ಕೋಲಾರ: ರಸ್ತೆ ತುಂಬ ಗುಂಡಿ, ಬದಿಯಲ್ಲಿ ಕಸದ ರಾಶಿ, ಅದಕ್ಕೆ ಬೆಂಕಿ ಇಟ್ಟು ಬೂದಿ ಮಾಡಿರುವುದು, ಅಮೃತ ಯೋಜನೆಯ ಕಳಪೆ ಕಾಮಗಾರಿ, ಯುಜಿಡಿ ಅವ್ಯವಸ್ಥೆ ಹೀಗೆ.. ಹೆಜ್ಜೆ ಇಟ್ಟಲೆಲ್ಲಾ ಸಮಸ್ಯೆಗಳೇ, ಸಾರ್ವಜನಿಕರಿಂದ ದೂರುಗಳ ಸುರಿಮಳೆ…ಇವು ಮಂಗಳವಾರ ಮುಂಜಾನೆ ನಗರ ಸಂಚಾರ ನಡೆಸಿದ ಜಿಲ್ಲಾಧಿಕಾರಿ ಜೆ.ಮಂಜುನಾಥ್‌ರ ಅನುಭವಕ್ಕೆ ಬಂದ ವಿಚಾರಗಳು.
ನಗರಸಭೆ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಜೆ.ಮಂಜುನಾಥ್, ಮಂಗಳವಾರ ಮುಂಜಾನೆ ದಿಢೀರ್ ಎಂದು ಏಕಾಂಗಿಯಾಗಿ ನಗರದಲ್ಲಿ ಸಂಚಾರ ಆರಂಭಿಸಿ ಸಮಸ್ಯೆಗಳ ಖದ್ದು ಪರಿಶೀಲನೆ ನಡೆಸಲು ಮುಂದಾದರು. ಜಿಲ್ಲಾಧಿಕಾರಿ ಹೀಗೆ ನಗರ ಸಂಚಾರ ನಡೆಸುತ್ತಿರುವುದು ತಿಳಿಯುತ್ತಿದ್ದಂತೆಯೇ ನಗರಸಭೆ, ಕೆಯುಡಬ್ಲ್ಯೂ ಎಸ್ ಮತ್ತು ಅಮೃತ ಯೋಜನೆಯ ಅಧಿಕಾರಿಗಳು ಅವರ ಜೊತೆ ಸೇರಿಕೊಂಡರು.
ಇಂದಿರಾ ಕ್ಯಾಂಟೀನ್‌ನಲ್ಲಿ ತಿಂಡಿ: ಮನೆಯಿಂದ ಮೆಕ್ಕೆ ವೃತ್ತ ಹಳೇ ಬಸ್ ನಿಲ್ದಾಣ, ಸರ್ವಜ್ಞ ಉದ್ಯಾನ, ಕಾಳಮ್ಮ ಗುಡಿ ರಸ್ತೆ, ಹೊಸ ಬಸ್ ನಿಲ್ದಾಣ ವೃತ್ತ, ಬೋವಿ ಕಾಲೋನಿ, ಹವೇಲಿ ಮೊಹಲ್ಲಾ, ಎಂ.ಬಿ.ರಸ್ತೆ, ಅಮ್ಮವಾರಿಪೇಟೆ ರಸ್ತೆ, ಮತ್ತೆ ಹಳೇ ಬಸ್ ನಿಲ್ದಾಣಕ್ಕೆ ಎರಡು ಗಂಟೆ ಕಾಲ ಸಂಚರಿಸಿ, ಅಲ್ಲಿನ ಇಂದಿರಾ ಕ್ಯಾಂಟೀನ್‌ನಲ್ಲಿ ತಿಂಡಿ ಸೇವಿಸಿ ಸಂಚಾರದುದ್ದಕ್ಕೂ ಸಾರ್ವಜನಿಕರಿಂದ ಅಹವಾಲು ಆಲಿಸಿದರು.
