Advertisement

ತೆಂಗು ಬೆಳೆಗೆ ಬಿಳಿ ನೊಣದ ಬಾಧೆ

10:13 PM Jan 25, 2020 | mahesh |

ಪ್ರಮುಖ ತೋಟಗಾರಿಕೆ ಬೆಳೆ ತೆಂಗುವಿಗೆ ಆಕ್ರಮಣಕಾರಿ ರುಗೋಸ್‌ ಸುರುಳಿ ಸುತ್ತುವ ಬಿಳಿ ನೊಣದ ಬಾಧೆ ಕಾಣಿಸಿಕೊಳ್ಳುತ್ತಿದೆ. ಆದರೆ ಸಾಂಪ್ರದಾಯಿಕ ಕ್ರಮಗಳನ್ನು ಅನುಸರಿಸುವುದರಿಂದ ಇದರ ನಿಯಂತ್ರಣ ಸಾಧ್ಯವಾಗುತ್ತದೆ.

Advertisement

ಆರಂಭದಲ್ಲಿ ಮಂಗಳೂರು ಕರಾವಳಿ ಗ್ರಾಮಗಳಲ್ಲಿ ಕಾಣಿಸಿಕೊಂಡ ರುಗೋಸ್‌ ಬಿಳಿ ನೊಣದ ಬಾಧೆ ಕೆಲವು ವರ್ಷದ ಅವಧಿಯಲ್ಲಿ ದ.ಕ. ಜಿಲ್ಲೆಯ ವಿವಿಧ ತಾಲೂಕುಗಳ ತೆಂಗು ತೋಟಗಳಿಗೆ ಲಗ್ಗೆಯಿಟ್ಟಿದೆ. ಬಂಟ್ವಾಳ, ಪುತ್ತೂರು, ಸುಳ್ಯ ತಾಲೂಕಿನ ತೋಟಗಳಲ್ಲೂ ಈ ರೋಗ ಕಾಣಿಸಿಕೊಂಡಿದ್ದವು.

ರುಗೋಸ್‌ ರೋಗದ ಲಕ್ಷಣ
ರುಗೋಸ್‌ ಒಂದು ಸಣ್ಣ ರಸ ಹೀರುವ ಕೀಟವಾಗಿದ್ದು, ಎಲೆಯ ಅಡಿ ಭಾಗದಲ್ಲಿ ಅರೆ ವೃತ್ತಾಕಾರ ಅಥವಾ ಸುರುಳಿಯಾಕಾರದ ಶೈಲಿಯಲ್ಲಿ ಮೊಟ್ಟೆಗಳನ್ನು ಇಟ್ಟು ಮರಿ ಮಾಡುತ್ತದೆ. ಈ ನೊಣದ ಮೊಟ್ಟೆಗಳು ಹಳದಿ ಬಣ್ಣವನ್ನು ಹೊಂದಿದ್ದು, ಪ್ರತಿ ಮೊಟ್ಟೆಯ ಸುತ್ತಲೂ ಬಿಳಿ ಬಣ್ಣದ ಮೇಣದ ನಿಕ್ಷೇಪಗಳು ಕಾಣಿಸಿಕೊಳ್ಳುತ್ತವೆ.

ಮರಿ ಹಾಗೂ ವಯಸ್ಕ ಗೋಸ್‌ ಬಿಳಿ ನೊಣಗಳು ಎಲೆಯ ಅಡಿ ಭಾಗದಲ್ಲಿ ವ್ಯಾಪಿಸಿಕೊಂಡು ಎಲೆಗಳಿಂದ ರಸ ಹೀರಿಕೊಳ್ಳುತ್ತವೆ. ಹಾಗೂ ಹನಿಡ್ನೂ ಎಂದು ಕರೆಯಲಾಗುವ ಸಿಹಿ ಅಂಟು ದ್ರವವನ್ನು ಹೊರಹಾಕುತ್ತವೆ. ಈ ಸಿಹಿ ದ್ರವವು ಕೆಳಗಿನ ಎಲೆಗಳ ಮೇಲ್ಭಾಗದಲ್ಲಿ ಮತ್ತು ಅಂತರ ಬೆಳೆಗಳ ಮೇಲೆ ಸಂಗ್ರಹವಾಗುತ್ತದೆ ಮತ್ತು ಸಿಹಿದ್ರವವು ಕ್ಯಾಪ್ನೊಡಿಯಮ್‌ ಎಂಬ ಶಿಲೀಂಧ್ರದ ಬೆಳವಣಿಗೆಯನ್ನು ಪ್ರೋತ್ಸಾಹಿಸುತ್ತದೆ. ಇದರಿಂದ ಎಲೆಗಳ ಮೇಲ್ಭಾಗದಲ್ಲಿ ಕಪ್ಪು ಬಣ್ಣದ ಶಿಲೀಂಧ್ರ ಮಸಿ ಬಳಿದಂತೆ ಕಾಣಿಸಿಕೊಳ್ಳುತ್ತದೆ.

