Advertisement

ಗಣಿ ಅಕ್ರಮಗಳಿಗೆ ಯಾರು ಹೊಣೆ?

02:42 AM Feb 24, 2021 | Team Udayavani |

ಶಿವಮೊಗ್ಗ ಜಿಲ್ಲೆ ಹುಣಸೋಡು ಜಿಲೆಟಿನ್‌ ಸ್ಫೋಟ ಬೆನ್ನಲ್ಲೇ ಚಿಕ್ಕಬಳ್ಳಾಪುರ ಜಿಲ್ಲೆ ಹಿರೇನಾಗವಲ್ಲಿ ಜಿಲೆಟಿನ್‌ ಸ್ಫೋಟ ಪ್ರಕರಣ ಗಣಿಗಾರಿಕೆ ಪ್ರದೇಶಗಳಲ್ಲಿ ಸುರಕ್ಷತೆಗೆ ಆದ್ಯತೆ ನೀಡಿಲ್ಲ ಮತ್ತು ಅಲ್ಲಿನ ಕಾರ್ಮಿಕರ ಭದ್ರತೆಗೂ ಕ್ರಮವಿಲ್ಲ ಎಂಬುದಕ್ಕೆ ಮೇಲಿಂದ ಮೇಲೆ ಸಿಗುತ್ತಿರುವ ಉದಾಹರಣೆಗಳಾಗಿವೆ.

Advertisement

ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ಪದೇ ಪದೆ ಪ್ರಸ್ತಾವವಾಗುತ್ತಲೇ ಇರುತ್ತದೆ. ಇಂತಹ ದುರಂತ ನಡೆದಾಗ ತನಿಖೆ, ಮೃತ ಕುಟುಂಬಗಳಿಗೆ ಪರಿಹಾರ, ಯಾರೇ ಪ್ರಭಾವಿ ಇದ್ದರೂ ಶಿಕ್ಷೆ ಎಂಬ ಘೋಷಣೆ ಸಾಮಾನ್ಯ ಎಂಬಂತಾಗಿದೆ. ಶಿವಮೊಗ್ಗ ಹುಣಸೋಡು ದುರಂತದ ಅನಂತರ ಅಂತಹ ಘಟನೆ ಮರುಕಳಿಸದಿರಲು ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸಹಿತ ಗಣಿ ಸಚಿವರು ವಿಧಾನಸಭೆಯಲ್ಲೇ ಉತ್ತರ ನೀಡಿದ್ದರು. ಆದರೆ ಚಿಕ್ಕಬಳ್ಳಾಪುರ ಘಟನೆ ನೋಡಿದರೆ ಎಲ್ಲವೂ ಹೇಳಿಕೆಗೆ ಸೀಮಿತ. ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ, ಬರುವ ಲಕ್ಷಣವೂ ಇಲ್ಲ ಎಂಬುದು ಸಾಬೀತಾಗಿದೆ.

ಎರಡು ಕಡೆಯ ಕಲ್ಲು ಗಣಿಗಾರಿಕೆ ಪ್ರದೇಶದಲ್ಲಿನ ಜಿಲೆಟಿನ್‌ ಸ್ಫೋಟಕ್ಕೆ ತಿಂಗಳಲ್ಲಿ 12 ಅಮಾಯಕ ಜೀವಗಳು ಬಲಿಯಾಗಿವೆ. ಕಾರ್ಮಿಕ ಕುಟುಂಬಗಳು ಕಣ್ಣೀರು ಹಾಕುವಂತಾಗಿವೆ. ಸರಕಾರ ಮೃತ ಕುಟುಂಬಗಳಿಗೆ ಪರಿಹಾರ ಕೊಟ್ಟರೂ ಅಮೂಲ್ಯ ಜೀವ ಬರುವುದಿಲ್ಲ.