ಸಮಸ್ಯೆಗಳ ಆಲಿಕೆ: ಕರ್ನಾಟಕ ನಗರ ನೀರು ಸರಬರಾಜು ಮಂಡಳಿಯಿಂದ ನಡೆಯುತ್ತಿರುವ ಕಾಮಗಾರಿಗಳು, ಅಮೃತ ಯೋಜನೆಯ ಒಳಚರಂಡಿ ಮಂಡಳಿ ಕಾಮಗಾರಿ, ನಗರೋತ್ಥಾನ, ಅಮೃತ ಯೋಜನೆಯ ಕಾಮಗಾರಿಗಳನ್ನು ಜಿಲ್ಲಾಧಿಕಾರಿಗಳು ಪ್ರಮುಖವಾಗಿ ವೀಕ್ಷಿಸಿದರು. ಇದೇ ಸಂದರ್ಭದಲ್ಲಿ ಮಾರ್ಗದುದ್ದಕ್ಕೂ ಸಾರ್ವಜನಿಕರಿಂದ ಕುಡಿಯುವ ನೀರು, ಸ್ವಚ್ಛತೆ, ಕಸ ವಿಲೇವಾರಿ ಮತ್ತಿತರ ವಿಷಯಗಳ ಕುರಿತಂತೆ ಅಹವಾಲುಗಳನ್ನು ಸಮಾಧಾನದಿಂದ ಆಲಿಸಿದರು.
ಕಸ ವಿಲೇವಾರಿ ಮಾಡಿ: ಸರ್ವಜ್ಞ ಉದ್ಯಾನದಲ್ಲಿನ ಅವ್ಯವಸ್ಥೆ, ಅಲ್ಲಿ ನಿರ್ಮಾಣವಾಗುತ್ತಿರುವ ಬೃಹತ್ ಟ್ಯಾಂಕ್ ಕಾಮಗಾರಿ ಪರಿಶೀಲಿಸಿ, ರಸ್ತೆ ಬದಿ, ಪಾರ್ಕ್ ನ ಸುತ್ತಮುತ್ತಲೂ ಸುರಿದಿದ್ದ ಕಸದ ರಾಶಿ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅಮೃತ ಯೋಜನೆಯಡಿ ಪಾರ್ಕ್‌ನಲ್ಲಿ ಅಳವಡಿಸಿರುವ ಕ್ರೀಡಾ ಮತ್ತು ಕುಳಿತುಕೊಳ್ಳುವ ಸಾಧನಗಳು ಕಳಪೆಯಾಗಿ, ಕಿತ್ತು ಹೋಗಿರುವುದನ್ನು ಗಮನಿಸಿ ಕೂಡಲೇ ಬದಲಾಯಿಸುವಂತೆ ಸೂಚಿಸಿದರು.
ಎರಡು ಗಂಟೆಗಳ ಕಾಲ ನಗರವನ್ನು ಸುತ್ತಾಡಿದ ನಂತರ ಹಳೇ ಬಸ್ ನಿಲ್ದಾಣದ ಇಂದಿರಾ ಕ್ಯಾಂಟೀನ್‌ಗೆ ಆಗಮಿಸಿದ ಜಿಲ್ಲಾಧಿಕಾರಿ ಜೆ.ಮಂಜುನಾಥ್, ಖುದ್ದು ಸಾಲಿನಲ್ಲಿ ನಿಂತು ಟೋಕನ್ ಖರೀದಿಸಿ ಇಡ್ಲಿ ಪಡೆದುಕೊಂಡು ಅಲ್ಲಿಯೇ ಸೇವಿಸಿ ರುಚಿಯ ತಪಾಸಣೆ ನಡೆಸಿದರು.
ಮಂಗಳವಾರ ಮುಂಜಾನೆ ನಗರದಲ್ಲಿ ಸುತ್ತಾಡಿದ ನಂತರ ಜಿಲ್ಲಾಧಿಕಾರಿ ತಾವು ಗಮನಿಸಿದ, ಸಾರ್ವಜನಿಕರಿಂದ ಆಲಿಸಿದ ಅಹವಾಲುಗಳನ್ನು ಪರಿಹರಿಸುವ ಸಲುವಾಗಿ ಅಧಿಕಾರಿಗಳ ಸಭೆ ಕರೆದು ಪರಿಶೀಲಿಸುವುದಾಗಿ ವಿವರಿಸಿದರು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಯೋಜನಾಧಿಕಾರಿ ರಂಗಸ್ವಾಮಿ, ನಗರಸಭೆ ಸಮುದಾಯ ಸಂಘಟನಾಧಿಕಾರಿ ಶಿವಪ್ರಕಾಶ್, ಕೆಯುಡಬ್ಲ್ಯುಎಸ್ ಮತ್ತು ನಗರಸಭೆ ಅಧಿಕಾರಿಗಳು ಹಾಜರಿದ್ದರು.