Advertisement

ಈ ಬಾರಿ ಯಾರಿಗೆ ಹೊನ್ನಾಳಿ ಹೊಡೆತ?

04:07 PM Apr 02, 2018 | |

ಹೊನ್ನಾಳಿ: ಅರೆ ಮಲೆನಾಡು, ಬಯಲು ಸೀಮೆಗಳ ಪ್ರಾದೇಶಿಕ ವೈವಿಧ್ಯತೆಯನ್ನೊಳಗೊಂಡ ಹೊನ್ನಾಳಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ಆರು ಹೋಬಳಿಗಳಿವೆ. ಈಚೆಗೆ ನ್ಯಾಮತಿ ಹೊಸ ತಾಲೂಕಾಗಿದೆ. ತುಂಗಭದ್ರಾ ನದಿಯ ಇಕ್ಕೆಲಗಳಲ್ಲಿ ಹೊನ್ನಾಳಿ ವಿಧಾನಸಭಾ ಕ್ಷೇತ್ರ ಹರಡಿಕೊಂಡಿದೆ. ಸಾಸ್ವೇಹಳ್ಳಿ, ಕುಂದೂರು, ಬೇಲಿಮಲ್ಲೂರು, ಚೀಲೂರು, ಬೆಳಗುತ್ತಿ, ನ್ಯಾಮತಿ ಜಿಲ್ಲಾ ಪಂಚಾಯತ್‌ ಕ್ಷೇತ್ರ ವ್ಯಾಪ್ತಿ ಹೊಂದಿದೆ.

Advertisement

ಮಲೆನಾಡಿನ ಸಹ್ಯಾದ್ರಿ ಪರ್ವತ ಶ್ರೇಣಿಯ ತುದಿ ಹೊನ್ನಾಳಿ ತಾಲೂಕಿನಲ್ಲಿ ಹಾದು ಹೋಗಿ ಬಯಲುಸೀಮೆಯಲ್ಲಿ ಲೀನವಾಗಿದೆ. ತೀರ್ಥಗಿರಿ, ಕಲುಬಿಗಿರಿ ಹಾಗೂ ತುಪ್ಪದಗಿರಿ ಈ ಶ್ರೇಣಿಯ ಕಿರಿ ಶಿಖರಗಳು. ಈ ಬೆಟ್ಟ ಶ್ರೇಣಿಯ ಆಚೀಚೆ ಇರುವ ಸೂರಗೊಂಡನಕೊಪ್ಪ, ಸುರಹೊನ್ನೆ, ಮಲ್ಲಿಗೇನಹಳ್ಳಿ, ಬೆಳಗುತ್ತಿ ಅರೆ ಮಲೆನಾಡು ಪ್ರದೇಶ. ಹೊನ್ನಾಳಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 1,90,663 ಮತದಾರರಿದ್ದಾರೆ. ಈ ಪೈಕಿ 96,515 ಪುರುಷ ಮತದಾರರು, 94,144 ಮಹಿಳಾ ಮತದಾರರು ಹಾಗೂ 4 ತೃತೀಯ ಲಿಂಗಿ ಮತದಾರರಿದ್ದಾರೆ. ಒಟ್ಟು 238 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಎಲ್ಲಾ ಕ್ಷೇತ್ರಗಳಂತೆ ಹೊನ್ನಾಳಿಯಲ್ಲೂ ಸಮಸ್ಯೆಗಳಿಗೇನೂ ಬರವಿಲ್ಲ. ನೀರು, ಸ್ವತ್ಛತೆ ಸೇರಿದಂತೆ ಮೂಲಸೌಕರ್ಯಗಳು ಇಂದಿಗೂ ಕೆಲವೆಡೆ ಮರೀಚಿಕೆಯಾಗಿದೆ. ಗ್ರಾಮೀಣ ಭಾಗಗಳಲ್ಲಿ ರೈತರ ಹಲವು ಸಮಸ್ಯೆಗಳಿಗೆ ಇಂದಿಗೂ ಪರಿಹಾರ ಸಿಕ್ಕಿಲ್ಲ. ಕಳೆದ ಕೆಲ ವರ್ಷಗಳಿಂದ ಮಳೆಯ ಪ್ರಮಾಣ ಇಳಿಮುಖವಾಗಿದ್ದು, ಕ್ಷೇತ್ರಾದ್ಯಂತ ನೀರಿನ ಸಮಸ್ಯೆ ಉಲ್ಬಣಿಸಿದೆ. ಕೆರೆಗಳಿದ್ದರೂ ಅಂತರ್ಜಲ ಬತ್ತಿದ ಕಾರಣ ಕೃಷಿ ಹಾಗೂ ಕುಡಿಯುವ ನೀರಿನ ಸಮಸ್ಯೆ ದಿನೇ ದಿನೇ ಉಲ್ಬಣಿಸುತ್ತಿದೆ. 

