ಪ್ರತಿಯೊಬ್ಬರ ವಿದ್ಯಾರ್ಥಿ ಜೀವನದಲ್ಲೂ ಯಾರಾದರೂ ಒಬ್ಬರು ಮೇಷ್ಟ್ರು ನೆನಪಿನಲ್ಲಿ ಉಳಿಯುತ್ತಾರೆ. ಕೆಲವರಿಗೆ ಅವರು ಮಾಡಿದ ಪಾಠಗಳಿಂದ ನೆನಪಿನಲ್ಲಿ ಉಳಿದರೆ, ಇನ್ನು ಕೆಲವರಿಗೆ ಅವರ ಆತ್ಮೀಯತೆ ನೆನಪಿನಲ್ಲಿ ಉಳಿಯಬಹುದು, ಮತ್ತೆ ಕೆಲವರಿಗೆ ಯಾವುದಾದರೊಂದು ಘಟನೆಯ
ಮೂಲಕ ನೆನಪು ಮಾಸದಿರಬಹುದು. ಇವರಲ್ಲಿ ಗಣಿತ ಮೇಷ್ಟ್ರುಗಳ ಪಾಲು ಒಂದು ಪಟ್ಟು ಜಾಸ್ತಿ ಎಂದೇ ಹೇಳಬಹುದು. ಅದೇ ರೀತಿ ನನ್ನ ಬದುಕಿನಲ್ಲೂ ಮೇಷ್ಟ್ರ ಜೊತೆಗೆ ನಡೆದಂಥ ಘಟನೆಯೊಂದು ಹಚ್ಚಹಸಿರಾಗಿ ಉಳಿದಿದೆ.
ಈ ಘಟನೆ ನಡೆದದ್ದು ಎಸ್‌ಎಸ್‌ಎಲ್‌ಸಿ ಮುಗಿಯಲು ತಿಂಗಳು ಬಾಕಿ ಇದ್ದಾಗ. ಆಗ ನಮಗೆ ರಾತ್ರಿ ಪಾಠ ಆರಂಭಿಸಿದ್ದರು. ಅಂದರೆ ಪರೀಕ್ಷೆಗೆ ಇನ್ನೂ ಎರಡು ತಿಂಗಳಿರುವಾಗಲೇ ತರಗತಿಯ ಹುಡುಗರೆಲ್ಲರಿಗೂ ಶಾಲೆಯ ಒಂದು ಕೋಣೆ ನೀಡಿ ಅಲ್ಲಿಯೇ ಇರಿಸಿ ಓದಿಸಲಾಗುತ್ತಿತ್ತು. ರಾತ್ರಿ ಅಲ್ಲಿಯೇ ಊಟ ಮುಗಿಸಿ ಮಲಗುತ್ತಿದ್ದೆವು. ಬೆಳಗ್ಗೆ ಬೇಗ ಎದ್ದು ಓದಿ, ಅಲ್ಲಿಯೇ ಸ್ನಾನ-ತಿಂಡಿ ಮುಗಿಸಿ ತರಗತಿಗೆ ಹಾಜರಾಗುತ್ತಿದ್ದೆವು. ವಾರದಲ್ಲಿ ಒಮ್ಮೆ ಮನೆಗೆ
ಹೋಗುತ್ತಿದ್ದೆವು. ಸರದಿ ಪ್ರಕಾರ ಒಬ್ಬೊಬ್ಬರು ಮೇಷ್ಟ್ರುಗಳು ನಮ್ಮೊಂದಿಗೆ ಉಳಿದುಕೊಳ್ಳುತ್ತಿದ್ದರು. ಆ ಅರವತ್ತು ದಿನಗಳು ಶಾಲೆಯೇ ನಮಗೆ ಇನ್ನೊಂದು ಮನೆಯಂತಾಗಿಬಿಟ್ಟಿತು.
