Advertisement

ಜನಪ್ರಿಯ “ಶಕ್ತಿಮಾನ್” ಸೂಪರ್ ಹೀರೋ ನಿಜ ಜೀವನದಲ್ಲಿ ಅವಿವಾಹಿತ, ಈಗ ಎಲ್ಲಿದ್ದಾರೆ…

09:04 AM Sep 22, 2019 | Nagendra Trasi |

ಸಿನಿಮಾರಂಗ ಪ್ರವರ್ಧಮಾನದಲ್ಲಿದ್ದ ಕಾಲವದು..ಅಲ್ಲೊಂದು, ಇಲ್ಲೊಂದು ಮನೆಗಳಲ್ಲಿ ಎಂಬಂತೆ ಟಿವಿ ರಾರಾಜಿಸುತ್ತಿದ್ದವು. ಅಂದು 1988ರ ಸುಮಾರಿಗೆ ಬಿಆರ್ ಛೋಪ್ರಾ ನಿರ್ಮಾಣದಲ್ಲಿ ಮಹಾಭಾರತ ಎಂಬ ಹಿಂದಿ ಟೆಲಿವಿಷನ್ ಧಾರವಾಹಿ ಆರಂಭವಾಗಿತ್ತು. ಅದು ಪ್ರಸಾರವಾಗುತ್ತಿದ್ದದ್ದು ಡಿಡಿ ನ್ಯಾಷನಲ್ ಚಾನೆಲ್ ನಲ್ಲಿ. ಆಗ ಮನರಂಜನೆಗಾಗಿ ಇದ್ದದ್ದು ಅದೊಂದೇ. ಬಿಆರ್ ಛೋಪ್ರಾ ಪುತ್ರ ರವಿ ಛೋಪ್ರಾ ಮಹಾಭಾರತವನ್ನು ನಿರ್ದೇಶಿಸಿದ್ದರು. ಬಹುತೇಕರಿಗೆ ನೆನಪಿರಬಹುದು ಅದರಲ್ಲಿನ ಭೀಷ್ಮ ಪಿತಾಮಹಾನ ಪಾತ್ರದ ಬಗ್ಗೆ. ನಾನು ಹೇಳಲು ಹೊರಟಿರುವುದು ಭೀಷ್ಮ ಪಾತ್ರಧಾರಿ ಮುಖೇಶ್ ಖನ್ನಾ ಬಗ್ಗೆ…

Advertisement

1988ರಿಂದ 1990ರವರೆಗೆ ಮಹಾಭಾರತ ಜನಮಾನಸದಲ್ಲಿ ಜನಪ್ರಿಯ ಧಾರವಾಹಿಯಾಗಿ ಮೂಡಿಬಂದಿತ್ತು. ಮಹಾಭಾರತ ಧಾರವಾಹಿ ಭಾರತೀಯ ಟೆಲಿವಿಷನ್ ಇತಿಹಾಸದಲ್ಲಿಯೇ ಅತೀ ದೊಡ್ಡ ಶೋ ಆಗಿ ಮೂಡಿಬಂದಿತ್ತು. ಮಹಾಭಾರತ ಧಾರವಾಹಿ ಡಿಡಿಯಲ್ಲಿ ಆರಂಭವಾಯಿತು ಅಂದರೆ ರಸ್ತೆಗಳಲ್ಲಿ ಜನರ ತಿರುಗಾಟವೇ ವಿರಳವಾಗುತ್ತಿತ್ತು! ಅದಕ್ಕೆ ಕಾರಣವಾಗಿದ್ದು ಮಹಾಭಾರತದ ಶ್ರೀಕೃಷ್ಣ ಮತ್ತು ಭೀಷ್ಮ ಪಿತಾಮಹನ ನಟನೆ.. ಆ ಬಳಿಕ ಅತ್ಯಂತ ಹೆಸರು ಗಳಿಸಿದ್ದ ಧಾರವಾಹಿ “ಶಕ್ತಿಮಾನ್”! ಹೌದು ಮಹಾಭಾರತದಲ್ಲಿ ಭೀಷ್ಮನ ಪಾತ್ರ ನಿರ್ವಹಿಸಿದ್ದ ಮುಖೇಶ್ ಖನ್ನಾ ಅವರು ಸೂಪರ್ ಹೀರೋ ಆಗಿ ಮೆರೆದಿದ್ದು ಇತಿಹಾಸವಾಗಿಬಿಟ್ಟಿದೆ.

