Advertisement

“ಪಾರಂಪರಿಕ ಔಷಧಿ ಬಳಸುವಂತಾಗಲಿ’

12:32 PM Dec 22, 2017 | Team Udayavani |

ದೇವನಹಳ್ಳಿ: 117 ವರ್ಷಗಳ ಇತಿಹಾಸ ಹೊಂದಿರುವ ಶತಾಯು ಆಯುರ್ವೇದ ಕ್ಷೇತ್ರಕ್ಕೆ ತನ್ನದೇ ಆದ ವಿಶಿಷ್ಟತೆ ಇದೆ. ದೇಶ ವಿದೇಶಗಳಲ್ಲಿ ರಾಜ್ಯದ ಪಾರಂಪರಿಕ ಆರೋಗ್ಯ ಪದ್ಧತಿ ಪ್ರಚುರ ಪಡಿಸಿದೆ ಎಂದು ಲೋಕೋಪಯೋಗಿ ಸಚಿವ  ಡಾ.ಎಚ್‌.ಸಿ. ಮಹದೇವಪ್ಪ ಅಭಿಪ್ರಾಯಪಟ್ಟರು.

Advertisement

ತಾಲೂಕಿನ ಆವತಿ ಗ್ರಾಮದ ತಿಮ್ಮರಾಯಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶತಾಯು ಆಯುರ್ವೇದ ಯೋಗ ರಿಟ್ರೀಟ್‌ ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ಇದೀಗ ಹೊಸ ಕಲ್ಪನೆಯಲ್ಲಿ ಪ್ರಾರಂಭವಾಗಿರುವ ಶತಾಯು ಆಯುರ್ವೇದ ಯೋಗ ಮತ್ತು ನ್ಯಾಚುರೋಪತಿ ಆಸ್ಪತ್ರೆ ಬಹಳ ಆಕರ್ಷಣೀಯವಾಗಿದೆ. ದೇಶದ ಪಾರಂಪರಿಕ ಔಷಧಿ ಬಳಸುವಂತಾಗಬೇಕು. ಇದರಿಂದ ಎಷ್ಟೋ ರೋಗಗಳು ಗುಣಮುಖವಾಗುತ್ತಿವೆ. ಇಂಗ್ಲಿಷ್‌ ಔಷಧಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಆಯುರ್ವೇದ, ನ್ಯಾಚುರೋಪತಿ ಯೋಗದಿಂದ ರೋಗದಿಂದ ಗುಣಮುಖರಾಗಬಹುದು ಎಂದು ಹೇಳಿದರು.

ಈಗಾಗಲೇ ದಾಬಸ್‌ಪೇಟೆ ಯಿಂದ ಹೊಸೂರು ರಸ್ತೆ ಹದಗೆಟ್ಟಿರುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಗುತ್ತಿಗೆ ಬೇರೆಯವರಿಗೆ ಕೊಡಲಾಗುತ್ತಿದೆ. ಹಿಂದೂಪುರ ಮತ್ತು ಯಲಹಂಕ ರಸ್ತೆಯನ್ನು ಪರಿಶೀಲಿಸಿದ್ದೇನೆ. ಅದರ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು.

ಪ್ರಾಕೃತಿಕ ಚಿಕಿತ್ಸಾ ಆಸ್ಪತ್ರೆಗಳು ಹೆಚ್ಚಲಿ: ಗೃಹ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಪ್ರಾಕೃತಿಕ ಚಿಕಿತ್ಸೆಗಳು ಬಹಳ ಪರಿಣಾಮಕಾರಿ. ಪ್ರಕೃತಿ ನಮ್ಮ ಮನಸ್ಸಿಗೆ ಮುದ ನೀಡುತ್ತದೆ. ಅದನ್ನೊಳಗೊಂಡ ಚಿಕಿತ್ಸಾ ಪದ್ಧತಿ ಶತಾಯು ಆಯುರ್ವೇದ ಹೊಸ ಕಲ್ಪನೆಯಲ್ಲಿ ಹೊರತಂದಿದೆ ಎಂದು ಹೇಳಿದರು. 

