ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಿ.ಎಸ್.ಯಡಿಯೂರಪ್ಪ ಅವರು ವಿಶ್ವಾಸಮತ ಯಾಚನೆಯ ಸಂದರ್ಭದಲ್ಲಿ ಎಲ್ಲ ಶಾಸಕರೂ ಕಡ್ಡಾಯವಾಗಿ ಹಾಜರಿರಬೇಕು ಎಂದು ಭಾನುವಾರ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ವಿಪ್ ಜಾರಿ ಮಾಡಲಾಯಿತು.
ನಗರದ ಖಾಸಗಿ ಹೋಟೆಲ್ನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಬಹುತೇಕ ಎಲ್ಲ ಶಾಸಕರು ಭಾಗವಹಿಸಿದ್ದರು. ಅಲ್ಲದೆ, ಸೋಮವಾರ ನಡೆಯಲಿರುವ ವಿಶ್ವಾಸಮತ ಯಾಚನೆ ಸಂದರ್ಭದಲ್ಲೂ ಹಾಜರಿದ್ದು, ಬಹುಮತ ಸಾಬೀತಿಗೆ ಸಹಕರಿಸಬೇಕು ಎಂದು ಸೂಚನೆಯನ್ನು ತಮ್ಮ ಶಾಸಕರಿಗೆ ನೀಡಿದ್ದಾರೆ ಎನ್ನಲಾಗಿದೆ. ಮುಖ್ಯ ಸಚೇತಕರಾದ ವಿ.ಸುನೀಲ್ ಕುಮಾರ್ ಅವರು ವಿಪ್ ತಲುಪಿಸಿದ್ದಾರೆ ಎಂದು ಪಕ್ಷದ ಮೂಲಗಳು ಖಚಿತಪಡಿಸಿವೆ. ಹಣಕಾಸು ಮಸೂದೆ ಮಂಡನೆ ಹಾಗೂ ಹೊಸ ಸ್ಪೀಕರ್ ನೇಮಕ ಪ್ರಕ್ರಿಯೆ ಆರಂಭವಾಗಿ, ಸ್ಪೀಕರ್ ಆಯ್ಕೆಯ ವರೆಗೂ ಪಕ್ಷದ ಎಲ್ಲ ಶಾಸಕರೂ ಒಂದಾಗಿಯೇ ಇರಬೇಕು. ಯಾವುದೇ ರೀತಿಯಲ್ಲೂ ಅನ್ಯ ನೆಪವೊಡ್ಡಿ ಶಾಸನ ಸಭೆಗೆ ಗೈರಾಗಬಾರದು ಎಂದು ಶಾಸಕಾಂಗ ಪಕ್ಷದ ನಾಯಕರು ಎಲ್ಲ ಶಾಸಕರಿಗೂ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ರೆಸಾರ್ಟ್‌ಗೆ ಹೋಗುವುದು ಬೇಡ ಎಂಬ ಸೂಚನೆಯನ್ನು ನೀಡಿದ್ದಾರೆ ಎನ್ನಲಾಗಿದೆ.
ಅನರ್ಹ ಶಾಸಕರ ವಿಚಾರದ ಪ್ರಸ್ತಾಪ ಅಥವಾ ಚರ್ಚೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ನಡೆದಿಲ್ಲ. ಅನರ್ಹ ಶಾಸಕರ ಬಗ್ಗೆ ಚರ್ಚಿಸಲು ಇದು ವೇದಿಕೆಯಲ್ಲ ಎಂದು ಪಕ್ಷದಿಂದ ಬಂದಿದ್ದ ಸೂಚನೆಯ ಹಿನ್ನೆಲೆಯಲ್ಲಿ ವಿಷಯ ಪ್ರಸ್ತಾಪವಾದ ನಂತರ ಯಾವುದೇ ರೀತಿಯ ಚರ್ಚೆ ನಡೆದಿಲ್ಲ ಎಂದು ಹಿರಿಯ ಶಾಸಕರೊಬ್ಬರು ಮಾಹಿತಿ ನೀಡಿದರು.
ಸಚಿವ ಸಂಪುಟದ ರಚನೆಯ ಕುರಿತು ಯಾವುದೇ ಚರ್ಚೆ ನಡೆದಿಲ್ಲ ಎಂದು ತಿಳಿದು ಬಂದಿದೆ. ಆದರೆ ಕೆಲವು ಶಾಸಕರು ತಮ್ಮ ಕ್ಷೇತ್ರದ ಗಂಭೀರ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದ್ದು, ಎಲ್ಲ ಸಮಸ್ಯೆಗಳಿಗೂ ಬಹುಮತ ಸಾಬೀತಿನ ನಂತರ ಸೂಕ್ತ ಪರಿಹಾರ ನೀಡಲಾಗುವುದು ಎಂಬ ಭರವಸೆಯನ್ನು ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸರ್ಕಾರ ರಚನೆಯಾಗಿದೆ ಎಂದು ಬಹಿರಂಗವಾಗಿ ಪಕ್ಷ ಅಥವಾ ಯಾವುದೇ ವಿಚಾರವನ್ನು ಲಘುವಾಗಿ ಮಾತನಾಡಬಾರದು. ಪಕ್ಷದ ಸೂಚನೆಯನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು. ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಭೀಕರ ಬರ ಹಾಗೂ ಕೆಲವೊಂದು ಕಡೆಗಳಲ್ಲಿ ಮಳೆ ಹಾನಿ ಹೆಚ್ಚುತ್ತಿದೆ. ಹೀಗಾಗಿ ಕ್ಷೇತ್ರದ ಸಮಸ್ಯೆಯ ಬಗ್ಗೆ ಹೆಚ್ಚಿನ ಒತ್ತು ನೀಡಿ ಕಾರ್ಯ ನಿರ್ವಹಿಸಬೇಕು ಎಂಬ ಸಲಹೆಯನ್ನು ಶಾಸಕಾಂಗ ಪಕ್ಷದ ನಾಯಕರು ಬಿಜೆಪಿ ಸದಸ್ಯರಿಗೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.