Advertisement

IPL 2024: ಮೊದಲ ಪಂದ್ಯದಲ್ಲೇ ಸದ್ದು ಮಾಡಿದ 18ರ ಹುಡುಗ; ಯಾರು ಈ ಆಂಗ್ಕ್ರಿಶ್ ರಘುವಂಶಿ?

12:53 PM Apr 04, 2024 | ಕೀರ್ತನ್ ಶೆಟ್ಟಿ ಬೋಳ |

ಐಪಿಎಲ್ 2024ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ 18 ವರ್ಷದ ಹುಡುಗನೊಬ್ಬ ಗಮನ ಸೆಳೆಯುತ್ತಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ವಿಶಾಖಪಟ್ಟಣದಲ್ಲಿ ನಡೆದ ಪಂದ್ಯದಲ್ಲಿ ಚೆಂಡನ್ನು ಮೈದಾನದ ಮೂಲೆ ಮೂಲೆಗೆ ಅಟ್ಟಿದ ಹುಡುಗ ಹೊಸ ಬ್ಯಾಟಿಂಗ್ ಸೆನ್ಸೇಶನ್ ಆಗಿ ಮೂಡಿಬಂದಿದ್ದಾರೆ. ಅವರೇ ಆಂಗ್ಕ್ರಿಶ್ ರಘುವಂಶಿ.

Advertisement

ಡಿಸಿ ವಿರುದ್ಧದ ಪಂದ್ಯದಲ್ಲಿ ರಘುವಂಶಿ ಅದ್ಭುತ ಅರ್ಧಶತಕದ ಮೂಲಕ ಕಿಚ್ಚು ಹಚ್ಚಿದ್ದಾರೆ. ತನ್ನ ಮೊದಲ ಬ್ಯಾಟಿಂಗ್ ಅವಕಾಶದಲ್ಲೇ ತನ್ನ ಬಲವೇನು ಎನ್ನುವುದನ್ನು ಕ್ರಿಕೆಟ್ ವಿಶ್ವಕ್ಕೆ ಗಟ್ಟಿ ದನಿಯಲ್ಲಿ ಹೇಳಿದ್ದಾರೆ ರಘುವಂಶಿ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ರಘುವಂಶಿ ಐಪಿಎಲ್ ಪದಾರ್ಪಣೆ ಮಾಡಿದ್ದರೂ, ಆ ಪಂದ್ಯದಲ್ಲಿ ಅವರಿಗೆ ಬ್ಯಾಟಿಂಗ್ ಅವಕಾಶ ಸಿಕ್ಕಿರಲಿಲ್ಲ. ಆದರೆ ವಿಶಾಖಪಟ್ಟಣದಲ್ಲಿ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಅಪ್ಪಿಕೊಂಡ ಬಲಗೈ ಬ್ಯಾಟರ್ ಯುವ ತಾರೆಯಾಗಿ ಮೂಡಿ ಬಂದಿದ್ದಾರೆ.

ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದ ಆಂಗ್ಕ್ರಿಶ್ ರಘುವಂಶಿ ಕೇವಲ 27 ಎಸೆತಗಳಲ್ಲಿ 54 ರನ್ ಬಾರಿಸಿದರು. ಇದರಲ್ಲಿ ಅವರು ಐದು ಬೌಂಡರಿ ಮತ್ತು ಮೂರು ಸಿಕ್ಸರ್ ಸಿಡಿಸಿದ್ದರು. ಇದೇ ವೇಳೆ ಸುನಿಲ್ ನರೈನ್ ಜತೆ ಅವರು 104 ರನ್ ಜತೆಯಾಟವನ್ನೂ ಆಡಿದರು. ಇದೇ ವೇಳೆ ಹಲವು ದಾಖಲೆ ಪುಸ್ತಕಗಳಲ್ಲಿ ತನ್ನ ಹೆಸರು ನಮೂದಿಸಿದರು.

ಕೆಕೆಆರ್‌ಗೆ ಚೊಚ್ಚಲ ಇನ್ನಿಂಗ್ಸ್‌ನಲ್ಲಿ ಗರಿಷ್ಠ ಸ್ಕೋರ್

158* – ಬ್ರೆಂಡನ್ ಮೆಕಲಮ್ Vs ಆರ್ ಸಿಬಿ, ಬೆಂಗಳೂರು, 2008

Advertisement

64 – ಮನೀಶ್ ಪಾಂಡೆ vs ಮುಂಬೈ, ಅಬುಧಾಬಿ, 2014

58*- ಓವೈಸ್ ಶಾ Vs ಡೆಕ್ಕನ್, ಮುಂಬೈ 2010

54 – ಜೆ ಕಾಲಿಸ್ Vs ಸಿಎಸ್‌ಕೆ, ಚೆನ್ನೈ, 2011

54 – ಫಿಲ್ ಸಾಲ್ಟ್ Vs ಎಸ್ಆರ್ ಎಚ್ ಕೋಲ್ಕತ್ತಾ, 2024

54 – ಎ ರಘುವಂಶಿ Vs ಡಿಸಿ, ವೈಜಾಗ್, 2024

ಅವರು ಐಪಿಎಲ್‌ ನಲ್ಲಿ ಅರ್ಧಶತಕ ಗಳಿಸಿದ ಎರಡನೇ ಕಿರಿಯ ಕೆಕೆಆರ್ ಬ್ಯಾಟರ್ ಆಗಿದ್ದಾರೆ, ಶುಭಮನ್ ಗಿಲ್ ಮೊದಲ ಸ್ಥಾನದಲ್ಲಿದ್ದಾರೆ. 18 ವರ್ಷ 237 ದಿನ ವಯಸ್ಸಿನ ಗುಲ್ ಮೊದಲ ಅರ್ಧಶತಕ ಹೊಡೆದಿದ್ದರೆ, 18 ವರ್ಷ 303 ದಿನದ ರಘುವಂಶಿ ಅರ್ಧಶತಕ ಬಾರಿಸಿದ್ದಾರೆ.

