Advertisement

ನಾಯಿ ಕಡಿದರೆ ಯಾರು ಹೊಣೆ? ಇಲ್ಲಿದೆ ಮಾಹಿತಿ…

12:05 AM Oct 25, 2023 | Team Udayavani |

ವಾಘ್ ಬಕ್ರೀ ಟೀ ಗ್ರೂಪ್‌ನ ಕಾರ್ಯಕಾರಿ ನಿರ್ದೇಶಕ ಪರಾಗ್‌ ದೇಸಾಯಿ ಅವರು ಬೀದಿ ನಾಯಿಗಳ ಉಪಟಳದಿಂದಾಗಿ ಅಹ್ಮದಾಬಾದ್‌ನಲ್ಲಿನ ಮನೆಯ ಮುಂದೆಯೇ ಬಿದ್ದು ಸಾವನ್ನಪ್ಪಿದ್ದಾರೆ. ರವಿವಾರ ಈ ಘಟನೆ ನಡೆದಿದ್ದು, ಬೀದಿ ನಾಯಿಗಳಿಂದ ತಪ್ಪಿಸಿಕೊಳ್ಳಲು ಹೋಗಿ, ಬಿದ್ದ ಪರಿಣಾಮ ಬ್ರೈನ್‌ ಹ್ಯಾಮರೇಜ್‌ ಆಗಿ ಮೃತಪಟ್ಟಿದ್ದಾರೆ. ಈ ಸಾವಿನ ಬಳಿಕ ದೇಶಾದ್ಯಂತ ಮತ್ತೆ ಬೀದಿ ನಾಯಿಗಳ ಉಪಟಳದ ಬಗ್ಗೆ ಚರ್ಚೆ ಶುರುವಾಗಿದೆ. ನಾಯಿಗಳ ನಿಯಂತ್ರಣ ಹೇಗೆ? ನಾಯಿಗಳು ಕಚ್ಚಿದರೆ ಯಾರು ಹೊಣೆ? ಇಲ್ಲಿದೆ ಮಾಹಿತಿ…

Advertisement

ಮನುಷ್ಯರ ಮೇಲೆ ದಾಳಿಗೆ ಕಾರಣ?

ಭಾರತದಲ್ಲೀಗ 140 ಕೋಟಿ ಜನಸಂಖ್ಯೆ ಇದೆ. ನಾಯಿಗಳ ಸಮಸ್ಯೆ ಹಳ್ಳಿಗಳಿಗಿಂತ ಹೆಚ್ಚಾಗಿ ನಗರ ಪ್ರದೇಶಗಳಲ್ಲೇ ಹೆಚ್ಚು ಕಾಣಿಸಿಕೊಳ್ಳುತ್ತದೆ. ಇಲ್ಲಿನ ಜನಸಾಂದ್ರತೆಯೇ ನಾಯಿಗಳ ಉಪಟಳಕ್ಕೆ ಕಾರಣ ಎಂಬುದು ಕೆಲವು ವರದಿಗಳ ಅಭಿಪ್ರಾಯ. ಆದರೆ ಇದಕ್ಕಿಂತ ಹೆಚ್ಚಾಗಿ, ಪ್ರಮುಖ ಕಾರಣಗಳು ಬೇರೆಯೇ ಇವೆ. ಭಾರತದಲ್ಲಿ ಪ್ರಾಣಿಗಳ ಆರೋಗ್ಯ ಕ್ಷೇಮ ಮತ್ತು ನಿಯಂತ್ರಣದ ಬಗ್ಗೆ ನಿಗದಿತ ವ್ಯವಸ್ಥೆ ಇಲ್ಲ. ಪ್ರಾಣಿಗಳ ನಿಯಂತ್ರಣಕ್ಕೆ ನಿಗದಿತ ವ್ಯವಸ್ಥೆ ಇಲ್ಲದಿರುವುದರಿಂದ ನಾಯಿಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. ಇದರ ಜತೆಯಲ್ಲೇ ಹೆಚ್ಚುತ್ತಿರುವ ನಾಯಿಗಳಿಗೆ ಸಿಗಬೇಕಾದ ಆಹಾರವೂ ಸಿಗುತ್ತಿಲ್ಲ. ಇಂಥ ವೇಳೆ ಸಿಟ್ಟಿಗೆದ್ದ ನಾಯಿಗಳು ಮನುಷ್ಯರ ಮೇಲೆ ದಾಳಿ ಮಾಡುತ್ತವೆ. ಜತೆಗೆ ಹಲವಾರು ಸೋಂಕಿಗೂ ಕಾರಣವಾಗುತ್ತಿವೆ.

