Advertisement

ಎಲ್ಲಿ ನೋಡಿದರೂ ಕಸಗಳ ರಾಶಿ: ಸ್ವತ್ಛತೆ ಯಾರ ಹೊಣೆ?

12:04 AM May 02, 2019 | sudhir |

ಕುಂಬಳೆ: ದೇಶಾದ್ಯಂತ ಪ್ರಧಾನಿಯವರು ಪರಿಸರ ಶುಚಿತ್ವಕ್ಕೆ ಆದ್ಯತೆ ನೀಡಿರುವರು.ಶುಚಿತ್ವಕ್ಕಾಗಿ ವಿವಿಧ ಯೋಜನೆಗಳನ್ನು ಹಮ್ಮಿ ಕೊಂಡಿರುವರು. ಇದರಿಂದ ಹೆಚ್ಚಿನ ರಾಜ್ಯ ಸರಕಾರಗಳು, ಸ್ಥಳೀಯಾಡಳಿತ ಸಂಸ್ಥೆಗಳೂ ಶುಚಿತ್ವದತ್ತ ವಿಶೇಷ ಗಮನ ಹರಿಸಿವೆೆ. ಆದರೆ ಮಂಗಲ್ಪಾಡಿ ಗ್ರಾಮ ಪಂಚಾಯತ್‌ ಮಾತ್ರ ಇದಕ್ಕೆ ವ್ಯತಿರಿಕ್ತವಾಗಿದೆ. ಪಂಚಾಯತ್‌ ವ್ಯಾಪ್ತಿಯ ಎಲ್ಲೆಡೆ ಮಾಲಿನ್ಯಗಳ ರಾಶಿಗಳನ್ನು ಕಾಣಬಹುದು.ಬಂದ್ಯೋಡು, ಕೈಕಂಬ, ಉಪ್ಪಳ, ಮಣ್ಣಂಗುಳಿ, ಹಿದಾಯತ್‌ ನಗರದ ರಸ್ತೆ ಪಕ್ಕದಲ್ಲಿ ಮಾಲಿನ್ಯ ರಾಶಿ ನಿತ್ಯ ತುಂಬಿ ತುಳುಕುವುದನ್ನು ಕಾಣಬಹುದು. ಉಪ್ಪಳ ಗೇಟಿನಿಂದ ಮಂಜೇಶ್ವರದ ಚೆಕ್‌ ಪೋಸ್ಟ್‌ ಸೇತುವೆಯ ತನಕ ಒಂದು ಭಾಗದ ಹೆದ್ದಾರಿಯುದ್ದಕ್ಕೂ ಮಾಲಿನ್ಯ ರಾಶಿಗಳು ತುಂಬಿ ಗಬ್ಬು ವಾಸನೆ ಹರಡುವುದು.

Advertisement

ಉಪ್ಪಳ ಭಾಗದ ವಾಸದ ಮನೆಗಳ ಉಪೇಕ್ಷಿತ ಮಾಲಿನ್ಯಗಳನ್ನು ಇಲ್ಲಿ ತಂದು ಹಾಕಲಾಗುತ್ತಿದೆ. ಅಲ್ಲದೆ ಪೇಟೆಯ ಮಾಂಸದಂಗಡಿಯ ತ್ಯಾಜ್ಯ ವಸ್ತುಗಳನ್ನು ಇಲ್ಲಿ ತಂದು ಸುರಿಯಲಾಗುತ್ತಿದೆ. ರಾತ್ರಿ ವೇಳೆ ಬಲುದೂರದಿಂದಲೂ ವಾಹನಗಳ ಮೂಲಕ ಮಾಲಿನ್ಯ ರಾಶಿಯನ್ನು ತಂದು ಇಲ್ಲಿ ಸುರಿಯಲಾಗುತ್ತಿದೆ. ಒಂದೊಮ್ಮೆ ಕೇರಳ ಭಾಗದಿಂದ ರಾತ್ರಿ ವೇಳೆ ಮಾಲಿನ್ಯವನ್ನು ಹೊತ್ತು ತಂದ ಕಂಟೈನರನ್ನು ಇಲ್ಲಿ ಸುರಿಯಲು ಊರವರು ಬಿಡದೆ ಹಿಂದೆ ಕಳುಹಿಸಲಾಗಿದೆ. ಕೆಲವು ಬಾರಿ ಸ್ಥಳೀಯರು ಪ್ರತಿಭಟಿಸಿದರೂ ಮಾಲಿನ್ಯ ತಂದ ತಂಡದ ಬೆದರಿಕೆಗೆ ಮಣಿಯಬೇಕಾಗಿದೆ.

