Advertisement

ಸ್ಟಾರ್ಟ್‌ಅಪ್‌ ಇಂಡಿಯಾ ಎತ್ತ ಸಾಗುತ್ತಿದೆ?

05:33 PM Sep 11, 2017 | Harsha Rao |

ಸ್ಟಾರ್ಟ್‌ ಅಪ್‌ ಬಂತು, ಇನ್ನು ನಮ್ಮ ಭವಿಷ್ಯ ಚೆಂದವಾಗುತ್ತೆ. ಇಷ್ಟೊಂದು ಸ್ಟಾರ್ಟ್‌ಪ್‌ಗ್ಳು ಬಂದರೆ ಇಡೀ ದೇಶ ಪ್ರಪಂಚದಲ್ಲಿ ಬೆಳಗುತ್ತ¨. ಅಂತೆಲ್ಲಾ ಭರವಸೆಗಳನ್ನು ನೀಡಿ, ಆಶಾಕಿರಣ ತೋರಿಸುತ್ತಿದ್ದಾರೆ. ಆದರೆ ನಿಜಕ್ಕೂ ಈ ಸ್ಟಾರ್ಟಪ್‌ಗ್ಳು ನಮ್ಮ ಆರ್ಥಿಕತೆಯನ್ನು ಉತ್ತಮ ಪಡಿಸುತ್ತವೆಯಾ? ಇವೆಲ್ಲವೂ ನಮ್ಮ ವ್ಯವಸ್ಥೆಗೆ ಹೊಂದುತ್ತದೆಯೇ ? ಇಲ್ಲಿದೆ ಮಾಹಿತಿ. 

Advertisement

ಎರಡು ವರ್ಷದ ಹಿಂದೆ ಸ್ವಾತಂತ್ರ ದಿನಾಚರಣೆಯ ದಿನ ನರೇಂದ್ರ ಮೋದಿಯವರು ಕೆಂಪು ಕೋಟೆಯಿಂದ ಸ್ಟಾರ್ಟ್‌ ಅಪ್‌ ಇಂಡಿಯಾ ಎಂಬ ಹೊಸ ಉದ್ಯಮ ನೀತಿಯೊಂದನ್ನು ಘೋಷಿಸಿದರು. ವಿಜ್ಞಾನ ತಂತ್ರಜ್ಞಾನ ಆಧರಿಸಿ ಹೊಸದಾಗಿ ಉದ್ಯಮಗಳನ್ನು ಪ್ರಾರಂಭಿಸುವವರಿಗೆ ಹೊಸ ನೀತಿಯ ಮೂಲಕ ಉತ್ತೇಜಿಸುವ ಯೋಜನೆ ಇದಾಗಿತ್ತು. ಇದಕ್ಕಾಗಿ ಸುಮಾರು 1,315 ಕೋಟಿ ವಿಶೇಷ ಬಂಡವಾಳ ಬಿಟ್ಟು 2025 ರೊಳಗೆ ಇದನ್ನು ಸುಮಾರು 10 ಸಾವಿರ ಕೋಟಿಗೆ ಏರಿಸುವ ಯೋಜನೆಯಾಗಿದೆ. ಇದಕ್ಕೆ ಸಿಡಿº ಅಂದರೆ ಭಾರತೀಯ ಸಣ್ಣ ಉದ್ಯಮ ಅಭಿವೃದ್ಧಿ ಪ್ರಾಧಿಕಾರ ಮತ್ತು ಡಿಪಾರ್ಟ್‌ಮೆಂಟ್‌ ಆಫ್ ಇಂಡಸ್ಟ್ರಿಯಲ್‌ ಪಾಲಿಸಿ ಅಂಡ್‌ ಪ್ರಮೋಷನ್‌ ಸಂಸ್ಥೆಗಳಿಗೆ ಇದನ್ನು ಮುಂದುವರಿಸಲು ಅವಕಾಶ ಮಾಡಿಕೊಡಲಾಯಿತು. 

