Advertisement
ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಅತೃಪ್ತ ಶಾಸಕರ ರಾಜೀನಾಮೆಯಿಂದ ಅಲ್ಪಮತಕ್ಕೆ ಕುಸಿದು, ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ ಅಧಿಕಾರ ಕಳೆದುಕೊಳ್ಳುವಂತಾಯಿತು. ಇದರ ಬೆನ್ನಲ್ಲೇ ಹೊಸ ಸರ್ಕಾರ ರಚನೆಗೆ ಮುಂದಾಗಿರುವ ಬಿಜೆಪಿಯ ಬಿ.ಎಸ್. ಯಡಿಯೂರಪ್ಪ ಶುಕ್ರವಾರ ಸಂಜೆ ರಾಜ್ಯದ 19ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಹೀಗಾಗಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಪೈಕಿ ಗದಗ ಹೊರತುಪಡಿಸಿ ಇನ್ನುಳಿದ ಮೂರರಲ್ಲಿ ಬಿಜೆಪಿ ಶಾಸಕರಿದ್ದು, ಯಾರಿಗೆ ಒಲಿಯಲಿದೆ ಮಂತ್ರಿಗಿರಿ ಎಂಬ ಚರ್ಚೆಗಳು ಜೋರಾಗಿವೆ.
Related Articles
Advertisement
ಮತ್ತೂಂದೆಡೆ ಕಾಂಗ್ರೆಸ್-ಜೆಡಿಎಸ್‌ನ ಅತೃಪ್ತ ಶಾಸಕರಿಗೆ ಬಿಜೆಪಿ ಸರಕಾರದಲ್ಲಿ ಮಂತ್ರಿಸ್ಥಾನ ನೀಡಲಾಗುತ್ತದೆ ಎಂಬ ಮಾತು ಕೇಳಿ ಬರುತ್ತಿದೆ. ಒಂದೊಮ್ಮೆ ಅದು ನಿಜವಾದರೆ, ಬಿಜೆಪಿ ಶಾಸಕರಿಗಿಂತ ಹೊರಗಿನವರಿಗೆ ಮೊದಲ ಆದ್ಯತೆ ನೀಡಬೇಕಾಗುತ್ತದೆ. ಅದರಂತೆ 2018ರ ವಿಧಾನಸಭೆ ಚುನಾವಣೆಯಲ್ಲಿ ಗದಗ ಮತಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಗೆಲುವು ಸಾಧಿಸುವಲ್ಲಿ ಸಫಲವಾಗಿತ್ತು. ಬಳಿಕ ಅಸ್ಥಿತ್ವಕ್ಕೆ ಬಂದ ಕಾಂಗ್ರೆಸ್-ಜೆಡಿಎಸ್ ಸರಕಾರದಲ್ಲಿ ನಾನಾ ಕಾರಣಗಳಿಂದಾಗಿ ಶಾಸಕ ಎಚ್.ಕೆ.ಪಾಟೀಲ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಂಡಿರಲಿಲ್ಲ. ಬಿಜೆಪಿ ಸರಕಾರದಲ್ಲೂ ಅಂತಹ ಪರಿಸ್ಥಿತಿಯೇ ಎದುರಾಗಿ, ಪ್ರದೇಶ, ಜಾತಿ, ಹಿರಿತನದ ಲೆಕ್ಕಾಚಾರದಲ್ಲಿ ಜಿಲ್ಲೆಯ ಶಾಸಕರಿಗೆ ಸಚಿವ ಸ್ಥಾನ ತಪ್ಪುವ ಸಾಧ್ಯತೆಗಳನ್ನೂ ತಳ್ಳಿಹಾಕಲಾಗದು ಎಂದು ವಿಶ್ಲೇಷಿಸಲಾಗುತ್ತಿದೆ.
ಇನ್ನು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗದಗ ಮತಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಹಾಗೂ ಬಿ. ಶ್ರೀರಾಮುಲು ಅವರ ಶಿಷ್ಯ ಅನಿಲ್ ಮೆಣಸಿನಕಾಯಿಗೆ ನಿಗಮ ಮಂಡಳಿಯೊಂದರ ಅಧ್ಯಕ್ಷ ಸ್ಥಾನ ಒಲಿಯಲಿದೆ ಎನ್ನುತ್ತಿವೆ ಪಕ್ಷದ ಮೂಲಗಳು.
•ವಿಶೇಷ ವರದಿ