Advertisement
ಇದರ ನಡುವೆಯೇ ಕಳೆದ ಆರು ತಿಂಗಳುಗಳಲ್ಲಿ ನಾಲ್ಕು ಪ್ರಮುಖ ಖಲಿಸ್ಥಾನಿ ಉಗ್ರರು ಸತ್ತಿದ್ದಾರೆ. ಈ ಸಾವಿಗೆ ಕಾರಣಗಳು ಬೇರೆ ಬೇರೆ… ಆದರೆ ದಿಢೀರನೇ ಈ ರೀತಿಯ ಸಾವುಗಳು ಹೇಗಾದವು? ಅನಧಿಕೃತ ಮೂಲಗಳ ಪ್ರಕಾರ ಮತ್ತೂಬ್ಬ ಖಲಿಸ್ಥಾನಿ ಭಯೋತ್ಪಾದಕ ಗುರ್ಪತ್‌ವಂತ್ ಸಿಂಗ್ ಪನ್ನು ಎಂಬಾತನೂ ಬುಧವಾರ ಅಮೆರಿಕದಲ್ಲಿ ಸತ್ತಿದ್ದಾನೆ.
Related Articles
Advertisement
ಭಾರತೀಯ ಗುಪ್ತಚರ ಇಲಾಖೆ ಕಾರಣವಂತೆ!
ಭಾರತದ ಗುಪ್ತಚರ ಇಲಾಖೆಯೇ ಈ ನಾಲ್ಕು ಉಗ್ರರ ಸಾವಿಗೆ ಕಾರಣ ಎಂಬುದು ಕೆನಡಾದಲ್ಲಿರುವ ದಿ ವರ್ಲ್ಡ್ ಸಿಕ್ಖ್ ಆರ್ಗನೈಸೇಶನ್‌ನ ಆರೋಪ. ಅಲ್ಲದೆ ಈ ಸಂಘಟನೆಯು ಕೆನಡಾದ ಗುಪ್ತಚರ ಮತ್ತು ಕಾನೂನು ವಿಭಾಗದ ಮೊರೆ ಹೋಗಿದ್ದು, ನಿಜ್ಜಾರ್‌ನ ಸಾವಿಗೆ ಕಾರಣಗಳನ್ನು ಹುಡುಕುವಂತೆ ಆಗ್ರಹಿಸಿದೆ. ಅಲ್ಲದೆ ಕೆನಡಾದಲ್ಲೇ ಸತ್ತು ಬಿದ್ದ ನಿಜ್ಜಾರ್‌ನ ಮೇಲೆ ಭಾರತದ ಗುಪ್ತಚರ ವಿಭಾಗ ಕಣ್ಣಿಟ್ಟಿತ್ತು ಎಂಬ ಆರೋಪವನ್ನೂ ಈ ಸಂಘಟನೆ ಮಾಡಿದೆ. ಆದರೆ ಇವರೆಲ್ಲರ ಬಂಧನಕ್ಕೆ ಭಾರತೀಯ ತನಿಖಾ ಸಂಸ್ಥೆಗಳು ರೆಡ್‌ಕಾರ್ನರ್ ನೋಟಿಸ್ ಹೊರಡಿಸಿದ್ದವು. ಅಲ್ಲದೆ ಭಯೋತ್ಪಾದಕರು ಎಂದು ಘೋಷಣೆಯನ್ನೂ ಮಾಡಿದ್ದವು.
ಖಲಿಸ್ಥಾನಿಗಳ ಅಬ್ಬರ
ಆಸಕ್ತಿದಾಯಕ ವಿಚಾರವೆಂದರೆ, ಇತ್ತೀಚಿನ ವರ್ಷಗಳಲ್ಲಿ ಖಲಿಸ್ಥಾನಿಗಳ ಅಬ್ಬರ ಹೆಚ್ಚಾಗುತ್ತಿದೆ. ಮೊದಲೇ ಹೇಳಿದ ಹಾಗೆ ಪಾಕಿಸ್ಥಾನ, ಇಂಗ್ಲೆಂಡ್, ಕೆನಡಾ ಮತ್ತು ಆಸ್ಟ್ರೇಲಿಯಾದಲ್ಲಿ ಇವರ ಅಟಾಟೋಪ ಇನ್ನಷ್ಟು ಹೆಚ್ಚಾಗಿದೆ. ಇದರ ನಡುವೆಯೇ ಈ ನಾಲ್ವರು ಉಗ್ರರ ಹತ್ಯೆ ಖಲಿಸ್ಥಾನಿಗಳಲ್ಲಿ ಭಯಕ್ಕೂ ಕಾರಣವಾಗಿದೆ. ಅಲ್ಲದೆ, ಜೂನ್‌ನಲ್ಲೇ 1985ರ ಏರ್‌ಇಂಡಿಯಾ ವಿಮಾನ ಸ್ಫೋಟ ಆರೋಪಿ ತಲ್ವಿಂದರ್ ಪರ್ಮರ್‌ನ ವೈಭವೀಕರಿಸಿ ಖಲಿಸ್ಥಾನಿಗಳು ಕೆನಡಾದ ಹಲವಾರು ಕಡೆಗಳಲ್ಲಿ ರ್ಯಾಲಿ ಮಾಡಿದ್ದರು. ಶಹೀದ್ ಭಾಯಿ ತಲ್ವಿಂದರ್ ಪರ್ಮರ್ ಎಂಬ ಪೋಸ್ಟರ್‌ಗಳನ್ನೂ ಪ್ರದರ್ಶಿಸಿದ್ದರು. ಅಲ್ಲದೆ, ಇತ್ತೀಚೆಗಷ್ಟೇ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆ ಪ್ರಕರಣದ ಟ್ಯಾಬ್ಲೋ ಮಾಡಿ, ಕೆನಡಾದಲ್ಲಿ ಮೆರವಣಿಗೆಯನ್ನೂ ಮಾಡಿದ್ದರು.