ಈ ಯೋಜನೆಯಡಿಯಲ್ಲಿ ಬರಲು ಪ್ರಮುಖವಾಗಿ ಆಧುನಿಕ ತಂತ್ರಜ್ಞಾನದ ಅಳವಡಿಕೆ ಮತ್ತು ಅದಕ್ಕೆ ಸಂಬಂಧಪಟ್ಟ ಬೌದ್ಧಿಕ ಹಕ್ಕು ಸ್ಥಾಪನೆಯ ಅವಶ್ಯಕತೆ ಇದೆ. ಅಂದರೆ, ಆಧುನಿಕ ತಂತ್ರಜ್ಞಾನದ ಮೂಲಕ ಯುವ ಪೀಳಿಗೆಯನ್ನು ಉತ್ತೇಜಿಸಿ ಸರಳವಾಗಿ ಉದ್ಯಮಶೀಲರನ್ನಾಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶ. ಈ ರೀತಿಯ ಹೊಸ ಯೋಜನೆಗೆ ಕೈ ಹಾಕಲು ಉತ್ತೇಜಿಸಲು ಕಾರಣ ಭಾರತದಲ್ಲಿ ಹೊಸ ಉದ್ಯಮ ಪ್ರಾರಂಭಿಸುವುದು ಕ್ಲಿಷ್ಟಕರ ಎಂಬ ಹಲವು ಪ್ರಮುಖರ ಅಭಿಪ್ರಾಯ. ಇದಕ್ಕೆ ಪ್ರಮುಖ ಸಾಕ್ಷಿ, ವಿಶ್ವಬ್ಯಾಂಕ್‌ ಭಾರತವನ್ನು ವ್ಯಾಪಾರ ಮಾಡಲು ಸುಗಮ ಎನ್ನುವ ಪಟ್ಟಿಯಲ್ಲಿ 130ನೇ ಸ್ಥಾನದಲ್ಲಿಟ್ಟಿರುವುದು. ತನ್ನ ಸೈಟಿನಲ್ಲಿಯೇ ತಾನು ಮನೆ ಕಟ್ಟಲು ಪರವಾನಗಿ ಪಡೆಯಲು ಅತ್ಯಂತ ಕಷ್ಟಕರವಾದ ದೇಶವೆಂದರೆ ಅದು ಭಾರತ ಎನ್ನುತ್ತದೆ ವಿಶ್ವಬ್ಯಾಂಕ್‌. ಈ ಹಣೆಪಟ್ಟಿಯಿಂದ ನಾವು ಕಳಚಿಕೊಳ್ಳಲು ಸರ್ಕಾರ ವಿವಿಧ ಯೋಜನೆಗಳನ್ನು ಘೋಷಿಸಿ ನೀತಿ ನಿಯಮಗಳನ್ನು ಜಾರಿ ಮಾಡಿದ್ದರೂ ಗಣನೀಯ ಬದಲಾವಣೆ ಇನ್ನೂ ಕಾಣಲು ಆಗುತ್ತಿಲ್ಲ ಎನ್ನುವುದು ವಾಸ್ತವ. ಇತ್ತೀಚೆಗೆ ನಮ್ಮದೇ ನೀತಿ ಆಯೋಗವು ಮಾಡಿದ ಸಮೀಕ್ಷೆಯಲ್ಲಿ ಮತ್ತೂಮ್ಮೆ ಇದು ದೃಢಪಟ್ಟಿದೆ. ಕಳೆದ ಮೂರು ವರ್ಷಗಳಲ್ಲಿ ಸ್ಟಾರ್ಟ್‌ ಅಪ್‌ ಇಂಡಿಯಾ, ಸ್ಟ್ಯಾಂಡ್‌ ಅಪ್‌ ಇಂಡಿಯಾ, ಮೇಕ್‌ ಇನ್‌ ಇಂಡಿಯಾ, ಸ್ಕಿಲ್‌ ಇಂಡಿಯಾ ಹೀಗೆ ಹತ್ತು ಹಲವು ರೀತಿ ಉತ್ತೇಜನಕಾರಿ ಹೊಸಹೊಸ ನೀತಿಗಳನ್ನು ಪ್ರಾರಂಭಿಸಿದ್ದರೂ, ನಮ್ಮ ಆರ್ಥಿಕ ವ್ಯವಸ್ಥೆಯಲ್ಲಿ ಇನ್ನೂ ಮಹತ್ತರವಾದ ಬದಲಾವಣೆ ಆಗಿಲ್ಲ. 