ಯಾರು ಈ ರಘುವಂಶಿ

ಆಂಗ್ಕ್ರಿಶ್ ರಘುವಂಶಿ ಅವರು ಜನಿಸಿದ್ದು 2005ರ ಜೂನ್ 5ರಂದು ದಿಲ್ಲಿಯಲ್ಲಿ. ಆದರೆ 11ನೇ ಪ್ರಾಯದಲ್ಲಿ ರಘುವಂಶಿ ಕುಟುಂಬ ಮುಂಬೈಗೆ ಬರುತ್ತದೆ. ಅಲ್ಲಿ ಕ್ರಿಕೆಟ್ ಅಕಾಡೆಮಿಗೆ ಸೇರಿದ ಆಂಗ್ಕ್ರಿಶ್ ರಘುವಂಶಿ ದಿನಾ ಅಭ್ಯಾಸ ಆರಂಭಿಸಿದರು. ಅಭಿಷೇಕ್ ನಾಯರ್ ಮತ್ತು ಓಂಕಾರ್ ಸಾಳ್ವಿ ಅಕಾಡೆಮಿಯಲ್ಲಿ ಅವರು ಕ್ರಿಕೆಟ್ ತರಬೇತಿ ಪಡೆದಿದ್ದಾರೆ.

ಅವರು ದೇಶೀಯ ಕ್ರಿಕೆಟ್‌ ನಲ್ಲಿ ಮುಂಬೈ ತಂಡವನ್ನು ಪ್ರತಿನಿಧಿಸುತ್ತಾರೆ. ಬ್ಯಾಟಿಂಗ್‌ ಹೊರತಾಗಿ ಅವರ ಆಲ್‌ರೌಂಡ್ ಸಾಮರ್ಥ್ಯಕ್ಕಾಗಿ ಅವರು ಹೆಸರುವಾಸಿಯಾಗಿದ್ದಾರೆ. ಅವರು ಎಡಗೈ ಸಾಂಪ್ರದಾಯಿಕ ಬೌಲರ್ ಕೂಡ ಆಗಿದ್ದಾರೆ.

ಪ್ರತಿಭಾವಂತ ಯುವ ಆಟಗಾರ 2022 ರ U-19 ವಿಶ್ವಕಪ್‌ನಲ್ಲಿ ಗಮನ ಸೆಳೆದರು, ಅಲ್ಲಿ ಅವರು 278 ರನ್ ಗಳಿಸಿದರು. ಯಶ್ ಧುಲ್ ಅವರ ನಾಯಕತ್ವದಲ್ಲಿ ಭಾರತದ ಪ್ರಶಸ್ತಿ ವಿಜೇತ ಅಭಿಯಾನದಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರು 2023 ರಲ್ಲಿ ತಮ್ಮ ಲಿಸ್ಟ್ ಎ ಮತ್ತು ಟಿ20 ಗೆ ಪದಾರ್ಪಣೆ ಮಾಡಿದ ಅವರು ಸಿ.ಕೆ ನಾಯುಡು ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನೀಡಿದರು, ಅಲ್ಲಿ ಅವರು ಒಂಬತ್ತು ಪಂದ್ಯಗಳಲ್ಲಿ 765 ರನ್ ಗಳನ್ನು ಸಿಡಿಸಿದರು. ಐಪಿಎಲ್ ಹರಾಜಿನಲ್ಲಿ 20 ಲಕ್ಷ ರೂ. ಮೂಲಬೆಲೆಗೆ ರಘುವಂಶಿ ಕೆಕೆಆರ್ ತಂಡ ಸೇರಿದರು.

ದೇಶದ ಅನೇಕ ಯುವ ಪ್ರತಿಭೆಗಳಂತೆ, ರಘುವಂಶಿ ಕೂಡಾ ಭಾರತೀಯ ಜೆರ್ಸಿಯನ್ನು ಧರಿಸುವ ಕನಸು ಕಾಣುತ್ತಿದ್ದಾರೆ. ” ಅಂತಿಮ ಗುರಿ ನಿಸ್ಸಂಶಯವಾಗಿ ಭಾರತೀಯ ಜರ್ಸಿಯನ್ನು ಧರಿಸುವುದು. ಆದರೆ ಯಾರೂ ಹಿಂದೆಂದೂ ಮಾಡದ ರೀತಿಯಲ್ಲಿ ಅದನ್ನು ಧರಿಸಬೇಕು. ನನ್ನನ್ನು ಗಮನಿಸುವ ಎಲ್ಲರೂ ನಾನು ವಿಭಿನ್ನವಾಗಿದ್ದೇನೆ ಎಂದು ಹೇಳುತ್ತಾರೆ” ಎಂದರು ರಘುವಂಶಿ.

Advertisement

Udayavani is now on Telegram. Click here to join our channel and stay updated with the latest news.

Next