ಒಂದು ಕಡೆ ರೈಲು ಹಳಿ ಇನ್ನೊಂದು ಕಡೆ ಹೆದ್ದಾರಿಯುದ್ದಕ್ಕೂ ಮಧ್ಯೆ ಹೊಂಡವಿದ್ದು ಈ ಸ್ಥಳದಲ್ಲಿ ಮಾಲಿನ್ಯವನ್ನು ಎಸೆಯಲಾಗುತ್ತಿದೆ. ಆದರೆ ಇದು ರಸ್ತೆ ಪಕ್ಕಕ್ಕೆ ಬೀಳುತ್ತಿದೆ. ಮನೆಗಳಿಂದ ಮತ್ತು ಮಾಂಸದಂಗಡಿಗಳಿಂದ ತ್ಯಾಜ್ಯವನ್ನು ಒಯ್ಯಲು ಪ್ರತ್ಯೇಕ ತಂಡಗಳು ಕಾರ್ಯಾಚರಿಸುತ್ತವೆ. ಮಾಲಿನ್ಯ ಪೊಟ್ಟಣ ಉಪೇಕ್ಷಿಸಲು ಕಟ್ಟಡ ಮಾಲಕ ರಿಂದ ಹಣವನ್ನು ಸ್ವೀಕರಿಸಿ ಕಸದ ಪೊಟ್ಟಣವನ್ನು ಬೈಕ್‌, ರಿಕ್ಷಾ ಕಾರು ಇನ್ನಿತರ ವಾಹನಗಳಲ್ಲಿ ರಾತ್ರಿ ವೇಳೆ ತಂದು ರಸ್ತೆ ಪಕ್ಕದಲ್ಲಿ ಎಸೆದು ಪರಾರಿಯಾಗುತ್ತಾರೆ. ಕೆಲವು ಬಾರಿ ಇದನ್ನು ಪತ್ತೆಹಚ್ಚಿ ಗ್ರಾಮ ಪಂಚಾಯತ್‌ ಮತ್ತು ಪೊಲೀಸರಿಗೆ ದೂರು ಸಲ್ಲಿಸಿದರೂ ಯಾವುದೇ ಕ್ರಮಕೈಗೊಂಡಿಲ್ಲವೆಂಬ ಆರೋಪ ಸ್ಥಳೀಯ ನಿವಾಸಿಗಳದು.

ಮಾಲಿನ್ಯ ಸುರಿಯುವ ಕೆಲಕಡೆಗಳಲ್ಲಿ ಇಲ್ಲಿ ಕಸಹಾಕಬಾರದು ಪೊಲೀಸ್‌ ಮಂಜೇಶ್ವರ ಎಂಬು ದಾಗಿ ಕನ್ನಡ, ಮಲಯಾಳ, ಇಂಗ್ಲಿಷ್‌ ಭಾಷೆಗಳಲ್ಲಿ ಫಲಕ ನಾಟಲಾಗಿದೆ. ಆದರೆ ಕಾನೂನಿಗೇ ಸವಾಲೆಸೆದಂತೆ ಈ ಪ್ರದೇಶದಲ್ಲೇ ಕಸಕಡ್ಡಿಗಳ ರಾಶಿಯನ್ನು ಕಾಣಬಹುದು.

ಆರೋಗ್ಯ ಇಲಾಖೆಗೆ ಸವಾಲು
ಇಂತಹ ಮಾಲಿನ್ಯಗಳತ್ತ ಕಾನೂನು ಕ್ರಮ ಕೈಗೊಳ್ಳಬೇಕಾದ ಆರೋಗ್ಯ ಇಲಾಖೆಯೂ ತೆಪ್ಪಗಿದೆ. ಮಂಗಲ್ಪಾಡಿ ಸರಕಾರಿ ಆಸ್ಪತ್ರೆಯ ಮುಂಭಾಗದಲ್ಲಿ ಮಾಲಿನ್ಯ ರಾಶಿಯನ್ನು ನಿತ್ಯ ತಂದು ಸುರಿದರೂ ಆಸ್ಪತ್ರೆಯ ಸಂಬಂಧಪಟ್ಟವರು ನಿರ್ಲಕ್ಷ್ಯದಿಂದ ಇದ್ದಾರೆ. ಉಪ್ಪಳ ಪೇಟೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಾಲಿನ್ಯ ಸುರಿಯುವುದಕ್ಕೆ ಸ್ಥಳೀಯ ವ್ಯಾಪಾರಿ ವ್ಯವಸಾಯಿ ಘಟಕ ಸಂಘಟನೆ ಕಡಿವಾಣ ಹಾಕಿದೆ.

