Advertisement

ಮಹಾಮೂರ್ಖರು ಯಾರು?

06:20 AM Dec 28, 2017 | Harsha Rao |

ರಾಜಾ ಚಂದ್ರವರ್ಮನ ಆಸ್ಥಾನದಲ್ಲಿ ಪಂಡಿತರಿಗೆ ಪಂದ್ಯಗಳನ್ನು ಏರ್ಪಡಿಸುತ್ತಿದ್ದ. ಪ್ರತಿ ಬಾರಿಯೂ ಮಹಾಮಂತ್ರಿ ಅಮೃತಸೇನನೇ ಗೆದ್ದುಬಿಡುತ್ತಿದ್ದ. ಹಾಗಾಗಿಯೇ ಅಮೃತಸೇನನನ್ನು ಕಂಡರೆ ಉಳಿದವರಿಗೆಲ್ಲ ಹೊಟ್ಟೆಕಿಚ್ಚು. ಹೇಗಾದರೂ ಮಾಡಿ, ಅವನನ್ನು ಸ್ಪರ್ಧೆಯಲ್ಲಿ ಭಾಗವಹಿಸಿದಂತೆ ಮಾಡಿ ಕುತಂತ್ರದಿಂದಾದರೂ ಬಹುಮಾನವನ್ನು ಗೆಲ್ಲಬೇಕೆಂಬ ಅವಕಾಶಕ್ಕಾಗಿ ಹೊಂಚು ಹಾಕುತ್ತಿದ್ದರು. 

Advertisement

ಒಂದು ದಿನ ರಾಜಾ “ಹೊಸವರ್ಷದ ಮಹಾಮೂರ್ಖ’ ಸ್ಪರ್ಧೆಯನ್ನು ಘೋಷಿಸಿದ. ಇದೇ ಅವಕಾಶಕ್ಕಾಗಿ ಕಾಯುತ್ತಿದ್ದ ಪಂಡಿತರೆಲ್ಲರೂ ಮಂತ್ರಿ ಅಮೃತಸೇನನ ವಿರುದ್ಧ ಒಟ್ಟಾದರು. ಇದಕ್ಕಾಗಿಯೇ ಕಾದಿದ್ದ ಆಸ್ಥಾನಿಕರು ಅಮೃತಸೇನನ ವಿರುದ್ಧ ಸಂಚೊಂದನ್ನು ಹೂಡಿದರು. ಮೊದಲು ಅಮೃತಸೇನನ ಸೇವಕನಿಗೆ ಹಣದಾಸೆ ತೋರಿಸಿ, ಸ್ಪರ್ಧೆಯ ದಿನ ಅಮೃತಸೇನನ ಮನೆಗೆ ಹೊರಗಿನಿಂದ ಬೀಗ ಹಾಕಲು ಹೇಳಿದರು. ಸ್ಪರ್ಧೆಯ ದಿನ ಎಷ್ಟು ಹೊತ್ತಾದರೂ ಆಸ್ಥಾನಕ್ಕೆ ಬರಲೇ ಇಲ್ಲ. ರಾಜ ಕೇಳಿದಾಗ, ಅಮೃತಸೇನ ಊರಿನಲ್ಲಿಲ್ಲ ಎಂದು ಸೇವಕರು ಸುಳ್ಳು ಹೇಳಿದರು. ಪಂದ್ಯ ಮುಗಿದ ನಂತರ ಅಮೃತಸೇನನ ಮನೆ ಬಾಗಿಲಿನ ಚಿಲಕ ತೆರೆದು ಸೇವಕ ಓಡಿದ.

ಮಹಾಮಂತ್ರಿ ಅಮೃತಸೇನ ಸೀದಾ ಅರಮನೆಗೆ ಬಂದ. ಅದು ವಿಜೇತರನ್ನು ಘೋಷಿಸುವ ಸಮಯವಾಗಿತ್ತು. ಅಮೃತಸೇನನನ್ನು ಕಂಡ, ರಾಜಾ ಚಂದ್ರವರ್ಮ “ಮಹಾಮಂತ್ರಿಗಳೇ, ನೀವು ಇಷ್ಟು ತಡವಾಗಿ ಬಂದಿದ್ದೇಕೆ? ಬೆಳಿಗ್ಗೆಯೇ ಬಂದಿದ್ದರೆ, “ಮಹಾಮೂರ್ಖ’ ಸ್ಪರ್ಧೆಯಲ್ಲಿ ನೀವೂ ಸಹ ಭಾಗವಹಿಸಬಹುದಿತ್ತು’ ಎಂದ. ಅದಕ್ಕುತ್ತರಿಸಿದ ಅಮೃತಸೇನ, “ಪ್ರಭುಗಳೇ, ನನಗೆ 50 ವರಹಗಳ ಅಗತ್ಯವಿತ್ತು. ಹಣ ಹೊಂದಿಸುವುದರಲ್ಲಿ ನಾನು ನಿರತನಾಗಿದ್ದೆ. ಅದರಿಂದ ಆಸ್ಥಾನಕ್ಕೆ ಬರಲು ತಡವಾಯಿತು’ ಎಂದ. ಅವನ ಮಾತಿಗೆ ನಕ್ಕ ರಾಜ, “ಅಯ್ಯೋ ಮೂರ್ಖ ಶಿಖಾಮಣಿ, ಸ್ಪರ್ಧೆಯ ವಿಜೇತರಿಗೆ 500 ವರಹಗಳ ಬಹುಮಾನವಿತ್ತೆಂದು ನಿಮಗೆ ತಿಳಿಯದೇ? ನೀವು ಬರೀ ಮೂರ್ಖ ಮಾತ್ರವಲ್ಲ, ಮಹಾಮೂರ್ಖರು ನೀವು’ ಎಂದು ನಕ್ಕರು. ಆಗ ಅಮೃತಸೇನ, “ಪ್ರಭುಗಳೇ ನಿಮ್ಮ ಮಾತು ಸರಿ. ನಾನೇ ಮಹಾಮೂರ್ಖ ಎಂದಾದ ಮೇಲೆ, ಈ ಸ್ಪರ್ಧೆಯಲ್ಲಿ ನಾನೇ ಗೆದ್ದಂತೆ ಅಲ್ಲವೇ? 500 ವರಹಗಳ ಈ ಬಹುಮಾನವೂ ನನಗೇ ತಾನೇ ಸಿಗಬೇಕು’ ಎಂದು ಸಭಿಕರನ್ನೆಲ್ಲಾ ನೋಡುತ್ತಾ ಕೇಳಿದ. ಚಂದ್ರವರ್ಮ ಮಹಾಮಂತ್ರಿ ಅಮೃತಸೇನನ ಜಾಣ್ಮೆಗೆ ಮೆಚ್ಚಿ, ಆತನೇ ಸ್ಪರ್ಧೆಯಲ್ಲಿ ಗೆದ್ದವನು ಎಂದು ಘೋಷಿಸಿ, 500 ವರಹಗಳನ್ನಿತ್ತು ಸತ್ಕರಿಸಿದ. ಈಗ ನಿಜಕ್ಕೂ ಮಹಾಮೂರ್ಖರಾಗುವ ಸರದಿ ಆಸ್ಥಾನಿಕರದ್ದಾಗಿತ್ತು. 

-ಜಯಶ್ರೀ ಕಾಲ್ಕುಂದ್ರಿ

Advertisement

Udayavani is now on Telegram. Click here to join our channel and stay updated with the latest news.

Next