ಅಂದು ಭರ್ಜರಿ ಹವಾ ಎಬ್ಬಿಸಿದ್ದು ಶಕ್ತಿಮಾನ್:

1997ರಲ್ಲಿ ಡಿಡಿ-1 ಚಾನೆಲ್ ನಲ್ಲಿ ಸ್ವತಃ ಮುಖೇಶ್ ಖನ್ನಾ ನಿರ್ಮಾಣ ಮಾಡಿದ್ದ ಶಕ್ತಿಮಾನ್ ಎಂಬ ಹಿಂದಿ ಟೆಲಿವಿಷನ್ ಶೋ ಎಲ್ಲಾ ಭಾಷೆಯನ್ನು ಮೀರಿ ಜನರನ್ನು ರಂಜಿಸಿತ್ತು. ಅದರಲ್ಲಿ ಖನ್ನಾ ಶಕ್ತಿಮಾನ್ ಆಗಿ ನಟಿಸಿದ್ದರು. ಅತಿಮಾನುಷ ಶಕ್ತಿಯ ಶಕ್ತಿಮಾನ್ ಹಾಗೂ ಆಜ್ ಕಿ ಅವಾಜ್ ಪತ್ರಿಕೆಯ ಫೋಟೋಗ್ರಾಫರ್ ನಟನೆಯ ಪಂಡಿತ್ ಗಂಗಾಧರ್ ವಿಧ್ಯಾಧರ್ ಮಾಯಾಧರ್ ಓಂಕಾರಾನಾಥ್ ಶಾಸ್ತ್ರಿಯನ್ನು ಮರೆಯಲು ಸಾಧ್ಯವೇ?

Advertisement

ಸುಮಾರು ಆರು ಸಾವಿರ ವರ್ಷಗಳ ಹಿಂದಿನ ಕಥೆ…ಎಲ್ಲಾ ದುಷ್ಟ ಶಕ್ತಿಗಳನ್ನು ಸದೆಬಡಿಯಬಲ್ಲ ಶಕ್ತಿಮಾನ್ ತನ್ನೊಳಗಿನ ಏಳು ಚಕ್ರಗಳ ಕುಂಡಿಲಿನಿ ಶಕ್ತಿಯನ್ನು ಯೋಗದ ನೆರವಿನೊಂದಿಗೆ ಸಾಕ್ಷ್ಯಾತ್ಕರಿಸಿಕೊಂಡು, ಅತಿಮಾನುಷ ಶಕ್ತಿಯೊಂದಿಗೆ ಹೋರಾಡುವ ಸೂಪರ್ ಹೀರೋ ಧಾರಾವಾಹಿ ಅದು!

ಮಹಾಭಾರತದ ಭೀಷ್ಮನಂತೆ ನಿಜಜೀವನದಲ್ಲೂ ಮುಖೇಶ್ ಅವಿವಾಹಿತ!

1958ರ ಜುಲೈ 23ರಂದು ವಾಣಿಜ್ಯ ನಗರಿ ಮುಂಬೈಯಲ್ಲಿ ಮುಖೇಶ್ ಖನ್ನಾ ಜನಿಸಿದ್ದರು. ವಿಜ್ಞಾನ ಪದವೀಧರ, ಕಾನೂನು ಪದವಿ ಪಡೆದಿದ್ದ ಖನ್ನಾ ಅವರು ಪ್ರತಿಷ್ಠಿತ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ನಟನೆಯ ತರಬೇತಿ ಪಡೆದಿದ್ದರು. ಬಾಲಿವುಡ್ ನ ಖ್ಯಾತ ನಟರಾದ ನಾಸಿರುದ್ದೀನ್ ಶಾ, ಶಕ್ತಿ ಕಪೂರ್ ಜತೆ ಬಾಲ್ಯದ ಶಾಲಾ ಸಹಪಾಠಿಗಳಾಗಿದ್ದರು. 1981ರಲ್ಲಿ ಮೊತ್ತ ಮೊದಲ ಬಾರಿ ರೂಹಿ ಎಂಬ ಸಿನಿಮಾದ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು. ಹೀಗೆ ನಟಿಸಿದ್ದ ಐದು ಸಿನಿಮಾಗಳೂ ತೋಫಾಗಿದ್ದವು!

