Advertisement

Prajwal ಎಲ್ಲಿದ್ದೀಯಪ್ಪಾ? ಬಂದುಬಿಡು: ಎಚ್‌ಡಿಕೆ

01:12 AM May 21, 2024 | Team Udayavani |

ಬೆಂಗಳೂರು: ಅಶ್ಲೀಲ ವೀಡಿಯೋ ಪ್ರಕರಣದಲ್ಲಿ ಸಿಲುಕಿ ವಿದೇಶದಲ್ಲಿರುವ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರಿಗೆ ರಾಜ್ಯಕ್ಕೆ ಮರಳುವಂತೆ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಕೈಮುಗಿದು ಮನವಿ ಮಾಡಿಕೊಂಡಿದ್ದಾರೆ.

Advertisement

“ನೀನು ಎಲ್ಲೇ ಇದ್ದರೂ ವಾಪಸ್‌ ಬಾ, ತನಿಖಾ ತಂಡಕ್ಕೆ ಸಹಕಾರ ಕೊಡು, ಈ ಸರಕಾರಕ್ಕೆ ಪ್ರಜ್ವಲ್‌ ಕರೆಯಿಸುವ ಶಕ್ತಿ ಇದ್ದಂತಿಲ್ಲ. ಅದಕ್ಕೆ ನಾನೇ ಮಾಧ್ಯಮಗಳ ಮೂಲಕ ಕರೆ ಕೊಡುತ್ತಿದ್ದೇನೆ’ ಎಂದು ಕುಮಾರಸ್ವಾಮಿ ಭಾವುಕರಾಗಿ ಹೇಳಿದ್ದಾರೆ.

ದೇವೇಗೌಡರು ತಮ್ಮ ರಾಜಕೀಯ ಬದುಕನ್ನು ನಿನ್ನನ್ನು ಬೆಳೆಸಲು ಧಾರೆ ಎರೆದಿದ್ದಾರೆ.ಅವರ ಮೇಲೆ, ಪಕ್ಷದ ಕಾರ್ಯಕರ್ತರ ಮೇಲೆ, ನಮ್ಮ ಮೇಲೆ ಗೌರವ ಇದ್ದರೆ ಎಲ್ಲೇ ಇದ್ದರೂ ಬಂದುಬಿಡು’ ಎಂದಿರುವ ಕುಮಾರಸ್ವಾಮಿ, “ತಪ್ಪು ಮಾಡಿದ್ದರೆ ಪ್ರಜ್ವಲ್‌ನನ್ನು ಬಂಧಿಸಿ ಗಲ್ಲಿಗೇರಿಸಿ’ ಎಂದೂ ಹೇಳಿದ್ದಾರೆ. ಸೋಮವಾರ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಸರಕಾರ, ಎಸ್‌ಐಟಿ ತನಿಖೆ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ವಿರುದ್ಧ ಎಂದಿನಂತೆ ವಾಗ್ಧಾಳಿ ಮುಂದು ವರಿಸಿದರಲ್ಲದೆ ಇದು ತಮ್ಮ ಕುಟುಂಬದ ವಿರುದ್ಧ ನಡೆದಿರುವ ದ್ವೇಷದ ರಾಜಕಾರಣ ಎಂಬುದನ್ನು ಪುನರುಚ್ಚರಿಸಿದರು.

ಬೀದಿಬೀದಿಯಲ್ಲಿ ಪ್ರಜ್ವಲ್‌ ಹೆಸರು ಚರ್ಚೆ ಆಗುತ್ತಿದೆ. ನಮ್ಮ ಕುಟುಂಬಕ್ಕೆ ಬಂದಿರುವ ಕಳಂಕ ಅಳಿಸಬೇಕಿದೆ. ನನಗೆ ಈ ವಿಷಯ ಗೊತ್ತಿದ್ದರೆ ವಿದೇಶಕ್ಕೆ ಹೋಗಲು ಬಿಡುತ್ತಿರಲಿಲ್ಲ. ಇಂತಹ ಪ್ರಕರಣ ಬಂದಾಗ ವಕೀಲರ ಸಲಹೆ ಮೇರೆಗೆ ತೀರ್ಮಾನಗಳನ್ನು ತೆಗೆದುಕೊಂಡಿರುತ್ತಾರೆ. ಪ್ರಜ್ವಲ್‌ಗೆ ನೋಟಿಸ್‌ ಕೊಟ್ಟಿದ್ದ ಎಸ್‌ಐಟಿ ಅಧಿಕಾರಿಗಳಿಗೆ ಆತ ಒಂದು ವಾರ ಕಾಲಾವಕಾಶ ಕೇಳಿದ್ದ. ಕೊಟ್ಟಿದ್ದರೆ ಬಹುಶಃ ಆತ ಬರುತ್ತಿದ್ದನೇನೋ? ಅನಂತರ ಅತ್ಯಾಚಾರ ಪ್ರಕರಣ ದಾಖಲಿಸಿದರು. ಯಾರು ತಪ್ಪು ಮಾಡಿದರೂ ಶಿಕ್ಷೆ ಅನುಭವಿಸಬೇಕು. ಪ್ರಜ್ವಲ್‌ ತಪ್ಪು ಮಾಡಿದ್ದರೆ ಈ ನೆಲದ ಕಾನೂನಿನಂತ ಶಿಕ್ಷೆ ಆಗಲಿ. ಆದರೆ ತನಿಖೆ ಪಾರದರ್ಶಕವಾಗಿ ನಡೆಯಲಿ ಎಂದು ಆಗ್ರಹಿಸಿದರು.

