Advertisement

ಕೈ-ಕಮಲದ ಮಧ್ಯೆ ಯಾರಿಗೆ ಮೇಲುಗೈ?

02:22 PM Apr 28, 2019 | Suhan S |

ಗದಗ: ಹಾವೇರಿ ಲೋಕಸಭಾ ಚುನಾವಣೆಗೆಮತದಾನ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆಅಭ್ಯರ್ಥಿಗಳ ಸೋಲು-ಗೆಲುವಿನ ಚರ್ಚೆ ಮುನ್ನೆಲೆಗೆ ಬಂದಿದೆ. ಅದರೊಂದಿಗೆ ಹಾವೇರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಗದಗ ವಿಧಾನಸಭಾ ಕ್ಷೇತ್ರದಲ್ಲಿ ಯಾರಿಗೆ ಮುನ್ನಡೆಯಾಗಲಿದೆ ಎಂಬುದರ ಬಗ್ಗೆ ಈಗಾಗಲೇ ರಾಜಕೀಯ ಪಕ್ಷಗಳ ನಾಯಕರು ಕೂಡಿಸಿ, ಕಳೆದು, ಭಾಗಿಸುವ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.

Advertisement

ಲೋಕಸಭಾ ಚುನಾವಣೆಗೆ ಸಂಬಂಧಿಸಿ ಗದಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತದಾರರು ತಮ್ಮ ಹಕ್ಕು ಚಲಾಯಿಸುವ ಮೂಲಕ ತಮ್ಮ ಮಹೋನ್ನತ
ಜವಾಬ್ದಾರಿ ಪೂರ್ಣಗೊಳಿಸಿದ್ದಾರೆ. ಈಗಾಗಲೇ ಮತದಾನ ಪ್ರಮಾಣವೂ ಬಹಿರಂಗಗೊಂಡಿದೆ. ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಡಿ.ಆರ್‌.ಪಾಟೀಲ ಹಾಗೂ ಬಿಜೆಪಿಯ ಶಿವಕುಮಾರ ಉದಾಸಿ ಅವರ ಮಧ್ಯೆ ನೇರ ಸ್ಪರ್ಧೆ ಏರ್ಪಟ್ಟಿದೆ. ಹೀಗಾಗಿ ಯಾವ ಭಾಗದಲ್ಲಿ ಯಾವ ಪಕ್ಷ, ಅಭ್ಯರ್ಥಿ ಎಷ್ಟು ಮತಗಳನ್ನು ಸೆಳೆದಿರಬಹುದು. ತಮ್ಮ ಅಭ್ಯರ್ಥಿಗೆ ಎಲ್ಲಿ ಪ್ಲಸ್ಸು? ಎಲ್ಲಿ ಮೈನಸ್ಸು ಆಗಿರಬಹುದು ಎಂದು ಆಯಾ ಪಕ್ಷಗಳ ಪ್ರಮುಖರು ಈಗಾಗಲೇ
ತಲೆಕೆಡಿಕೊಳ್ಳುತ್ತಿದ್ದಾರೆ.

ಗದಗ ವಿಧಾನಸಭಾ ಕ್ಷೇತ್ರದ ಗ್ರಾಮೀಣ ಪ್ರದೇಶ ಹಿಂದಿನಿಂದಲೂ ಕಾಂಗ್ರೆಸ್‌ ಭದ್ರಕೋಟೆ ಎನಿಸಿದೆ. ಅವಳಿ ನಗರದಲ್ಲಿ ನಗರಸಭೆ ಚುನಾವಣೆ ಹೊರತುಪಡಿಸಿ ಬಹುತೇಕ ಕಾಂಗ್ರೆಸ್ಸೆತರ ಪಕ್ಷಗಳೇ ಪ್ರಾಬಲ್ಯ ಮೆರೆದಿವೆ. ಕೇವಲ 10 ತಿಂಗಳ ಹಿಂದೆ ನಡೆದ ವಿಧಾನಸಭೆ, 2014ರ ಲೋಕಸಭೆ ಚುನಾವಣೆಯೂ ಇದಕ್ಕೆ ಹೊರತಾಗಿಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗದಗ-ಬೆಟಗೇರಿಯಲ್ಲಿ ಬಿಜೆಪಿ 10 ಸಾವಿರ ಮತಗಳು ಮುನ್ನಡೆ ಸಾಧಿಸಿದ್ದರೆ, ಗದಗ ಗ್ರಾಮೀಣ ಜನರು ಕಾಂಗ್ರೆಸ್‌ಗೆ 13 ಸಾವಿರ ಮುನ್ನಡೆ ನೀಡಿದ್ದರು. ಹೀಗಾಗಿ ಲೋಕಸಭಾ ಚುನಾವಣೆ ವೇಳೆಗೆ ಅವಳಿ ನಗರದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರನ್ನು ಸದೃಢಗೊಳಿಸಿದೆ. ಅದರೊಂದಿಗೆ ಮಾಜಿ ಶಾಸಕ ಹಾಗೂ ಪಂಚಮಸಾಲಿ ಸಮಾಜದ ಹಿರಿಯರಾದ ಶ್ರೀಶೈಲಪ್ಪ ಬಿದರೂರ ಅವರ ಸೇರ್ಪಡೆಯಿಂದ ಕೈಗೆ ಮತ್ತಷ್ಟು ಬಲ ಬಂದಿದೆ. ಪಕ್ಷದ ಎರಡನೇ ಹಂತದ ನಾಯಕರು ಪ್ರತಿ ಮನೆಗೆ ಭೇಟಿ ನೀಡಿ ಪಕ್ಷದ ಕಾರ್ಯಕ್ರಮಗಳನ್ನು ವಿವರಿಸಿದ್ದಾರೆ. ಈ ಬಾರಿಯ ಲೋಕಸಭಾ ಚುಣಾವಣೆಯಲ್ಲಿ ಕನಿಷ್ಠ 15 ಸಾವಿರ ಮತಗಳು ಸೇರಿದಂತೆ ಕ್ಷೇತ್ರದಲ್ಲಿ ಕನಿಷ್ಠ 25 ಸಾವಿರ ಮುನ್ನಡೆ ಸಿಗಲಿದೆ ಎಂಬುದು ಕಾಂಗ್ರೆಸ್ಸಿಗರ ಮಾತು.