ಬಳಿಕ  ಬಿಆರ್ ಛೋಪ್ರಾ ನಿರ್ಮಾಣದ ಮಹಾಭಾರತ್ ಧಾರವಾಹಿ ತಂಡವನ್ನು ನಟನೆಯ ಅವಕಾಶಕ್ಕಾಗಿ ಭೇಟಿಯಾಗಿದ್ದರು. ತನಗೆ ಮಹಾಭಾರತದಲ್ಲಿ ದುರ್ಯೋಧನನ ಪಾತ್ರ ನೀಡಿ ಎಂದು ಬೇಡಿಕೆ ಇಟ್ಟಿದ್ದರು. ಆದರೆ ಮಹಾಭಾರತದ ತಂಡ ದುರ್ಯೋಧನನ ಪಾತ್ರ ನೀಡಲು ನಿರಾಕರಿಸಿತ್ತು. ಹಾಗೂ ಹೀಗೂ ಅರ್ಜುನನ ಗುರುಗಳಾದ ದ್ರೋಣಾಚಾರ್ಯ ಪಾತ್ರ ನಿರ್ವಹಿಸುವಂತೆ ಹೇಳಿದ್ದರು. ಅದಕ್ಕೆ ಖನ್ನಾ ಒಪ್ಪಿಗೆ ಸೂಚಿಸಿದ್ದರು. ಆದರೆ ಹಣೆಬರಹ ಬೇರೆಯದೇ ಆಗಿತ್ತು. ಧಾರವಾಹಿ ಚಿತ್ರೀಕರಣ ಆರಂಭವಾದಾಗ ಖನ್ನಾಗೆ ಸಿಕ್ಕಿದ್ದು ಭೀಷ್ಮ ಪಿತಾಮಹ ಪಾತ್ರವಂತೆ! ತನಗೆ ಭೀಷ್ಮ ಪಿತಾಮಹಾನ ಪಾತ್ರ ಒಬ್ಬ ನಟನಾಗಿ ಅತ್ಯಂತ ಖುಷಿ ಕೊಟ್ಟಿತ್ತು ಎಂದು ಖನ್ನಾ ಮನಬಿಚ್ಚಿ ಹೇಳಿಕೊಂಡಿದ್ದರು.

ಮಹಾಭಾರತದಲ್ಲಿ ಸತ್ಯವೃತ ಅಂದರೆ ಭೀಷ್ಮ ಪಿತಾಮಹಾ ತನ್ನ ಸಾಕು ತಾಯಿ ಸತ್ಯವತಿಗೆ ಮಾತುಕೊಟ್ಟಂತೆ ತನ್ನ ನಿಜಜೀವನದಲ್ಲಿಯೂ ಮುಖೇಶ್ ಖನ್ನಾ ಅವಿವಾಹಿತರಾಗಿಯೇ ಉಳಿದುಬಿಟ್ಟಿದ್ದರು. ಅಷ್ಟೇ ಅಲ್ಲ ಯಾವುದೇ ಲೈವ್ ಅಫೇರ್ ಗಳನ್ನು ಇಟ್ಟುಕೊಂಡಿಲ್ಲ.

ವಾಲ್ ಸ್ಟ್ರೀಟ್ ಜರ್ನಲ್ ನಲ್ಲಿ ಮುಖೇಶ್ ಖನ್ನಾ ಶಕ್ತಿಮಾನ್ ಧಾರವಾಹಿ ಕುರಿತು ಮುಖಪುಟದಲ್ಲಿ ಪ್ರಕಟವಾಗಿತ್ತು. ಭಾರತದ ಮೊದಲ ಸೂಪರ್ ಹೀರೋ ಶಕ್ತಿಮಾನ್ ದೇಶಾದ್ಯಂತ ಮನೆಮಾತಾಗಿತ್ತು. ಅದು ಎಷ್ಟು ಜನಪ್ರಿಯವಾಗಿತ್ತೆಂದರೆ ಶಕ್ತಿಮಾನ್ ನಟ ಮುಖೇಶ್ ಖನ್ನಾ ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಮಕ್ಕಳೆಲ್ಲಾ ಗುಂಪು, ಗುಂಪಾಗಿ ಸುತ್ತುವರಿಯುತ್ತಿದ್ದರು. ಮತ್ತು ಧಾರವಾಹಿಯಲ್ಲಿ ಹಾರಾಟ ನಡೆಸಿದಂತೆ ಹಾರಾಡಲು ಬೇಡಿಕೆ ಇಡುತ್ತಿದ್ದರಂತೆ!

ಮುಖೇಶ್ ಖನ್ನಾಗೆ ನಿಜಜೀವನದಲ್ಲಿ ಸಿಗರೇಟ್ ಸೇವನೆ ಹಾಗೂ ಮದ್ಯಪಾನದಂತಹ ದುಶ್ಚಟಕ್ಕೆ ಗಂಟು ಬಿದ್ದಿಲ್ಲ. ಯಾಕೆಂದರೆ ಸೂಪರ್ ಹೀರೋ ಆಗಿ ದೊಡ್ಡವರು ಎನಿಸಿಕೊಂಡ ನಾವೇ ಆ ರೀತಿ ಮಾಡಿದರೆ ಅದನ್ನು ಮಕ್ಕಳೂ ಅನುಸರಿಸುತ್ತಾರೆ ಎಂಬುದು ಮುಖೇಶ್ ಹಿತನುಡಿ!

