Advertisement

ಯಾರವನು?

08:04 PM Apr 04, 2019 | mahesh |

ಇನ್ನೂ ಸೂರ್ಯ ಹುಟ್ಟಿರಲಿಲ್ಲ. ನಾನು ಏಳುವುದು ಲೇಟಾಗಿತ್ತು. ಎದ್ದು ನೋಡಿದರೆ ಮನೆಯ ಎದುರಿನ ಮೆಟ್ಟಿಲಿನವರೆಗೆ ಮಳೆಯ ನೀರು ನಿಂತಿತ್ತು. ಮನೆಯ ಎದುರು ಬಾಗಿಲಿನಲ್ಲಿ ನಿಂತು ನೋಡುತ್ತಿದ್ದರೆ ಮನೆಯ ಮುಂದೆ ಒಂದು ಸ್ವಿಮ್ಮಿಂಗ್‌ ಫ‌ೂಲ್‌ ಇದೆಯೇನೊ ಅನ್ನಿಸ್ತಿತ್ತು. ಅಂದು ಬೆಳಗ್ಗೆ ಕಾಲೇಜಿಗೆ ಬೇರೆ ಹೋಗಲೇ ಬೇಕಿತ್ತು. ಫ‌ಸ್ಟ್‌ ಸೆಮ್‌ನ ಇಂಟರ್‌ನಲ್ಸ್‌ನ ಮೊದಲನೆಯ ಎಕ್ಸಾಮ್‌ ಅಂದು. ಆ ದಿನ ಯಾರು ಆ ಮಳೆಯಲ್ಲಿ ಹೊರಗೆ ಬೀಳ್ತಾರೆ? ಬೆಚ್ಚಗೆ ಮೂರು-ನಾಲ್ಕು ಕಂಬಳಿ ಹೊದ್ದು ಬಿಸಿಬಿಸಿ ಕಾಫಿಯ ಜೊತೆ ಟಿ. ವಿ.ಯಲ್ಲಿ ಉದಯ ಮ್ಯೂಸಿಕ್‌ ನೋಡ್ತಾ ಕುಳಿತುಕೊಳ್ಳೋಣ ಅನ್ನಿಸಿತ್ತು. ಆದರೆ, ಏನು ಮಾಡೋದು ಎಕ್ಸಾಮ್‌ ಇದ್ದಿದ್ದರಿಂದ ಕಾಲೇಜಿಗೆ ಹೋಗಲೇ ಬೇಕು. ಬೇಗ ಬೇಗನೆ ಸ್ನಾನ ಮುಗಿಸಿ, ತಿಂಡಿ ತಿಂದು ಯೂನಿಫಾರಂ ಹಾಕಿಕೊಂಡು ಬ್ಯಾಗ್‌ ಧರಿಸಿ ಬಾಗಿಲೆಡೆಗೆ ಬಂದು ನಿಂತು, “”ದೇವ್ರೇ, ಇವತ್ತು ಕಾಲೇಜಿಗೆ ರಜೆ ಕೊಡ್ಲಪ್ಪ !” ಎಂದು ಜೋರಾಗಿ ಕೂಗಿದೆ.

Advertisement

ಅಷ್ಟರಲ್ಲಿ ಅಪ್ಪ ಒಳಗಿನಿಂದ ಓಡಿ ಬಂದು ಇದ್ದಕ್ಕಿದ್ದಂತೆ, “”ಏನಾಯಿತೆ ನಿಂಗೆ? ಅದ್ಯಾಕೆ ಆ ಥರ ಕೂಗ್ತಿಯೆ? ಸುಮ್ನೆ ಛತ್ರಿ ಹಿಡಿದು ಹೊರಡು ಕಾಲೇಜಿಗೆ. ನೀ ಹೇಳಿದೆ ಅಂತ ಏನ್‌ ದೇವ್ರು ನಿನ್‌ ಬಗ್ಗೆ ಕರುಣೆ ತೋರ್ಸಿ ರಜೆ ಕೊಟ್ಟುಬಿಡ್ತಾನಾ? ನಿಂತ್ಕೊಂಡು ಒದರುತ್ತಾ ಇದ್ರೆ ಬಸ್‌ ಮಿಸ್‌ ಆಗಿ ಎಕ್ಸಾಮ್‌ ತಪ್ಪಿ ಹೋಗುತ್ತದೆ. ಹೊರಡು ಬೇಗ” ಎಂದು ಗದರಿದರು. ಬೆಳಿಗ್ಗೆ ಬೆಳಿಗ್ಗೆ ಈ ಮಳೆಯಲ್ಲಿ ನಡೆದುಕೊಂಡು ಹೋಗ್ಬೇಕಲ್ವಾ? ಎಂಬ ಯೋಚನೆ ಒಂದು ಕಡೆಯಾದ್ರೆ ಈ ಚಳಿಯಲ್ಲಿ ಅಪ್ಪನ ಸುಪ್ರಭಾತದ ಜೊತೆ ಊರಿನ ಬಸ್‌ಸ್ಟಾಪ್‌ ತಲುಪಿದೆ.

