Advertisement

ಬಂಗಾರದ ಕರು ಎಲ್ಲಮ್ಮಾ?

07:13 PM Jun 19, 2019 | mahesh |

ಇಂಚರಾ, ಅಜ್ಜಿಮನೆಗೆ ಹೋಗುತ್ತಿದ್ದುದೇ ಅಪರೂಪವಾಗಿತ್ತು. ಅವಳು ನಗರ ಬದುಕಿಗೆ ಹೊಂದಿಕೊಂಡಿದ್ದರಿಂದ ಅಜ್ಜಿಮನೆಗೆ ಹೋಗುವ ಸಂದರ್ಭ ಬಂದಾಗಲೆಲ್ಲ ಹಿಂದೇಟು ಹಾಕುತ್ತಿದ್ದಳು. ಆದರೂ ಅಜ್ಜಿ ಮತ್ತು ಸೋದರಮಾವನಿಗೆ ಚಿನಕುರಳಿ ಇಂಚರಳನ್ನು ಕಂಡರೆ ತುಂಬಾ ಪ್ರೀತಿ. ಹೀಗಾಗಿ ಅವರಿಬ್ಬರೇ ಆಗಾಗ ಉಡುಗೊರೆಗಳೊಂದಿಗೆ ನಗರಕ್ಕೆ ಬಂದು ಇಂಚರಳನ್ನು ನೋಡಿಕೊಂಡು ಹೋಗುತ್ತಿದ್ದರು.

Advertisement

ಪುಟ್ಟ ಹುಡುಗಿ ಇಂಚರ, ಅಪ್ಪ ಅಮ್ಮನ ಜೊತೆ ನಗರಪ್ರದೇಶದಲ್ಲಿ ವಾಸವಿದ್ದಳು. ಪಾಲಕರಾದ ವಿಜಯ್‌- ಪಲ್ಲವಿ ಹಳ್ಳಿಯಲ್ಲಿ ಹುಟ್ಟಿ ಬೆಳೆದವರಾಗಿದ್ದರೂ ಇಂಚರಾಗೆ ಹಳ್ಳಿ ಬದುಕಿನ ಬಗ್ಗೆ ಏನೇನೂ ಗೊತ್ತಿರಲಿಲ್ಲ. ಅವಳು ಅಜ್ಜಿಮನೆಗೆ ಹೋಗುತ್ತಿದ್ದುದೇ ಅಪರೂಪವಾಗಿತ್ತು. ಇಂಚರಾ ನಗರ ಬದುಕಿಗೆ ಹೊಂದಿಕೊಂಡಿದ್ದರಿಂದ ಅಜ್ಜಿಮನೆಗೆ ಹೋಗುವ ಸಂದರ್ಭ ಬಂದಾಗಲೆಲ್ಲ ಹಿಂದೇಟು ಹಾಕುತ್ತಿದ್ದಳು. ಆದರೂ ಅಜ್ಜಿ ಮತ್ತು ಸೋದರಮಾವನಿಗೆ ಇಂಚರಳನ್ನು ಕಂಡರೆ ತುಂಬಾ ಪ್ರೀತಿ. ಅವರಿಬ್ಬರೂ ಆಗಾಗ ಉಡುಗೊರೆಗಳೊಂದಿಗೆ ನಗರಕ್ಕೇ ಬಂದು ಇಂಚರಳನ್ನು ನೋಡಿಹೋಗುತ್ತಿದ್ದರು.