ನಾಯಿಗಳ ಸಂಖ್ಯೆ ಎಷ್ಟು?

ಭಾರತದಲ್ಲಿ 1 ಕೋಟಿಗೂ ಹೆಚ್ಚು ಸಾಕು ನಾಯಿಗಳಿದ್ದರೆ, 3.5 ಕೋಟಿ ಬೀದಿ ನಾಯಿಗಳಿವೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಮಂಡಳಿ ಪ್ರಕಾರ, 2019ರಲ್ಲಿ ನಾಯಿ ಕಡಿತದಿಂದಾಗಿ 4,146 ಮಂದಿ ಸಾವನ್ನಪ್ಪಿದ್ದರು. ಮಗದೊಂದು ವರದಿ ಪ್ರಕಾರ, 2019ರಿಂದ ಈಚೆಗೆ ದೇಶದಲ್ಲಿ 1.5 ಕೋಟಿ ಮಂದಿಗೆ ನಾಯಿಗಳು ಕಚ್ಚಿವೆ. ಇಡೀ ದೇಶದಲ್ಲಿ ಉತ್ತರ ಪ್ರದೇಶದಲ್ಲೇ ಅತೀ ಹೆಚ್ಚು ನಾಯಿ ಕಡಿತಕ್ಕೊಳಗಾದ ಪ್ರಕರಣಗಳು ದಾಖಲಾಗಿವೆ. ಇಲ್ಲಿ 27.52 ಲಕ್ಷ ಮಂದಿ ನಾಯಿ ಕಡಿತಕ್ಕೊಳಗಾಗಿದ್ದಾರೆ. ತಮಿಳುನಾಡು 20 ಲಕ್ಷ, ಮಹಾರಾಷ್ಟ್ರ 15 ಲಕ್ಷ ಮಂದಿಗೆ ನಾಯಿ ಕಡಿದಿವೆ.

Advertisement

ದೇಶದಲ್ಲಿರುವ ಕಾನೂನು

ಭಾರತದಲ್ಲಿರುವ ಕಾನೂನುಗಳು ಬೀದಿ ನಾಯಿಗಳ ಪರವಾಗಿಯೇ ಇವೆ. ಅಚ್ಚರಿ ಎನ್ನಿಸಿದರೂ ಇದು ಸತ್ಯ. ಬೀದಿ ನಾಯಿಯೊಂದು, ಬೀದಿಯೊಂದನ್ನು ತನ್ನ ಆವಾಸ ಸ್ಥಾನ ಎಂದುಕೊಂಡರೆ ಅವುಗಳನ್ನು ಅಲ್ಲಿಂದ ತೆರವುಗೊಳಿಸುವುದು ತಪ್ಪಾಗುತ್ತದೆ. ಬೇರೆಯವರು ಅದನ್ನು ದತ್ತು ತೆಗೆದುಕೊಂಡರೆ ಮಾತ್ರ ಅದು ಅಲ್ಲಿಂದ ಹೋಗಬಹುದು. ಇಲ್ಲದಿದ್ದರೆ ಅವುಗಳಿಗೆ ಆ ಬೀದಿಯಲ್ಲಿ ವಾಸಿಸುವ ಎಲ್ಲ ಹಕ್ಕುಗಳಿವೆ.

ಭಾರತದಲ್ಲಿ 2001ರಿಂದಲೂ ಬೀದಿ ನಾಯಿಗಳ ಹತ್ಯೆಯನ್ನು ನಿಷೇಧಿಸಲಾಗಿದೆ. 2008ರಲ್ಲಿ ಮುಂಬಯಿ ಮಹಾನಗರ ಪಾಲಿಕೆಯು ಬೀದಿ ನಾಯಿಗಳನ್ನು ಹತ್ಯೆ ಮಾಡಲು ಮುಂದಾಗಿದ್ದು, ಇದಕ್ಕೆ ಬಾಂಬೆ ಹೈಕೋರ್ಟ್‌ ಒಪ್ಪಿಗೆಯನ್ನೂ ನೀಡಿತ್ತು. ಆದರೆ ಇದನ್ನು ಸುಪ್ರೀಂ ಕೋರ್ಟ್‌ ವಜಾ ಮಾಡಿತ್ತು.

