Advertisement

ಬಾದಾಮಿಗೆ ಸಿದ್ದರಾಮಯ್ಯ ಉತ್ತರಾಧಿಕಾರಿ ಯಾರು?ಕ್ಷೇತ್ರದಲ್ಲಿದ್ದಾರೆ 12 ಜನ ಆಕಾಂಕ್ಷಿಗಳು

04:08 PM Jan 10, 2023 | Team Udayavani |

ಬಾಗಲಕೋಟೆ: ಕಳೆದ 2018ರ ವಿಧಾನಸಭೆ ಚುನಾವಣೆಯಲ್ಲಿ ಕೊನೆ ಗಳಿಗೆಯಲ್ಲಿ ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸಿ, ಅಲ್ಪಮತಗಳ ಅಂತರದಿಂದ ಗೆದ್ದು ರಾಜಕೀಯ ಪುನರ್‌ ಜನ್ಮ ಪಡೆದಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪುನಃ ಬಾದಾಮಿ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ ಎಂಬ ನಿರೀಕ್ಷೆ ಹುಸಿಯಾಗಿದೆ.

Advertisement

ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುವುದಾಗಿ ಸೋಮವಾರ ಘೋಷಿಸಿದ ಬೆನ್ನಲ್ಲೇ ಬಾದಾಮಿ ಕ್ಷೇತ್ರದಲ್ಲಿ ಮುಂದಿನ ಕಾಂಗ್ರೆಸ್‌ ಅಭ್ಯರ್ಥಿ ಯಾರಾಗ್ತಾರೆ ಎಂಬ ಲೆಕ್ಕಾಚಾರವೂ ಆರಂಭವಾಗಿದೆ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ವೇಳೆ  ಅವರು ವರುಣಾ ಕ್ಷೇತ್ರವನ್ನು ಪುತ್ರನಿಗೆ ಬಿಟ್ಟುಕೊಟ್ಟು, ಚಾಮುಂಡೇಶ್ವರಿ ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದರು.

ಜತೆಗೆ ಕೊನೆ ಗಳಿಗೆಯಲ್ಲಿ ಬಾದಾಮಿ ಕ್ಷೇತ್ರದಲ್ಲೂ ನಾಮಪತ್ರ ಸಲ್ಲಿಸಿದ್ದರು. ಆಗ ಬಾದಾಮಿ ಕ್ಷೇತ್ರಕ್ಕೆ ಖ್ಯಾತ ವೈದ್ಯ ಡಾ|ದೇವರಾಜ ಪಾಟೀಲರಿಗೆ ಎಐಸಿಸಿ ಟಿಕೆಟ್‌ ಘೋಷಣೆ ಮಾಡಿತ್ತು.ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದಿಂದ ಸ್ಪರ್ಧೆ ಮಾಡಿದಾಗ, ಸ್ಥಳೀಯ ಕಾಂಗ್ರೆಸ್‌ ಪ್ರಮುಖರು ಒಗ್ಗಟ್ಟಿನಿಂದ ಅವರ ಪರವಾಗಿ ಶ್ರಮಿಸಿದ್ದರು. ಬಾದಾಮಿ ಜನರು,  ಸಿದ್ದರಾಮಯ್ಯ ಅವರನ್ನು ಗೆಲ್ಲಿಸಿ ರಾಜಕೀಯ ಪುನರ್‌ಜನ್ಮ ನೀಡಿದ್ದಾರೆ ಎಂದೇ ರಾಜಕೀಯ ವಲಯದಲ್ಲಿ ಬಹು ಚರ್ಚೆಯಾಗಿತ್ತು.

ಕ್ಷೇತ್ರ ತೊರೆಯಲು ಕಾರಣ ಏನು?: ಸಿದ್ದರಾಮಯ್ಯ ಅವರು ಬಾದಾಮಿಯಿಂದ ಆಯ್ಕೆಯಾದ ಬಳಿಕ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಆಗಿವೆ. ಹಿಂದೆಂದೂ ಕಾಣದಂತಹ ಯೋಜನೆಗಳನ್ನು ಬಾದಾಮಿ ಕ್ಷೇತ್ರದ ಜನ ಕಂಡಿದ್ದಾರೆ. ಆದರೆ, ಪಕ್ಷ ಸಂಘಟನೆ, ಇಲ್ಲಿನ ನಾಯಕರ ಒಗ್ಗೂಡಿಸುವಿಕೆ, ಇಡೀ ಜಿಲ್ಲೆಗೆ ಅವರ ಕೊಡುಗೆ ವಿಷಯದಲ್ಲಿ ಪಕ್ಷದಲ್ಲಿದ್ದ ಅಸಮಾ ಧಾನ ಜತೆಗೆ ಮುಖ್ಯವಾಗಿ ಒಂದೇ ಕಲ್ಲಿನಿಂದ ಎರಡು ಹಕ್ಕಿ ಹೊಡೆಯುವ ತಂತ್ರಗಾರಿಕೆಯೊಂದಿಗೆ ಬಾದಾಮಿಗೆ ಕರೆತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಕೆಲ ಹಿರಿಯ ನಾಯಕರೇ ದೂರ ಸರಿದಿದ್ದು ಮುಂದಿನ ಚುನಾವಣೆಯಲ್ಲಿ ಸಮಸ್ಯೆಯಾಗಬಹುದು ಎಂಬ ಮುಂದಾಲೋಚನೆಯಿಂದ ಕ್ಷೇತ್ರ ತೊರೆದಿದ್ದಾರೆ ಎಂಬ ಮಾತೂ ಕೇಳಿಬಂದಿದೆ. ಆದರೆ, ಬಾದಾಮಿ ಬೆಂಗಳೂರಿನಿಂದ ದೂರ ಇರುವುದು ಹಾಗೂ ರಾಜ್ಯದ ವಿವಿಧೆಡೆ  ಪ್ರವಾಸಕ್ಕೆ ಸುಲಭವಾಗುವಂತೆ ಬೆಂಗಳೂರಿಗೆ ಸಮೀಪದ ಕೋಲಾರ ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದಾರೆ ಎಂಬುದು ಬಹುತೇಕ ಜನರ  ಅಭಿಮತ. ಅದೇನೇ ಇರಲಿ, ರಾಜಕೀಯ ಪುನರ್‌ಜನ್ಮ ನೀಡಿದ ಕ್ಷೇತ್ರ ತೊರೆಯಬಾರದಿತ್ತು ಎಂಬುದು ಕೆಲವರ ಅಭಿಪ್ರಾಯ.

