“ಅವನು ನಾಸ್ತಿಕ. ಅವಳು ಆಸ್ತಿಕ. ಚಿಕ್ಕಂದಿನಿಂದಲೂ ಇವರಿಬ್ಬರದು ಹಠ ಮಾಡುವ ಜಾಯಮಾನ. ಜಗಳವಾಡುತ್ತಲೇ ಬೆಳೆಯುವ ಅವರಿಬ್ಬರಿಗೂ ಪ್ರೇಮಾಂಕುರವಾಗುತ್ತೆ …’ ಆಮೇಲೆ ಏನೆಲ್ಲಾ ಆಗುತ್ತೆ ಅನ್ನೋದೇ “ಪರಚಂಡಿ’ಯ ಕಥೆ. ಅರೇ, ಇದೇನು ಸಿನಿಮಾನೇ ರಿಲೀಸ್ ಆಗಿಲ್ಲ. ಆಗಲೇ, ವಿಮರ್ಶೆ ಮಾಡುವಂತಿದೆಯಲ್ಲಾ ಅಂದುಕೊಳ್ಳಂಗಿಲ್ಲ. ಹೀಗೆ ಸಿನಿಮಾದ ವಿವರ ಕೊಡುತ್ತಾರೆ ನಿರ್ದೇಶಕ ಜೂಮ್ ರವಿ. ಇವರ ಕಥೆಯನ್ನು ನಂಬಿ ಹಣ ಹಾಕಿರೋದು ಕೆ.ಸಿ.ಶಿವಾನಂದ್.
ಇತ್ತೀಚೆಗೆ ಸಿನಿಮಾ ಬಗ್ಗೆ ಹೇಳಲೆಂದೇ ಪತ್ರಕರ್ತರನ್ನು ಆಹ್ವಾನಿಸಿತ್ತು ಚಿತ್ರತಂಡ. ಇದು ಒಂದು ನೈಜ ಘಟನೆಯ ಸುತ್ತ ಹೆಣೆದಿರುವ ಕಥೆ. ಸುಮಾರು ವರ್ಷಗಳ ಹಿಂದೆ ಹಳ್ಳಿಯೊಂದರ ಕುಟುಂಬದಲ್ಲಿ ಒಂದು ಘಟನೆ ನಡೆದಿದ್ದನ್ನು ಮನಗಂಡ ನಿರ್ದೇಶಕರು, ಅದನ್ನೇ ಇಲ್ಲಿ ಚಿತ್ರವನ್ನಾಗಿಸುತ್ತಿದ್ದಾರೆ. ನಾಯಕ ಮತ್ತು ನಾಯಕಿ ಇಬ್ಬರದು ಹಠ ಸ್ವಭಾವ. ಜಗಳದಲ್ಲೇ ಬೆಳೆಯುವ ಅವರು, ಪರಸ್ಪರ ಪ್ರೀತಿಸುತ್ತಾರೆ. ಹಠಮಾರಿತನ ಹೊಂದಿರುವ ಇಬ್ಬರ ಸ್ವಭಾವಕ್ಕೆ “ಪರಚಂಡಿ’ ಶೀರ್ಷಿಕೆ ಸೂಕ್ತವೆನಿಸಿ ಅದನ್ನೇ ಇಟ್ಟಿದ್ದಾರಂತೆ.
