ಪ್ರಸಂಗ-1:
ಪಾದರಾಯನಪುರದಲ್ಲಿ ಕಳೆದೊಂದು ವಾರದಿಂದ ಕೆಲಸ ಮಾಡುತ್ತಿದ್ದೇವೆ. ಗಲಾಟೆ ವೇಳೆ ಕೆಲವರನ್ನು ಹಿಡಿದು ಎಳೆದೊಯ್ದಿದ್ದೇವೆ. ಮನೆಯಲ್ಲಿ ಎರಡೂವರೆ ವರ್ಷದ ಮಗಳಿರುವ ಕಾರಣ ನಾಲ್ಕು ದಿನಗಳಿಂದ ಮನೆಗೆ ಹೋಗಿಲ್ಲ. ಠಾಣೆ, ಸಮುದಾಯ ಭವನದಲ್ಲೇ ಸ್ನಾನ, ನಿದ್ರೆ. ಇನ್ನು ರಜೆ ಸಿಕ್ಕರೂ ಊರಿಗೆ ಹೋಗುವಂತಿಲ್ಲ. ಊರಿನಲ್ಲಿರುವ ತಂದೆ, ತಾಯಿಗೆ ಫೋನ್‌ನಲ್ಲಿ ಸಮಾಧಾನ ಹೇಳುತ್ತಿದ್ದೇವೆ. ಒಂದು ರೀತಿ ನಾನೂ ಕ್ವಾರಂಟೈನ್‌ನಲ್ಲಿದ್ದೇನೆ. – ಕಾನ್ ಸ್ಟೇಬಲ್ ತಿಮ್ಮಪ್ಪ.
Advertisement
ಪ್ರಸಂಗ-2ಬೆಳಗ್ಗೆ 7 ಗಂಟೆಗೆ ಕರ್ತವ್ಯಕ್ಕೆ ಹಾಜರಾಗಿದ್ದೇನೆ. ಮಧ್ಯಾಹ್ನ ಮೂರು ಅಥವಾ ನಾಲ್ಕು ಗಂಟೆವರೆಗೂ ಕೆಲಸ ಮಾಡಬೇಕು. ಈ ವೇಳೆ ನೂರಾರು ವಾಹನಗಳ ತಪಾಸಣೆ, ಜತೆಗೆ ಸೋಂಕಿತರ ಪತ್ತೆಗಾಗಿ ಮನೆಗಳಿಗೂ ಹೋಗುತ್ತೇವೆ. ಸೋಂಕಿತರ ಭೀತಿಯಿಂದ ಮನೆಗೆ ಹೋಗಲು ಭಯ. ಮನೆಗೆ ಹೋಗುತ್ತಿದ್ದಂತೆ ಬಿಸಿ ನೀರಿನಲ್ಲಿ ಸ್ನಾನ, ಬಟ್ಟೆಗಳನ್ನು ತೊಳೆದು ಹಾಕುತ್ತೇವೆ…
– ಕೇಂದ್ರ ವಿಭಾಗದ ಠಾಣೆಯೊಂದರ ಹೆಡ್ ಕಾನ್ ಸ್ಟೇಬಲ್ ನರಸಿಂಹ ಇದು ಕೇವಲ ಒಂದಿಬ್ಬರು ಪೊಲೀಸ್ ಸಿಬ್ಬಂದಿ ಸಮಸ್ಯೆಗಳಲ್ಲ. ನಗರದಲ್ಲಿರುವ ಬಹುತೇಕ ಸಿಬ್ಬಂದಿ, ಅಧಿಕಾರಿಗಳ ಪರಿಸ್ಥಿತಿ. ಒಂದೂವರೆ ತಿಂಗಳಿಂದ ನಗರದ ಪೊಲೀಸರು ಆರೋಗ್ಯ ಇಲಾಖೆ ಅಧಿಕಾರಿಗಳ ಜತೆ ನಿರಂತರವಾಗಿ ಸೋಂಕಿತರ ಜತೆ ಒಡನಾಟ ಹೊಂದಿದ್ದಾರೆ. ಶಂಕಿತರ ಮನೆಗಳಿಗೆ ಭೇಟಿ ನೀಡುವುದು, ಕಾನೂನು ಸುವ್ಯವಸ್ಥೆ ಕಾಪಾಡುವುದು, ವಾಹನಗಳ ತಪಾಸಣೆ ಮಾಡುತ್ತಿದ್ದಾರೆ. ಹೀಗಾಗಿ ಇಡೀ ನಗರದಲ್ಲಿ ಪೊಲೀಸ್ ಇಲಾಖೆಯಲ್ಲಿ ಆತಂಕ ಎದುರಾಗಿದ್ದು,
