ಅಂತೂ ಇಂತು ವರುಣನ ಕೃಪೆ ಇಳೆಯ ಮೇಲಾಗಿದೆ. ತುಸು ನಿಧಾನವಾದರೂ ಮಳೆರಾಯ ತನ್ನ ಇರುವಿಕೆಯನ್ನು ತೋರಿಸಲು ಪ್ರಾರಂಭಿಸಿದ್ದಾನೆ. ಬಿಸಿಲ ತಾಪ ತಾಳಲಾರದೆ ಮಳೆ ಯಾವಾಗ ಬಂದು ಇಳೆ ಎಂದು ತಂಪಾಗುವುದೋ ಎನ್ನುವ ಕಾತರದಿಂದಿದ್ದ ಜನಕ್ಕೆ ಬಿಡದೆ ಮಳೆ ಸುರಿದರೆ ಆಗಲೂ ಕಿರಿಕಿರಿ. ಒಬ್ಬೊಬ್ಬರದ್ದು ಒಂದೊಂದು ತೆರನಾದ ಗೋಳು ಪ್ರಾರಂಭವಾಗುವುದೇ ಮಳೆ ವಿಪರೀತವಾಗಿ ಸುರಿದಾಗ. ಕೃಷಿಕರಿಗೆ ತಮ್ಮ ಬೆಳೆಗಳಿಗೆ ತೊಂದರೆ ಆಗದಿರಲಿ ಎನ್ನುವ ಯೋಚನೆ. ಆಫೀಸ್ ಕೆಲಸಕ್ಕೆ ಹೋಗುವವರಿಗೆ, “ಯಾರಪ್ಪಾ ಈ ಮಳೆಗೆ ಬೆಳ್ಳಂಬೆಳಗ್ಗೆ ಮನೆಯಿಂದ ಹೊರಡೋದು’ ಎಂಬ ಭಾವ. ವ್ಯಾಪಾರಿಗಳಿಗೆ ಮಳೆ ಜೋರಾದರೆ ಜನ ಪೇಟೆಗೆ ಬರೋದಿಲ್ಲ. ವ್ಯಾಪಾರ ವಹಿವಾಟು ಮಂದಗತಿಯಲ್ಲಿ ಸಾಗಿ ಆದಾಯಕ್ಕೆ ಪೆಟ್ಟು ಬೀಳುತ್ತದೆ ಎಂಬ ಚಿಂತೆ. ರಜಾಮಜಾದ ಮೂಡ್‌ನಿಂದ ಶಾಲೆಗೆ ಹೆಜ್ಜೆ ಹಾಕಿದ ಮಕ್ಕಳಿಗೆ ಮಾತ್ರ ಮಳೆರಾಯ ಅಂದರೆ ಅಚ್ಚುಮೆಚ್ಚು. ಒಂದೆಡೆ ಮಳೆಯ ನೀರಲ್ಲಿ ಆಡೋ ಮಜಾ. ಮತ್ತೂಂದೆಡೆ ಕಳೆದ ಬಾರಿ ವರುಣನ ಕೃಪೆಯಿಂದ ಹಲವಾರು ರಜೆ ಸಿಕ್ಕಿದೆ. ಈ ಬಾರಿಯೂ ಹಾಗೇ ಸಿಕ್ಕಿದರೆ ಎನ್ನುವ ಆಸೆ. ಆಲೋಚನೆಗಳಿಗೆ ಹೊಸ ಹುರುಪು ತುಂಬಿಸುವವನೇ ಈ ಮಳೆರಾಯ.
ಮಳೆರಾಯನೊಂದಿಗೆ ಹೀಗೆ ಒಬ್ಬೊಬ್ಬರದು ಒಂದೊಂದು ತೆರನಾದ ನಂಟು. ಮನೆಯೊಳಗೆ ಬೆಚ್ಚಗೆ ಇರುವ ಹೆಂಗಳೆಯರ ಟೆನ್ಸ್ ನ್ನೇ ಬೇರೆ. ಅದಾವುದು ಅಂತೀರಾ… ಅದೇ ದಿನಂಪ್ರತಿ ಉಪಯೋಗಿಸಿದ ಬಟ್ಟೆಗಳನ್ನು ಹೇಗೋ ಒಗೆಯಬಹುದು. ಆದರೆ, ಒಣಗಿಸೋದು ಹೇಗೆ ? ಅನ್ನೋದು.
