Advertisement

ಜನರ ಮತ ಪಡೆದು ಗೆದ್ದ ಸಂಸದೆ ಎಲ್ಲಿದ್ದಾರೆ?

08:20 PM Feb 19, 2020 | Team Udayavani |

ಕೆ.ಆರ್‌.ನಗರ: ಕಳೆದ ಲೋಕಸಭಾ ಚುನಾವಣೆಯಲ್ಲಿ ಅಭಿವೃದ್ಧಿ ಕೆಲಸ ಮಾಡುವ ಜೆಡಿಎಸ್‌ ಪಕ್ಷವನ್ನು ಬಿಟ್ಟು ಅಂಬರೀಶ್‌ ಅವರ ಮೇಲಿನ ಅಭಿಮಾನದಿಂದ ಪಕ್ಷೇತರ ಅಭ್ಯರ್ಥಿಗೆ ಮತ ನೀಡಿ ಗೆಲ್ಲಿಸಿದ್ದೀರಿ. ನಿಮ್ಮಿಂದ ಮತ ಪಡೆದು ಆಯ್ಕೆಯಾದ ಸಂಸದರು(ಸುಮಲತಾ ಅಂಬರೀಶ್‌) ಈಗ ಎಲ್ಲಿದ್ದಾರೆ ಎಂದು ಶಾಸಕ ಸಾ.ರಾ.ಮಹೇಶ್‌ ಪರೋಕ್ಷವಾಗಿ ಪ್ರಶ್ನಿಸಿದರು.

Advertisement

ತಾಲೂಕಿನ ಕಗ್ಗೆರೆ ಗ್ರಾಮದಲ್ಲಿ ಟಿಎಸ್‌ಪಿ ಯೋಜನೆಯಡಿ 30 ಲಕ್ಷ ರೂ. ವೆಚ್ಚದಲ್ಲಿ ಕೈಗೊಂಡಿರುವ ಗ್ರಾಮ ಪರಿಮಿತಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದರು.

ಸರ್ಕಾರದಿಂದ ಅನುದಾನ ತಂದು ಕೆಲಸ ಮಾಡಿಸುವುದು ನನ್ನ ಜವಾಬ್ದಾರಿ. ಅದನ್ನು ಸದುಪಯೋಗ ಪಡೆದುಕೊಳ್ಳುವುದು ಜನರ ಕರ್ತವ್ಯವಾಗಿದೆ. ಗ್ರಾಮಗಳಲ್ಲಿ ನಡೆಯುವ ಕಾಮಗಾರಿಗಳನ್ನು ಸಾರ್ವಜನಿಕರು ಪರಿಶೀಲಿಸಿ ಗುಣಮಟ್ಟದ ಕಾಮಗಾರಿ ಮಾಡಿಸಿಕೊಳ್ಳಬೇಕು. ಜನಪರ ಕೆಲಸ ಮಾಡುವ ತಮಗೆ ಎಲ್ಲರೂ ಸಹಕಾರ ನೀಡಬೇಕು ಎಂದರು.

ಎಚ್‌.ಡಿ.ಕುಮಾರಸ್ವಾಮಿ ಅವಧಿಯಲ್ಲಿ ನೀಡಿದ್ದ ಅನುದಾನವನ್ನು ಹಿಂದಕ್ಕೆ ಪಡೆಯುವುದರ ಜೊತೆಗೆ 4.65 ಲಕ್ಷ ವಿವಿಧ ಯೋಜನೆಯ ಮನೆಗಳ ಸಹಾಯ ಧನವನ್ನು ಇದುವರೆಗೂ ನೀಡಿಲ್ಲ. ಹೀಗಾದರೆ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗುತ್ತವೆ ಎಂದರು.

ಸಂಚಾರ ನಿಯಮ ಪಾಲನೆಯ ಹೆಸರಿನಲ್ಲಿ ವಾಹನ ಸವಾರರಿಗೆ ಪೊಲೀಸರು ಅನಗತ್ಯ ಕಿರುಕುಳ ನೀಡಿದರೆ ಸಾರ್ವಜನಿಕರನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿಯ ಮುಂದೆ ಧರಣಿ ಕೂರಿಸುವುದಾಗಿ ಎಚ್ಚರಿಕೆ ನೀಡಿದರು.