ಆರ್ಥಿಕ ಮುಗ್ಗಟ್ಟಿನಿಂದ ನಿಂತು ಹೋದ ಧಾರವಾಹಿ:

1997ರಿಂದ 2005ರ ಮಾರ್ಚ್ ವರೆಗೆ ಸತತವಾಗಿ ಪ್ರದರ್ಶನ ಕಂಡ ಶಕ್ತಿಮಾನ್ ಧಾರವಾಹಿ ನಿಂತು ಹೋಗಿತ್ತು. ಅದಕ್ಕೆ ಕಾರಣ ಅತೀಯಾದ ಬ್ರಾಡ್ ಕಾಸ್ಟಿಂಗ್ ಮೊತ್ತ. ಕೊನೆ, ಕೊನೆಗೆ ನಷ್ಟ ಅನುಭವಿಸಿದ್ದರಿಂದ ಶಕ್ತಿಮಾನ್ ಎಂಬ ಜನಪ್ರಿಯ ಧಾರವಾಹಿ ಅಂತ್ಯಗೊಂಡಿತ್ತು. ಆದರೆ ಶಕ್ತಿಮಾನ್ ಮಾದರಿಯಲ್ಲಿಯೇ ಮಕ್ಕಳು ಸಾಹಸಗಳನ್ನು ಅನುಸರಿಸುತ್ತಿದ್ದಾರೆಂಬ ಎಂಬ ಆರೋಪದ ಹಿನ್ನೆಲೆಯಲ್ಲಿ ಧಾರಾವಾಹಿ ನಿಲ್ಲಿಸಿಲ್ಲ ಎಂದು ಖನ್ನಾ ಈ ಹಿಂದೆ ಸ್ಪಷ್ಟನೆಯನ್ನೂ ಕೊಟ್ಟಿದ್ದರು.

ಬಳಿಕ ಶಕ್ತಿಮಾನ್ ಆ್ಯನಿಮೇಟೆಡ್ ಧಾರವಾಹಿ ಸರಣಿಯನ್ನು ರಿಲಯನ್ಸ್ ನಿರ್ಮಾಣ ಮಾಡಿತ್ತು. ಅದು ವಯಾಕಾಮ್ 18 ಎಂಬ ಹೊಸ ಚಾನೆಲ್ ನಲ್ಲಿ ಪ್ರಸಾರವಾಗಿತ್ತು. 2013ರಲ್ಲಿ ಹಮಾರಾ ಹೀರೋ ಶಕ್ತಿಮಾನ್ ಎಂಬ ಸಿನಿಮಾ ಸೀರೀಸ್ ಪೋಗೋ ಟಿವಿಯಲ್ಲಿ ಪ್ರಸಾರವಾಗಿತ್ತು. 2019ರ ಮಾರ್ಚ್ ನಲ್ಲಿ ಯ್ಯೂಟ್ಯೂಬ್ ಚಾನೆಲ್ ನಲ್ಲಿ ಸಾರಿ ಶಕ್ತಿಮಾನ್ ಹೆಸರಿನಲ್ಲಿ ಮತ್ತೆ ಆರಂಭಗೊಂಡಿತ್ತು. ಇದು ಶಕ್ತಿಮಾನ್ ಎಂಬ ಧಾರವಾಹಿಯ ಅದ್ಭುತ ಶಕ್ತಿ ಎಂಬುದರಲ್ಲಿ ಎರಡು ಮಾತಿಲ್ಲ!

ಖನ್ನಾ ಈಗ ಎಲ್ಲಿದ್ದಾರೆ?

ಶಕ್ತಿಮಾನ್ ಖ್ಯಾತಿಯ ಮುಖೇಶ್ ಖನ್ನಾ ಚಿಲ್ಡ್ರನ್ಸ್ ಫಿಲ್ಮ್ ಸೊಸೈಟಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಮಕ್ಕಳ ಚಿತ್ರ ನಿರ್ಮಾಣಕ್ಕೆ ಸೂಕ್ತವಾದ ನೆರವು ಸಿಗದ ಕಾರಣ 2018ರ ಫೆಬ್ರುವರಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಮುಖೇಶ್ ಖನ್ನಾ ಅವರು ಜೈಪುರ್, ಆಗ್ರಾ ಹಾಗೂ ಬಿಹಾರದಲ್ಲಿ ನಟನಾ ತರಬೇತಿಯ ಶಾಲೆಗಳನ್ನು ನಡೆಸುತ್ತಿದ್ದಾರೆ.

*ನಾಗೇಂದ್ರ ತ್ರಾಸಿ

Advertisement

Udayavani is now on Telegram. Click here to join our channel and stay updated with the latest news.

Next