ್‌ಕುಮಾರ್‌ ತಮ್ಮ ಕ್ಷೇತ್ರದ ಹನುಮೇಶ್‌ ಕೆಎಂಎಫ್ ಪ್ರತಿನಿಧಿಯಾಗಬೇಕೆಂದು ಬಯಸುತ್ತಿದ್ದಾರೆ. ಎಚ್.ಎನ್‌.ಶಿವಶಂಕರರೆಡ್ಡಿ ಚಿಕ್ಕಬಳ್ಳಾಪುರ ಭಾಗಕ್ಕೆ ಕೆಎಂಎಫ್ ಪ್ರತಿನಿಧಿ ಸಿಗಬೇಕೆಂದು ಪ್ರಯತ್ನಿಸುತ್ತಿದ್ದಾರೆ. ಕೆ.ಎಚ್.ಮುನಿಯಪ್ಪ ಈ ಬಣದ ಆಯ್ಕೆಗೆ ಟಾಂಗ್‌ ನೀಡಬೇಕೆಂದು ಕಾಯುತ್ತಿದ್ದಾರೆ. ಕಾಂಗ್ರೆಸ್‌ ಗುಂಪುಗಾರಿಕೆ ನಡುವೆ ಜೆಡಿಎಸ್‌ ತಮಗೆ ಬೇಕಾದ ನಿರ್ದೇಶಕರನ್ನು ಆಯ್ಕೆ ಮಾಡಿಕೊಳ್ಳಲು ಹವಣಿಸುತ್ತಿದೆ.
● ಕೆ.ಎಸ್‌.ಗಣೇಶ್‌
Advertisement

Udayavani is now on Telegram. Click here to join our channel and stay updated with the latest news.

Next