ಸಾಗರ : ರಾಜ್ಯದಲ್ಲಿಯೇ ಅಪರೂಪದ ಶ್ವೇತ ವರ್ಣವುಳ್ಳ ಶಿವಲಿಂಗ ತಾಲೂಕಿನ ಕಾರ್ಗಲ್ ಸಮೀಪದ ಗುಂಡೀಬೈಲು ಪಂಚಲಿಂಗೇಶ್ವರನ ಸನ್ನಿಧಿಯಲ್ಲಿದ್ದು, ಐತಿಹಾಸಿಕ ಹಿರಿಮೆ ಹೊಂದಿದೆ. ಶ್ವೇತ ವರ್ಣದ ಶಿವಲಿಂಗ ರಾಜ್ಯದಲ್ಲಿಯೇ ಅಪರೂಪದ್ದಾಗಿದೆ.
ಕಾಳುಮೆಣಸಿನ ರಾಣಿ ಎಂದು ಖ್ಯಾತಿ ಪಡೆದಿದ್ದ ಗೇರುಸೊಪ್ಪ ಪ್ರಾಂತ್ಯದ ರಾಣಿ ಚೆನ್ನಾಭೈರಾದೇವಿ ಕಾಲದ್ದು ಎನ್ನಲಾದ ಶ್ವೇತ ವರ್ಣದ ಶಿವಲಿಂಗದ ಸನ್ನಿಧಿಯಲ್ಲಿ ಶರಾವತಿ ಕಣಿವೆಯ ಭಕ್ತರು ಹಿಂದಿನಿಂದಲೂ ಶ್ರದ್ಧಾಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಬಲು ಅಪರೂಪದ ಶಿವಲಿಂಗವನ್ನು 1997ರಲ್ಲಿ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪ ಗಮನಿಸಿದರು. ಭದ್ರತೆಗಾಗಿ ಸರ್ಕಾರದ ಆರಾಧನಾ ಯೋಜನೆಯಡಿ ಪುಟ್ಟ ದೇವಾಲಯವೊಂದನ್ನು ಕಟ್ಟಿಸಿ 1998ರಲ್ಲಿ ಶಿವಲಿಂಗವನ್ನು ಮರಾಠಿ ಜನಾಂಗದ ಸಮುದಾಯದೊಂದಿಗೆ ಪ್ರತಿಷ್ಠಾಪಿಸಲಾಗಿದೆ.
ಅಂದಿನಿಂದ ಆದಿವಾಸಿ ಜನಾಂಗದವರು, ಕುಗ್ರಾಮದ ಗ್ರಾಮಸ್ಥರು ಮಹಾಶಿವರಾತ್ರಿಯಂದು ಸರಳವಾಗಿ ಜಾತ್ರೆ ನಡೆಸತೊಡಗಿದರು. ಕಾಲಕ್ರಮೇಣ ಈ ಜಾತ್ರೆ ವೈಭವದಿಂದ ನಡೆಯುತ್ತಿದೆ. ಶ್ವೇತ ವರ್ಣದ ಆಕರ್ಷಕ ಶಿವಲಿಂಗ 4 ಅಡಿ ಎತ್ತರವಿದೆ.
ಶಿಲಾಪದರು ಎಂಬ ಬೆಲೆಬಾಳುವ ವಿಧವಾದುದರಿಂದ ಲಿಂಗವನ್ನು 3 ಅಡಿಗಳಷ್ಟು ಪೀಠದ ಒಳಭಾಗದಲ್ಲಿರಿಸಿ ಸಂರಕ್ಷಿಸಲಾಗಿದೆ. ಶಿವಲಿಂಗದ ಮೇಲೆ ಬೆಳಕು ಚೆಲ್ಲಿದರೆ, ಬೆಳಕನ್ನು ತನ್ನೊಳಗಿನಿಂದ ಹೊರಸೂಸುವ ಗುಣವನ್ನು ಈ ಶಿಲೆ ಹೊಂದಿದೆ. ಇಂಥ ಗುಣ ಹೊಂದಿರುವ ಶಿವಲಿಂಗ ತೀರ್ಥರಾಮೇಶ್ವರ ಹೊರತುಪಡಿಸಿದರೆ ಇಲ್ಲಿ ಮಾತ್ರ ಇದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಭಟ್ಕಳದಿಂದ ಗೇರುಸೊಪ್ಪ ಪ್ರಾಂತ್ಯದವರೆಗೆ ಹಬ್ಬಿಕೊಂಡಿದ್ದ ಶರಾವತಿ ಕಣಿವೆ ಅಭಯಾರಣ್ಯದಲ್ಲಿ ಹೇರಳವಾಗಿ ಸಾಂಬಾರ ಪದಾರ್ಥಗಳು ದೊರೆಯುತ್ತಿದ್ದವು. ಈ ಕಾಲಘಟ್ಟದಲ್ಲಿ ಶ್ವೇತವರ್ಣದ ಲಿಂಗವನ್ನು ಶಿವ ದೇವಾಲಯದಲ್ಲಿ ಪೂಜಿಸಲಾಗುತ್ತಿತ್ತು. ನಾಡಿಗೆ ಬೆಳಕು ನೀಡುವ ಜಲಯೋಜನೆಗಳ ಸಂದರ್ಭದಲ್ಲಿ ಈ ಭಾಗದ ಅನೇಕ ಗ್ರಾಮಗಳು ಮುಳುಗಡೆಯಾದವು. ಆಗ ಈ ಶಿವಾಲಯ ಸಹ ನೀರಿನಲ್ಲಿ ಮುಳುಗಿತ್ತು. 4 ಅಡಿ ಎತ್ತರದ ಈ ಬಿಳಿ ಶಿವಲಿಂಗವನ್ನು ಯಾರೋ ತಳಕಳಲೆ ಜಲಾಶಯದ ಹಿನ್ನೀರಿನ ದಡದ ನೀರಿನಲ್ಲಿ ಮುಳುಗಿಸಿಟ್ಟಿದ್ದರು. ಕಾಲ ಕ್ರಮೇಣ ಗುಂಡೀಬೈಲು ಮರಾಠಿಕೇರಿ ಭಾಗದ ಕುಣಬಿ ಮರಾಠಿ ಜನಾಂಗದ ಹಿರಿಯರೊಬ್ಬರಿಗೆ ಈ ಶಿವಲಿಂಗ ಕಂಡು ಬಂತು.
ಅವರು ಗ್ರಾಮಸ್ಥರ ಸಹಾಯದೊಂದಿಗೆ ಹಿನ್ನೀರ ದಡದ ಎತ್ತರದ ಗುಡ್ಡದ ಮೇಲೆ ಪುಟ್ಟ ಮಣ್ಣಿನಿಂದ ನಿರ್ಮಿಸಿದ ಗುಡಿ ಕಟ್ಟಿ ಲಿಂಗವಿರಿಸಿ ಪೂಜಿಸಲಾರಂಭಿಸಿದರು.ಗುಡ್ಡದ ಮೇಲಿನ ದೇವಾಲಯ, ಕೆಳಗೆ ವಿಶಾಲ ಬಯಲು, ಸಮೀಪದಲ್ಲಿ ಶರಾವತಿ ನದಿ ಮುಂತಾದ ಸಂಗತಿಗಳು ಪ್ರಕೃತಿ ಸೊಬಗನ್ನು ಹೆಚ್ಚಿಸಿವೆ.