ಮಾದಕ ವ್ಯಸನ ಕುರಿತು ಕಿರುಚಿತ್ರಗಳು ಬಂದಿರುವುದೇನೋ ನಿಜ. ಆದರೆ, ಚಿಕ್ಕವಯಸ್ಸಲ್ಲೇ ಸಾಮಾಜಿಕ ಸಮಸ್ಯೆ ಕುರಿತ ಕಿರುಚಿತ್ರವೊಂದನ್ನು ನಿರ್ದೇಶಿಸಿರುವುದು ಹೊಸದು.
“ಹೆಬ್ಬುಲಿ’ ಚಿತ್ರದ ನಿರ್ಮಾಪಕರಲ್ಲೊಬ್ಬರಾದ ರಘುನಾಥ್ ಅವರ ಪುತ್ರ ವಾಗ್ಮಿ ಆರ್. ಯಜುರ್ವೇದಿ ಇದೇ ಮೊದಲ ಸಲ “ಘ್ರಾಣ’ ಹೆಸರಿನ ಕಿರುಚಿತ್ರವೊಂದನ್ನು ನಿರ್ದೇಶಿಸಿದ್ದಾರೆ. ಇತ್ತೀಚೆಗೆ ಆ ಕಿರುಚಿತ್ರದ ಪ್ರದರ್ಶನ ಏರ್ಪಡಿಸಿದ್ದರು ವಾಗ್ಮಿ. ಬಹುತೇಕ ಹೊಸ ಕಲಾವಿದರನ್ನೇ ಆಯ್ಕೆ ಮಾಡಿಕೊಂಡು, “ಘ್ರಾಣ’ ಹಿಂದೆ ನಿಂತ ವಾಗ್ಮಿ, ಆ ಬಗ್ಗೆ ಒಂದಷ್ಟು ಹೇಳಿಕೊಂಡರು.
“ಈಗಿನ ಸಮಾಜದಲ್ಲಿ ಯುವಕರೇ ಹೆಚ್ಚು ಮಾದಕ ವ್ಯಸನಿಗಳಾಗುತ್ತಿದ್ದಾರೆ. ಇದಕ್ಕೆ ಪೋಷಕರೂ ಕಾರಣ. ಯಾಕೆಂದರೆ, ಮಕ್ಕಳ ಬಗ್ಗೆ ಹೆಚ್ಚು ಕಾಳಜಿ ತೋರಿಸದಿರುವುದು, ಅವರ ಕುರಿತು ಗಮನಹರಿಸದಿರುವುದು ಇಂತಹ ಸಾಮಾಜಿಕ ಸಮಸ್ಯೆಗೆ ಮಕ್ಕಳು ಸಿಲುಕಲು ಕಾರಣವಾಗಿದೆ. ಎಷ್ಟೋ ಮಕ್ಕಳು, ಪೋಷಕರ ನಿರ್ಲಕ್ಷ್ಯದಿಂದ ಇಂತಹ ಸಮಸ್ಯೆಗೆ ಸಿಲುಕುತ್ತಿದ್ದಾರೆ. ಪೋಷಕರು ತಮ್ಮ ಕೆಲಸಗಳ ಒತ್ತಡದ ನಡುವೆ ಇಂದು ಮಕ್ಕಳ ಮೇಲೆ ನಿಗಾ ಇಡುತ್ತಿಲ್ಲ. ಹೀಗಾಗಿ, ಮಕ್ಕಳು ಸುಲಭವಾಗಿ, ಮಾದಕ ವ್ಯಸನಿಗಳಾಗುತ್ತಿದ್ದಾರೆ. ಅಂತಹ ವಿಷಯ ಇಟ್ಟುಕೊಂಡು ಕಿರುಚಿತ್ರ ಮಾಡಿದ್ದೇನೆ. ಈ ಮೂಲಕ ಸಾಮಾಜಿಕ ಸಮಸ್ಯೆಯತ್ತ ಚಿತ್ತ ಹರಿಸಿದ್ದೇನಷ್ಟೇ. ಸುಮಾರು 20 ದಿನಗಳ ಕಾಲ, ಮೋಹನ್ ಬಿ.ಕೆರೆ ಸ್ಟುಡಿಯೋದಲ್ಲಿ ಮತ್ತು ಉಳಿದಂತೆ ಸೆಟ್ ಹಾಕಿಸಿ ಚಿತ್ರೀಕರಿಸಲಾಗಿದೆ. ಈ ಕಿರುಚಿತ್ರ ಮೂಲಕ ಪೋಷಕರು, ತಮ್ಮ ಮಕ್ಕಳ ಜತೆ ಹೆಚ್ಚು ಕಾಲ ಕಳೆಯಬೇಕು, ಅವರ ಮೇಲೆ ಪ್ರೀತಿ ತೋರಬೇಕು ಎಂಬುದನ್ನು ಹೇಳಹೊರಟಿದ್ದೇನೆ’ ಅಂದರು ವಾಗ್ಮಿ.