ಎಸ್‌ಎಸ್‌ಎಲ್‌ಸಿಯ ಕೊನೆಯ ಮೂರು ತಿಂಗಳುಗಳೆಂದರೆ ಜನವರಿ, ಫೆಬ್ರವರಿ ಮತ್ತು ಮಾರ್ಚ್. ಈ ತಿಂಗಳುಗಳಲ್ಲಂತೂ ನಮ್ಮ ಮಲೆನಾಡಿನಲ್ಲಿ ಮೈ ಕೊರೆಯುವ ಚಳಿ ಇರುತ್ತದೆ. ಅಂಥ ಚಳಿಯಲ್ಲೂ ರಾತ್ರಿ ಹನ್ನೊಂದು ಗಂಟೆಯವರೆಗೆ ಕೂತು ಓದುವ ನಮ್ಮ ಕಷ್ಟ ಹೇಳತೀರದು.
ಎಂದಿನಂತೆ ಅಂದೂ ರಾತ್ರಿ ಓದು ಮುಗಿಸಿ ಮಲಗಿದ್ದೆವು. ಅಂದು ನಮ್ಮೊಂದಿಗೆ ಗಣಿತ ಮೇಷ್ಟ್ರು ಉಳಿದುಕೊಂಡಿದ್ದರು. ಮಾರನೇ ದಿನ ಬೆಳಗ್ಗೆ ಎಂದಿನಂತೆ ಐದು ಗಂಟೆಗೆ ಎದ್ದು ಎಲ್ಲರೂ ಓದಲು ಕುಳಿತರು. ಅಂದು ನಾನು ಎದ್ದವನೇ ಒಂದು ಬಕೆಟು, ಟವೆಲ್ ತೆಗೆದುಕೊಂಡು ಸೀದಾ ಸ್ನಾನಕ್ಕೆ ಹೊರಟೆ. ಅಷ್ಟು ಬೇಗ ಸ್ನಾನಕ್ಕೆ ಹೋಗಲು ಕಾರಣವೂ ಇತ್ತು. ಅದೇನೆಂದರೆ, ಎಂಟು ಗಂಟೆಯ ನಂತರ ಎಲ್ಲರೂ ಒಮ್ಮೆಲೇ ಸ್ನಾನಕ್ಕೆ ಹೋಗುತ್ತಿದ್ದುದರಿಂದ ನೂಕುನುಗ್ಗಲು ಶುರುವಾಗುತ್ತಿತ್ತು. ಅದರಿಂದ ತಪ್ಪಿಸಿಕೊಳ್ಳಲು ನಾನು ಎದ್ದು ನೇರವಾಗಿ ಸ್ನಾನಕ್ಕೆ ಹೊರಟಿದ್ದೆ. ಬಾತ್‌ರೂಮ್‌ಗೆ ಹೋದವನೇ ಟವೆಲ್ ಉಟ್ಟುಕೊಂಡು ಬಕೆಟ್‌ನಲ್ಲಿ ನೀರು ತುಂಬಿಸಿ ಆ ಕೊರೆಯುವ ಚಳಿಯಲ್ಲೂ ಶಿವ ಶಿವಾ ಎನ್ನುತ್ತಾ ಮೈ ಮೇಲೆ ಒಂದೆರಡು ತಂಬಿಗೆ ನೀರು ಹಾಕಿಕೊಂಡು ಸ್ನಾನ ಮಾಡಲು ಆರಂಭಿಸಿದೆ.
ಇತ್ತ ಕಡೆ ಮೇಷ್ಟ್ರು, ಎಲ್ಲರೂ ಓದುತ್ತಿದ್ದಾರೋ ಇಲ್ಲವೋ ಎಂದು ಒಬ್ಬೊಬ್ಬರ ಬಳಿ ಬಂದು ಪರೀಕ್ಷಿಸುತ್ತಿದ್ದರು. ಹುಡುಗರ ಪೈಕಿ ನಾನಿಲ್ಲದೇ ಇರುವುದು ಅವರ ಗಮನಕ್ಕೆ ಬಂದಿದೆ. ಕೈಯಲ್ಲೊಂದು ಕೋಲು ಹಿಡಿದುಕೊಂಡು ನನ್ನನ್ನು ಹುಡುಕುತ್ತಾ ಸ್ನಾನದ ಕೊಠಡಿ ಕಡೆಗೆ ಬಂದು “ಅಭಿಷೇಕ್ ಅಭಿಷೇಕ್’ ಎಂದು ಕರೆದರು. ನಾನು ಒಳಗಿನಿಂದಲೇ “ಸ್ನಾನ ಮಾಡ್ತಾ ಇದ್ದೇನೆ, ಹೇಳಿ ಸಾರ್’ ಎಂದು ಕೂಗಿದೆ. ಅದಕ್ಕವರು “ಚೂರು ಬಾಗಿಲು ತೆಗೆದು ಹೊರಗೆ ಬಾರಪ್ಪಾ’ ಎಂದು ನಯವಾಗಿ ಕರೆದರು. ಮುಖಕ್ಕೆ ಸೋಪು ಹಚ್ಚಿದ್ದರಿಂದ ಕಣ್ಣಿನ ಬಳಿಯ ಸೋಪು ಉಜ್ಜಿಕೊಂಡು ಬಂದೆ. ಇನ್ನೂ ಕತ್ತಲಿದ್ದುದರಿಂದ ಮೇಷ್ಟ್ರು ಎಲ್ಲಿದ್ದಾರೆಂದು ಸರಿಯಾಗಿ ಕಾಣಲಿಲ್ಲ. ಅದು ತಿಳಿದದ್ದು ಕೋಲಿನಿಂದ ನನ್ನ ಬೆನ್ನ ಮೇಲೆ ಏಟು ಬಿದ್ದಾಗಲೇ.