ಅರೆ ಇದೇನಿದು ಎಂದು ಹುಬ್ಬೇರಿಸಬೇಡಿ. ಸಿಂಪಲ್ ಆಗಿ ಕಂಡರೂ ಬಹು ದೊಡ್ಡ ವಿಷಯವೇ. ಎಡೆಬಿಡದೆ ಸುರಿಯುತ್ತಿರುವ ಮಳೆಗಾಲದಲ್ಲಿ ಗೃಹಿಣಿಯರ ತಲೆಯಲ್ಲಿ ಸುಳಿದಾಡುವ ಹಲವಾರು ಯೋಚನೆಗಳಲ್ಲಿ ಬಟ್ಟೆ ಒಣಗಿಸೋದು ಸೇರಿರುತ್ತದೆ. ಎರಡು ದಿನ ಬಿಸಿಲು ಇರದೇ ಬಟ್ಟೆ ಒಣಗದೇ ಇದ್ದರೆ ನೋಡಿ ಮನೆಯ ಸ್ಥಿತಿ. ಮನೆ ತುಂಬಾ ಚಂಡಿ ಬಟ್ಟೆ. ಅದೂ ಸರಿ ಒಣಗದೆ ಚಳಿ ಹಿಡಿದ ಹಾಗೆ ಎಲ್ಲೆಂದರಲ್ಲಿ ನೇತಾಡಿಕೊಂಡು ತಲೆಗೆ ಸಿಕ್ಕಿ, ಅಬ್ಟಾ ಅದರ ಅವಸ್ಥೆಯೇ! ಮನೆ ವಿಶಾಲವಾಗಿದ್ದರೆ ಕೆಲವು ದಿನ ಸುಧಾರಿಸಲು ಅಡ್ಡಿಯಿಲ್ಲ. ಮನೆ ತುಂಬಾ ಜನ, ಚಿಕ್ಕ ಮನೆಯಾದರೆ ಬಟ್ಟೆಗಳೇ ತುಂಬಿ ತುಳುಕಾಡುವಂತೆ ಆಗದಿರದು.
ಇನ್ನು ಮನೆಯಲ್ಲಿ ಸಣ್ಣ ಪಾಪು ಇದ್ದರೆ ಕೇಳಬೇಕೆ? ಅದರ ಒಂದಿಷ್ಟು ಪುಟ್ಟು ಪುಟ್ಟು ಅಂಗಿ-ಪ್ಯಾಂಟ್‌ಗಳು ಎಲ್ಲೆಲ್ಲಿ ಜಾಗವಿದೆಯೋ ಅಲ್ಲಲ್ಲಿ ನೇತಾಡಿಕೊಂಡಿರುತ್ತವೆ. ಮಕ್ಕಳ ಯೂನಿಫಾರಂ, ಪುರುಷರ ಅಂಗಿ-ಪ್ಯಾಂಟ್ ಬೆಚ್ಚಗೆ ಒಣಗಿಸಲೇಬೇಕಾದ ಅನಿವಾರ್ಯತೆ.ಆಗೊಮ್ಮೆ ಈಗೊಮ್ಮೆ ಫಂಕ್ಷನ್‌ಗೆ ಹಾಕೋ ಬೆಲೆಬಾಳುವ ಸೀರೆಯನ್ನು ಸೂರ್ಯನ ಬಿಸಿಲಿನಲ್ಲಿ ಒಣಗಿಸಲು ಸಾಧ್ಯವಾಗದೇ ಇದ್ದರೆ ಒಂಥರಾ ಕಿರಿಕಿರಿ. ಜೊತೆಗೆ ಮಳೆಗಾಲದಲ್ಲಿ ಡೈಲಿವೇರ್‌ಗೆ ಅಂತ ಒಂದಿಷ್ಟು ಎಕ್ಸ್‌ಟ್ರಾ ಬಟ್ಟೆ ಬೇಕು. ಬೀರುವಿನಲ್ಲಿ ಇಟ್ಟ ಹಳೆ ಡ್ರೆಸ್‌ಗಳಿಗೆಲ್ಲ ಒಳ್ಳೆ ಡಿಮಾಂಡ್ ಬರೋದೇ ಬಿಡದೆ ಸುರಿಯೋ ಮಳೆಗಾಲದಲ್ಲಿ !
