Advertisement

ಪ್ರತ್ಯೇಕ ಹಿಂದೂ ದೇಶ ಸುಳ್ಳು! ನಿತ್ಯಾನಂದ ಇರುವುದೆಲ್ಲಿ, ನಮ್ಮ ದೇಶದಲ್ಲಿ ಇಲ್ಲ-ಈಕ್ವೆಡಾರ್

09:59 AM Dec 07, 2019 | Nagendra Trasi |

ನವದೆಹಲಿ/ಈಕ್ವೆಡಾರ್: ಭಾರತದಿಂದ ಪರಾರಿಯಾಗಿದ್ದ ವಿವಾದಿತ ನಿತ್ಯಾನಂದ ಈಕ್ವೆಡಾರ್ ನಲ್ಲಿ ದ್ವೀಪವೊಂದನ್ನು ಖರೀದಿಸಿ ತಾನೊಂದು ಹೊಸ ದೇಶ ಸ್ಥಾಪಿಸಿಕೊಂಡಿರುವುದಾಗಿ ಘೋಷಿಸಿಕೊಂಡಿದ್ದ ಬೆನ್ನಲ್ಲೇ ನಿತ್ಯಾನಂದ ನಮ್ಮ ದೇಶದಲ್ಲಿ ಠಿಕಾಣಿ ಹೂಡಿಲ್ಲ ಎಂದು ಸ್ವತಃ ಈಕ್ವೆಡಾರ್ ಸರ್ಕಾರ ಶುಕ್ರವಾರ ಪ್ರತಿಕ್ರಿಯೆ ನೀಡಿದೆ.

Advertisement

ಈಕ್ವೆಡಾರ್ ರಾಯಭಾರಿ ಕಚೇರಿ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ, ನಿತ್ಯಾನಂದನಿಗೆ ನಮ್ಮ ದೇಶದಲ್ಲಿ ಯಾವುದೇ ದ್ವೀಪ ಖರೀದಿಸಲು ನೆರವು ನೀಡಿಲ್ಲ. ದಕ್ಷಿಣ ಅಮೆರಿಕವಾಗಲಿ ಅಥವಾ ಈಕ್ವೆಡಾರ್ ಸಮೀಪದಲ್ಲಿಯೂ ಯಾವುದೇ ಸ್ವತಂತ್ರ ದೇಶ ಸ್ಥಾಪಿಸಲು ಯಾವುದೇ ಅವಕಾಶ ನೀಡಿಲ್ಲ ಎಂದು ತಿಳಿಸಿದೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಕಾರ, ನಿತ್ಯಾನಂದ ವಿವಿಧ ಫೋಟೋಗಳನ್ನು ಸೇರಿಸಿ ವೆಬ್ ಸೈಟ್ ನಲ್ಲಿ ತಾನೊಂದು ಹೊಸ ದೇಶ ಸೃಷ್ಟಿಸಿಕೊಂಡಿರುವುದಾಗಿ ಹೇಳಿಕೊಂಡಿದ್ದಾನೆ ಎಂದು ವಿವರಿಸಿದೆ.

ನಿತ್ಯಾನಂದನ ವಿರುದ್ಧ ದೂರುಗಳು ದಾಖಲಾದ ಮಾಹಿತಿ ಸಿಕ್ಕ ನಂತರ, ನಾವು ಆತನ ಪಾಸ್ ಪೋರ್ಟ್ ಅನ್ನು ರದ್ದು ಮಾಡಿದ್ದೇವೆ. ಹೊಸ ಪಾಸ್ ಪೋರ್ಟ್ ಅನ್ನು ನೀಡಿಲ್ಲ ಎಂದು ವಿದೇಶಾಂಗ ವ್ಯವಹಾರ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ತಿಳಿಸಿದ್ದಾರೆ.