ಶಾಸಕರು ಮೂಲಭೂತ ಸೌಕರ್ಯಗಳನ್ನು ಒದಗಿಸಲು ಶ್ರಮಿಸಿದ್ದಾರೆ ಎಂಬ ಭಾವನೆ ಜನರಲ್ಲಿದೆ. ಹಿಂದಿನ ಶಾಸಕರಾದ ರೇಣುಕಾಚಾರ್ಯ ಅವರ ಅವಧಿಯಲ್ಲೂ ಕೆಲಸಗಳಾಗಿದ್ದವು ಎಂದು ಜನ ಸ್ಮರಿಸುತ್ತಾರೆ. 

ಕೈ-ಕಮಲ ನೇರ ಹಣಾಹಣಿ: ರಾಜಕೀಯವಾಗಿಯೂ ಈ ಕ್ಷೇತ್ರ ಮಹತ್ವ ಪಡೆದಿದೆ. ಕಾಂಗ್ರೆಸ್‌ನ ಭದ್ರಕೋಟೆ ಎನಿಸಿಕೊಂಡಿದ್ದ ಈ ಕ್ಷೇತ್ರದಲ್ಲಿ ಮೊದಲ ಬಾರಿಗೆ ಕಮಲ ಅರಳಿಸಿದ್ದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ. 2008ರಲ್ಲಿ ಬಿಜೆಪಿಯಿಂದ ಆಯ್ಕೆಯಾಗಿದ್ದ ರೇಣುಕಾಚಾರ್ಯ ಅವರು 2013ರಲ್ಲಿ ಕೆಜೆಪಿಯಿಂದ ಸ್ಪರ್ಧಿಸಿ ಬಿಜೆಪಿ-ಕೆಜೆಪಿ ಇಬ್ಭಾಗದ ಪರಿಣಾಮವಾಗಿ ಸೋಲು ಕಾಣಬೇಕಾಯಿತು. ಮತ್ತೆ ಯಡಿಯೂರಪ್ಪ ಅವರೊಂದಿಗೆ ಬಿಜೆಪಿಗೆ ಮರಳಿದ ರೇಣುಕಾಚಾರ್ಯ ಅವರು ಅಂದಿನಿಂದಲೂ ಸುಮ್ಮನೇ ಕುಳಿತಿಲ್ಲ. ಪಕ್ಷ ಸಂಘಟನೆಯಲ್ಲಿ ತೊಡಗಿ ಕಮಲ ಜಾತ್ರೆ, ಮುಷ್ಟಿ ಅಕ್ಕಿ ಅಭಿಯಾನ ಮೊದಲಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಮತ್ತೆ ಚುನಾವಣೆಗೆ ಸ್ಪರ್ಧಿಸಲು ಭರದ ಸಿದ್ಧತೆಯಲ್ಲಿ ತೊಡಗಿದ್ದಾರೆ. ಜೆಡಿಎಸ್‌ ಈ ಬಾರಿ ಹೊನ್ನಾಳಿ ಕ್ಷೇತ್ರವನ್ನು ಬಿಎಸ್‌ಪಿಗೆ ಬಿಟ್ಟುಕೊಡಲಿದೆ ಎಂಬುದಾಗಿ ಕೇಳಿ ಬರುತ್ತಿದ್ದು, ಕೈ-ಕಮಲದ ನೇರ ಹಣಾಹಣಿ ನಡೆಯಲಿದೆ. ಚುನಾವಣೆ ಘೋಷಣೆಗೂ ಮುನ್ನವೇ ರೇಣುಕಾಚಾರ್ಯ ಹಳ್ಳಿಗಳತ್ತ ಹೆಜ್ಜೆ ಹಾಕಿದ್ದರೆ ಶಾಸಕ ಶಾಂತನಗೌಡರೂ ತಾನೇನು ಕಮ್ಮಿ ಎನ್ನುವಂತೆ ಜನರ ಬಳಿ ಹೋಗುತ್ತಿದ್ದಾರೆ.