ಬಸ್‌ಸ್ಟಾಪ್‌ ನಮ್ಮಕಡೆಯಿಂದ ಕಾಲೇಜಿಗೆ ಹೋಗುವವರಿಂದ ತುಂಬಿತ್ತು. ಇದೇಕೆ ಇಷ್ಟು ಜನ ನಿಂತಿದ್ದಾರೆ ಎಂದು ಆಲೋಚಿಸುತ್ತ, ನನ್ನ ಫ್ರೆಂಡ್‌ ಬಳಿ, “”ಯಾಕೆ ಇಷ್ಟು ಜನಾನೇ? ಇವತ್ತು” ಎಂದಾಗ, “”ಬೆಳಗ್ಗಿನ ಫ‌ಸ್ಟ್‌ ಬಸ್‌ ನಿಲ್ಲಿಸಿಲ್ವಂತೆ ಕಣೆ. ಅದಿಕ್ಕೆ ಇಷ್ಟು ಜನ ಇದಾರೆ” ಅಂದಳು. “”ಇವತ್ತು ಎಕ್ಸಾಮ್‌ಗೆ ಹೋದ ಹಾಗೇ ಬಿಡೆ” ಅಂತ ಹೇಳುತ್ತಿರುವಾಗಲೇ ಬಸ್‌ ಬರುತ್ತಿರುವ ಶಬ್ದ ಕೇಳಿಸಿತು. ಎಲ್ಲರೂ ಓಡಿ ಹೋಗಿ ಬಸ್‌ಗೆ ಕೈ ಮಾಡಿ ನಿಂತೆವು. ಬಸ್‌ ಏನೋ ನಿಲ್ಲಿಸಿದ. ಆದರೆ, ಅದರಲ್ಲಿ ಒಂದು ಸಣ್ಣ ನೊಣ ಕೂಡ ಹೋಗಲು ಜಾಗ ಇಲ್ಲದಷ್ಟು ಜನ. ಎಲ್ಲರೂ ಮುಂದೊಗಿ ಮುಂದೊಗಿ ಅಂತ ಬಸ್ಸಿನಲ್ಲಿದ್ದ ಜನರನ್ನು ಕಂಡಕ್ಟರ್‌ ಮುಂದೆ ಕಳುಹಿಸಿದ. ನನ್ನ ಫ್ರೆಂಡ್‌ ಹೇಗೊ ಮಾಡಿ ಬಸ್‌ ಹತ್ತಿಕೊಂಡಿದ್ದಳು.

