ಹೊಸದಿಲ್ಲಿ : ಕಳೆದ ಜುಲೈ 12ರಂದು ಉತ್ತರ ಪ್ರದೇಶ ವಿಧಾನಸಭೆಯೊಳಗೆ ಪತ್ತೆಯಾಗಿದ್ದ 150 ಗ್ರಾಂ ತೂಕದ ಬಿಳಿ ಪುಡಿಯ ಪೊಟ್ಟಣವು PETN ಸ್ಫೋಟಕ ವಸ್ತುವಲ್ಲ; ಬದಲು ಅದು ಸಿಲಿಕಾನ್ ಆಕ್ಸೆ„ಡ್ ಎಂದು ಇದೀಗ ವಿಧಿವಿಜ್ಞಾನ ಪ್ರಯೋಗ ಶಾಲೆಯಿಂದ ದೃಢಪಟ್ಟಿದೆ. ಈ ಬೆಳವಣಿಗೆಯು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರಕಾರಕ್ಕೆ ತೀವ್ರ ಇರಿಸುಮುರಿಸು ಉಂಟುಮಾಡಿದೆ.
ಈ ಬೆಳವಣಿಗೆಯನ್ನು ಅನುಸರಿಸಿ ಸರಕಾರಕ್ಕೆ ತಪ್ಪು ಮಾಹಿತಿ ನೀಡಿ ಅಪೂರ್ಣ ಹಾಗೂ ದೃಢೀಕೃತವಲ್ಲದ ವರದಿಯನ್ನು ನೀಡಿದ್ದ ರಾಜ್ಯದ ವಿಧಿ ವಿಜ್ಞಾನ ಪ್ರಯೋಗಾಲಯದ ನಿರ್ದೇಶಕ ಶಿವ ಬಿಹಾರಿ ಉಪಾಧ್ಯಾಯ ಅವರನ್ನು ಅಮಾನತು ಮಾಡಲಾಗಿದೆ ಎಂದು ಗೃಹ ಸಚಿವಾಲಯದ ಪ್ರಧಾನ ಕಾರ್ಯದರ್ಶಿ ಅರವಿಂದ ಕುಮಾರ್ ತಿಳಿಸಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡುತ್ತಾ ಕುಮಾರ್ ಅವರು, “ವಿಧಿ ವಿಜ್ಞಾನ ಪ್ರಯೋಗಾಲಯದ ನಿರ್ದೇಶಕ ಉಪಾಧ್ಯಾಯ ಅವರು ಅಂದು ಶಂಕಿತ ಬಿಳಿ ಪುಡಿಯನ್ನು ವೈಜ್ಞಾನಿಕ ಪರೀಕ್ಷೆಗೆ ಗುರಿ ಪಡಿಸಿ ಅದು ಪಿಇಟಿಎನ್ ಸ್ಫೋಟಕವೆಂದು ಹೇಳಿದ್ದರು. ಆದರೆ ಆ ಬಳಿಕ ಎನ್‌ಐಎ ಅದೇ ಪುಡಿಯನ್ನು ಹೈದರಾಬಾದಿನ ಸಿಎಫ್ಎಸ್‌ಎಲ್‌ನಲ್ಲಿ ಪರೀಕ್ಷಿಸಿದಾಗ ಅದು ಸಿಲಿಕಾನ್ ಆಕ್ಸೆ„ಡ್ ಎಂದೂ ಯಾವುದೇ ಅಪಾಯಕಾರಿ ಸ್ಫೋಟಕ ವಸ್ತು ಅಲ್ಲವೆಂದು ಶ್ರುತಪಟ್ಟಿತು’ ಎಂದು ಹೇಳಿದರು.
ವರದಿಗಳ ಪ್ರಕಾರ ಶಿವ ಬಿಹಾರಿ ಉಪಾಧ್ಯಾಯ ಅವರು 2016ರ ಮಾರ್ಚ್‌ನಲ್ಲೇ ಅವಧಿ ಮುಗಿದುಹೋಗಿದ್ದ ಕಿಟ್ ಬಳಸಿಕೊಂಡು ಶಂಕಿತ ಬಿಳಿ ಪುಡಿಯನ್ನು ಪರೀಕ್ಷಿಸಿದ್ದರು. ಇದೀಗ ಈಗಿನ್ನು ಈ ಪ್ರಕರಣದ ತನಿಖೆಯನ್ನು ಜಾಗೃತ ದಳದ ನಿರ್ದೇಶಕ ಹಿತೇಶ್ ಅವಸ್ಥಿ ನಡೆಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2008ರ ಫೆ.28ರಿಂದ 2012ರ ಆಗಸ್ಟ್ 20ರ ವರೆಗಿನ ತಮ್ಮ ಅಧಿಕಾರಾವಧಿಯ ವೇಳೆ ಉಪಾಧ್ಯಾಯ ಅವರು ತೋರಿರುವರೆನ್ನಲಾದ ಅದಕ್ಷತೆ, ನಿರ್ಲಕ್ಷ್ಯ ಇತ್ಯಾದಿಗಳ ಬಗ್ಗೆ ಹಲವಾರು ದೂರುಗಳಿವೆ ಎಂದು ಪ್ರಧಾನ ಗೃಹ ಕಾರ್ಯದರ್ಶಿ ಕುಮಾರ್ ಹೇಳಿದರು.