ಇದಕ್ಕೆ ಮೊದಲ ಸಾಕ್ಷಿ, ಆರ್ಥಿಕ ವ್ಯವಸ್ಥೆ ಮತ್ತು ಅಭಿವೃದ್ಧಿ ಕುಂಟಿತವಾಗುತ್ತಿರುವುದಲ್ಲದೆ, ವಿದ್ಯಾವಂತ ಯುವ ಪೀಳಿಗೆಗೆ ಕೆಲಸ ಸಿಗದಿರುವುದು ಮುಖ್ಯವಾಗಿದೆ. ನೀತಿ ಆಯೋಗದ ಪ್ರಕಾರವೇ ಹೊಸ ವ್ಯಾಪಾರವನ್ನು ಪ್ರಾರಂಭಿಸಲು ಕನಿಷ್ಟ 4 ತಿಂಗಳು ಬೇಕು ಎನ್ನುತ್ತಾರೆ ಉದ್ಯಮ ಪ್ರಾರಂಭಿಸುವವರು. ಸಿಂಗಲ್‌ ವಿಂಡೋ ಇದೆಯಲ್ಲ? ಅನ್ನಬಹುದು.  ಅಂದರೆ ಎಲ್ಲ ಪರವಾನಿಗೆಗಳನ್ನೂ ಒಂದೇ ಕಡೆ ಪಡೆಯುವ ಬಳಕೆ ಕೇವಲ 20% ರಷ್ಟು. ಸ್ಟಾರ್ಟ್‌ ಅಪ್‌ ಇಂಡಿಯಾ ಯೋಜನೆಯಡಿ ಬೌದ್ಧಿಕ ಹಕ್ಕು ಸ್ಥಾಪಿಸಲು ಸಹಾಯಧನ ನೀಡುತ್ತದೆ.  ಪರಿಸರ ನಿಯಂತ್ರಣ ಕಾಯ್ದೆಯಡಿ ಪಡೆಯಬೇಕಾದ ಪರವಾನಗಿಯನ್ನು ತಾವೇ ಸ್ವತಃ ಒಂದು ಪತ್ರ ಬರೆಯುವ ಮೂಲಕ ಪಡೆದುಕೊಂಡತಾಗುತ್ತದೆ. 3 ವರ್ಷದವರೆಗೆ ಯಾವುದೇ ಕಾರ್ಮಿಕ ಕಾಯ್ದೆಯ ಪ್ರಕಾರ ಇಂತಹ ಸಂಸ್ಥೆಗಳನ್ನು ಭೇಟಿಯಾಗಿ ವಿಚಾರಿಸುವಂತಿಲ್ಲ.

ತಜ್ಞರ ಪ್ರಕಾರ ಈ ಯೋಜನೆಯಲ್ಲಿ ಮೊದಲ ತೊಡಕು ಯಾವುದನ್ನು ಆಧುನಿಕ ತಂತ್ರಜ್ಞಾನವೆಂದು, ಸರ್ಕಾರ ಹೇಗೆ ಪರಿಗಣಿಸಬೇಕು ಎಂಬುದು. ಇದು ಸರ್ಕಾರಿ ಅಧಿಕಾರಿಗಳು ತಮಗೆ ಇಷ್ಟ ಬಂದಂತೆ, ತಮಗೆ ಬೇಕಾದವರನ್ನು ಪರಿಗಣಿಸುವ ದುರ್ಮಾರ್ಗಕ್ಕೆ ಅವಕಾಶವಿದೆ. ಅಲ್ಲದೆ ಪ್ರತ್ಯೇಕವಾಗಿ ಒಂದು ರೀತಿಯ ಉದ್ಯಮಗಳಿಗೆ ವಿಶೇಷ ಸಹಾಯಧನ ಕೊಡುವುದು ಎಷ್ಟರಮಟ್ಟಿಗೆ ನಿಜವಾಗಿಯೂ ಉತ್ತೇಜನಕಾರಿಯಾಗುತ್ತದೆ ಎನ್ನುವುದೂ ಪ್ರಶ್ನಾರ್ಹವೇ.