ಈ ಚಿತ್ರದಲ್ಲಿ ಪ್ರೌಢ ವಯಸ್ಕ ಮಕ್ಕಳ ತಜ್ಞ ಡಾ.ಸೋಮಶೇಖರ್ ವೈದ್ಯರಾಗಿ ನಟಿಸಿದ್ದಾರೆ.
“ಪ್ರೌಢವಯಸ್ಕ ಮಕ್ಕಳು ಹೆಚ್ಚಾಗಿ ಇಂತಹ ದುಶ್ಚಟಗಳಿಗೆ ಬಿದ್ದಿದ್ದಾರೆ. “ಉಡ್ತಾ ಪಂಜಾಬ್’ನಂತೆ “ಉಡ್ತಾ ಬೆಂಗಳೂರು’ ಆಗಿದೆ. ಬೆಂಗಳೂರಲ್ಲಿ ನಾನು ಸ್ಟಡಿ ಮಾಡಿದಂತೆ ಸಾಕಷ್ಟು ಮಾದಕ ವ್ಯಸನಗಳಿಗೆ ದಾಸರಾಗಿದ್ದಾರೆ. ವಾಗ್ಮಿ ಹೇಳಿದಂತೆ, ಪೋಷಕರ ಬೇಜವಾಬ್ದಾರಿತನದಿಂದಾಗಿ ಮಕ್ಕಳು ಇಂತಹ ಹಾದಿ ಹಿಡಿಯುತ್ತಿದ್ದಾರೆ. ಮನೆಯಲ್ಲೇ ಸಿಗುವ ವೈಟ್ನರ್, ನೈಲ್ ಪಾಲಿಷ್, ಪೇಂಟ್ ಇತರೆ ವಸ್ತುಗಳು ಅಪಾಯಕಾರಿ. ಮಕ್ಕಳು ಸುಲಭವಾಗಿ ಅವುಗಳಿಗೆ ಮಾರುಹೋಗಿ ವ್ಯಸನಿಗಳಾಗುತ್ತಿದ್ದಾರೆ. ಈ ಕಿರುಚಿತ್ರ ಸಾಮಾಜಿಕ ಸಮಸ್ಯೆಯನ್ನು ಎತ್ತಿತೋರಿಸುವಂತಿದೆ. ಇದೊಂದು ಸಂದೇಶವುಳ್ಳ ಕಿರುಚಿತ್ರ ಅಂದರು ಸೋಮಶೇಖರ್.
ಇನ್ನು, ಈ ಕಿರುಚಿತ್ರಕ್ಕೆ ಸಹಕರಿಸಿದ್ದು, ವಾಗ್ಮಿ ಅವರ ತಾಯಿ ವಾಣಿ. ಅವರು ಮಗನ ತುಡಿತ ಮತ್ತು ಪ್ರತಿಭೆ ನೋಡಿ, ಸಹಕಾರ ನೀಡಿದ್ದಾರೆ. ನಿರ್ಮಾಪಕ ರಘುನಾಥ್ ಅವರಿಗೆ ಎಲ್ಲವೂ ಮುಗಿದ ಮೇಲಷ್ಟೇ ಗೊತ್ತಾಯ್ತಂತೆ. ಕೊನೆಗೆ ಮಗನ ಪ್ರತಿಭೆ ಮೆಚ್ಚಿಕೊಂಡ ಅವರು, ಕೆಲ ಸಣ್ಣಪುಟ್ಟ ಬದಲಾವಣೆ ಹೇಳಿ, ಕಿರುಚಿತ್ರ ಮೂಡಿಬರಲು ಕಾರಣರಾಗಿದ್ದಾರೆ. ಚಿತ್ರಕ್ಕೆ ಚಿಂತನ್ ಜೋಯಿಸ್ ಕ್ಯಾಮೆರಾ ಹಿಡಿದಿದ್ದು, ನಂದಿನಿ ನಂಜಪ್ಪ ಕಥೆ, ಸಂಭಾಷಣೆ ಬರೆದಿದ್ದಾರೆ. ವಿನು ಮನಸು ಸಂಗೀತ ನೀಡಿದ್ದಾರೆ.