ಹೀಗಿರಲು ಹಲವಾರು ವರ್ಷಗಳಿಂದ ಅವಳು ತನ್ನ ಅಜ್ಜಿ ಮನೆಗೆ ಹೋಗಿರಲೇ ಇರಲಿಲ್ಲ. ಅದು ಅವಳ ತಾಯಿ ಪಲ್ಲವಿಯ ಗಮನಕ್ಕೆ ಬಂದು ಬೇಸರವಾಯಿತು. ಅಕೆಯ ಗೆಳತಿಯರ ಮಕ್ಕಳೆಲ್ಲಾ ವರ್ಷದಲ್ಲಿ ಒಂದೆರಡು ಬಾರಿ ಬಾರಿಯಾದರೂ ಅಜ್ಜಿ ಮನೆಗೆ ಹೋಗುತ್ತಿದ್ದರು. ತನ್ನ ಮಗಳನ್ನು ಚಿಕ್ಕ ವಯಸ್ಸಿನಲ್ಲೇ ಅಜ್ಜಿಮನೆಯನ್ನು ಪರಿಚಯಿಸದಿದ್ದರೆ ಮುಂದೆ ದೊಡ್ಡವಳಾದಾಗ ಖಂಡಿತವಾಗಲೂ ಅವಳು ಅತ್ತ ತೆರಳಲಾರಳು. ಒಂದೊಳ್ಳೆ ಅನುಭವದಿಂದ ಅವಳು ವಂಚಿತಳಾಗುತ್ತಿದ್ದಾಳಲ್ಲ ಎಂದು ಮನದಲ್ಲೇ ಪಲ್ಲವಿ ಕೊರಗುತ್ತಿದ್ದಳು. ಅದಕ್ಕೊಂದು ಉಪಾಯ ಹೂಡಿದಳು.

ಒಂದು ದಿನ ಪಲ್ಲವಿ “ಇಂಚರಾ, ನಾವು ಯಾವಾಗಲೂ ಬಾವಿಯ ಕಪ್ಪೆಯಂತೆ ಇರಕೂಡದು. ಪ್ರಪಂಚಜ್ಞಾನ ನಮಗೆ ಸತತವಾಗಿ ದೊರೆಯಬೇಕಾದರೆ ನಾವು ಒಂದೇ ಕಡೆ ಸದಾ ಇರದೆ ಎಲ್ಲಾ ರೀತಿಯ ಸ್ಥಳಗಳನ್ನು ನೋಡಬೇಕು. ಆಗ ನಮ್ಮ ಮನಸ್ಸಿಗೆ ಚೆನ್ನಾಗಿಯೇ ಮುದ ಸಿಗುತ್ತದೆ. ಆದಕಾರಣ ನಾವು ನಾಳೆಯೇ ಅಜ್ಜಿ ಮನೆಗೆ ಹೊರಡೋಣ. ನಿನಗೆ ಗೊತ್ತಾ? ಅಲ್ಲಿ ಬಂಗಾರದ ಕರು ಇದೆ.’ ಎಂದು ಹೇಳಿದಳು.

“ಬಂಗಾರದ ಕರು’ ಎಂಬ ಪದ ಕೇಳುತ್ತಲೇ ಇಂಚರಾಳ ಕಣ್ಣುಗಳು ಅರಳಿದವು. ಮರುದಿನವೇ ಅವಳು ತಾಯಿ ತಂದೆ ಜೊತೆ ಅಜ್ಜಿಮನೆಗೆ ಹೊರಟಳು. ಅಜ್ಜಿ ಮನೆಗೆ ತಲುಪಿದಾಕ್ಷಣ ಅವಳ ಮಾವ ಇಂಚರಾಳನ್ನು ಗದ್ದೆ, ತೋಟ ಮುಂತಾದ ಕಡೆಗಳಿಗೆಲ್ಲಾ ಕರೆದೊಯ್ದು ಪ್ರಕೃತಿ ರಮಣೀಯ ದೃಶ್ಯವನ್ನು ತೋರಿಸಿದರು. ಅದನ್ನೆಲ್ಲಾ ನೋಡಿ ಅವಳ ಮನಸ್ಸು ಪುಳಕಿತಗೊಂಡಿತು. ಅಲ್ಲಿದ್ದ ಕೊಟ್ಟಿಗೆಯಲ್ಲಿ ಜಾನುವಾರುಗಳೆಲ್ಲಾ ಇದ್ದವು. ಅವಳ ಕಣ್ಣುಗಳು ಬಂಗಾರದ ಕರುವನ್ನೇ ಹುಡುಕುತ್ತಿತ್ತು. ಅಮ್ಮನನ್ನು ಕೇಳಿದಾಗ ಆಕೆ “ಅದು ಸ್ವಲ್ಪ ದೂರದಲ್ಲಿದೆ. ಸ್ವಲ್ಪ ನಾಳೆ- ನಾಳಿದ್ದು ಅಲ್ಲಿಗೆ ಹೋಗೋಣ. ಈಗ ಇಲ್ಲಿನ ಸೊಬಗನ್ನು ಆನಂದಿಸು’ ಎಂದು ಸುಮ್ಮನಾಗಿಸಿದರು.

