Advertisement

10 ವರ್ಷ ಬಳಿಕ ಹೂವರಳಿಸಿದ ಬಿಳಿ ಕಲ್ನಾರು

09:13 AM Aug 02, 2019 | Suhan S |

ಧಾರವಾಡ: ಬಿಳಿ ಕಲ್ನಾರು ಎಂಬ ಕನ್ನಡದ ಹೆಸರಿನ, ಅಗೇವ್‌ ಅಂಗುಸ್ಟಿ´ೋಲಿಯಾ ವೈಟ್ ಸೆಂಟರ್‌ 10 ವರ್ಷಗಳ ಬಳಿಕ ಪ್ರಥಮ ಬಾರಿಗೆ ಹೂವರಳಿಸಿ ದಾರಿಹೋಕರ ಗಮನ ಸೆಳೆಯುತ್ತಿದೆ.

Advertisement

ಜಿಲ್ಲಾಧಿಕಾರಿ ಕಚೇರಿ ಬಳಿ ಕಾರ್ಗಿಲ್ ಸ್ತೂಪದ ಆವರಣದಲ್ಲಿ ಪಂಡಿತ ಮುಂಜಿ ಅವರು ನೆಟ್ಟ ಎರಡು ಬಿಳಿ ಕಲ್ನಾರುಗಳ ಪೈಕಿ ಎಡಬದಿಯ ‘ಅಗೇವ್‌’ ಹೂವರಳಿಸಿ ತನ್ನ ಬದುಕಿನ ಸಂಧ್ಯಾಕಾಲ ತಲುಪಿದೆ. ಈ ಸೊಬಗನ್ನು ಒಂದು ತಿಂಗಳ ಕಾಲ ಸವಿಯಬಹುದು. ಕ್ರಮೇಣ ಈ ಅಲಂಕಾರಿಕ ಸಸ್ಯ ಒಣಗುತ್ತ ಬಂದು ಇಹದ ವ್ಯಾಪಾರ ಮುಗಿಸುತ್ತದೆ.

ಬಿಳಿ ಕಲ್ನಾರು ಬುಡದಲ್ಲಿ ಎಲೆ ಹೂವು ಆದರೆ, ತನ್ನ ಎತ್ತರದ ಕಾಂಡದ ಕೊಂಬೆಗಳಿಂದ ನೆಲಕ್ಕುರುಳಿಸುವ ಹೂವುಗಳಲ್ಲಿ ಬೇರು ಸಮೇತ ಮರಿ ಗಿಡ ಇರುವುದು ವಿಶೇಷ. ಸಾಧನಕೇರಿ-ಜಮಖಂಡಿಮಠ ಲೇಔಟ್‌ನ ಸಮುದಾಯ ಉದ್ಯಾನದಲ್ಲಿ ಪಂಡಿತ ಮುಂಜಿಯವರು ಇಪ್ಪತ್ತು ವರ್ಷಗಳ ಹಿಂದೆ ಈ ಬಿಳಿ ಬಣ್ಣದ ಅಲಂಕಾರಿಕ ಕಲ್ನಾರು ನೆಟ್ಟಿದ್ದರು. ಕಾರ್ಗಿಲ್ ಸ್ತೂಪ ನಿರ್ಮಾಣಗೊಳ್ಳುತ್ತಿದ್ದಂತೆ ಸ್ತೂಪದ ಆವಾರ ಅಂದಗೊಳಿಸಲು ಉದ್ಯಾನ ನಿರ್ಮಾಣದ ಹೊಣೆ ಮುಂಜಿಯವರೇ ಹೊತ್ತಿದ್ದರು. ಕಾಕತಾಳೀಯ ಎಂಬಂತೆ ಜಮಖಂಡಿಮಠ ಲೇಔಟ್ ಉದ್ಯಾನದಲ್ಲಿ ಬಿಳಿ ಕಲ್ನಾರು ಆಗ ಹೂ ಬಿಟ್ಟಿತು. ಆ ಪೈಕಿ ನೂರಾರು ಸಸಿಗಳನ್ನು ‘ಪಾಟಿಂಗ್‌’ ಮಾಡಿ, ಉಚಿತವಾಗಿ ಆಸಕ್ತರಿಗೆ ಹಂಚಿದವರು ಮುಂಜಿ. ಅವುಗಳ ಪೈಕಿ ಆಯ್ದ ಎರಡು ಸಸಿಗಳನ್ನು 10 ವರ್ಷಗಳ ಹಿಂದೆ ಕಾರ್ಗಿಲ್ ಸ್ತೂಪದ ಸ್ವಾಗತ ಕಮಾನಿನ ಬಳಿ ನೆಟ್ಟರು. ಮುಂದಿನ ಆರು ತಿಂಗಳಲ್ಲಿ ಬಲಬದಿಯ ಕಲ್ನಾರು ಕೂಡ ಹೂ ಬಿಡುವ ಸಿದ್ಧತೆಯಲ್ಲಿದೆ. ಈಗ ಮತ್ತೆ ಪುಟ್ಟ ಸಸಿ ಸಂಗ್ರಹಿಸಿ ಆಸಕ್ತರಿಗೆ ಒದಗಿಸುವ ಸಿದ್ಧತೆಯಲ್ಲಿದ್ದಾರೆ ಪಂಡಿತ ಮುಂಜಿ.

Advertisement

Udayavani is now on Telegram. Click here to join our channel and stay updated with the latest news.

Next