ಲೋಕಸಭೆಯಲ್ಲಿ ವಿಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯ ಬಳಿಕ ಗುರುವಾರ (ಆಗಸ್ಟ್ 10) ಪ್ರಧಾನಿ ನರೇಂದ್ರ ಮೋದಿ ಅವರು ಬರೋಬ್ಬರಿ ಎರಡೂವರೆ ಗಂಟೆಗಳ ಕಾಲ ಸುದೀರ್ಘ ಉತ್ತರ ನೀಡಿದ್ದು, ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಆಡಳಿತಾವಧಿಯಲ್ಲಿ ಈಶಾನ್ಯ ರಾಜ್ಯಗಳ ಜನರನ್ನು ಹೇಗೆ ನಡೆಸಿಕೊಂಡಿದೆ ಎಂಬುದನ್ನು ಇತಿಹಾಸದ ಘಟನೆಯನ್ನು ಉದಾಹರಣೆ ಮೂಲಕ ವಿವರಿಸುವ ಮೂಲಕ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ:Rakshit shetty: ಒಂದಲ್ಲ,ನಾಲ್ಕು!.. ಈ ವರ್ಷ ರಕ್ಷಿತ್ ಶೆಟ್ಟಿ ಪರಂವದಿಂದ ಅದ್ಧೂರಿ ರಿಲೀಸ್
“ ಮಣಿಪುರ ಸೇರಿದಂತೆ ಈಶಾನ್ಯ ರಾಜ್ಯದ ಜೊತೆ ನಾವು ಭಾವನಾತ್ಮಕ ಸಂಬಂಧವನ್ನು ಹೊಂದಿದ್ದೇವೆ. ಆದರೆ ಕಾಂಗ್ರೆಸ್ ಅವಧಿಯಲ್ಲಿ ಏನಾಗಿತ್ತು ಎಂಬುದನ್ನು ನೆನಪಿಸಿಕೊಳ್ಳಬೇಕು. 1966ರ ಮಾರ್ಚ್ 5ರಂದು ಆಗಿನ ಕಾಂಗ್ರೆಸ್ ನೇತೃತ್ವದ ಇಂದಿರಾ ಗಾಂಧಿ ಸರ್ಕಾರ ದೇಶದೊಳಗಿನ ನಾಗರಿಕ ಪ್ರದೇಶದ ಮೇಲೆ ಭಾರತೀಯ ವಾಯುಪಡೆ ವೈಮಾನಿಕ ದಾಳಿ ನಡೆಸಿತ್ತು ಎಂಬ ಘಟನೆಯನ್ನು ಪ್ರಧಾನಿ ಮೋದಿ ಪ್ರಸ್ತಾಪಿಸುವ ಮೂಲಕ ತಿರುಗೇಟು ನೀಡಿದ್ದಾರೆ.
ಅಂದು ನಡೆದಿದ್ದೇನು?
1966ರ ಮಾರ್ಚ್ 6ರಂದು ಮಿಜೋರಾಂನ ಐಜ್ವಾಲ್ ಮೇಲೆ ಭಾರತೀಯ ವಾಯುಪಡೆ ಭಾರೀ ದಾಳಿ ನಡೆಸಿ ಬಾಂಬ್ ಹಾಕಿತ್ತು. ಇದರ ಪರಿಣಾಮ ನಾಗರಿಕರು ಸಾವನ್ನಪ್ಪಿದ್ದು, ನಗರಗಳು ಸ್ಮಶಾನ ಸದೃಶವಾಗಿ ಹೋಗಿದ್ದವು. ಮಿಜೋರಾಂ ಆಗ ಅಸ್ಸಾಂನ ಭಾಗವಾಗಿತ್ತು.
ಅಂದು ಕಾಂಗ್ರೆಸ್ ಸರ್ಕಾರ ಮಿಜೋರಾಂನ ಅಸಹಾಯಕ ಜನರ ಮೇಲೆ ವೈಮಾನಿಕ ದಾಳಿ ನಡೆಸಿತ್ತು. ಹಾಗಾದರೆ ಮಿಜೋರಾಂ ನಾಗರಿಕರು ಭಾರತದ ಪ್ರಜೆಗಳಲ್ಲವೇ? ಭಾರತೀಯ ವಾಯುಪಡೆ ದೇಶಕ್ಕೆ ಸೇರಿದ್ದಲ್ಲವೇ ಇದಕ್ಕೆ ಕಾಂಗ್ರೆಸ್ ಪಕ್ಷ ಉತ್ತರ ನೀಡಬೇಕು. ಇಂದಿಗೂ ಮಿಜೋರಾಂ ಜನರು ಪ್ರತಿ ವರ್ಷ ಮಾರ್ಚ್ 5ರಂದು ಶೋಕಾಚರಣೆ ನಡೆಸುತ್ತಾರೆ. ಈ ವಿಚಾರವನ್ನು ಕಾಂಗ್ರೆಸ್ ಪಕ್ಷ ಮುಚ್ಚಿಟ್ಟಿದೆ. ಆಗ ಪ್ರಧಾನಿಯಾಗಿದ್ದವರು ಯಾರು…ಅದು ಇಂದಿರಾ ಗಾಂಧಿ ಎಂಬುದಾಗಿ ಪ್ರಧಾನಿ ಮೋದಿ ಚಾಟಿ ಬೀಸಿದರು.