Advertisement

ಮುಂದಿನ ಮೂರು ದಿನಗಳ ಕಾಲ ಸಮಯ ಹೇಗೆ ಕಳೆಯಿತು ಅಂತಲೇ ಇಂಚರಾಳಿಗೆ ಗೊತ್ತಾಗಲಿಲ್ಲ. ಅಜ್ಜಿಗೆ ಅಡುಗೆ ಮನೆಯಲ್ಲಿ ಸಹಾಯ ಮಾಡುವುದು, ಜಾನುವಾರುಗಳಿಗೆ ಹುಲ್ಲು ತಂದುಕೊಡುವುದು, ಮಾವನಿಗೆ ತೋಟದ ಕೆಲಸದಲ್ಲಿ ಸಹಕರಿಸುವುದು ಮುಂತಾದ ಕೆಲಸಗಳಲ್ಲಿ ತೊಡಗಿದಳು. ಈ ನಡುವೆ ಅವಳಿಗೆ ಬಂಗಾರದ ಕರುವಿನ ನೆನಪೇ ಆಗಲಿಲ್ಲ. ಅಜ್ಜಿ ಮನೆಯಿಂದ ಹೊರಟು ಬಸ್ಸಿನಲ್ಲಿ ಕುಳಿತಾಗಲೇ ಅವಳಿಗೆ ತಾನು ಬಂಗಾರದ ಕರುವನ್ನು ನೋಡಲೇ ಇಲ್ಲವಲ್ಲ ಎಂದು ನೆನಪಾಗಿದ್ದು.

ಇಂಚರಾ “ಬಂಗಾರದ ಕರು ಎಲ್ಲಮ್ಮಾ?’ ಎಂದು ಕೇಳಿದಾಗ ಅಮ್ಮ ಅಂದರು “ಇಂಚರಾ, ನೀನು ಹಳ್ಳಿಯ ಸೊಬಗನ್ನು ನೋಡಲೆಂದು ನಾನು ಹಾಗೆಂದು ಸುಳ್ಳು ಹೇಳಿದ್ದೆ. ಬಂಗಾರದ ಕರು ನಿಜವಾಗಲೂ ಇಲ್ಲ’. ಅಮ್ಮನ ಮಾತು ಕೇಳಿ ಇಂಚರಾಳಿಗೆ ಬೇಸರವಾದರೂ ಅದರ ಹಿಂದಿನ ಉದ್ದೇಶ ಅರ್ಥವಾಯಿತು. ಇಂಚರಾ ನಗುತ್ತಲೇ “ಅಮ್ಮ, ಮತ್ತೆ ಯಾವಾಗ ನಾವು ಅಜ್ಜಿ ಮನೆಗೆ ಹೋಗುವುದು?’ ಎಂದು ಕೇಳಿದಳು. ಅಮ್ಮ ಪ್ರೀತಿಯಿಂದ ಇಂಚರಾಳ ತಲೆ ನೇವರಿಸಿದಳು.

– ಮೇಘನಾ

Advertisement

Udayavani is now on Telegram. Click here to join our channel and stay updated with the latest news.

Next