ಭಯದಲ್ಲೇ ಕೆಲಸ ಮಾಡುತ್ತಿದ್ದಾರೆ. ಈ ಸಂಬಂಧ ನಗರದ ಪೊಲೀಸ್ ಆಯುಕ್ತರು ಪದೇ ಪದೆ ಕೈತೊಳೆಯಬೇಕು. ವಾರದ ರಜೆ ಕೊಡಬೇಕು ಎಂದು ಸೂಚಿಸಿದ್ದಾರೆ. ಅದರಂತೆ ಪೊಲೀಸ್ ಸಿಬ್ಬಂದಿಗೆ ವಾರದ ರಜೆ ಮಾತ್ರವಲ್ಲ. ಠಾಣೆಯ ಶೇ.30ರಷ್ಟು ಸಿಬ್ಬಂದಿಗೆ ಒಂದು ವಾರ ರಜೆ ಕೊಡಲಾಗಿದೆ. ಠಾಣಾ ಮಟ್ಟದಲ್ಲಿ ವೈದ್ಯಕೀಯ ತಪಾಸಣೆ ನಡೆಯುತ್ತಿದೆ ಎಂದು ಹಿರಿಯ
ಅಧಿಕಾರಿಯೊಬ್ಬರು ಹೇಳಿದರು ಮನೆ, ಸಂಬಂಧಿಕರಲ್ಲಿ ಆತಂಕ: ಇತ್ತೀಚೆಗೆ ದೂರು ನೀಡಲು ಬರುವ ಸಾರ್ವಜನಿಕರು ಕೂಡ ನಮ್ಮನ್ನು ಅನುಮಾನದಿಂದ ನೋಡುವಂತಾಗಿದೆ. ಅಲ್ಲದೆ, ಮನೆಗೆ ಹೋದಾಗಲೂ ಪತ್ನಿ, ತಂದೆ, ತಾಯಿ, ಸಂಬಂಧಿಕರು ಆತಂಕದಿಂದಲೇ ಬಾಗಿಲು ತೆರೆಯುತ್ತಾರೆ. ಮನೆಯೊಳಗೆ ಕಾಲಿಡುತ್ತಿದ್ದಂತೆ ನೇರವಾಗಿ ಸ್ನಾನ ಮಾಡಿಕೊಂಡು, ಬಟ್ಟೆಯನ್ನು ಬಿಸಿ ನೀರಿನಲ್ಲಿ
ತೊಳೆಯುವಂತೆ ಸೂಚಿಸುತ್ತಾರೆ. ಇನ್ನು ಊರಿನಲ್ಲಿರುವ ಪತ್ನಿ ಹಾಗೂ ನಮ್ಮ ಸಂಬಂಧಿಕರು ನಿತ್ಯ ಕರೆ ಮಾಡಿ ಆರೋಗ್ಯದ ಬಗ್ಗೆ ವಿಚಾರಿಸುತ್ತಾರೆ. ಎಲ್ಲರಿಗೂ ಧೈರ್ಯ ಹೇಳುವುದೇ
ದೊಡ್ಡ ಕೆಲಸವಾಗಿದೆ. ಒಂದು ವಾರ ರಜೆ ಇದ್ದರೂ ಊರಿಗೆ ಹೋಗುವಂತಿಲ್ಲ. ಕೆಲ ಊರುಗಳಲ್ಲಿ ಸ್ವಯಂ ದಿಗ್ಬಂಧನ ಹಾಕಿದ್ದಾರೆ. ಹೊರಗಿನವರ ಪ್ರವೇಶಕ್ಕೆ ಅವಕಾಶವಿಲ್ಲ. ಬೇರೆಯವರು ಬಂದರೂ ಪೊಲೀಸರು ಮಾತ್ರ ಊರಿನೊಳಗೆ ಬರುವುದು ಬೇಡ. ಸೇರಿಸುವುದು ಬೇಡ ಎಂದು ನಿರ್ಧರಿಸಿದ್ದಾರೆ ಎಂದು ತುಮಕೂರು ರಸ್ತೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಎಸ್‌ಐ ವಾಸುದೇವ್ ಬೇಸರ ವ್ಯಕ್ತಪಡಿಸಿದರು.