ಸಂಘರ್ಷಕ್ಕೆ ಕಾರಣವಾಗಿದ್ದು ಏನು?
1962ರಲ್ಲಿ ಮಿಜೋ ಹಿಲ್ಸ್ ಅಸ್ಸಾಂನ ಭಾಗವಾಗಿತ್ತು. ಈ ಸಂದರ್ಭದಲ್ಲಿ ಸ್ವತಂತ್ರ ಸ್ವಾಯತ್ತೆ ಪಡೆಯಲು ಉದ್ದೇಶದೊಂದಿಗೆ ರಾಜಕೀಯ ದೃಷ್ಟಿಕೋನ ಇಟ್ಟುಕೊಂಡು ಮಿಜೋ ನ್ಯಾಷನಲ್ ಫ್ರಂಟ್ (MNF) ರಚನೆಯಾಗಿತ್ತು. ಈ ಸಂಘಟನೆ ಆರಂಭಿಕ ಹಂತದಲ್ಲಿ ಮಾತುಕತೆ ನಡೆಸಿತ್ತು. ಆದರೆ ಸ್ವತಂತ್ರ ರಾಜ್ಯದ ಬೇಡಿಕೆಗೆ ಸೂಕ್ತ ಸ್ಪಂದನೆ ಸಿಗದಿದ್ದಾಗ ಮಿಜೋ ನ್ಯಾಷನಲ್ ಆರ್ಮಿ (ಇದರಲ್ಲಿ ಮಾಜಿ ಸೈನಿಕರಿದ್ದರು) ಶಸ್ತ್ರಾಸ್ತ್ರವನ್ನು ಕೈಗೆತ್ತಿಕೊಂಡು ಭಾರತೀಯ ಸೇನೆ ವಿರುದ್ಧ ಯುದ್ಧಕ್ಕೆ ಇಳಿದುಬಿಟ್ಟಿತ್ತು.
ಮಾಧ್ಯಮಗಳ ವರದಿ ಪ್ರಕಾರ, ಬರಗಾಲದಿಂದ ತತ್ತರಿಸಿ ಸಾವಿರಾರು ಮಂದಿ ಕೊನೆಯುಸಿರೆಳೆದ ಪರಿಣಾಮ ಮಿಜೋರಾಂನಲ್ಲಿ ಶಸ್ತ್ರಾಸ್ತ್ರ ಚಳವಳಿಗೆ ನಾಂದಿ ಹಾಡಿತ್ತು. ಅಂದು ಆಹಾರ ಬಿಕ್ಕಟ್ಟನ್ನು ನಿಭಾಯಿಸಲು ಮಿಜೋ ನ್ಯಾಷನಲ್ ಫೆಮಿನ್ ಫ್ರಂಟ್ ರಚನೆಯಾಗಿತ್ತು. ನಂತರ ಇದು ಮಿಜೋ ನ್ಯಾಷನಲ್ ಆರ್ಮಿಯಾಗಿ ರೂಪಾಂತರಗೊಂಡಿತ್ತು.
1966ರ ಫೆಬ್ರವರಿಯಲ್ಲಿ ಎಂಎನ್ ಎಫ್ ಸ್ವಯಂಸೇವಕರು ಐಜ್ವಾಲ್ ಮತ್ತು ಲುಂಗ್ಲೈನಲ್ಲಿ ಅಸ್ಸಾಂ ರೈಫಲ್ಸ್ ಮೇಲೆ ದಾಳಿ ನಡೆಸಿ, ಭಾರತದಿಂದ ಸ್ವತಂತ್ರಗೊಂಡಿರುವುದಾಗಿ ಘೋಷಿಸಿತ್ತು. ಮಾರ್ಚ್ 2ರಂದು ಎಂಎನ್ ಎಫ್ ಐಜ್ವಾಲ್ ನ ಖಜಾನೆ, ಶಸ್ತ್ರಾಗಾರ, ಆಯುಧಗಳನ್ನು ತನ್ನ ವಶಕ್ಕೆ ತೆಗೆದುಕೊಂಡಿತ್ತು.