ಇನ್ನು ಇಲ್ಲಿದ್ದರೆ ಮತ್ತೆ ಏಟು ಬೀಳುವುದು ಖಂಡಿತಾ ಎಂದು ದೇವರನ್ನು ಮನಸಲ್ಲಿ ನೆನೆದುಕೊಂಡು ಓಡಲಾರಂಭಿಸಿದೆ. ಅವರು ಅಲ್ಲಿದ್ದ ಬಕೆಟನ್ನು ಎತ್ತಿಕೊಂಡು ನನ್ನ ಹಿಂದೆಯೇ ಬಂದರು. ಶಾಲೆಯ ಆವರಣ ಸೇರಿಕೊಂಡಿದ್ದ ನಾನು ಅಲ್ಲೇ ನಿಂತಿದ್ದೆ. ಎಲ್ಲಿ ಬಕೆಟ್‌ನಲ್ಲೇ ಹೊಡೆದುಬಿಡುತ್ತಾರೋ ಎಂದು ಹೆದರಿದ್ದೆ. ಸ್ವಲ್ಪ ಹೊತ್ತಿನ ಬಳಿಕ ಅವರ ಕೋಪ ತಣ್ಣಗಾಯಿತು. ಮೇಷ್ಟ್ರು ಹಿಂದಿರುಗಿದರು ಎಂದು ಗೊತ್ತಾದ ಮೇಲೆ ನಿಧಾನವಾಗಿ ಸ್ನಾನ ಮುಗಿಸಿ ಓದಲು ಆರಂಭಿಸಿದೆ.
ತರಗತಿಯಲ್ಲಿ ಅಂದು ಪಾಠ ಮಾಡುವಾಗ ಮೇಷ್ಟ್ರ ಮುಖ ನೋಡಲು ಅಂಜುತ್ತಿದ್ದೆ. ಎಲ್ಲಿ ಹುಡುಗಿಯರ ಮುಂದೆ ಅವರು ನನ್ನ ಸ್ನಾನದ ಕಥೆ ಹೇಳಿ ಮುಜುಗರವಾಗುತ್ತೋ ಎಂದು ದಿಗಿಲು! ಪಾಠ ಕೇಳುವಾಗ ಆಕಸ್ಮಿಕವಾಗಿ ಅವರ ಮುಖ ನೋಡಿದೆ. ನನ್ನತ್ತ ನೋಡಿ ನಗುತ್ತಿದ್ದರು ಮೇಷ್ಟ್ರು. ಆ ಘಟನೆ ನಡೆಯುವವರೆಗೆ ನಾನು ಅವರ ಅಚ್ಚುಮೆಚ್ಚಿನ ಶಿಷ್ಯನಾಗಿದ್ದೆ. ಆದರೆ ಆ ಘಟನೆಯ ನಂತರ ನಾನವರಿಗೆ ಇನ್ನೂ ಅಚ್ಚುಮೆಚ್ಚಾದೆ.
ಅಭಿಷೇಕ್ ಎಂ. ತೀರ್ಥಹಳ್ಳಿ