ರಾಜ್ಯದಲ್ಲಿ ಸುಮಾರು 2 ಸಾವಿರದಷ್ಟು ಅಕ್ರಮ ಕ್ವಾರಿ, ಕ್ರಷರ್‌ಗಳಿವೆ ಎಂದು ಅಂದಾಜು ಮಾಡಲಾಗಿದೆ. ಹಾಗಾದರೆ ಅಕ್ರಮ ತಡೆಗಟ್ಟು ವುದು ಸಾಧ್ಯವೇ ಇಲ್ಲವೇ? ಕಾನೂನು ಕ್ರಮಕ್ಕೆ ಅಡ್ಡಿ ಮಾಡುತ್ತಿರುವವರು ಯಾರು?, ಯಾಕೆ ಸಾಧ್ಯವಿಲ್ಲ? ಸರಕಾರ ಇದರ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕಾಗಿದೆ. ಇಂಥ ಅಕ್ರಮ ಗಣಿಗಳ ಹಿಂದೆ ಎಲ್ಲ ರಾಜಕೀಯ ಪಕ್ಷಗಳ ಪ್ರಭಾವಿಗಳ ಕೈವಾಡ ಇದೆ ಎನ್ನುವುದು ಜಗಜ್ಜಾಹೀರು. ಇಂಥ ವಿಚಾರದಲ್ಲಿ ಎಲ್ಲ ರಾಜಕೀಯ ನಾಯಕರು ಒಂದಾಗುತ್ತಾರೆ. ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದರಿಂದ ರಾಜ್ಯದ ಆರ್ಥಿಕತೆ ಮತ್ತು ಪರಿಸರದ ಮೇಲೆ ಏಕಕಾಲಕ್ಕೆ ಸರಿಪಡಿಸಲಾಗದ ಪೆಟ್ಟು ಬೀಳುತ್ತದೆ. ಆದರೆ ಸರಕಾರಗಳು ಗಂಭೀರವಾಗಿ ಯೋಚಿಸದೆ ಇರುವುದು ನಿಜಕ್ಕೂ ದುರಂತ.

ಸ‌ಕ್ರಮ ಗಣಿಗಾರಿಕೆಯಾದರೂ ಕಾರ್ಮಿಕರ ಸುರಕ್ಷೆ ವಿಚಾರದಲ್ಲಿ ಅಲ್ಲಿನ ವ್ಯಾಪ್ತಿಯಲ್ಲಿ ಜನಸಾಮಾನ್ಯರಿಗೆ ಇದರಿಂದ ತೊಂದರೆ ಯಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಸ್ಥಳೀಯ ಆಡಳಿತದ್ದು ಮತ್ತು ಗಣಿಗಾರಿಕೆ ಪರವಾನಿಗೆ ಪಡೆದಿರುವ ಕಂಪೆನಿಯದ್ದು. ಅಮಾಯಕ ಕಾರ್ಮಿಕರ ಪ್ರಾಣ ತೆಗೆಯುತ್ತಿರುವ ಇಂತಹ ಪ್ರಕರಣಗಳ ಬಗ್ಗೆ ಸರಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಲೇಬೇಕು.

Advertisement

ಗಣಿ ಸಚಿವರಾದ ಮುರುಗೇಶ್‌ ನಿರಾಣಿ ಅವರು ಇತ್ತೀಚೆಗೆ ಹೊಸ ಗಣಿ ನೀತಿ ಜಾರಿಗೊಳಿಸುವ ಬಗ್ಗೆಯೂ ಮಾತನಾಡಿದ್ದಾರೆ. ಅದರಲ್ಲಿ ಕಾರ್ಮಿಕರ ಸುರಕ್ಷೆ ಹಾಗೂ ಭದ್ರತೆಗೆ ಹೆಚ್ಚು ಒತ್ತು ನೀಡಬೇಕು. ಜಿಲೆಟಿನ್‌ ಸೇರಿ ಸ್ಫೋಟಕ ವಸ್ತುಗಳ ದಾಸ್ತಾನು, ಬಳಕೆ ಬಗ್ಗೆ ನಿಯಮ ಹೇರಬೇಕು. ಜನಪ್ರತಿನಿಧಿಗಳು, ಅಧಿಕಾರಿಗಳು, ಜಿಲ್ಲಾಡಳಿತ, ಸಂಬಂಧಪಟ್ಟ ಇಲಾಖೆಗಳ ಮುಖ್ಯಸ್ಥರು ಎಲ್ಲರೂ ಜತೆಗೂಡಿ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಾಗಿದೆ. ಇಲ್ಲದಿದ್ದರೆ ಮೊದಲಿಲ್ಲ, ಕೊನೆಯಿಲ್ಲ ಎಂಬಂತಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next