Advertisement
ಹೆಣ್ಣಿಲ್ಲದ ಮನೆ ಚೌಕಟ್ಟಿಲ್ಲದ ಚಿತ್ರದಂತೆ. ಮನೆಯ ಉಸಿರಾಗಿ, ಮನದ ಒತ್ತಡವನ್ನು ನುಂಗಿಕೊಳ್ಳುವ ನಿಟ್ಟುಸಿರಾಗಿ, ಪ್ರೀತಿ ಒತ್ತರಿಸುವ ಬಿಸಿಯುಸಿರಾಗಿ, ಸಮಸ್ಯೆಗಳಿಗೆಲ್ಲ ಸಹಜ ವಿದ್ಯಮಾನದ ಒಸರಾಗಿ, ಸಮಾಧಾನಿಸುವ ನಿರಾಳ ಉಸಿರಿನ ಸರಿಗಮಪವೇ ಆಗಿ ಅನನ್ಯವಾದದ್ದು ಮನೆಯಲ್ಲಿ ಹೆಣ್ಣಿನ ಉಪಸ್ಥಿತಿ.
Related Articles
Advertisement
ಮನುಷ್ಯನ ನಾಲಿಗೆ ಹಾಗೂ ಗುಣದ ಮಾದರಿಯನ್ನು ಆತ ಹೊಂದಿದ ಸಂಸ್ಕಾರವೇ ನಿರ್ಧರಿಸುತ್ತದೆ. ಚಿಕ್ಕದಿರುವಾಗ ಅಮ್ಮ ಹೇಳುವ ಹಿತನುಡಿಗಳು, ಬಿರುಸಿನ ಬೈಗಳು, ಆಪ್ತತೆಯ ಮುದ್ದು ಮುಗುಳಿನ ಶಬ್ದಗಳು, ನೋಡಬಾರದ, ಮಾಡಬಾರದ, ಹೇಳಬಾರದ, ಕೇಳಬಾರದವುಗಳ ನೀತಿ-ನಿಯಮಗಳ ಇತಿಮಿತಿ ಅಲೆಯನ್ನೆಲ್ಲ ಅಮ್ಮನಿಂದ ಕಲಿಯುತ್ತೇವೆ. ಯಾವ ಶಾಲೆಯಲ್ಲೂ , ಕಾಲೇಜಿನಲ್ಲೂ, ವಿಶ್ವವಿದ್ಯಾನಿಲಯದಲ್ಲೂ ಕಲಿಸದ ಪಾಠಗಳನ್ನು ನಾವು ಅಮ್ಮನಿಂದ ಕಲಿಯುತ್ತೇವೆ. ಹೆಣ್ಣೊಬ್ಬಳು ಮಗಳು, ತಾಯಿ, ಹೆಂಡತಿ, ಪ್ರೇಯಸಿ ಏನಾಗಿದ್ದರೂ ಅವ್ಯಕ್ತವಾಗಿ ಸುಷುಪ್ತಿಯಲ್ಲಿ ಆಕೆಯಲ್ಲಿರುವುದು ಮಾತೃತ್ವ ಪ್ರಜ್ಞೆ. ಹಾಗಾಗಿ, ಮನೆಯಲ್ಲಿ ಆಕೆ ಬೇಕು-ಬೇಡಗಳ, ಹೌದು-ಅಲ್ಲಗಳ ನಿಖರ ವೇದಾಂತ ಸಂಹಿತೆಯಾಗುತ್ತಾಳೆ.