Advertisement

ಹೊನ್ನಾಳಿ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯವೂ ಆಗಿದೆ. ಪ್ರತಿಯೊಂದು ಗ್ರಾಮಗಳ ರಸ್ತೆಗಳ ಅಭಿವೃದ್ಧಿ, ಶಿವಮೊಗ್ಗ-ಮರಿಯಮ್ಮನಹಳ್ಳಿ ರಾಜ್ಯ ಹೆದ್ದಾರಿ- 25ರ ಉನ್ನತೀಕರಣ, ಬಹುತೇಕ ಎಲ್ಲಾ ಗ್ರಾಮಗಳಲ್ಲೂ ಕಾಂಕ್ರಿಟ್‌ ರಸ್ತೆ ನಿರ್ಮಾಣ ಆಗಿದೆ. ಮುಖ್ಯಮಂತ್ರಿ ಅನುದಾನದಲ್ಲಿ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಅಭಿವೃದ್ಧಿ ಮಾಡಲಾಗಿದೆ. ತುಂಗಭದ್ರಾ ನದಿಯಿಂದ ವಿವಿಧ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಆಗಿದೆ. ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಣೆ ಮಾಡಲಾಗಿದೆ.
ಸಂತ ಸೇವಾಲಾಲ್‌ ಜನ್ಮಸ್ಥಾನ, ಬಂಜಾರ ಸಮುದಾಯದ ಪವಿತ್ರ ಕ್ಷೇತ್ರ ಸೂರಗೊಂಡನಕೊಪ್ಪ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಇಷ್ಟಾದರೂ ಸಮಸ್ಯೆಗಳೆಲ್ಲವೂ ಬಗೆಹರಿದಿಲ್ಲ. 

ಶಾಸಕರು ಏನಂತಾರೆ?
ಪಟ್ಟಣ ಪಂಚಾಯ್ತಿ ಮೂಲಕ ಹೊನ್ನಾಳಿಯ ಸರ್ವತೋಮುಖ ಅಭಿವೃದ್ಧಿ ಮಾಡಲಾಗಿದೆ. ಒಟ್ಟು 10 ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ರಸ್ತೆಗಳ ಅಭಿವೃದ್ಧಿಪಡಿಸಲಾಗಿದೆ. ಪಟ್ಟಣಕ್ಕೆ ಶುದ್ಧ ಕುಡಿಯುವ ನೀರು ಪೂರೈಸಲಾಗುತ್ತಿದೆ. ಇಡೀ ಹೊನ್ನಾಳಿ ವಿಧಾನಸಭಾ ಕ್ಷೇತ್ರಕ್ಕೆ ಐದು ವರ್ಷಗಳ ಅವಧಿಯಲ್ಲಿ 1,800 ಕೋಟಿ ರೂಪಾಯಿಗಳಷ್ಟು ಹಣ ಬಿಡುಗಡೆಯಾಗಿದ್ದು, ಸಾಕಷ್ಟು ಅಭಿವೃದ್ಧಿ ಕಾಮಗಾರಿ ಮಾಡಲಾಗಿದೆ. 