ಬಸ್‌ ಹತ್ತಿದ ಅವಳು ಅಲ್ಲಿಂದ, “ಏಯ್‌ ಶ್ರುತಿ, ಹೇಗಾದರೂ ಹತ್ತೆ ಬಸ್ನಾ. ಇವತ್ತು ಎಕ್ಸಾಮ್‌ ಕಣೆ’ ಎಂದು ಕೂಗುತ್ತಿದ್ದಳು. ನಾನು ಒಂದು ಕಾಲನ್ನು ಬಸ್‌ನಲ್ಲಿ ಇಟ್ಟಿದ್ದೆ. ಆದರೆ ಕೈಯಲ್ಲಿ ಹಿಡಿದುಕೊಳ್ಳಲು ಬಾಗಿಲಿನ ಹಿಡಿಕೆ ಸಿಗುತ್ತಿರಲಿಲ್ಲ. ಅಷ್ಟರಲ್ಲೇ ಕಂಡಕ್ಟರ್‌ ರೈಟ್‌ ಅಂತ ಸೀಟಿ ಊದೇಬಿಟ್ಟ. ಅದೇ ಸಮಯಕ್ಕೆ ಯಾರೋ ಒಬ್ಬ ಬಾಗಿಲಲ್ಲೆ ನಿಂತಿದ್ದ. ಹುಡುಗ ನನ್ನ ಕೈ ಹಿಡಿದು ಬಸ್ಸಿನೊಳಗೆ ಕರೆದುಕೊಂಡ. ಆ ರಶ್‌ನಲ್ಲಿ ಅವನ ಮುಖ ನೋಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ, ಬಾಗಿಲ ಬಳಿ ನಿಂತಿರುವವರೆಲ್ಲ ಗಂಡು ಹೈಕಳೇ ಆಗಿದ್ದರು. ಹೆಣ್ಣುಮಕ್ಕಳೆಲ್ಲ ಮುಂದೆ ನಿಂತಿದ್ದರು.

ಬಾಗಿಲ ಬಳಿ ಹೇಗೋ ಬಂದು ಕೈಯಲ್ಲಿ ಬಸ್ಸಿನ ಬಾಗಿಲನ್ನು ಗಟ್ಟಿಯಾಗಿ ಹಿಡಿದು ನಿಂತಿದ್ದೆ. ನನ್ನ ಹಿಂದೆ ಗಂಡು ಹೈಕಳ ಗ್ಯಾಂಗೇ ನಿಂತಿತ್ತು. ಅವರು ಚುಡಾಯಿಸ್ತಾ ನಿಂತಿದ್ದರು. ಇದನ್ನೆಲ್ಲ ಕೇಳಿ ಒಂದು ಕಡೆ ಸಿಟ್ಟು ಬರುತ್ತಿದ್ದರೆ, ಇನ್ನೊಂದು ಕಡೆ ಕೈಹಿಡಿದು ಬಸ್‌ ಹತ್ತಿಸಿದ್ರಲ್ಲ ಎಂಬ ಉಪಕಾರ ಭಾವ. ಅದರಲ್ಲೂ ಎಕ್ಸಾಮ್‌ ದಿನ ಬೇರೆ. ಅದಕ್ಕಾಗಿ ಆ ಕಮೆಂಟ್ಸ್‌ಗಳನ್ನ ಸಹಿಸಿಕೊಂಡು ನಿಂತಿದ್ದೆ. ಅದರಲ್ಲೂ ನನ್ನ ಕೈ ಹಿಡಿದು ಮೇಲಕ್ಕೆತ್ತಿದವನು ಯಾರು? ಅವನಿಗೆ ಒಂದು ಥ್ಯಾಂಕ್ಸ್‌ ಆದ್ರೂ ಹೇಳಬೇಕಲ್ಲವೆ ಎಂದು ಮನಸ್ಸಿನಲ್ಲಿಯೇ ಗುನುಗುತ್ತಿದ್ದೆ.

Advertisement

ಅವರು ಯಾರೋ ಏನೋ? ಮೊದಲು ನಾನು ಎಲ್ಲೂ ಅವರನ್ನು ನೋಡಿರಲಿಲ್ಲ. ಅವರು ಮಾಡಿದ ಸಹಾಯಕ್ಕೆ ನಾನು ಅಂದು ಎಕ್ಸಾಮ್‌ ಬರೆದೆ. ಸಿಂಪಲ್‌ ಆಗೊಂದು ಥ್ಯಾಂಕ್ಸೂ ಹೇಳಿದ್ದೆ.

ಶ್ರುತಿ ಹೆಗಡೆ, ಪ್ರಥಮ ಎಮ್‌.ಸಿ.ಜೆ
ಪತ್ರಿಕೋದ್ಯಮ ವಿಭಾಗ, ಎಸ್‌ಡಿಎಂ ಕಾಲೇಜು, ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next