ಉತ್ತರಾಧಿಕಾರಿ ಯಾರು?:
ಸಿದ್ದರಾಮಯ್ಯ ಕ್ಷೇತ್ರ ತೊರೆಯುವುದು ಖಚಿತವಾಗುತ್ತಿದ್ದಂತೆ ಪಕ್ಷದಲ್ಲಿ ಟಿಕೆಟ್‌ಗಾಗಿ ಪೈಪೋಟಿ ಜೋರಾ ಗುವುದು ಖಚಿತವಾಗಿದೆ. ಕಳೆದ ಬಾರಿ ಇಲ್ಲಿ ಟಿಕೆಟ್‌ ಘೋಷಣೆಯಾಗಿದ್ದ ಡಾ|ದೇವರಾಜ ಪಾಟೀಲರು, ಈ ಬಾರಿ ಬಾಗಲಕೋಟೆ ಕ್ಷೇತ್ರದಿಂದ ಟಿಕೆಟ್‌ ಕೇಳಿದ್ದಾರೆ. ಸುಮಾರು 12 ಮಂದಿ ಈಗಾ ಗ ಲೇ ಬಾದಾಮಿ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ ಕಳೆದ ಹಲವಾರು ವರ್ಷಗಳಿಂದ ಸಿದ್ದರಾಮಯ್ಯ ಅವರ ಪಕ್ಕಾ ಶಿಷ್ಯನಾಗಿ, ಕಳೆದ ನಾಲ್ಕು ವರ್ಷಗಳಿಂದ ಸಿದ್ದರಾಮಯ್ಯ ಅವರ ಉತ್ತರಾಧಿಕಾರಿಯಾಗಿ ಇಡೀ ಕ್ಷೇತ್ರದ ಕೆಲಸ ಕಾರ್ಯ ನೋಡಿಕೊಂಡಿದ್ದ ಯುವ ಮುಖಂಡ ಹೊಳಬಸು ಶೆಟ್ಟರ ಹೆಸರು ಪ್ರಬಲವಾಗಿ ಕೇಳಿಬರುತ್ತಿದೆ.

Advertisement

ಅವರೊಂದಿಗೆ ಮಾಜಿ ಸಚಿವ ಬಿ.ಬಿ. ಚಿಮ್ಮನಕಟ್ಟಿ ಅವರ ಪುತ್ರ ಭೀಮಸೇನ ಚಿಮ್ಮನಕಟ್ಟಿ ಮತ್ತು ಮಹೇಶ ಹೊಸಗೌಡರ ಅವರ ಹೆಸರೂ ಮುಂಚೂಣಿಯಲ್ಲಿವೆ. ಕೊನೆಗಳಿಗೆಯಲ್ಲಿ ಪಕ್ಷ ಯಾರಿಗೆ ಟಿಕೆಟ್‌ ಕೊಡುತ್ತದೆ ಕಾದು ನೋಡಬೇಕು.

ಸಿದ್ದರಾಮಯ್ಯ ಅವರು ಕೋಲಾರ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ಹೇಳಿದ್ದು, ಅಲ್ಲಿನ ಜನರಿಗೆ ತುಂಬಾ ಖುಷಿಯಾಗಿದೆ. ಆದರೆ, ನಮ್ಮ ಕ್ಷೇತ್ರದಿಂದಲೂ ಸ್ಪರ್ಧೆ ಮಾಡಿ ಎಂದು ಮನವಿ ಮಾಡುತ್ತೇವೆ. ನಮಗೆ ತುಂಬಾ ಬೇಸರವಾಗಿದೆ. ಇಡೀ ಕ್ಷೇತ್ರದ ಪ್ರಮುಖರೊಂದಿಗೆ ಅವರನ್ನು ಮತ್ತೆ ಭೇಟಿ ಮಾಡಿ, ಮನವಿ ಮಾಡುತ್ತೇವೆ. ನಮ್ಮ ಕ್ಷೇತ್ರ ಬಿಡಬೇಡಿ ಎಂದು ಕೇಳಿಕೊಳ್ಳುತ್ತೇವೆ. *ಹೊಳಬಸು ಶೆಟ್ಟರ, ಯುವ ಮುಖಂಡ, ಗುಳೇದಗುಡ್ಡ-ಬಾದಾಮಿ

*ಶ್ರೀಶೈಲ ಕೆ. ಬಿರಾದಾರ

 

Advertisement

Udayavani is now on Telegram. Click here to join our channel and stay updated with the latest news.

Next