ಶೀರ್ಷಿಕೆ ವಿಭಿನ್ನವಾಗಿದೆ. ಹಾಗೆಯೇ ಇಲ್ಲಿರುವ ಅಂಶಗಳೂ ಸಹ ಹೊಸದಾಗಿವೆ. ಇದು ಗ್ರಾಮೀಣ ಭಾಷೆಯ ಸೊಗಡಿನಲ್ಲೇ ಮೂಡಿಬರಲಿದೆ. ಇಲ್ಲಿರುವ ಯಾವೊಬ್ಬ ಕಲಾವಿದರೂ ಸಹ ಚಪ್ಪಲಿ ಹಾಕದೆಯೇ ನಟಿಸಿದ್ದಾರೆ. ಉಳಿದಂತೆ ಪ್ರಮುಖವಾಗಿ ಕಾಣಿಸಿಕೊಂಡಿರುವ ಪಾತ್ರಧಾರಿಗಳು ಸಹ ಸಿನಿಮಾ ಪೂರ್ತಿ ಒಂದೇ ಡ್ರೆಸ್‌ನಲ್ಲಿ ಕಾಣಿಸಿಕೊಂಡಿರುವುದು ವಿಶೇಷ ಎನ್ನುವ ನಿರ್ದೇಶಕರು. ಚಿತ್ರದಲ್ಲಿ ಕೊಳ್ಳೇಗಾಲ ಭಾಷೆಯನ್ನು ಬಳಸಲಾಗಿದೆ. ಎಂಟು 8 ಸಾಹಸಗಳಿದ್ದು, ಇಲ್ಲಿ ಬಹುತೇಕ ಗ್ರಾಮೀಣ ಭಾಗದ ಕಲಾವಿದರೇ ಆಯ್ಕೆಯಾಗಿದ್ದಾರೆ. ಪೂರ್ವ ಜನ್ಮದ ಕತೆಯ ಜತೆ ಇಲ್ಲಿ ಹಳೆಗನ್ನಡ ಪದಗಳನ್ನೂ ಬಳಸಲಾಗಿದೆ ಎಂದು ವಿವರ ಕೊಡುತ್ತಾರೆ ನಿರ್ದೇಶಕರು.
ಮಹೇಶ್‌ದೇವ್ ಚಿತ್ರದಲ್ಲಿ ನಾಯಕರಾಗಿದ್ದು, ಅವರು ನಾಸ್ತಿಕನಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ನಾಯಕಿ ಕಲ್ಪನಾ ಆಸ್ತಿಕಳಾಗಿ ನಟಿಸಿದ್ದಾರಂತೆ. ಚಿತ್ರದ ಪೋಸ್ಟರ್‌ನಲ್ಲಿ ಢಮರುಗ ಹಾಗೂ ತ್ರಿಶೂಲ ಗಮನಿಸಿದರೆ, ಏನೋ ವಿಶೇಷವಿರಬೇಕು ಅಂದುಕೊಂಡು ಬಂದವರಿಗೆ ಮೋಸ ಆಗುವುದಿಲ್ಲ ಎಂದು ಭರವಸೆ ಕೊಡುತ್ತಾರೆ ನಿರ್ಮಾಪಕರು.
ಇದುವರೆಗೆ ಹೀರೋ ಗೆಳೆಯರಾಗಿಯೇ ಮಿಂಚಿದ್ದ ಕುರಿರಂಗ ಅವರಿಗೆ ಇಲ್ಲಿ ಒಂದು ಜೋಡಿಯೂ ಸಿಕ್ಕಿದೆಯಂತೆ. ಅವರಿಗೆ ನೇತ್ರ ಎಂಬ ನಟಿ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಎರಡು ಹಾಡುಗಳಿಗೆ ವಿನಯ್ ರಂಗದೋಳ್ ಸಂಗೀತ ನೀಡಿದ್ದಾರೆ. ಹ್ಯಾರೀಸ್ ಜಾನಿ ಮತ್ತು ಪುಷ್ಪರಾಜು ಸ್ಟಂಟ್ ಮಾಡಿದರೆ, ರಾಜ್‌ಕಡೂರ್ ಅವರಿಲ್ಲಿ ಕ್ಯಾಮೆರಾ ಹಿಡಿದಿದ್ದಾರೆ. ವಾಸುದೇವಮೂರ್ತಿ ಅವರಿಗಿಲ್ಲಿ ಐದು ಶೇಡ್ ಇರುವಂತಹ ಪಾತ್ರವಿದೆಯಂತೆ. ಚಿತ್ರದಲ್ಲಿ ಅಗ್ನಿರವಿ ಸೇರಿದಂತೆ ಬಹುತೇಕ ಹೊಸಬರು ನಟಿಸಿದ್ದಾರೆ.