Advertisement

ಘೋಷಣೆಯಾದ ಕಾಲದಿಂದ ಇಂದಿನವರೆಗೂ ಸುಮಾರು 3 ಸಾವಿರ ಉದ್ಯಮಗಳನ್ನು ಗುರುತಿಸಲಾಗಿದ್ದರೂ, ಹಣಕಾಸು ಸಹಾಯ ಒದಗಿರುವುದು ಕೇವಲ 67ಕ್ಕೆ ಎನ್ನಲಾಗುತ್ತಿದೆ. ಕೆಲವು ತಿಂಗಳ ಹಿಂದೆ ಬಂದ ವರದಿಯ ಪ್ರಕಾರ, ಘೋಷಣೆ ಏನೇ ಆಗಿದ್ದರೂ 110 ಕೋಟಿ ಕೊಡಲು ಒಪ್ಪಿದ್ದು ಸುಮಾರು 6 ಕೋಟಿ ಮಾತ್ರ ಹಣ ಕೊಡಲಾಗಿದೆ ಎಂದೂ ವರದಿಯಾಗಿದೆ. 

ಸರ್ಕಾರ ವಿಶೇಷವಾಗಿ ಒಂದು ಪ್ರತ್ಯೇಕ ಉದ್ಯಮ ನೀತಿಯನ್ನು ಒಂದು ರೀತಿಯ ವಿಶೇಷ ಉದ್ಯಮಗಳಿಗೆ ನೀಡುವುದಕ್ಕಿಂತ ಒಟ್ಟಾರೆಯಾಗಿ ಉದ್ಯಮ ಪ್ರಾರಂಭಿಸಲು ಸುಗಮಗೊಳಿಸುವುದು ಮತ್ತು ಒಟ್ಟಾರೆ ಉದ್ಯಮಶೀಲತೆಗೆ ಪೂರಕವಾದ ಪರಿಸರವನ್ನು ಸೃಷ್ಟಿಸುವುದು ಮುಖ್ಯವೆನ್ನಬಹುದು. ಜಗತ್ತಿನಲ್ಲಿ ವಿಶೇಷವಾಗಿ ಹೊಸ ಉದ್ಯಮಗಳು ಸೃಷ್ಟಿಗೊಂಡು ಅಂತಾರಾಷ್ಟ್ರೀಯ ಖ್ಯಾತಿ ಪಡೆದ ಎರಡು ಪ್ರಮುಖ ಸ್ಥಳಗಳಿವೆ. ಒಂದು ಅಮೇರಿಕಾದ ಸಿಲಿಕಾನ್‌ ವ್ಯಾಲಿ. ಇನ್ನೊಂದು ನೆದರ್‌ಲ್ಯಾಂಡಿನ ಇಂಡೋಫಿನ್‌. ಇಂಡೋಫಿನ್‌ನಲ್ಲಿ ಇಂದಿಗೂ ದಿನಕ್ಕೆ 4 ಪೇಟೆಂಟ್‌ಗಳಿಗೆ ಅರ್ಜಿ ಸಲ್ಲಿಸಲಾಗುತ್ತಿದೆ. ಸಿಲಿಕಾನ್‌ ವ್ಯಾಲಿ ಇಡೀ ಜಗತ್ತಿನ ತಂತ್ರಜ್ಞಾನವನ್ನು ಅದರಲ್ಲೂ ಮಾಹಿತಿ ತಂತ್ರಜ್ಞಾನವನ್ನು ತನ್ನ ಮುಷ್ಟಿಯಲ್ಲಿ ಇಟ್ಟುಕೊಂಡಿದೆ. ಇಂದಿಗೂ ಹೊಸ ಉದ್ಯಮಗಳು ದಿನನಿತ್ಯ ಹುಟ್ಟಿಕೊಳ್ಳುತ್ತಿವೆ. ಸಿಲಿಕಾನ್‌ ವ್ಯಾಲಿಯ ಉದ್ಯಮಶೀಲತೆಯ ಇತಿಹಾಸ ಸುಮಾರು 200 ವರ್ಷವಿದ್ದು. ಇಂದಿಗೂ ಹಳೆಯ ತಂತ್ರಜ್ಞಾನ ಮತ್ತು ಆರ್ಥಿಕತೆಯನ್ನು ಕೆಡುವುತ್ತಾ ಹೊಸತನ್ನು ಕಟ್ಟುವಲ್ಲಿ ಸದಾ ಮುಂಚಣಿಯಲ್ಲಿರುತ್ತಾರೆ. ಇದರ ಹಿಂದೆ ಸ್ಟಾನ್‌ಫೋರ್ಡ್‌ ವಿಶ್ವವಿದ್ಯಾಲಯ ಹೊಸ ಆವಿಷ್ಕಾರಗಳಿಗೆ ಮತ್ತು ಉದ್ಯಮಶೀಲತೆಗೆ ಫ‌ಲವತ್ತಾದ ಬೌದ್ಧಿಕ ಭೂಮಿಕೆಯಾಗಿರುತ್ತದೆ. 