ಮನೆಯಲ್ಲಿರುವ ಗಂಡಸರು ತಮ್ಮ ಬಟ್ಟೆಗಳನ್ನು ತಾವೇ ತೊಳೆದರೂ ಅದನ್ನು ಒಣಗಿಸಿ ಮಡಚಿಡುವ ಪರಿಪಾಟಲು ಮನೆಯಲ್ಲಿನ ಮಹಿಳೆ ಯದ್ದೇ. ಹೀಗಾಗಿ, ಮಳೆಗೆ ಹಿಡಿಶಾಪ ಹಾಕುತ್ತ ತಮ್ಮದೇ ಐಡಿಯಾಗಳನ್ನು ಉಪಯೋಗಿಸಿ ಬಟ್ಟೆ ಒಣಗಿಸುವ ಕಲೆಯನ್ನೂ ಕರಗತ ಮಾಡುವುದರಲ್ಲಿ ಮಹಿಳೆ ಮುಂದು. ಕೆಲವು ಮನೆಗಳಲ್ಲಿ ಅಡಿಗೆಕೋಣೆಯಲ್ಲಿ ಹಗ್ಗಗಳನ್ನು ಕಟ್ಟಿ ಹಾಕಿ ಬಟ್ಟೆಗಳನ್ನು ನೇತು ಹಾಕಿರುವುದನ್ನು ನೋಡಿರಬಹುದು. ಅಡಿಗೆ ಕೋಣೆ ಬೆಚ್ಚಗಿನ ತಾಣ. ಇಲ್ಲಿ ಬಟ್ಟೆ ಬಹುಬೇಗ ಒಣಗುವುದು ಎಂಬ ಉಪಾಯ ಆಕೆಯದು. ತಲೆತಲಾಂತರಗಳಿಂದ ನಮ್ಮ ಹಿರಿಯರೂ ಮಳೆಗಾಲದಲ್ಲಿ ಉಪಯೋಗಿಸುತ್ತಿದ್ದ ಉಪಾಯವೂ ಇದೇ. ಇದು ಒಂದು ದಿನದ ವಿಷಯವಲ್ಲ. ಮಳೆಗಾಲ ಪೂರ್ತಿ ಮರುದಿನ ಮತ್ತೆ ಆ ಜಾಗಕ್ಕೆ ಬೇರೆ ಬಟ್ಟೆಗಳು ತಾ ಮುಂದು ನಾ ಮುಂದು ಎಂಬಂತೆ ರೆಡಿ. ರಾತ್ರಿ ಫ್ಯಾನ್ ಹಾಕಿ ಮಲಗೋದರ ಜೊತೆಗೆ ಕೆಲವೊಂದಿಷ್ಟು ಡ್ರೆಸ್‌ಗಳೂ ರೂಮ್ ಸೇರಿಕೊಂಡು ಬೆಚ್ಚಗಾಗಲು ಹೆಣಗುತ್ತವೆ. ಇನ್ನು ಅನ್ನ ಮಾಡಿದ ಕುಕ್ಕರ್ ಮೇಲೆ ಒಂದೆರಡು ಮಕ್ಕಳ ಪುಟ್ಟ ಅಂಗಿ ಹಾಕಿದರೆ ಒಣಗಿ ಸೋಕೆ ಅಡ್ಡಿ ಇಲ್ಲ. ತೆಂಗಿನಗರಿಯನ್ನು ಅಂಗಳದಲ್ಲಿ ಹಾಕಿ, ಮಳೆ ಇರದಿದ್ದಾಗ ಅದರ ಮೇಲೆ ಬಟ್ಟೆ ಹಾಕಿ ಬೇಗನೆ ಒಣಗಿಸುವುದೂ ಇದೆ.
ಬಟ್ಟೆ ಒಣಗಿಸುವುದಕ್ಕೆ ಮನೆಯೊಡತಿ ನಡೆಸುವ ಕಸರತ್ತು ಒಂದೇ, ಎರಡೇ !
ವಂದನಾ ರವಿ ಕೆ. ವೈ.