ಡಿಸಿಎಂಶಿವರನ್ನು “ಸಿ.ಡಿ. ಶಿವು’ ಎಂದ ಎಚ್‌ಡಿಕೆ
ಪತ್ರಿಕಾಗೋಷ್ಠಿಯುದ್ದಕ್ಕೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರನ್ನು, “ನಮ್ಮ ಸಿ.ಡಿ. ಶಿವು’ ಎಂದೇ ಸಂಬೋಧಿಸಿದ ಎಚ್‌ಡಿಕೆ, ಪೆನ್‌ಡ್ರೈವ್‌ ಹೊರಗೆ ಬರುವುದನ್ನು ತಡೆಯುವ ಮೂಲಕ ಸಂತ್ರಸ್ತೆಯರ ಮರ್ಯಾದೆ ಉಳಿಸಬಹುದಿತ್ತು. ಇದರ ಹಿಂದೆ ಇರುವವರನ್ನು ಒದ್ದು ಒಳಗೆ ಹಾಕಬೇಕಿತ್ತು. ಜವಾಬ್ದಾರಿಯುತ ಸ್ಥಾನದಲ್ಲಿರುವ ಅವರ ವಿರುದ್ಧ ದೇವರಾಜೇಗೌಡ-ಶಿವರಾಮೇಗೌಡ ನಡುವಿನ ಆಡಿಯೋ ಹೊರಬರುತ್ತಿದ್ದಂತೆ ಕಾಂಗ್ರೆಸಿಗರಿಗೆ ಉಸಿರೇ ಇಲ್ಲದಂತಾಗಿದೆ. ಕ್ಯಾಸೆಟ್‌ ಹಂಚಿದ ಸೂತ್ರಧಾರ ನೀವಲ್ಲವೇ? ಸಿ.ಡಿ., ಪೆನ್‌ಡ್ರೈವ್‌ ಸೃಷ್ಟಿಸುವುದರಲ್ಲಿ ನೀವೆಷ್ಟು ನಿಪುಣರು ಎಂಬುದು ಎಲ್ಲರಿಗೂ ಗೊತ್ತಿದೆ. ಸಂಪುಟದಿಂದ ವಜಾ ಮಾಡಲು ನಾನು ಅಂದೇ ಹೇಳಿದ್ದೆ. ರಾಜೀನಾಮ ಕೊಡೋಣವಂತೆ ಎಂದು ದುರಹಂಕಾರದ ಮಾತಾಡಿದ್ದಿರಿ ಎಂದು ತಿವಿದರು.