ಕ್ಷೇತ್ರದ ಮಹಿಮೆ
ಅರೆ ಮಲೆನಾಡು, ಬಯಲು ಸೀಮೆಗಳ ಪ್ರಾದೇಶಿಕ ವೈವಿಧ್ಯತೆಯನ್ನೊಳಗೊಂಡ ಹೊನ್ನಾಳಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ಆರು ಹೋಬಳಿಗಳಿವೆ. ಈಚೆಗೆ ನ್ಯಾಮತಿ ಹೊಸ ತಾಲೂಕಾಗಿದೆ.

ಕ್ಷೇತ್ರದ ದೊಡ್ಡ ಸಮಸ್ಯೆ? 
ಕ್ಷೇತ್ರದ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಅನುಷ್ಠಾನಗೊಳಿಸದೇ ಇರುವುದು, ಹೊನ್ನಾಳಿಯನ್ನು ಪಪಂನಿಂದ ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸದೇ ಇರುವುದು. ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಸಾರಿಗೆ ಸಂಸ್ಥೆ ಬಸ್‌ ಸಂಚಾರದ ಅತೀವ ಕೊರತೆ. 

ಕ್ಷೇತ್ರದ ಬೆಸ್ಟ್‌ ಏನು?
ಹೊನ್ನಾಳಿ ತಾಲೂಕಿನ ಬಹುತೇಕ ಎಲ್ಲ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. ರಾಜ್ಯದಲ್ಲಿ ತಮ್ಮ ಪಕ್ಷದ ಸರ್ಕಾರವೇ ಇರುವ ಸಂದರ್ಭದಲ್ಲಿ ಕಾಂಗ್ರೆಸ್‌ ಶಾಸಕರಾದ ಡಿ.ಜಿ. ಶಾಂತನಗೌಡ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾಮಗಾರಿಗಳನ್ನು  ಡಬಹುದಿತ್ತು. ಒಬ್ಬ ಮಾಮೂಲಿ ಶಾಸಕರಿಗೆ ಬಿಡುಗಡೆಯಾಗುವಷ್ಟು ಹಣವನ್ನು ಮಾತ್ರ ಇವರು ತಂದಿದ್ದಾರೆ. 
 ಸಿ. ಆರ್‌. ಶಿವಾನಂದ, ಹೊನ್ನಾಳಿ

ತಾಲೂಕಿಗೆ ಶಾಶ್ವತವಾಗಿ ನೆನಪು ಉಳಿಯುವಂತಹ ಯಾವುದೇ ಕಾಮಗಾರಿಯನ್ನು ಶಾಸಕ ಡಿ. ಜಿ. ಶಾಂತನಗೌಡ ತರಲಿಲ್ಲ.
 ಅರಕೆರೆ ನಾಗರಾಜ್‌

ಶಾಸಕರು ಪಟ್ಟಣದ ಅಭಿವೃದ್ಧಿಗೆ ಸಾಕಷ್ಟು ಅನುದಾನ ತಂದು ಅಭಿವೃದ್ಧಿಗೆ ಕಾರಣಕರ್ತರಾಗಿದ್ದಾರೆ.  ರಂಜೀತ್‌ ಹೊನ್ನಾಳಿ
ಶಾಸಕ ಡಿ.ಜಿ. ಶಾಂತನಗೌಡ ಅವರ ಅಭಿವೃದ್ಧಿಪರ ರಾಜಕಾರಣ ವಿರೋಧಿಗಳೂ ಸಹ ಮೆಚ್ಚುವಂಥದ್ದಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸ್ಥಳೀಯ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವ ಅವರ ರೀತಿ ಅನುಕರಣೀಯ..
 ದೊಡ್ಡೇರಿ ವಿಶ್ವನಾಥ

 ವಿಜಯಾನಂದ ಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next