ಇನ್ನಿತರೆ ಪಟ್ಟಣಗಳಲ್ಲಿ ಆರಂಭಿಸುವ ಉದ್ದೇಶ: ಶತಾಯು ಆಯುರ್ವೇದ ವ್ಯವಸ್ಥಾಪಕ ನಿರ್ದೇಶಕ ಡಾ. ಮೃತ್ಯಂಜಯ ಸ್ವಾಮಿ ಮಾತನಾಡಿ, ಶತಾಯು ರಿಟ್ರೀಟ್‌ ನಲ್ಲಿ ಅತ್ಯುತ್ತಮ ಚಿಕಿತ್ಸಾ ಪದ್ಧತಿ ಅಳವಡಿಸಿಕೊಂಡಿದ್ದೇವೆ. ಇದು ಕೇವಲ ದೈಹಿಕ ಆರೋಗ್ಯವಲ್ಲ. ಮಾನಸಿಕ ಹಾಗೂ ಆಧ್ಯಾತ್ಮಿಕ ಆರೋಗ್ಯವೂ ಅಷ್ಟೇ ಮುಖ್ಯ ಎಂಬುದು ನಮ್ಮ ನಂಬಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಇಂದಿನ ಬಯೋಮೆಡಿಸಿನ್‌ ಹಾಗೂ ಸಾಂಪ್ರದಾಯಿಕ ಆಯುರ್ವೇದ ಸಮ್ಮಿಶ್ರಣದ ಆರೋಗ್ಯ ಪದ್ಧತಿ ಅಳವಡಿಸಿಕೊಂಡಿದ್ದೇವೆ. ಇದು ವ್ಯಕ್ತಿ ಆರೋಗ್ಯದ ಗುಣಮಟ್ಟ ಸರಿಯಾಗಿ ತಿಳಿದುಕೊಳ್ಳುವ ಮೂಲಕ ಸರಿಯಾದ ಚಿಕಿತ್ಸಾ ಪದ್ಧತಿ ಅನುಕರಿಸಲು ಅನುವು ಮಾಡಿಕೊಡಲಿದೆ.

Advertisement

ಮೊದಲ ಪ್ರಯತ್ನವಾಗಿ ದೇವನಹಳ್ಳಿಯಲ್ಲಿ ಈ ರಿಟ್ರೀಟನ್ನು ಪ್ರಾರಂಭಿಸಿದ್ದು, ಇಲ್ಲಿನ ಯಶಸ್ಸಿನ ಆಧಾರದ ಮೇಲೆ ರಾಜ್ಯದ ಪ್ರಮುಖ ಪ್ರವಾಸಿ ಕೇಂದ್ರಗಳಾದ ಗೋಕರ್ಣ, ಮೈಸೂರು ಹಾಗೂ ಇನ್ನಿತರೆ ಪಟ್ಟಣಗಳಲ್ಲಿ ರಾಜ್ಯದ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ
ಪ್ರಾರಂಭಿಸುವ ಉದ್ದೇಶ ಹೊಂದಿದ್ದೇವೆ ಎಂದರು.

ಶತಾಯು ಆಯುರ್ವೇದದ ಸಿಇಒ ಡಾ.ಅನಿತಾ ಮಾತನಾಡಿ, ಆಯುರ್ವೇದ ಆರೋಗ್ಯ ಚಿಕಿತ್ಸಾ ಪದ್ಧತಿ ಜೊತೆಯಲ್ಲೇ ಯೋಗ ಹಾಗೂ ನ್ಯಾಚುರೋಪತಿ ಹಲವಾರು ಅಂಶಗಳನ್ನು ಅಳವಡಿಸಿಕೊಂಡಿದ್ದೇವೆ. ಅಲ್ಲದೇ ಆಯಾ ವ್ಯಕ್ತಿಗಳ ಅಗತ್ಯತೆಗಳ ಅನುಗುಣವಾಗಿ ಹಾಗೂ ಋತುವಿನ ಅನುಗಣವಾಗಿ ಚಿಕಿತ್ಸೆ ನೀಡಲಿದ್ದೇವೆ ಎಂದರು.