ರಾಯಭಾರ ಕಚೇರಿಗಳೇ ಟಾರ್ಗೆಟ್
ಪಂಜಾಬ್‌ನಲ್ಲಿ ತಲೆಮರೆಸಿಕೊಂಡಿದ್ದ ಖಲಿಸ್ಥಾನಿಉಗ್ರ ಮತ್ತು ಪ್ರತ್ಯೇಕತಾವಾದಿ ಅಮೃತ್‌ಪಾಲ್ ಸಿಂಗ್‌ನನ್ನು ಪೊಲೀಸರು ಹುಡುಕಾಟ ನಡೆಸುತ್ತಿರುವಾಗಲೇ, ಖಲಿಸ್ಥಾನಿಗಳ ಅಬ್ಬರವೂ ಹೆಚ್ಚಾಗಿತ್ತು. ಇದಾದ ಬಳಿಕ ಭಾರತದ ರಾಯಭಾರ ಕಚೇರಿಗಳು, ದೇಗುಲಗಳ ಮೇಲೂ ದಾಳಿ ಮಾಡಲು ಆರಂಭಿಸಿದ್ದರು.
ಅಂದರೆ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿ ಮೇಲೆ ಖಲಿಸ್ಥಾನಿಗಳು ದಾಳಿ ನಡೆಸಿದ್ದರು. ಜತೆಗೆ ವಾಷಿಂಗ್ಟನ್‌ನಲ್ಲಿರುವ ರಾಯಭಾರ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ರಾಯಭಾರಿಗೆ ಬೆದರಿಕೆ ಹಾಕಿ ಬಂದಿದ್ದರು.
ಇಂಗ್ಲೆಂಡ್‌ನಲ್ಲಿರುವ ಭಾರತೀಯ ಹೈ ಕಮಿಷನ್ ಮೇಲೆ ನೇರವಾಗಿಯೇ ದಾಳಿ ಮಾಡಿದ್ದ ಖಲಿಸ್ಥಾನಿ ಉಗ್ರರು, ಭಾರತದ ತ್ರಿವರ್ಣ ಧ್ವಜಕ್ಕೆ ಅಪಮಾನ ಮಾಡಲು ಯತ್ನಿಸಿದ್ದರು. ಆಗ ಅಲ್ಲಿನ ಅಧಿಕಾರಿಯೊಬ್ಬರ ಸಮಯ ಪ್ರಜ್ಞೆಯಿಂದಾಗಿ ಧ್ವಜ ನೆಲ ಸೇರುವುದು ತಪ್ಪಿತು. ಕೆನಡಾದಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿ ಮೇಲೂ ಖಲಿಸ್ಥಾನಿಗಳು ಕೆಂಗಣ್ಣು ಬೀರಿದ್ದಾರೆ. ಇಲ್ಲಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಬಾಂಬ್‌ವೊಂದನ್ನೂ ತೂರಿದ್ದರು.
ಕೇವಲ ರಾಯಭಾರ ಕಚೇರಿಗಳಷ್ಟೇ ಅಲ್ಲ, ಇವರ ಕಿಡಿಗೇಡಿತನಕ್ಕೆ ದೇಗುಲಗಳೂ ಟಾರ್ಗೆಟ್ ಆದವು. ಆಸ್ಟ್ರೇಲಿಯಾದ ಸಿಡ್ನಿಯಲ್ಲಿರುವ ಬಾಪ್ಸ್ ಸ್ವಾಮಿನಾರಾಯಣ ದೇಗುಲಕ್ಕೆ ನುಗ್ಗಿ ದಾಂಧಲೆ ಎಬ್ಬಿಸಿದ್ದರು. ಗೇಟಿಗೆ ಖಲಿಸ್ಥಾನಿ ಬಾವುಟ ಹಾಕಿ, ಮೋದಿ ವಿರೋಧಿ ಚಿತ್ರ ಬರೆದಿದ್ದರು.