ಇಲ್ಲಿದೆ ಭೂಮಿಕೆ
ಇತ್ತೀಚೆಗೆ, ಬೆಂಗಳೂರಿನ ಆರ್ಟಿಫಿಷಿಯಲ್‌ ಇಂಟಲಿಜೆನ್ಸ್‌ ಕಂಪನಿಯಾದ, ಹಳ್ಳಿ ಲ್ಯಾಬ್ಸ್ ಅನ್ನು ಗೂಗಲ್‌ ಕಂಪನಿ ಕೊಂಡುಕೊಂಡಿತು. ಆರ್ಟಿಫಿಷಿಯಲ್‌ ಇಂಟಲಿಜೆನ್ಸ್‌ ತಂತ್ರಜ್ಞಾನದಲ್ಲಿ ಬೆಂಗಳೂರಿನ ಕೆಲವು ಕಂಪನಿಗಳು ಇದಾಗಲೇ ಮುಂಚೂಣಿಯಲ್ಲಿವೆ. ಅವುಗಳಲ್ಲಿ ಇಂಬೈಬ್‌, ಆಕ್ಟಿವ್‌ ಇಂಟಲಿಜೆನ್ಸ್‌, ಟೆಕ್‌ ಬೆನ್ಸ್‌ ಮತ್ತು ಮಾರಾ ಲ್ಯಾಬ್ಸ್ ಪ್ರಮುಖವಾಗಿವೆ. ಹಾಗೆ ನೋಡಿದರೆ ಭಾರತದ ಸಿಲಿಕಾನ್‌ ವ್ಯಾಲಿ ಎಂದೇ ಹೆಸರು ಮಾಡಿರುವ ಬೆಂಗಳೂರು ಈ ರೀತಿಯ ತಂತ್ರಜ್ಞಾನ ಅಳವಡಿಕೆಯ ಉದ್ಯಮಗಳಿಗೆ ಮೂಲ ಭೂಮಿಕೆಯಾಗಿದೆ. ಜಗತ್ತಿನ 46 ಹೊಸ ತಂತ್ರಜ್ಞಾನ ಅಳವಡಿಕೆಯ ಮಹಾನಗರಗಳಲ್ಲಿ ಬೆಂಗಳೂರು ಸಹ ಒಂದಾಗಿದೆ. ಆದರೆ ಇದಕ್ಕೂ ಸರ್ಕಾರ ಘೋಷಿಸುವ ಯೋಜನೆಗಳಿಗೂ ಹೆಚ್ಚಿನ ಸಂಬಂಧವಿಲ್ಲ ಎನ್ನಬಹುದು. ಹಿಂದೆ ನಮ್ಮಲ್ಲಿ ಮಾಹಿತಿ ತಂತ್ರಜ್ಞಾನ ವೇಗಗತಿಯಲ್ಲಿ ಬೆಳೆಯಲು, ಇದಕ್ಕಾಗಿ ಒಬ್ಬ ಮಂತ್ರಿ ಇಲ್ಲದಿದ್ದದ್ದು ಎಂದು ಹಾಸ್ಯ ಚಟಾಕಿ ಹಾರಿಸುವುದುಂಟು. 