ಸಿನಿಮಾ ಕ್ಷೇತ್ರದಲ್ಲಿಯೇ ಇರುತ್ತೇನೆ: ಚಿತ್ರನಟಿ ಪೂಜಾಗಾಂಧಿ ಮಾತನಾಡಿ, ಕಳೆದ 8 ವರ್ಷಗಳಿಂದ ಆಯುರ್ವೇದ ಆರೋಗ್ಯ ಚಿಕಿತ್ಸಾ ಪದ್ಧತಿ ಪಡೆಯುತ್ತಿದ್ದೇನೆ. ಉತ್ತಮ ಆರೋಗ್ಯ ಹೊಂದಬೇಕಾದರೆ ಆಯುರ್ವೇದ ಮತ್ತು ನ್ಯಾಚುರಲ್‌ನಲ್ಲಿ ಹಲವಾರು ಪದ್ಧತಿಗಳು ಇವೆ. ಅವುಗಳನ್ನು ಅನುಸರಿಸಿದರೆ ಆರೋಗ್ಯ ವೃದ್ಧಿಯಾಗುತ್ತದೆ. ಇನ್ನು ಮುಂದೆ ರಾಜಕೀಯಕ್ಕೆ ಹೋಗುವುದಿಲ್ಲ, ಸಿನಿಮಾ ಕ್ಷೇತ್ರದಲ್ಲಿ ಹಲವಾರು ಕನಸು ಕಂಡಿದ್ದೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಶಾಸಕ ಡಾ. ಸುಧಾಕರ್‌, ವಿಧಾನ ಪರಿಷತ್‌ ಸದಸ್ಯ ಭೈರತಿ ಸುರೇಶ್‌, ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ನಾಗಲಕ್ಷ್ಮೀ ಚೌಧರಿ, ಚಲನಚಿತ್ರ ನಟ ರಾಮಕೃಷ್ಣ, ಶತಾಯು ಆಯುರ್ವೇದದ ನಿರ್ದೇಶಕ ಕೃಷ್ಣ ಮತ್ತಿತರರಿದ್ದರು. 

“ಬಿಜೆಪಿ ಲಾಭಕ್ಕೆ ಯತ್ನ ‘ ಮಹದಾಯಿ ಹೋರಾಟ ಮತ್ತು ಧರಣಿಗಳು ನಿರಂತರವಾಗಿ ನಡೆಯು ತ್ತಿದೆ. ಹಲವಾರು ಬಾರಿ ಪ್ರಧಾನಿಗಳ ಬಳಿ ಸರ್ವಪಕ್ಷಗಳ ನಿಯೋಗ ಕರೆದು ಕೊಂಡು ಹೋದ ಸಂದರ್ಭದಲ್ಲೂ ಬಿಜೆಪಿಯವರು ಯಾವುದೇ ಚಕಾರ ಎತ್ತಿಲ್ಲ. ಈಗ ರಾಜಕೀಯ ದುರುದ್ದೇಶ ದಿಂದ ಮಹದಾಯಿ ಹೋರಾಟದ ಸಮಸ್ಯೆ ಬಗೆಹರಿಸಿ ಸಂಧಾನ ಮಾಡಲು ಹೊರಟಿದ್ದಾರೆ. ಆಡಳಿತ ಪಕ್ಷದವರನ್ನು ಸೇರಿಸಿಕೊಂಡು ಸಂಧಾನಗಳು ಆಗ ಬೇಕು. ಚುನಾವಣೆ ಹತ್ತಿರವಾಗು ತ್ತಿದ್ದಂತೆ ಬಿಜೆಪಿಗೆ ಜ್ಞಾನೋದಯವಾಗಿದೆ. ಒಂದೂವರೆ ವರ್ಷದ ಹಿಂದೆ ಪ್ರಧಾನಿ ಬಳಿ ಸರ್ವಪಕ್ಷದ ನಿಯೋಗ ಕರೆದೊಯ್ದಿದ್ದರೂ ಬಿಜೆಪಿ ಮುಖಂಡರು ಒಂದೇ ಒಂದು ಮಾತು ಆಡಲಿಲ್ಲ. ಇದೀಗ ಸಮಸ್ಯೆ ಬಗೆಹರಿಸಲು ಮುಂದಾಗಿದ್ದಾರೆ ಎಂದು ಸಚಿವ ಡಾ.ಎಚ್‌. ಸಿ. ಮಹದೇವಪ್ಪ ಗುಡುಗಿದರು.

Advertisement

Udayavani is now on Telegram. Click here to join our channel and stay updated with the latest news.

Next