Advertisement

ಜೈಲಿನಲ್ಲಿದ್ದಾಗ ನಿಮ್ಮ ತಾಯಿಗೆ ಸಾಂತ್ವನ ಹೇಳಿದ್ದೆ
“ಅಮಾಯಕ ಹೆಣ್ಣುಮಕ್ಕಳ ಕ್ಯಾಸೆಟ್‌ ಬಿಟ್ಟ ಶಿವಕುಮಾರ್‌ ಅವರೇ ನಿಮಗೆ ಮನೆಯಲ್ಲಿ ನೆಮ್ಮದಿಯಾಗಿ ನಿದ್ರೆ ಬರು ತ್ತದೆಯೇ? ಈ ರೀತಿಯ ರಾಜಕಾರಣ ಮಾಡಬೇಕಿತ್ತಾ’ ಎಂದು ಪ್ರಶ್ನಿಸಿದ ಕುಮಾರಸ್ವಾಮಿ, “ನೀವು ತಿಹಾರ್‌ ಜೈಲಿನಲ್ಲಿದ್ದಾಗ ಕನಕಪುರಕ್ಕೆ ಹೋಗಿ ನಿಮ್ಮ ತಾಯಿಗೆ ಸಾಂತ್ವನ ಹೇಳಿದ್ದೆ. ನಾನು ಭೇಟಿ ಮಾಡಿದ ಎರಡು ದಿನಗಳ ಬಳಿಕ ನಿಮ್ಮ ಬಿಡುಗಡೆ ಆಯಿತು. ದೇವೇಗೌಡರ ಹುಟ್ಟುಹಬ್ಬಕ್ಕೆ ಎಷ್ಟು ವ್ಯಂಗ್ಯವಾಗಿ ಹರಸಿದಿರಿ ಗೊತ್ತಿದೆ. ಸಿಎಂ ಸಿದ್ದರಾಮಯ್ಯ ಅವರೇ, ನಮ್ಮ ಪಕ್ಷದಲ್ಲಿದ್ದಾಗ ನನ್ನ ತಾಯಿಯ ಕೈತುತ್ತು ತಿಂದು ಬೆಳೆದಿದ್ದೀರಿ. ಆ ತಾಯಿಯ ನೋವೇನೆಂದು ನನಗೆ ಗೊತ್ತಿದೆ. ಸಿಎಂ ಆಗಿ ಪ್ರಾಮಾಣಿಕವಾಗಿರಿ. ನಾನು ಸಿಎಂ ಆಗಿದ್ದಾಗ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಯಾವುದನ್ನೂ ದುರ್ಬಳಕೆ ಮಾಡಿಕೊಂಡಿರಲಿಲ್ಲ’ ಎಂದರು.

ರಾಜ್ಯಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದ ಎಚ್‌ಡಿಡಿ
ಇದೊಂದು ದಾರುಣ ಘಟನೆ. ಸತ್ಯ ಹೊರಬರಲೇಬೇಕು. ಯಾರು ತಪ್ಪು ಮಾಡಿದರೂ ಶಿಕ್ಷೆ ಆಗಲೇಬೇಕು. ನಮ್ಮ ತಂದೆ ನೋವು ಅನುಭವಿಸುತ್ತಿದ್ದಾರೆ. ಅವರ ಜೀವಕ್ಕೆ ಆಪಾಯ ಆಗಬಾರದೆಂದು ಆತ್ಮಸ್ಥೈರ್ಯ ತುಂಬಲು ನಿತ್ಯವೂ ಅವರ ಮನೆಗೆ ಭೇಟಿ ಕೊಡುತ್ತಿದ್ದೇನೆ. ರೇವಣ್ಣ ಬಂದ ಬಳಿಕ ಅದೇ ಮನೆಯಲ್ಲಿ ಪ್ರಜ್ವಲ್‌ ಬಗ್ಗೆ ವಿಚಾರಿಸಿದೆ. ರೇವಣ್ಣ ಅವರಿಗೂ ಮಾಹಿತಿ ಇಲ್ಲ. ನಮ್ಮ ಕುಟುಂಬದ ವಿರುದ್ಧ ಇಷ್ಟೆಲ್ಲ ನಡೆದ ಮೇಲೆ ಯಾವ ಮುಖ ಇಟ್ಟುಕೊಂಡು ರಾಜ್ಯಸಭೆಗೆ ಹೋಗಲಿ, ನಾನು ರಾಜ್ಯಸಭೆ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ನಮ್ಮ ತಂದೆ ಹೇಳಿದರು. ನೀವು ರಾಜೀನಾಮೆ ನೀಡಿದರೆ ರಾಜ್ಯಕ್ಕೆ ನಷ್ಟವಿದೆ. ಹೊಸ ಕೇಂದ್ರ ಸರಕಾರದಿಂದ ನಾಡಿನ ನೀರಾವರಿ ಯೋಜನೆಗಳನ್ನು ತರಬೇಕಿದೆ. ಸಾಕಷ್ಟು ಕೆಲಸವಿದೆ ಎಂದು ಮನವೊಲಿಸಿದೆ. ಇಲ್ಲದಿದ್ದರೆ ದೇವೇಗೌಡರು ರಾಜೀನಾಮೆ ಕೊಟ್ಟಿರುತ್ತಿದ್ದರು ಎಂದು ಕುಮಾರಸ್ವಾಮಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next