Advertisement

ಯಾರ ಹೃದಯ ಯಾರಿಗೋ ಯಾರು ಹೇಳ ಬಲ್ಲರು?

12:30 AM Feb 08, 2019 | |

ಮುಖದಲ್ಲಿ ಪ್ರೀತಿಯ ಭಾವನೆಯಿತ್ತು. ಆ ಕಣ್ಣುಗಳಲ್ಲಿ ಏನೋ ಒಂದು ರೀತಿಯ ಕಾಮನೆಯಿತ್ತು. ಹೌದು, ಪ್ರೀತಿಸಿದವ ಪ್ರೀತಿಯನ್ನು ತೊರೆದಿದ್ದ. ಮನದಾಳದಿಂದ ಮನಕ್ಕೆ ನೋವಿತ್ತು. ಹೃದಯ ಸೋತಿತ್ತು. 

Advertisement

ಅಂತರಾಳದಲ್ಲೆಲ್ಲೋ ಕೊರಗು ಬೇರೂರಿತ್ತು. ಮೋಹದ ಬಲೆಯು ಬಿಚ್ಚಿತ್ತು. ಆಸೆಗಳು ಕೈಕೊಟ್ಟಿತ್ತು. ಪ್ರೀತಿಸಿದ ಹೃದಯ ಪ್ರೀತಿಯಲ್ಲಿ ಸೋತಿತ್ತು.  ಆಗಿನ ಹಳೇ ನೆನಪುಗಳಿವು. ಖುಷಿಯೂ ಇದೆ, ದುಃಖವೂ ಇದೆ. ಕಾಲ ಕಳೆದೇ ಹೋಯ್ತು. ನೆನಪುಗಳು ಮಾತ್ರ ಕಳೆದಿಲ್ಲ ನೋಡಿ. ಅಚ್ಚಳಿಯದೇ ಉಳಿದಿವೆ. ಕಣ್ಣುಗಳನ್ನು ಮಿಟುಕಿಸಿ, ಆ ತುಟಿಗಳಿಂದ ನುಡಿದ ಮಾತುಗಳು ಇನ್ನೂ ಕಿವಿಯಲ್ಲಿ ಗುನುಗುತ್ತಿದೆ- ನೀನಿತ್ತ ಭರವಸೆಯ ಆಸೆ ಸೋತು ಸುಮ್ಮನಾಗಿ ಮೂಲೆಸೇರಿದೆ? ನನ್ನ ಪ್ರೀತಿಯಲ್ಲಿ ಏನು ಕೊರತೆ ಇತ್ತು? ಬಿಟ್ಟು ಹೋದವನಿಗೇ ಗೊತ್ತು. ಬಹುಶಃ ಆಕೆಯ ಪ್ರೀತಿ ನನ್ನ ಪ್ರೀತಿಯಲ್ಲಿದ್ದ ಕೊರತೆಯನ್ನು ನೀಗಿಸುವಂತಿತ್ತೋ ಏನೋ? ನನಗೇನು ಬೇಜಾರಿಲ್ಲ. ಆದರೆ, ಪ್ರೀತಿಯ ಹೆಸರಿನಲ್ಲಿ ನೋವನ್ನು ಕಲಿಸಿಕೊಡುತ್ತಾನೆ ಎಂದು ಎಣಿಸಿರಲಿಲ್ಲ. ಆದರೆ, ಜೀವನಕ್ಕೆ ಇದು ಒಂದೊಳ್ಳೆ ಪಾಠ! ಅದೇನೇ ಇರಲಿ, ನನ್ನ ಪ್ರೀತಿಯ ಭಾವನೆಗೆ ಬೆಲೆ ಇದ್ದಂತೆ, ಅವರವರ ಭಾವನೆಗಳಿಗೂ ಬೆಲೆ ಇದೆ.  

ನನ್ನ ಹೂವು ಯಾರ ಮುಡಿಗೋ ಸೇರಿತ್ತು. ಯಾರ ಹೃದಯ ಯಾರಧ್ದೋ ಹೃದಯದಲ್ಲಿ ಬೆರೆತಿತ್ತು. ನೋವು ಇದ್ದರೂ ಕೂಡ ಆಗಿನ ನೆನಪುಗಳನ್ನು ನೆನೆಸಿಕೊಂಡ್ರೆ ಒಂದು ಪಾಠ ಕಲಿತ ನೆಮ್ಮದಿ. ಜೀವನವೇ ಹೀಗೆ ನೋವು-ನಲಿವು, ಸಿಹಿ-ಕಹಿ, ಗೊಂದಲ-ರಹಸ್ಯ ಇವುಗಳೆಲ್ಲದರ ಸಮಾಗಮ. ಜೀವನದಲ್ಲೋ ನೋವಿದ್ದ ಮೇಲೆ, ಪ್ರೀತಿಯಲ್ಲಿ ಇರದೇ ಹೋಗುತ್ತ ನೋವು.