ಈ ಕೆಲಸಕ್ಕೆ ಸಂಬಳ ಎಲ್ಲಿ !ಉದ್ಯೋಗಂ ಪುರುಷ ಲಕ್ಷಣಂ ಎಂಬ ಕ್ಲೀಷೆಯೆನಿಸುವ ಒಂದು ಗಾದೆಯಿದೆ. ಅದು ಯಾವಾಗ ಹುಟ್ಟಿತೋ! ಆದಿಮಾನವರಾದ “ಆ್ಯಡಂ ಈವ್’ರ ಕಾಲದಲ್ಲಿ ಬೆಂಕಿಯ ಆವಿಷ್ಕಾರ. ನಂತರ “ಆ್ಯಡಂ’ ಬೇಟೆಯಾಡಿ ತಂದ ಪ್ರಾಣಿಯನ್ನು “ಈವ್’ಳು ಕತ್ತರಿಸಿ ಬೆಂಕಿಯಲ್ಲಿ ಸುಟ್ಟು ತಿನ್ನಲು ಸಿದ್ಧಗೊಳಿಸುತ್ತಾಳೆ. ಅದೇ ಮುಂದುವರಿದು ಹೊರಗೆ ಕಚೇರಿಯಲ್ಲಿ ದುಡಿಯುವ ಗಂಡ ತರುವ ತರಕಾರಿಯನ್ನು ಮನೆಯಲ್ಲಿರುವ ಗೃಹಿಣಿ ಅಡಿಗೆ ಮಾಡುತ್ತಾಳೆ. ಈಗಂತೂ ಪರಿಸ್ಥಿತಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೆಣ್ಣು ಕಚೇರಿಗೂ ಹೋಗುತ್ತಾಳೆ. ತರಕಾರಿಯನ್ನೂ ತರುತ್ತಾಳೆ. ಅಡಿಗೆಯನ್ನು ಮಾಡುತ್ತಾಳೆ. ಹಾಗಾಗಿ ಉದ್ಯೋಗ ಎನ್ನುವುದು ಪುರುಷ ಲಕ್ಷಣ, ಸ್ತ್ರೀ ಲಕ್ಷಣವನ್ನೂ ದಾಟಿ ಅದು ಮನುಷ್ಯ ಲಕ್ಷಣವಾಗಿದೆ. ಹೊರಗಿನ ಉದ್ಯೋಗದಲ್ಲಿರುವ ಮಹಿಳೆ ತಿಂಗಳ ಕೊನೆಯಲ್ಲಿ ಕೈಯ್ಯಲ್ಲಿ ಹಿಡಿಯಬಹುದಾದ ಸಂಬಳದ ಕನಸು ಹೊತ್ತು ಯಾವುದೇ ಬಂಧವಿಲ್ಲದೆ, ತಿಂಗಳಿಡೀ ಯಾಂತ್ರಿಕವಾಗಿ ದುಡಿಯುತ್ತಾಳೆ. ಆದರೆ ಮನೆಯಲ್ಲಿರುವ ಗೃಹಿಣಿ ಕೈಗೊಳ್ಳುವ ಕೆಲಸಕ್ಕೆ ಯಾವ ಆಫೀಸಿನ ಕೆಲಸವೂ ಸರಿಸಮವಲ್ಲ. ಗೃಹಿಣಿಯಾದವಳಿಗೆ ಕೆಲಸವೆಲ್ಲ ಅಚ್ಚುಕಟ್ಟಾಗಿರಬೇಕು. ಗಂಡ ಮೆಚ್ಚಬೇಕು, ಮಕ್ಕಳು ಸೈ ಎನ್ನಬೇಕು, ಬಂದವರು “ಆಹಾ’ ಎನ್ನುವಂತೆ ಮನೆಯ ರೂಪಿಸಲು ಆಕೆಯು ಹಗಲಿರುಳು ಮೀಸಲು. ಗೃಹಿಣಿಯ ಕೆಲಸಕ್ಕೆ ಬೆಲೆ ಇಲ್ಲ. ಬಿಟ್ಟಿ ಕೆಲಸ. ಬೆಳಗಿಂದ ಸಂಜೆಯ ತನಕ ಆಕೆ ಸಂಬಳ ರಹಿತವಾಗಿ ದುಡಿಯುತ್ತಾಳೆ. ತನ್ನ ಮನೆಯವರಿಗಾಗಿ ಗಾಡಿಗೆ ಕಟ್ಟಿದ ಎತ್ತಿನಂತೆ ಎಂಬಂತಹ ಮಾತಿನಲ್ಲಿ ಅದು ಆಕೆಯ ತ್ಯಾಗಶೀಲತೆಯ ವೈಭವೀಕರಣ ಎನಿಸಿದರೂ ಆಕೆಗೆ ಅಂತಹ ಬೇಸರವೇನೂ ಇರುವುದಿಲ್ಲ. “ಅಮ್ಮನ ಪತ್ರೊಡೆಯ ರುಚಿ ಯಾರೂ ಮಾಡಿದರೂ ಆಗುವುದಿಲ್ಲ’. “ಅಮ್ಮ ಗೋಬಿಮಂಚೂರಿ ಎಕ್ಸ್‌ಪರ್ಟ್, ಅಮ್ಮ ಮಾಡಿದ ಮಂಚೂರಿ ತಿಂದ ನಂತರ ನನಗೆ ಹೊಟೇಲ್ಲಿನದು ಸೇರುವುದೇ ಇಲ್ಲ’ ಎಂದು ಮಕ್ಕಳು ಮೆಚ್ಚಿಗೆ ಸೂಚಿಸಿದರೆ, ಬಾಯಿ ಚಪ್ಪರಿಸುತ್ತ “ಇನ್ನೂ ಬೇಕು’ ಎಂದು ಹಾಕಿಸಿಕೊಳ್ಳುತ್ತ ತಿನ್ನುತ್ತಿದ್ದರೆ, ಅಮ್ಮನಿಗೆ ಅದನ್ನು ತಯಾರಿಸಲು ಆದ ಅದೆಷ್ಟೋ ಪ್ರಯಾಸ ಆ ಕ್ಷಣ ಮಾಯ. ವಿಜಯಲಕ್ಷ್ಮಿ ಶ್ಯಾನ್‌ಭೋಗ್