ಹೇಗೆ ಮರೆಮಾಚಲಿ ನಿನ್ನ ಅದರಗಳಲ್ಲಿ ಉಗಮಿಸುವ ಆ ಅದ್ಭುತ ಮಂದಹಾಸವ ನನ್ನ ಸ್ವಂತ ಮಾಡಿಕೊಳ್ಳುವ ಆಸೆಯನ್ನು? ಇನ್ನೆಷ್ಟು ದಿನ ಸುಮ್ಮನಿರಲಿ? ಎಲ್ಲಿ ಅವಿತಿಡಲಿ, ಪ್ರವಾಹದಂತೆ ಹರಿಯುವ ಸುಂದರ ಸ್ವಪ್ನಗಳಿಗೆ ಜನ್ಮಕೊಡುವ ಪ್ರೀತಿಯ ನೆಲೆಯ ಭಾವನೆಗಳನ್ನು?
ಅನುಭವದ ಮೂಲಕವೇ ಅರ್ಥ ತಿಳಿಯುವ ಅದ್ಭುತವಾದ ಪದ “ಪ್ರೀತಿ’. ಪ್ರಣಯದ ಶಾಲೆಯಲ್ಲಿ ನೀ ಹೇಳಿಕೊಡುವ ಪ್ರೇಮ ಪಾಠವ ಶಿಸ್ತಿನಿಂದ ಕೇಳುವ ಏಕಮಾತ್ರ ಶಿಷ್ಯೆ ನಾನೇ ಆಗುತ್ತೇನೆಂದು ಅಂದುಕೊಂಡಿರಲಿಲ್ಲ. ನೀ ಕೊಡುವ ಒಲವಿನ ಹೋಂ ವರ್ಕ್ ಅನ್ನು ತಪ್ಪದೇ ಮಾಡುತ್ತಿದ್ದೇನೆ; ನನಗೇ ತಿಳಿಯದಂತೆ. ಪ್ರೀತಿ ಎನ್ನುವುದೊಂದು ಮೋಡಿ. ನಮ್ಮನ್ನೇ ಮರೆಸುವ, ನಿದ್ದೆ ಗೆಡಿಸುವ, ಎಡಬಿಡದೇ ಕಾಡುವ ಸುಂದರ ಶತ್ರು.
ಪ್ರೀತಿಯನ್ನು ಶತ್ರು ಎನ್ನುವುದಾದರೆ ಅದರೊಡನೆ ನಾಚಿಕೆ ಬಿಟ್ಟು ರಾಜಿಯಾಗಿಬಿಡುತ್ತೇನೆ. ಯಾಕಂದ್ರೆ ನೀನಂದ್ರೆ ನಂಗೆ ಅಷ್ಟು ಇಷ್ಟ. ನನ್ನ ಪ್ರೇಮದ ಪ್ರತಿ ಸಾಲಿನಲಿ ಇಣುಕುವ ಪ್ರತಿ ಪ್ರೀತಿಯ ಪದಗಳ ಭಾವ ನಿನಗಾಗಿ ಮಾತ್ರ. ಯಾರೂ ಕಾಣಲಿಲ್ಲ, ನೀ ನನ್ನ ಕನಸಲ್ಲಿ ಕಂಡಂತೆ. ಯಾರೂ ಮಾಡಲಿಲ್ಲ, ನೀ ನನ್ನ ಹೃದಯವೆಂಬ ಸಸಿಯನ್ನು ನೀರೆರೆದು, ಪ್ರೀತಿಯ ಗೊಬ್ಬರ ಹಾಕಿ ಮಗುವಂತೆ ಪ್ರೀತಿ ಮಾಡಿದಂತೆ.
ಯಾರೂ ಕಾಡಲಿಲ್ಲ , ತನು-ಮನದೊಳಗೆ ಕಣ್ಮುಚ್ಚಿ-ಕಣಿಟ್ಟಾಗ ಕಾಡುವ ನಿನ್ನ ತುಂಟಾಟಗಳಂತೆ. ಹೇಳು! ಹೇಗೆ ಮರೆಮಾಚಲಿ ನಿನ್ನ ಅದರಗಳಲ್ಲಿ ಉಗಮಿಸುವ ಆ ಅದ್ಭುತ ಮಂದಹಾಸವವನ್ನು ನನ್ನ ಸ್ವಂತ ಮಾಡಿಕೊಳ್ಳುವ ಆಸೆಯನ್ನು? ಇನ್ನೆಷ್ಟು ದಿನ ಸುಮ್ಮನಿರಲಿ? ಎಲ್ಲಿ ಅವಿತಿಡಲಿ, ಪ್ರವಾಹದಂತೆ ಹರಿಯುವ ಸುಂದರ ಸ್ವಪ್ನಗಳಿಗೆ ಜನ್ಮಕೊಡುವ ಪ್ರೀತಿಯ ಭಾವಗಳ ನೆಲೆಯ ಭಾವನೆಗಳನ್ನು?
* ಸೌಮ್ಯಶ್ರೀ ಸುದರ್ಶನ್ ಹಿರೇಮಠ್