ಹೌದು, ಆ ಪ್ರೀತಿಯನ್ನು ನೆನೆಸಿಕೊಂಡು ನಾಚಿ ನೀರಾಗುತ್ತದೆ ಹೃದಯ. ಆದರೇನು, ಆ ಪ್ರೀತಿ ಸಿಗುವುದಿಲ್ಲ ಎಂಬುದೇ ವಿರಹ. ಕಣ್ಣಿನಲ್ಲೇ ಮಾತನಾಡುವ ಕಾಲ ಅಂದಾಗಿತ್ತು. ಆದರೆ, ಇಂದೇಕೋ ಮುಖ ನೋಡಿದರೂ ಮಾತು ಹೊರಡುತ್ತಿಲ್ಲ , ಹೊರಡುವುದೂ ಇಲ್ಲ. ಅವುಗಳು ನೆನಪುಗಳಷ್ಟೆ. ಕಳೆದ ನೆನಪುಗಳೇ ಹೀಗೆ, ಇದ್ದೂ ಇರದಂತೆ ಕಾಣೆಯಾಗುತ್ತವೆೆ, ಇರದೆಯೂ ಇರುವಂತೆ ಭಾಸವಾಗುತ್ತವೆ. ಇದರ ಬಗ್ಗೆ ಚಿಂತಿಸಿ ಪ್ರಯೋಜನವೇನಿಲ್ಲ. ಬಿಟ್ಟುಹೋದವನು ಹೋದ. ಅವನಿಂದ ನನ್ನ ಜೀವನ ನಿಂತಿಲ್ಲ. ನಾನು ಆರಾಮಾಗಿಯೇ ಇದ್ದೇನೆ. ಖುಷಿಯಾಗಿಯೇ ಇದ್ದೇನೆ.  ಆದರೂ ಎಲ್ಲೋ ಮನಸಿನ ಮೂಲೆ ಜಡ್ಡು ಹಿಡಿದಿದೆ ಅನ್ನಿಸುತ್ತಿದೆ. 

 ಯಾರ ಒಲವು ಯಾರ ಕಡೆಗೋ… ವಿಧಿಯಾಟ ಬರೆದವ ನಾರು? ದೇವರ ಆಟ ಬಲ್ಲವನಾರು? ಯಾರ ಹೃದಯ ಯಾರಿಗೊ. ಹೌದು ಇದೊಂದು ಪ್ರೇಮದ ಕಥೆ. ಇದೆಂಥ ಘೋರ ನೋವು. ಜೀವನ ಥ್ರಿಲ್ಲಿಂಗ್‌ ಇರಬೇಕು ಅಂದರೆ ನೋವು ಇರಲೇಬೇಕು. ಇದು ನನ್ನ ಜೀವನದಲ್ಲಿ ಹೊಸದೊಂದು ಅನುಭವ. ಹೊಸ ನೋವಿನ ಒಂದು ಹೊಸ ಪಾಠ. 

Advertisement

ಆದರೆ, ನನ್ನ ಜೀವನದಲ್ಲಿ ನನಗೆ ಪ್ರೀತಿಯ ಕೊರತೆಯಾಗಲಿಲ್ಲ. ಒಂದು ದುಂಬಿ ಹಾರಿಹೋದರೂ ನನಗೂ ಮತ್ತೂಂದು ಪ್ರೀತಿಯ ದುಂಬಿ ಸಿಕ್ಕಿದೆ. ಹೊಸ ವಸಂತ ಹೊಸ ರಾಗ ಹಾಡಿದೆ. ಮತ್ತೆ ಹೊಸತನದ ಹೊಸ ನೆನಪುಗಳು ಮೂಡಿ ಈಗ ವಿರಹದ ವೇದನೆ ನನ್ನ ಬಿಟ್ಟು ದೂರ ಸರಿದಿದೆ. ವಿರಹ ನನ್ನ ಮನದಲ್ಲಿ ತನ್ನದೇ ಆದ ಜಾಗದೊಂದಿಗೆ ಗೂಡು ಕಟ್ಟಿಕೊಂಡಿತ್ತು. ನಾನೀಗ ಅದರ ಪುಟ್ಟ ಗೂಡೊಂದನ್ನು ಕಿತ್ತೆಸೆದಿದ್ದೇನೆ. ನನ್ನ ಖುಷಿಗೆ ವಿರಹವೂ ವಿರಹವನ್ನನುಭವಿಸುತ್ತಿದೆ. ಹೃದಯಕ್ಕೆ ಹಾಕಿಕೊಂಡ ಕದವನ್ನು ತೆರೆದವನು ಇವನು. ಯಾರ ಹೃದಯ ಯಾರಿಗೋ, ಯಾರು ಹೇಳಬಲ್ಲರು? ಯಾರ ಪಯಣ ಎಲ್ಲಿಗೋ? 
                                                                                                                         
ಶೃತಿ ಹೆಗಡೆ
ಪ್ರಥಮ ಎಂ.ಸಿ.ಜೆ.  ಎಸ್‌. ಡಿ. ಎಂ ಕಾಲೇಜು, ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next