ನವದೆಹಲಿ: ಭಾರತೀಯ ಜನತಾ ಪಕ್ಷದ ಶಾಸಕ ಪುಷ್ಕರ್ ಸಿಂಗ್ ಧಾಮಿ ಅವರನ್ನು ಉತ್ತರಾಖಂಡದ ಮುಂದಿನ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲಾಗಿದೆ. ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಪುಷ್ಕರ್ ಅವರನ್ನು ಶನಿವಾರ(ಜುಲೈ 03) ನಡೆದ ಶಾಸಕಾಂಗ ಸಭೆಯಲ್ಲಿ ಈ ಹುದ್ದೆಗೆ ಆಯ್ಕೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಭಾರತ-ಇಂಗ್ಲೆಂಡ್ ಮೂರನೇ ಏಕದಿನ ಪಂದ್ಯ: ಕಮ್ ಬ್ಯಾಕ್ ಮಾಡುವತ್ತ ಮಿಥಾಲಿ ತಂಡದ ಚಿತ್ತ
ಪುಷ್ಕರ್ ಸಿಂಗ್ ಧಾಮಿ ಅವರು ಉದಾಮ್ ಸಿಂಗ್ ನಗರ್ ಜಿಲ್ಲೆಯ ಖತಿಮಾ ಕ್ಷೇತ್ರದಿಂದ ಉತ್ತರಾಖಂಡ್ ವಿಧಾನಸಭೆಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಉತ್ತರಾಖಂಡದ ರಾಜಧಾನಿ ಡೆಹ್ರಾಡೂನ್ ನಲ್ಲಿ ಪಕ್ಷದ ಶಾಸಕಾಂಗ ಸಭೆ ನಡೆದಿದ್ದು, ಈ ಸಭೆಯಲ್ಲಿ ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಮತ್ತು ಇತರ ಬಿಜೆಪಿ ನಾಯಕರ ಸಮ್ಮುಖದಲ್ಲಿ ಉತ್ತರಾಖಂಡ್ ನೂತನ ಮುಖ್ಯಮಂತ್ರಿಯ ಆಯ್ಕೆ ನಡೆಯಿತು.
ನೂತನ ಮುಖ್ಯಮಂತ್ರಿ ಆಯ್ಕೆ ವಿಚಾರದಲ್ಲಿ ಅಗ್ರ ಮೂರು ಹೆಸರುಗಳಲ್ಲಿ ಧಾಮಿ ಅವರು ಕೂಡಾ ಒಬ್ಬರಾಗಿದ್ದರು. ಸಿಎಂ ರೇಸ್ ನಲ್ಲಿ ಸತ್ಪಾಲ್ ಸಿಂಗ್ ಮತ್ತು ಧನ್ ಸಿಂಗ್ ರಾವತ್ ಕೂಡಾ ಇದ್ದರು ಎಂದು ವರದಿ ವಿವರಿಸಿದೆ.
ಶುಕ್ರವಾರ ತಿರಥ್ ಸಿಂಗ್ ರಾವತ್ ಅವರು ತಮ್ಮ ರಾಜೀನಾಮೆಯನ್ನು ಗವರ್ನರ್ ಬೇಬಿ ರಾಣಿ ಮೌರ್ಯ ಅವರಿಗೆ ಹಸ್ತಾಂತರಿಸಿದ್ದರು. ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ತಲೆದೋರದಿರಲು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಉಲ್ಲೇಖಿಸಿದ್ದರು.
ಸಾಂವಿಧಾನಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ನಾನು ರಾಜ್ಯಪಾಲರಿಗೆ ನನ್ನ ರಾಜೀನಾಮೆ ಸಲ್ಲಿಸಿದ್ದೇನೆ. ನನಗೆ ನೀಡಿದ ಪ್ರತಿಯೊಂದು ಅವಕಾಶಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಹಾಗೂ ಪಕ್ಷದ ವರಿಷ್ಠರಿಗೆ ಕೃತಜ್ಞತೆ ಸೂಚಿಸುವುದಾಗಿ ಈ ಸಂದರ್ಭದಲ್ಲಿ ತಿರಥ್ ಸುದ್ದಿಗಾರರ ಜತೆ ಮಾತನಾಡುತ್ತ ಪ್ರತಿಕ್ರಿಯೆ ನೀಡಿದ್ದರು.