ಅಪಘಾತದಲ್ಲಿ ಸತ್ತನೇ ಪನ್ನು?
ಸದ್ಯ ಪಂಜಾಬ್ ಪ್ರತ್ಯೇಕತಾವಾದ ಸಂಬಂಧ ವಿದೇಶದಲ್ಲಿದ್ದುಕೊಂಡೇ ಜನಾಭಿಪ್ರಾಯ ಸಂಗ್ರಹ ಮಾಡುತ್ತಿದ್ದ ಮತ್ತೂಬ್ಬ ಖಲಿಸ್ಥಾನಿ ಭಯೋತ್ಪಾದಕ ಗುರ್ಪತ್‌ವಂತ್ ಸಿಂಗ್ ಪನ್ನು ಬುಧವಾರ ಅಮೆರಿಕದಲ್ಲಿ ಸಂಭವಿಸಿದ ಅಪಘಾತದಲ್ಲಿ ಸತ್ತಿದ್ದಾನೆ. ಈ ಬಗ್ಗೆ ಕೆಲವು ಮಾಧ್ಯಮಗಳು ವರದಿ ಮಾಡಿವೆ. ವಿಚಿತ್ರವೆಂದರೆ, ಈತ ಸಾವಿಗೂ ಮುನ್ನ ಮೂರು ದಿನಗಳಿಂದ ನಾಪತ್ತೆಯಾಗಿದ್ದ. ಕಡೆಗೆ ಶವವಾಗಿ ಪತ್ತೆಯಾಗಿದ್ದಾನೆ ಎಂಬ ಮಾತುಗಳು ಕೇಳಿಬರುತ್ತಿವೆ.
ಬಚ್ಚಿಟ್ಟುಕೊಳ್ಳಲು ಜಾಗಕ್ಕಾಗಿ ಹುಡುಕಾಟ
ಪನ್ನು ಸೇರಿದರೆ ಜನವರಿಯಿಂದ ಈಚೆಗೆ ಐದು ಪ್ರಮುಖ ಖಲಿಸ್ಥಾನಿ ಪ್ರತ್ಯೇಕತಾವಾದಿಗಳು ಸತ್ತಿದ್ದಾರೆ. ಇದು ಖಲಿಸ್ಥಾನಿಗಳಲ್ಲಿ ಭಯ ಮೂಡಿಸಿದೆ. ಅದರಲ್ಲೂ ಪಾಕಿಸ್ಥಾನ, ಕೆನಡಾ, ಆಸ್ಟ್ರೇಲಿಯ, ಇಂಗ್ಲೆಂಡ್, ಅಮೆರಿಕದಲ್ಲೂ ಇವರನ್ನು ಹೊಡೆದು ಹಾಕಲಾಗಿದೆ. ಇವರಲ್ಲಿ ಮೂವರು ಗುಂಡೇಟಿಗೆ ಬಲಿಯಾದರೂ, ಗುಂಡು ಹಾರಿಸಿದ್ದು ಯಾರು ಎಂಬುದು ಗೊತ್ತಾಗಿಲ್ಲ. ಇದು ಖಲಿಸ್ಥಾನಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ.
ಇವರ ಸಂಶಯ ಇರುವುದು ಭಾರತೀಯ ಗುಪ್ತಚರ ಪಡೆ ಮೇಲೆ. ಅಲ್ಲದೆ ದೇಶದ ಹೊರಗಿರುವ ಕೆಲವು ಭಾರತದ ಪಕ್ಕಾ ಅಭಿಮಾನಿಗಳು ಈ ಕೆಲಸ ಮಾಡುತ್ತಿರಬಹುದು ಎಂಬ ಶಂಕೆ ಇದೆ. ಆದರೆ, ಪಾಕಿಸ್ಥಾನದಲ್ಲಿರುವ ಖಲಿಸ್ಥಾನಿಗಳನ್ನೂ ಹೊಡೆದುಹಾಕಿರುವುದು ಅವರಲ್ಲಿ ಇನ್ನಷ್ಟು ಭಯ ಹೆಚ್ಚಲು ಕಾರಣವಾಗಿದೆ. ಹೀಗಾಗಿ, ಕೆನಡಾ, ಆಸ್ಟ್ರೇಲಿಯಾ ಸೇರಿದಂತೆ ಈ ದೇಶಗಳಲ್ಲಿ ಇರುವ ಖಲಿಸ್ಥಾನಿಗಳು ಬಚ್ಚಿಟ್ಟುಕೊಳ್ಳಲು ಸುಭದ್ರ ಜಾಗ ಹುಡುಕುತ್ತಿದ್ದಾರೆ ಎಂದು ವರದಿಯಾಗಿದೆ. ಅಲ್ಲದೆ ಮನೆಯಿಂದ ಹೊರಗೆ ಬರುತ್ತಿರುವುದು ಕಡಿಮೆಯಾಗಿದೆ.