ಈ ಬಾರಿ ಸಲೀಂ ಅಹದ್ಮದ್‌ ಅವರಿಗೆ ಟಿಕೆಟ್‌ ಕೈತಪ್ಪಿದ್ದರಿಂದ ಅಲ್ಪಸಂಖ್ಯಾತರು
ಕೈಕೊಡುತ್ತಾರೆ ಎಂಬ ಮಾತುಗಳು ಸಹಜವಾಗಿಯೇ ಮುನ್ನೆಲೆಗೆ ಬಂದಿದ್ದರೂ ಆ ಸಮುದಾಯದಲ್ಲಿ ಅತೃಪ್ತಿ ಕಂಡುಬಂದಿಲ್ಲ. ಬದಲಾಗಿ ಡಿ.ಆರ್‌. ಪಾಟೀಲ ಪರ
ಉತ್ಸಾಹದಿಂದ ಕೆಲಸ ಮಾಡಿದ್ದಾರೆ ಎನ್ನುತ್ತಿವೆ ಪಕ್ಷದ ಮೂಲಗಳು.

Advertisement

ಬಿಜೆಪಿಯಲ್ಲೂ ಮತ ಗಣಿತ: ಇನ್ನು, ಮತ ಗಣಿತದಲ್ಲಿ ಪ್ರತಿಸ್ಪರ್ಧಿ ಬಿಜೆಪಿಯೂ ಹಿಂದೆ ಬಿದ್ದಿಲ್ಲ. ಬೂತ್‌ ಮಟ್ಟದ ಮತದಾನ ಅಂಕಿ-ಅಂಶಗಳನ್ನು ಮುಂದಿಟ್ಟುಕೊಂಡು ಸೋಲು-ಗೆಲುವಿನ ಲೆಕ್ಕಾಚಾರ ನಡೆಸಿದ್ದಾರೆ. ಕಳೆದ ಐದು ವರ್ಷದಲ್ಲಿ ಪ್ರಧಾನಿ ಮೋದಿ ನಡೆಸಿದ ಅಭೂತಪೂರ್ವ ಆಡಳಿತಕ್ಕೆ ಜನ ಮನ್ನಣೆ ಸಿಗಲಿದೆ. ಈಗಾಗಲೇ ಸತತ ಎರಡು ಬಾರಿ  ಲೋಕಸಭೆ ಪ್ರವೇಶಿಸಿರುವ ಶಿವಕುಮಾರ ಉದಾಸಿ ಅವರ ಅಭಿವೃದ್ಧಿ ಕಾರ್ಯಗಳು ಜನರ ಕಣ್ಮುಂದಿವೆ.

ನಗರ, ಸುಶಿಕ್ಷಿತ ಜನರು ಬಿಜೆಪಿಯನ್ನು ಬೆಂಬಲಿಸುವರು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಈ ಬಾರಿ ವಿಶೇಷವಾಗಿ ಗದಗ ಗ್ರಾಮೀಣ ಹಾಗೂ ಅಲ್ಪಸಂಖ್ಯಾತ ಜನರೂ ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಡಿ.ಆರ್‌. ಪಾಟೀಲ ಅವರ ಸ್ವಕ್ಷೇತ್ರ ಹುಲಕೋಟಿಯಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸುಮಾರು 700 ಮತಗಳನ್ನು ಪಡೆದಿದ್ದ ಬಿಜೆಪಿ, ಈ ಬಾರಿಯ ಲೋಕಸಭೆ ಚುಣಾವಣೆಯಲ್ಲಿ ಒಂದು ಸಾವಿರಕ್ಕಿಂತ ಹೆಚ್ಚು ಮತಗಳಿಸಲಿದೆ.

ಜೊತೆಗೆ ಕಾಂಗ್ರೆಸ್‌ ವಿರುದ್ಧ ಮುನಿಸಿಕೊಂಡಿರುವ ಅಲ್ಪಸಂಖ್ಯಾತರು ಆ ಪಕ್ಷವನ್ನು ವಿರೋಧಿಸುತ್ತಿದ್ದಾರೆ. ಮೋದಿ ಅವರ ಕಾರ್ಯಕ್ರಮಗಳನ್ನು ಮೆಚ್ಚಿಕೊಂಡಿರುವ ಅನೇಕ ಮುಸ್ಲಿಂ ಮಹಿಳೆಯರು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಹೀಗಾಗಿ ಕಾಂಗ್ರೆಸ್‌ ಭದ್ರಕೋಟೆ ಎನಿಸಿಕೊಂಡಿದ್ದ ಕುರ್ತಕೋಟಿ, ಹೊಸಳ್ಳಿ, ಮುಳಗುಂದ ಭಾಗದಲ್ಲಿ ಬಿಜೆಪಿ ಸಮಬಲ ಸಾಧಿಸಲಿದೆ ಎಂಬುದು ಕಮಲ ಪಕ್ಷದ ನಾಯಕರ
ವಿಶ್ವಾಸದ ಮಾತು.

.ವೀರೇಂದ್ರ ನಾಗಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next