Advertisement

ಟೀಕೆ ಬಂದಾಗಲೆಲ್ಲ ಆರೆಸ್ಸೆಸ್‌ ಬೆಳೆದಿದೆ: ನಾಗೇಶ್‌

01:51 AM Oct 09, 2021 | Team Udayavani |

ಕುಂದಾಪುರ: ಆರೆಸ್ಸೆಸ್‌ ಕುರಿತು ವಿಪಕ್ಷಗಳು ಟೀಕೆ ಮಾಡಿದಾಗಲೆಲ್ಲ ಸಂಘ ಮತ್ತಷ್ಟು ಬೆಳೆದಿದೆ. ಸುಳ್ಳು ಹೇಳಿ, ಟೋಪಿ ಹಾಕಿ ಆಡಳಿತ ನಡೆಸಿದವರಿಗೆ ಸತ್ಯವನ್ನು ಅರಗಿಸಿಕೊಳ್ಳಲು ಆಗುವುದಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಅವರು ಹೇಳಿದರು.

Advertisement

ಇಲ್ಲಿನ ಜೂನಿಯರ್‌ ಕಾಲೇಜಿಗೆ ಭೇಟಿ ನೀಡಿದ ಅವರು ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದರು.

ಶಾಲೆಗಳ ಜಾಗಗಳ ದಾಖಲಾತಿ ಯನ್ನು ಸಮರ್ಪಕವಾಗಿ ಮಾಡಿ ಕೊಡಲು ಡಿಸಿಗಳ ಜತೆ ಮಾತುಕತೆ ನಡೆಸಲಾಗಿದೆ. ಹೊಸ ಶಾಲೆಗಳಿಗೆ ಅನುಮತಿ ನೀಡುವಾಗ ಆಟದ ಮೈದಾನ, ಅಗ್ನಿಶಾಮಕ ದಳದ ಅನುಮತಿ ಸೇರಿದಂತೆ ಎಲ್ಲ ನಿಯಮ ಪರಿಶೀಲಿಸಿಯೇ ನೀಡಲಾಗುವುದು. ಖಾಸಗಿಯಿಂದ ಸರಕಾರಿ ಶಾಲೆಗೆ ಬಂದ ಟಿಸಿ ದೊರೆಯದ ಮಕ್ಕಳ ಟಿಸಿ ಕೊಡಿಸುವುದು ಇಲಾಖೆಯ ಜವಾಬ್ದಾರಿ ಎಂದರು.

ವಾಲ್ಮೀಕಿ ಮಹರ್ಷಿಗಳಾದದ್ದು
ಬಿಜೆಪಿ ಸರಕಾರ ಬಂದ ಬಳಿಕವೆ?
ಪಠ್ಯಪುಸ್ತಕ ಪರಿಷ್ಕರಣ ಸಮಿತಿ ಅಧ್ಯಕ್ಷರಾಗಿ ರೋಹಿತ್‌ ಚಕ್ರತೀರ್ಥರನ್ನು ರಾಜ್ಯ ಸರಕಾರ ನೇಮಿಸಿದ್ದಕ್ಕೆ ಅಸಮಾಧಾನ ವ್ಯಕ್ತವಾಗಿದೆಯಲ್ಲ ಎಂದು ಸುದ್ದಿಗಾರರು ಪ್ರಶ್ನಿಸಿದಾಗ, ಕೇವಲ ವಿರೋಧಕ್ಕಾಗಿ ವಿರೋಧ ಮಾಡುತ್ತಿದ್ದಾರೆ. ಕೊರೊನಾ ಲಸಿಕೆ ಆರಂಭಿಸಿದಾಗಲೂ ವಿರೋಧ ವ್ಯಕ್ತವಾಗಿತ್ತು. ಹಿಂದೆ ಬರಗೂರು ರಾಮಚಂದ್ರಪ್ಪ ಅವರನ್ನು ನೇಮಿಸಿದ್ದೇಕೆ? ನಮ್ಮ ಪಠ್ಯಪುಸ್ತಕ ನೋಡಿದರೆ ಹೊಡೀತಾರೆ. ವ್ಯಾಕರಣ ದೋಷವೂ ಅದರಲ್ಲಿ ಅಷ್ಟಿದೆ. ವಿವೇಕಾನಂದರ ಭಾಷಣವನ್ನೇ ಅವರು ತಿರುಚಿದ್ದಾರೆ. ಕುವೆಂಪು ಅವರು ಸರಕಾರಿ ಶಾಲೆಯಲ್ಲಿ ಓದಿ ಉನ್ನತ ಮಟ್ಟಕ್ಕೇರಿದರು ಎಂಬ ಪಾಠವನ್ನೇ ಕಿತ್ತು ಹಾಕಿದ್ದಾರೆ. ವಾಲ್ಮೀಕಿ ಮಹರ್ಷಿಗಳಾದದ್ದು ನಮ್ಮ ಸರಕಾರ ಬಂದ ಬಳಿಕವೆ? ಇವರು ಮಕ್ಕಳಿಗೆ ಏನನ್ನು ಕಲಿಸಲು ಹೊರಟಿದ್ದಾರೆ ಎಂದು ಕಿಡಿಕಾರಿದರು.

ಇದನ್ನೂ ಓದಿ:ಪೆರಿಷಬಲ್ ಉತ್ಪನ್ನಗಳ ರಫ್ತಿನಲ್ಲಿ ದೇಶದಲ್ಲೇ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಮೊದಲ ಸ್ಥಾನ!

Advertisement

ಬೇಕಾಗಿದ್ದು 10,000;
ಸಿಕ್ಕಿದ್ದು 3,000!
ಉಡುಪಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಸಚಿವ ಬಿ.ಸಿ. ನಾಗೇಶ್‌ ಅವರು, ರಾಜ್ಯದಲ್ಲಿ 10,000 ಶಿಕ್ಷಕರ ನೇಮಕ ನಡೆಯಬೇಕಿತ್ತು. ನಮ್ಮ ಗುಣ ಮಟ್ಟದ ಆಧಾರದಲ್ಲಿ ಸಿಕ್ಕಿದ್ದೇ 3,000 ಶಿಕ್ಷಕರು. ಭಾಷೆ, ಸಮಾಜ ವಿಜ್ಞಾನ ಶಿಕ್ಷಕರಿಗೆ ಕೊರತೆ ಇಲ್ಲ. 1ರಿಂದ 5, 6ರಿಂದ 8ನೇ ತರಗತಿ ವರೆಗೆ ಶಿಕ್ಷಕರ ಕೊರತೆ ಇದೆ. ಮಾನದಂಡದ ಪ್ರಕಾರ 30 ವಿದ್ಯಾರ್ಥಿಗಳಿಗೆ ಒಬ್ಬರು ಶಿಕ್ಷಕರು ಬೇಕು. ಆದರೆ ಕೆಲವೆಡೆ ಐವರು ಮಕ್ಕಳಿದ್ದಲ್ಲಿ ಇಬ್ಬರು ಶಿಕ್ಷಕರಿದ್ದಾರೆ. ಈ ಪ್ರಕಾರ ಶಿಕ್ಷಕರ ಕೊರತೆ ಇರುವುದೂ ನಿಜ, ಶಿಕ್ಷಕರು ಹೆಚ್ಚುವರಿ ಇರುವುದೂ ನಿಜ. ಇದನ್ನು ಹೇಗೆ ಸರಿಪಡಿಸಬೇಕೆಂದು ಶಾಸಕರ ಜತೆ ಚರ್ಚಿಸಲಾಗುವುದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next