Advertisement

ಸಾರ್ವಜನಿಕರ ಅಹವಾಲು ಆಲಿಸುತ್ತಿದ್ದಾಗ ಕೆ.ಆರ್‌.ನಗರ ಪೊಲೀಸ್‌ ಠಾಣೆಯ ಕೆಲವು ಪೊಲೀಸರ ವಿರುದ್ಧ ಗ್ರಾಮಸ್ಥರು ದೂರಿದಾಗ ಅಸಮಾಧಾನಗೊಂಡ ಶಾಸಕ ಸಾ.ರಾ.ಮಹೇಶ್‌,ಪೊಲೀಸ್‌ ವೃತ್ತ ನಿರೀಕ್ಷಕ ಪಿ.ಕೆ.ರಾಜು ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ “ನಿಮ್ಮ ಸಿಬ್ಬಂದಿಗೆ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ತಿಳಿ ಹೇಳಬೇಕು’ ಎಂದು ಸೂಚಿಸಿದರು.

ಈ ವೇಳೆ ತಾಪಂ ಸದಸ್ಯ ಶ್ರೀನಿವಾಸಪ್ರಸಾದ್‌, ಮುಖಂಡರಾದ ಕೆ.ಜೆ.ಕುಚೇಲ, ಮಹೇಶ್‌, ರಾಜನಾಯಕ, ರಮೇಶ್‌, ಕೃಷ್ಣನಾಯಕ, ಗಣೇಶ್‌, ತಹಶೀಲ್ದಾರ್‌ ಎಂ.ಮಂಜುಳಾ, ತಾಪಂ ಇಒ ಎಂ.ಎಸ್‌.ರಮೇಶ್‌, ಲೋಕೋಪಯೋಗಿ ಇಲಾಖೆಯ ಅಭಿಯಂತರ ಸಿದ್ದೇಶ್ವರಪ್ರಸಾದ್‌, ಅರುಣ್‌ಕುಮಾರ್‌ ಇತರರಿದ್ದರು.

ವಾಹನ ಸವಾರರನ್ನು ಬೆದರಿಸಿದರೆ ಸಹಿಸಲ್ಲ: ಸಂಚಾರ ನಿಯಮ ಪಾಲಿಸದವರಿಗೆ ಇಲಾಖೆಯ ನಿಯಮದಂತೆ ದಂಡ ವಿಧಿಸುವುದು ಸಹಜ. ಅದರ ಹೆಸರಿನಲ್ಲಿ ದ್ವಿಚಕ್ರ ವಾಹನ ಸವಾರರನ್ನು ಬೆದರಿಸುವುದು ಮತ್ತು ಅನಗತ್ಯವಾಗಿ ದಂಡ ವಸೂಲಿ ಮಾಡುವುದನ್ನು ನಾನು ಸಹಿಸುವುದಿಲ್ಲ. ಈ ಸಂಬಂಧ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳೊಂದಿಗೆ ಮಾತನಾಡುತ್ತೇನೆ.

ಇದೇ ಪರಿಸ್ಥಿತಿ ಮುಂದುವರಿದರೆ ಎಸ್ಪಿ ಕಚೇರಿ ಎದುರು ಸಾರ್ವಜನಿಕರೊಂದಿಗೆ ಧರಣಿ ನಡೆಸಲಾಗುವುದು ಎಂದು ಶಾಸಕ ಸಾ.ರಾ.ಮಹೇಶ್‌ ಎಚ್ಚರಿಕೆ ನೀಡಿದರು. ವಾಹನ ಸವಾರರು ಕೂಡ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಅದು ಬಿಟ್ಟು ಸುಳ್ಳು ದೂರು ಹೇಳುವುದನ್ನು ಬಿಡಬೇಕು. ದಂಡ ಕೊಡುವವರು ರಸೀದಿ ಇಲ್ಲದೆ ಹಣ ನೀಡಿ ಅಧಿಕಾರಿಗಳನ್ನು ಲಂಚಕೋರರನ್ನಾಗಿ ಮಾಡಬಾರದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next