Advertisement

Hathras stampede; ಸ್ವಯಂ ಘೋಷಿತ ದೇವಮಾನವ ‘ಭೋಲೆ ಬಾಬಾ’ ಯಾರು?

08:44 AM Jul 03, 2024 | Team Udayavani |

ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ಸತ್ಸಂಗ ಕಾರ್ಯಕ್ರಮದ ನಡೆದ ದುರಂತ ಕಾಲ್ತುಳಿತದಲ್ಲಿ 116 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು ಅನೇಕರು ಗಾಯಗೊಂಡಿದ್ದಾರೆ. ಸಾಕಾರ ವಿಶ್ವ ಹರಿ ಅಥವಾ ಭೋಲೆ ಬಾಬಾ ಎಂದೂ ಕರೆಯಲ್ಪಡುವ ನಾರಾಯಣ ಸಾಕಾರ ಹರಿ ನಡೆಸಿದ ಸತ್ಸಂಗ ಮುಕ್ತಾಯದ ಬಳಿಕ ಈ ದುರ್ಘಟನೆ ಸಂಭವಿಸಿದೆ. ಕಾಲ್ತುಳಿತ ಘಟನೆಯ ನಂತರ ನಾಪತ್ತೆಯಾಗಿರುವ ಭೋಲೆ ಬಾಬಾಗಾಗಿ ಪೊಲೀಸರು ಸದ್ಯ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

Advertisement

ಗುಪ್ತಚರ ಇಲಾಖೆಯಲ್ಲಿದ್ದ ಬಾಬಾ!

ಸತ್ಸಂಗವನ್ನು ‘ಭೋಲೆ ಬಾಬಾ’ ಎಂಬ ಖ್ಯಾತಿಯ ನಾರಾಯಣ್‌ ಸಾಕಾರ್‌ ಹರಿ ನಡೆಸುತ್ತಿದ್ದ. ಇಟಾಹ್ ಜಿಲ್ಲೆಯ ಪಟಿಯಾಲಿ ತೆಹಸಿಲ್‌ನ ಬಹದ್ದೂರ್ ಗ್ರಾಮದ ಮೂಲದ ಈತ ಈ ಹಿಂದೆ ಗುಪ್ತಚರ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ್ದಾಗಿ ಹೇಳಿಕೊಂಡಿದ್ದಾನೆ. 26 ವರ್ಷಗಳ ಹಿಂದೆ ಸರಕಾರಿ ಕೆಲಸಕ್ಕೆ ರಾಜೀನಾಮೆ ನೀಡಿ, ಸತ್ಸಂಗ ಆರಂಭಿಸಿದ್ದ ಎನ್ನಲಾಗಿದೆ. ಪ್ರತಿ ಮಂಗಳವಾರ ಅಲಿಗಢದಲ್ಲಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದ, ಕೋವಿಡ್‌ ನಿರ್ಬಂಧಗಳ ನಡುವೆಯೂ ಈತ ಜನರನ್ನು ಸೇರಿಸಿ ಸಭೆ ನಡೆಸಿದ್ದ ಕಾರಣಕ್ಕೆ ಈತನ ಹೆಸರು ಸಾಕಷ್ಟು ಮುನ್ನೆಲೆಗೆ ಬಂದಿತ್ತು.ಕೇವಲ 50 ಜನರು ಭಾಗವಹಿಸಿ ಸತ್ಸಂಗವನ್ನು ನಡೆಸಲು ಅನುಮತಿ ಕೋರಿ ಸಭೆಯಲ್ಲಿ 50,000 ಕ್ಕಿಂತ ಹೆಚ್ಚು ಜನರನ್ನು ಸೇರಿಸಿ ಸ್ಥಳೀಯ ಆಡಳಿತಕ್ಕೆ ತೀವ್ರ ತಲೆನೋವು ತಂದೊಡ್ಡಿದ್ದ.

ಸತ್ಸಂಗ ಮತ್ತು ಧಾರ್ಮಿಕ ಸಂಘಟನೆಯ ಮೂಲಕ ಅಪಾರ ಹೆಸರು ಮಾಡಿ ಪಶ್ಚಿಮ ಉತ್ತರ ಪ್ರದೇಶ, ಉತ್ತರಾಖಂಡ, ಹರಿಯಾಣ, ರಾಜಸ್ಥಾನ ಮತ್ತು ದೆಹಲಿ ಸೇರಿದಂತೆ ಭಾರತದಾದ್ಯಂತ ಲಕ್ಷಾಂತರ ಅನುಯಾಯಿಗಳನ್ನು ಹೊಂದಿದ್ದ.

ಗಮನಾರ್ಹ ವಿಚಾರವೆಂದರೆ ಸದ್ಯ ಅನೇಕ ಆಧುನಿಕ ಧಾರ್ಮಿಕ ನಾಯಕರು ಸಾಮಾಜಿಕ ತಾಣಗಳಲ್ಲಿ ಖಾತೆಗಳನ್ನು ಹೊಂದಿ ಆ ಮೂಲಕವೂ ಅಪಾರ ಅನುಯಾಯಿಗಳನ್ನು ಸಂಪಾದಿಸಿಕೊಳ್ಳುತ್ತಿದ್ದಾರೆ. ಆದರೆ ಭೋಲೆ ಬಾಬಾ ಸಾಮಾಜಿಕ ಮಾಧ್ಯಮದಿಂದ ಬಲು ದೂರವಿರುದ್ದು ಯಾವುದೇ ವೇದಿಕೆಯಲ್ಲಿ ಅಧಿಕೃತ ಖಾತೆಗಳನ್ನು ಹೊಂದಿಲ್ಲ. ತಳಮಟ್ಟದಲ್ಲೇ ನಮ್ಮ ಬಾಬಾ ಪ್ರಭಾವ ಗಣನೀಯವಾಗಿದೆ ಎಂದು ಅವರ ಅನುಯಾಯಿಗಳು ಹೇಳಿಕೊಳ್ಳುತ್ತಾರೆ. ಹದಿ ಹರೆಯದ ಮಕ್ಕಳಿಂದ ಹಿಡಿದು ವಯೋ ವೃದ್ಧರ ವರೆಗೆ ಜನರು ಸಂತ್ಸಂಗದಲ್ಲಿ ಭಾಗಿಯಾಗುವುದು ವಿಶೇಷ.

Advertisement

ಉತ್ತರ ಪ್ರದೇಶದ ಅಲಿಗಢದಲ್ಲಿ ಪ್ರತಿ ಮಂಗಳವಾರ ಭೋಲೆ ಬಾಬಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ, ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಾರೆ.

ಹತ್ರಾಸ್‌ನ ಮುಘಲ್‌ಘರ್ಹಿ ಪ್ರದೇಶದಲ್ಲಿ ನೆಲೆಗೊಂಡಿರುವ ಫುಲ್ರೈ ಗ್ರಾಮದಲ್ಲಿ ‘ಭೋಲೆ ಬಾಬಾ’ ಧರ್ಮೋಪದೇಶ ಕಾರ್ಯಕ್ರಮವನ್ನು ಆಯೋಜಿಸಿದ ವೇಳೆ ದುರಂತ ಸಂಭವಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next