ತಾನು ಈಕ್ವೆಡಾರ್ ನಲ್ಲಿ ಹೊಸ ದೇಶ ಸ್ಥಾಪಿಸಿಕೊಂಡಿದ್ದು, ತನ್ನ ದೇಶಕ್ಕೆ ಕೈಲಾಸ ಎಂದು ಹೆಸರಿಟ್ಟುಕೊಂಡಿರುವುದಾಗಿ ತನ್ನ ಸ್ವಯಂ ಘೋಷಿತ ರಾಷ್ಟ್ರದ ಬಗ್ಗೆ ವೆಬ್ ಸೈಟ್ ನಲ್ಲಿ ಹೇಳಿಕೊಂಡಿದ್ದ. ಇದೊಂದು ಗಡಿ ರಹಿತವಾದ ದೇಶವಾಗಿದೆ. ತಮ್ಮ ದೇಶಗಳಿಂದ ಪರಿತ್ಯಕ್ತರಾದ ವಿಶ್ವದ ಎಲ್ಲಾ ಹಿಂದೂಗಳಿಗೆ ಹಾಗೂ ಹಿಂದುತ್ವವನ್ನು ಪಾಲಿಸಲು ತೊಡಕಾಗಿರುವ ದೇಶಗಳಲ್ಲಿರುವ ಹಿಂದೂಗಳಿಗಾಗಿ ಈ ರಾಷ್ಟ್ರವನ್ನು ಸೃಷ್ಟಿಸಲಾಗಿದೆ ಎಂದು ವೆಬ್ ಸೈಟ್ ನಲ್ಲಿ ಹೇಳಿಕೊಂಡಿದ್ದ.

Advertisement

ಇದೀಗ ನಿತ್ಯಾನಂದ ಈಕ್ವೆಡಾರ್ ನಲ್ಲಿ ಇಲ್ಲ ಎಂದು ಸ್ಪಷ್ಟನೆ ನೀಡಿದೆ. ತನಗೆ ಅಂತಾರಾಷ್ಟ್ರೀಯ ವೈಯಕ್ತಿಕ ಭದ್ರತೆ ನೀಡಬೇಕೆಂಬ ನಿತ್ಯಾನಂದನ ಮನವಿಯನ್ನು ತಿರಸ್ಕರಿಸಿರುವುದಾಗಿ ಈಕ್ವೆಡಾರ್ ಹೇಳಿದ್ದು, ನಂತರ ನಿತ್ಯಾನಂದ ಈಕ್ವೆಡಾರ್ ಅನ್ನು ತೊರೆದಿದ್ದು, ಆತ ಹೈಟಿಗೆ ಪ್ರಯಾಣ ಬೆಳೆಸಿರುವುದಾಗಿ ಪ್ರಕಟಣೆ ವಿವರಿಸಿದೆ. ಆತ ನಮ್ಮ ರಾಷ್ಟ್ರದಲ್ಲಿ ಇಲ್ಲ ಎಂಬುದನ್ನು ಸ್ಪಷ್ಟಪಡಿಸುವುದಾಗಿ ಈಕ್ವೆಡಾರ್ ಹೇಳಿದೆ.

ಮತ್ತೊಂದು ಮಾಹಿತಿ ಪ್ರಕಾರ, ನಿತ್ಯಾನಂದ ಮಾರಿಷಸ್ ಗೆ ತೆರಳಿರುವುದಾಗಿ ತಿಳಿಸಿದೆ. ಆದರೆ ನಿತ್ಯಾನಂದ ಮಾರಿಷಸ್ ನಲ್ಲಿಯೇ ಇದ್ದಾನೆಯೇ ಎಂಬುದು ಇನ್ನಷ್ಟೇ ಖಚಿತವಾಗಬೇಕಾಗಿದೆ. ಈ ಹಿನ್ನೆಲೆಯಲ್ಲಿ ಪ್ರತ್ಯೇಕ ರಾಷ್ಟ್ರ, ಕೈಲಾಸ ಎಲ್ಲಾ ಬೊಗಳೆ ಎಂಬುದು ಜಗಜ್ಜಾಹೀರಾಗಿದೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next