ಈ ಆಂತರಿಕ ಬಿಕ್ಕಟ್ಟನ್ನು ಎದುರಿಸಲು ಇಂದಿರಾಗಾಂಧಿ ನೇತೃತ್ವದ ಸರ್ಕಾರ ಭಾರತೀಯ ವಾಯುಪಡೆಗೆ ಪೂರ್ಣ ಸ್ವಾತಂತ್ರ್ಯವನ್ನು ಕೊಡಲು ನಿರ್ಧರಿಸಿತ್ತು. ಇದರ ಪರಿಣಾಮ ಐಎಎಫ್ ನ ನಾಲ್ಕು ಫೈಟರ್ ಜೆಟ್ಸ್ ಗಳು ಐಜ್ವಾಲ್ ನಗರಕ್ಕೆ ತೆರಳಿ ಮೊದಲಿಗೆ ಮೆಷಿನ್ ಗನ್ಸ್ ಪ್ರಯೋಗಿಸಿ ನಂತರ ಬಾಂಬ್ ದಾಳಿ ನಡೆಸಿರುವುದಾಗಿ ವರದಿ ವಿವರಿಸಿದೆ.
ಕೆಲವು ದಿನಗಳ ಕಾಲ ನಡೆದ ದಾಳಿಯಿಂದಾಗಿ ದಿಕ್ಕೆಟ್ಟ ಜನರು ಎಲ್ಲೆಂದರಲ್ಲಿ ಪಲಾಯನ ಮಾಡಿ ಜೀವ ರಕ್ಷಿಸಿಕೊಂಡಿದ್ದರು. ಮಿಜೋ ನ್ಯಾಷನಲ್ ಫ್ರಂಟ್ ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶದ ಕಾಡುಗಳಲ್ಲಿ ಆಶ್ರಯ ಪಡೆದುಕೊಂಡಿತ್ತು. ಬಾಂಬ್ ದಾಳಿಯಲ್ಲಿ ಆಸ್ತಿ-ಪಾಸ್ತಿಗಳು ನಾಶಗೊಂಡು, 13 ಜನರು ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.
ಕೇಂದ್ರ ಸರ್ಕಾರ ತನ್ನ ರಾಜ್ಯದ ಜನರ ಮೇಲೆ ಬಾಂಬ್ ದಾಳಿ ನಡೆಸುತ್ತೆ ಎಂಬುದನ್ನು ಯಾರೂ ಕೂಡಾ ಊಹಿಸಿರಲಿಲ್ಲವಾಗಿತ್ತು. ಐಜ್ವಾಲ್ ಮೇಲೆ ಬಾಂಬ್ ದಾಳಿ ನಡೆಸಲು ಧೈರ್ಯ ತೋರಿದ್ದ ಸರ್ಕಾರ ಚೀನಾ ಅಥವಾ ಪಾಕಿಸ್ತಾನದೊಳಗೆ ದಾಳಿ ನಡೆಸುವ ಧೈರ್ಯ ತೋರದಿರುವುದನ್ನು ಕಂಡು ಅಚ್ಚರಿಯಾಗಿತ್ತು ಎಂಬುದಾಗಿ ಮಿಜೋ ನ್ಯಾಷನಲ್ ಫ್ರಂಟ್ ನ ಹಿರಿಯ ಸದಸ್ಯರೊಬ್ಬರು ನೆನಪಿನ ಬುತ್ತಿಯನ್ನು ಬಿಚ್ಚಿಟ್ಟಿದ್ದಾರೆ.
ಅಲ್ಲಗಳೆದಿದ್ದ ಸೇನಾ ಮೂಲಗಳು:
ಮಾಧ್ಯಮದ ವರದಿಯಂತೆ, ಮಿಜೋರಾಂ ಜನರ ಮೇಲೆ ಬಾಂಬ್ ದಾಳಿ ನಡೆಸಿರುವ ಆರೋಪವನ್ನು ಸರ್ಕಾರ ಮತ್ತು ಸೇನಾಮೂಲಗಳು ಅಲ್ಲಗಳೆದಿದ್ದವು. ಐಜ್ವಾಲ್ ನಾಗರಿಕರಿಗೆ ಆಹಾರ ಸರಬರಾಜು ಮಾಡಲು ಫೈಟರ್ ಜೆಟ್ ಕಳುಹಿಸಲಾಗಿತ್ತೇ ವಿನಃ ಬಾಂಬ್ ಗಳನ್ನಲ್ಲ ಎಂದು ಪ್ರಧಾನಿ ಇಂದಿರಾ ಗಾಂಧಿ ಹೇಳಿಕೆ ನೀಡಿರುವುದಾಗಿ ಕೋಲ್ಕತಾ ಡೈಲಿ, ದ ಹಿಂದೂಸ್ತಾನ್ ಸ್ಟಾಂಡರ್ಡ್ ತಿಳಿಸಿದೆ.