ಭಾರತೀಯ ಸಂವಿಧಾನದ ಆರ್ಟಿಕಲ್‌ 51ಎ(ಜಿ) ಪ್ರಕಾರ, ಭಾರತದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯು ಪ್ರಾಣಿಯನ್ನು ಕಾಪಾಡಬೇಕು ಮತ್ತು ಇತರ ಜೀವವಿರುವ ಪ್ರಾಣಿಗಳ ಬಗ್ಗೆ ದಯೆ ಹೊಂದಿರಬೇಕು.  ಇದರ ಜತೆಗೆ ಬೀದಿ ನಾಯಿಗಳಿಗೆ ಆಹಾರ ಒದಗಿಸುವುದು ಕಾನೂನು ಬದ್ಧ. ಕಳೆದ ವರ್ಷ ದಿಲ್ಲಿ ಹೈಕೋರ್ಟ್‌ ಈ ಬಗ್ಗೆ ಆದೇಶವೊಂದನ್ನು ನೀಡಿ, ಪ್ರದೇಶವೊಂದರ ನಿವಾಸಿಗಳು ಬೀದಿ ನಾಯಿಗಳಿಗೆ ಆಹಾರ ಒದಗಿಸಬಹುದು ಎಂದಿತ್ತು.

ಕಾನೂನಿನ ಪ್ರಕಾರ, ಬೀದಿ ನಾಯಿಗಳನ್ನು ಅವುಗಳಿರುವ ಆವಾಸ ಸ್ಥಾನದಿಂದ ತೆರವು ಗೊಳಿಸುವಂತಿಲ್ಲ. ಆದರೆ ಮಹಾನಗರ ಪಾಲಿಕೆ ಅಥವಾ ಸ್ಥಳೀಯ ಸಂಸ್ಥೆಗಳು ಅಥವಾ ಸರಕಾರೇತರ ಸಂಸ್ಥೆಗಳು ಅವುಗಳನ್ನು ತೆಗೆದುಕೊಂಡು ಹೋಗಿ, ಅವುಗಳಿಗೆ ಜನನ ನಿಯಂತ್ರಣ ಚುಚ್ಚುಮದ್ದು ಹಾಕಿಸಿ, ಅವುಗಳು ಎಲ್ಲಿದ್ದವೋ ಅಲ್ಲಿಗೇ ತಂದು ಬಿಡಬೇಕು ಎಂಬ ಕಾನೂನು ಇದೆ.

ಸಾಕು ನಾಯಿಗಳ ನೋಂದಣಿ

ಭಾರತದಲ್ಲಿ ಹೀಗೇ ಸಾಕು ನಾಯಿಗಳ ನೋಂದಣಿ ಮಾಡಿಸಬೇಕು ಎಂಬ ನಿಯಮವೇನಿಲ್ಲ. ಆದರೂ ಸ್ಥಳೀಯ ಪ್ರಾಧಿಕಾರಗಳು ಸಾಕು ನಾಯಿಗಳ ನೋಂದಣಿ ಮಾಡಬಹುದು. ಇತ್ತೀಚಿನ ದಿನಗಳಲ್ಲಿ ನಾಯಿ ಕಡಿತದ ಪ್ರಕರಣಗಳು ಹೆಚ್ಚಾದ್ದರಿಂದ ಸ್ಥಳೀಯ ಸಂಸ್ಥೆಗಳು ನಾಯಿಗಳ ನೋಂದಣಿ ಬಗ್ಗೆ ಕಠಿನ ನಿಯಮ ರೂಪಿಸಿವೆ.

ನಾಯಿ ಕಡಿತಕ್ಕೆ ಕಾರಣರಾರು?