Advertisement

ಹರಿತಸೇನೆ ಕಾರ್ಯಾಚರಣೆ ಸ್ಥಗಿತ
ಗ್ರಾಮ ಪಂಚಾಯತ್‌ ವತಿಯಿಂದ ಕುಟುಂಬಶ್ರೀ ಸದಸ್ಯೆಯರ ಸಭೆಯನ್ನು ಕರೆದು ಮನೆಗಳಿಂದ ಮಾಲಿನ್ಯ ಮತ್ತು ಪ್ಲಾಸ್ಟಿಕ್‌ ಸಂಗ್ರಹಿಸಲು ಹರಿತಸೇನೆ ರಚಿಸಲಾಗಿದೆ. ಮನೆಯ ಮಾಲಿನ್ಯವನ್ನು ಸಂಗ್ರಹಿಸಿ ಕುಬಣೂರು ಮಾಲಿನ್ಯ ಸಂಸ್ಕರಣ ಘಟಕಕ್ಕೆ ಒಯ್ಯಲು ಒಂದು ಮನೆಯಿಂದ 30 ರೂ. ಪಡೆದುಕೊಳ್ಳಲು ತೀರ್ಮಾನಿಸಲಾಗಿದೆ. ಆದರೆ ಈ ಕಾರ್ಯಾಚರಣೆ ಕೆಲವೇ ದಿನಗಳು ನಡೆದು ಬಳಿಕ ಸ್ಥಗಿತಗೊಂಡಿದೆ.

ಮುಂಗಾರು ಮಳೆ ಆರಂಭವಾಗಲಿದ್ದು ಮಳೆಗೆ ತ್ಯಾಜ್ಯ ಮಾಲಿನ್ಯದ ಗಲೀಜು ನೀರು ರಸ್ತೆಯಲ್ಲಿ ಮತ್ತು ಪಕ್ಷದ ಮನೆ ಬಾಗಿಲಿಗೆ ಹರಿಯಲಿದೆ. ಅಲ್ಲದೆ ಈ ಗಲೀಜು ರಾಶಿಯಲ್ಲಿ ಮಾರಕ ರೋಗಾಣು ಸೃಷ್ಟಿಯಾಗಲಿದೆ.ಕಾಲ ಮಿಂಚುವ ಮುನ್ನ ಆರೋಗ್ಯ ಇಲಾಖೆ ಮತ್ತು ಸ್ಥಳೀಯಾಡಳಿತ ಎಚ್ಚರಗೊಂಡು ಮಾಲಿನ್ಯ ಸಮಸ್ಯೆಗೆ ಪರಿಹಾರ ಕಾಣಬೇಕಿದೆ.

ಸಾರ್ವಜನಿಕರೇ ಸಹಕರಿಸಿ
ಆಡಳಿತ ವತಿಯಿಂದ ಫ್ಲ್ಯಾಟ್‌ ಮಾಲಕರ ಸಭೆಯನ್ನು ಹಲವುಬಾರಿ ಕರೆದು ಮಾಲಿನ್ಯವನ್ನು ಸಾರ್ವಜನಿಕವಾಗಿ ಉಪೇಕ್ಷಿಸದಂತೆ ಎಚ್ಚರಿಕೆ ನೀಡಿದರೂ ಇದು ಮತ್ತೆ ಮರುಕಳಿಹಿಸುತ್ತಲೇ ಇದೆ.ಮಾಲಿನ್ಯ ಸಮಸ್ಯೆ ಗಂಭೀರವಾಗಿದೆ. ಸಾರ್ವಜನಿಕರು ಸಮಸ್ಯೆಗೆ ಸ್ಪಂದಿಸಬೇಕಾಗಿದೆ.
-ಕೆ.ಪಿ. ವಲ್ಲರಾಜ್‌, ವಿಪಕ್ಷ ಸದಸ್ಯ, ಮಂಗಲ್ಪಾಡಿ ಗ್ರಾ.ಪಂ.

ಮಾಹಿತಿ ನೀಡಿ
ಸಾರ್ವಜನಿಕರು ತಮ್ಮ ಕರ್ತವ್ಯ ಪ್ರಜ್ಞೆಯನ್ನು ಅರಿತು ಮಾಲಿನ್ಯ ಉಪೇಕ್ಷೆಯತ್ತ ಗಮನ ಹರಿಸಬೇಕಾಗಿದೆ.ರಾತ್ರಿ ಕಾಲದಲ್ಲಿ ಮಾಲಿನ್ಯತಂದು ಸುರಿಯುದರಿಂದ ಆರೋಪಿಗಳ ಪತ್ತೆಗೆ ಕಷ್ಟಸಾಧ್ಯ. ಸಾರ್ವಜನಿಕರು ಸಹಕರಿಸಿ ಆರೋಪಿಗಳ ಹೆಸರು ಮತ್ತು ವಾಹನಗಳ ದಾಖಲಾತಿ ನಂಬ್ರ ತಿಳಿಸಿದಲ್ಲಿ ಕಾನೂನು ಕ್ರಮಕೈಗೊಳ್ಳಲಾಗುವುದು.
-ಸುರೇಶ್‌,ಆರೋಗ್ಯ ಅಧಿಕಾರಿ, ಮಂಗಲ್ಪಾಡಿ ಸರಕಾರಿ ಆಸ್ಪತ್ರೆ

– ಅಚ್ಯುತ ಚೇವಾರ್‌

Advertisement

Udayavani is now on Telegram. Click here to join our channel and stay updated with the latest news.

Next