ಮಾರಣಾಂತಿಕ ಅಲ್ಲ
ರುಗೋಸ್‌ ಬಿಳಿ ನೊಣದ ಬಾಧೆಯಿಂದ ತೆಂಗಿನ ಮರ ಸಾಯುವ ಪ್ರಶ್ನೆ ಉದ್ಭವಿಸುವುದಿಲ್ಲ. ಆದರೆ ತೆಂಗಿನ ಗರಿಗಳು ಒಣಗುತ್ತಾ ಹೋಗುತ್ತವೆ. ಇದರಿಂದ ಸಹಜ ಪ್ರಕ್ರಿಯೆ ಅಸಾಧ್ಯವಾಗಿ 1-2 ವರ್ಷ ಫಸಲಿನಲ್ಲಿ ಇಳಿಕೆ ಕಾಣಬಹುದು. ಈ ಕಾರಣದಿಂದ ಬೆಳೆಗಾರರು ಜಾಣ್ಮೆಯಿಂದ ರೋಗದ ನಿವಾರಣೆಗೆ ಮುಂದಾಗಬೇಕು ಎನ್ನುವುದು ತೋಟಗಾರಿಕೆ ಇಲಾಖೆ ಅಧಿಕಾರಿಗಳ ಅಭಿಪ್ರಾಯ.

Advertisement

ನಿರ್ವಹಣೆ ಕ್ರಮ
ರೋಗದ ನಿಯಂತ್ರಣ ಕ್ರಮಗಳ ಕುರಿತು ತೋಟಗಾರಿಕಾ ಇಲಾಖೆ ಕೆಲವು ಕ್ರಮಗಳನ್ನು ಸೂಚಿಸಿದೆ.
ಬಿಳಿ ನೊಣ ಹೆಚ್ಚಾಗಿ ಕಂಡು ಬರುವ ಪ್ರದೇಶಗಳಲ್ಲಿ ಇವುಗಳನ್ನೇ ತಿಂದು ಬದುಕುವ ಕೆಲವೊಂದು ಪರತಂತ್ರ ಜೀವಿಗಳು (ಎನ್ಕಾರ್ಸಿಯ ಗ್ವಾಡಿಲೋಪೆ) ನೈಸರ್ಗಿಕವಾಗಿ ಕಂಡುಬರುತ್ತವೆ. ಆದುದರಿಂದ ರೈತರು ಯಾವುದೇ ರಾಸಾಯನಿಕ ಕೀಟನಾಶಕಗಳನ್ನು ಸಿಂಪಡಿಸದೇ ಪರತಂತ್ರ ಜೀವಿಗಳು ವೃದ್ಧಿಯಾಗುವುದನ್ನು ಪ್ರೋತ್ಸಾಹಿಸಬೇಕು.

ಎಲೆಗಳ ಮೇಲೆ ಶೇ. 1 ಸ್ಟಾರ್ಚ್‌ ಅಥವಾ ಗಂಜಿಯ ತೆಳಿಯನ್ನು ಸಿಂಪಡಣೆ ಮಾಡುವುದರಿಂದ ಕಪ್ಪು ಬಣ್ಣದ ಶಿಲೀಂಧ್ರ ಉದುರಿ ಎಲೆ ಹಸುರಾಗುತ್ತದೆ.

ಬಿಳಿ ನೊಣ ಪೀಡಿತ ಪ್ರದೇಶಗಳಿಂದ ತೆಂಗಿನ ಸಸಿಗಳು, ಮಣ್ಣು, ಸಾವಯವ ಗೊಬ್ಬರ ಇತರ ವಸ್ತುಗಳನ್ನು ಪಡೆದು ಉಪಯೋಗಿಸಬಾರದು.

ರಾಜೇಶ್‌ ಪಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next