ಮೊದಲೇ ಹೇಳಿದ ಹಾಗೆ, ಹೆಚ್ಚುತ್ತಿರುವ ನಾಯಿಗಳ ಸಂಖ್ಯೆಗೆ ಅನುಗುಣವಾಗಿ ಅವುಗಳಿಗೆ ಆಹಾರವೂ ಸಿಗುತ್ತಿಲ್ಲ. ಇದರ ಜತೆಗೆ ನಾಯಿಗಳ ಕ್ರೂರವಾಗಿ ವರ್ತನೆ, ಯಾರಾದರೂ ನಾಯಿಗಳಿಗೆ ಹೊಡೆದಿದ್ದರೆ, ಆಘಾತ ಅಥವಾ ಆತಂಕ ಮತ್ತು ತಮ್ಮ ನಾಯಿ ಮರಿಗಳನ್ನು ಕಾಪಾಡುವ ದೃಷ್ಟಿಯಿಂದ ಮನುಷ್ಯರನ್ನು ಕಚ್ಚಲು ನೋಡುತ್ತವೆ. ಅಷ್ಟೇ ಅಲ್ಲ, ಕೆಲವರು ನಾಯಿಗಳನ್ನು ಸುಖಾಸುಮ್ಮನೆ ಕಾಡಿ ಅವುಗಳನ್ನು ಪ್ರಚೋದಿಸಿದರೂ ಕಚ್ಚುತ್ತವೆ. ಬೀದಿ ನಾಯಿಗಳಿಂದಾಗಿ ನಾಯಿ ಕಡಿತ, ರೇಬಿಸ್‌ನಂಥ ರೋಗಗಳೂ ಬರಬಹುದು.  ಬೀದಿ ನಾಯಿಗಳ ನಿಯಂತ್ರಣ ವಿಚಾರದಲ್ಲಿ ಬಹುತೇಕ ಎಲ್ಲ ರಾಜ್ಯ ಸರಕಾರಗಳ ವೈಫ‌ಲ್ಯವಿದೆ ಎಂದು ಕೆಲವು ವರದಿಗಳು ಹೇಳುತ್ತವೆ. ವಿಚಿತ್ರವೆಂದರೆ ಎಷ್ಟೋ ಸರಕಾರಗಳು ಬೀದಿ ನಾಯಿಗಳ ಹಾವಳಿಯನ್ನು ಗಂಭೀರವಾಗಿ ಪರಿಗಣಿಸುವುದೇ ಇಲ್ಲ. ಕೆಲವೊಂದು ಪ್ರಾಣಿಗಳ ಆರೈಕೆ ಕೇಂದ್ರಗಳು ಮತ್ತು ಕೆಲವು ಪ್ರಾಣಿ ಪ್ರಿಯರ ನಿರ್ಲಕ್ಷ್ಯವೂ ಬೀದಿ ನಾಯಿಗಳ ಹಾವಳಿಗೆ ಪರೋಕ್ಷವಾಗಿ ಕಾರಣವಾಗುತ್ತಿದ್ದಾರೆ.  ಪ್ರಾಣಿ ದಯಾ ಸಂಸ್ಥೆಗಳು ಮತ್ತು ಕೆಲವು ಪ್ರಾಣಿ ಪ್ರಿಯರ ಕಾರಣದಿಂದಾಗಿ ಸರಕಾರಗಳು ಇಂದಿಗೂ ಬೀದಿ ನಾಯಿಗಳ ನಿಯಂತ್ರಣ ವಿಚಾರವಾಗಿ ಕಠಿನ ಕಾನೂನು ತರಲಾಗುತ್ತಿಲ್ಲ. ಆದರೂ ಕೆಲವೊಂದು ಪ್ರಾಣಿ ದಯಾ ಸಂಘಗಳು ಮತ್ತು ಪ್ರಾಣಿ ಪ್ರಿಯರು ಆಗಾಗ್ಗೆ ಸಭೆ ಸೇರಿ ಬೀದಿ ನಾಯಿಗಳ ನಿಯಂತ್ರಣದ ಬಗ್ಗೆ ಚರ್ಚೆ ಮಾಡುವುದುಂಟು.  ಬೀದಿ ನಾಯಿಗಳ ಕುರಿತಾದ ದ್ವಂದ್ವ ನೀತಿಗಳು, ಸರಕಾರಗಳ ನಿರ್ಲಕ್ಷ್ಯದಿಂದಾಗಿ ಅವುಗಳ ನಿಯಂತ್ರಣವೂ ಆಗುತ್ತಿಲ್ಲ, ಇರುವ ನಾಯಿಗಳಿಗೆ ಲಸಿಕೆಯನ್ನೂ ಹಾಕಿಸಲು ಆಗುತ್ತಿಲ್ಲ ಎಂಬ ಮಾತುಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next