Related Articles
ಪೊಲೀಸ್ ವಸತಿ ಗೃಹಗಳಲ್ಲಿ ಪೊಲೀಸ್ ಸಮುದಾಯವೇ ಇದ್ದರೂ ಪರಸ್ಪರ ಒಬ್ಬರನ್ನೊಬ್ಬರು ಅನುಮಾನದಿಂದಲೇ ಮಾತಿಗಿಳಿಯುತ್ತೇವೆ. ಸಂಜೆಯಾಗುತ್ತಲೇ ಮನೆ ಬಾಗಿಲು, ಹೊರಗಡೆ ಕುಳಿತು ಹರಟೆ ಹೊಡೆಯುತ್ತಿದ್ದ ಮಹಿಳೆಯರು, ಇದೀಗ ಹೊರಗಡೆ ಬರುತ್ತಿಲ್ಲ. ಮಕ್ಕಳನ್ನು ಹೊರಗಡೆ ಕಳುಹಿಸುತ್ತಿಲ್ಲ. ಹೇಗೊ ಕೆಲಸ ಮುಗಿಸಿಕೊಂಡು ಅಕ್ಕ-ಪಕ್ಕದ ಮನೆ ಮಂದಿ ಜತೆ ಕಾಲ
ಕಳೆಯುತ್ತಿದ್ದೆವು. ಕೋವಿಡ್ ದಿಂದ ಅದು ತಪ್ಪಿದೆ ಎನ್ನುತ್ತಾರೆ ಪಿಎಸ್‌ಐ ರೇಣುಕಾದೇವಿ.
Advertisement
ಕ್ವಾರೆಂಟೈನ್ ಗೆ ಸಿದ್ಧತೆಹೊರಗಡೆ ನಿರಂತರವಾಗಿ ಕೆಲಸ ಮಾಡುತ್ತಿರುವ ಸಿಬ್ಬಂದಿಯ ಪಟ್ಟಿಯನ್ನು ಸಿದ್ಧಪಡಿಸಿ ಆರೋಗ್ಯ ತಪಾಸಣೆ ನಡೆಸಿ, ಅಂತಹವರಿಗೆ ಕನಿಷ್ಠ ಏಳರಿಂದ ಹದಿನಾಲ್ಕು ದಿನ ಕ್ವಾರೆಂಟೈನ್ ಮಾಡಲು ಸಿದ್ಧತೆ ನಡೆಸಲಾಗಿತ್ತು. ಆದರೆ, ಪರಿಣಾಮಕಾರಿಯಾಗಿ ಮಾಡಲು ಸಾಧ್ಯವಾಗಲಿಲ್ಲ ಎಂದು ಹಿರಿಯ ಪೊಲೀಸರು ಹೇಳಿದರು. ●ಮೋಹನ್ ಭದ್ರಾವತಿ,