ಸರ್ಕಾರ ಮುಖ್ಯವಾಗಿ, ಸಂಶೋಧನೆಗಾಗಿ ಇಂದು ಖರ್ಚು ಮಾಡುತ್ತಿರುವ ಹಣವನ್ನು ಕನಿಷ್ಟ ಮೂರು ಪಟ್ಟು ಹೆಚ್ಚಿಸಬೇಕಾಗಿತ್ತು. ಈಗ ನಮ್ಮ ಜಿಡಿಪಿಯಲ್ಲಿ ಕೇವಲ ಶೇ.0.82 ರಷ್ಟು ಮಾತ್ರ ಸಂಶೋಧನೆ ಮತ್ತು ಅಭಿವೃದ್ಧಿಗೆ ವ್ಯಯ ಮಾಡುತ್ತಲಿದೆ. ಇದರ ಪ್ರಮಾಣ ಚೀನಾದಲ್ಲಿ 1.8% ಹಾಗೂ ಅಮೇರಿಕಾದಲ್ಲಿ 2.77% ರಷ್ಟಿದೆ. ಸರ್ಕಾರ ಸಂಶೋಧನೆಗೆ ವಿಶ್ವದ್ಯಾಲಯ ಮತ್ತು ವೈಜ್ಞಾನಿಕ ಸಂಸ್ಥೆಗಳಿಗೆ ಹಣ ಕೊಟ್ಟಲ್ಲಿ ಅದರ ಪರಿಣಾಮವಾಗಿ ವಿವಿಧ ರೀತಿಯ ತಾಂತ್ರಿಕ ಆವಿಷ್ಕಾರಗಳು ಸಮಾಜದಲ್ಲಿ ಹೊರಹೊಮ್ಮುತ್ತವೆ. ಅದಲ್ಲದೆ ಕೇವಲ ಸಹಾಯಧನ, ಸಾಲ ಮನ್ನಾ ಹೆಚ್ಚಾಗಿ ಸಹಕಾರಿಯಾಗದು. ಮನೆಯ ಮುಂದೆ ಕೋಗಿಲೆ ಹಾಡಬೇಕೆಂದಿದ್ದರೆ ಮಾವಿನ ಗಿಡ ನೆಡುವುದು ಉತ್ತಮ ಹೆಜ್ಜೆ ಎನ್ನಬಹುದು. 

ಯಶಸ್ವಿ ಆಗುತ್ತಾ?
ಇತ್ತೀಚೆಗೆ ಅಂತಾರಾಷ್ಟ್ರೀಯ ಟೈಮ್ಸ್‌ ರ್‍ಯಾಂಕಿಂಗ್‌ ಪ್ರಕಾರ ಭಾರತದಲ್ಲಿ 250 ಶ್ರೇಷ್ಟ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಒಂದು ಹೆಸರೂ ಕಾಣುವುದಿಲ್ಲ. ಬೆಂಗಳೂರಿನ ಪ್ರತಿಷ್ಟಿತ ಭಾರತೀಯ ವಿಜಾnನ ಸಂಸ್ಥೆ ಕೂಡ 251 ರಿಂದ 300 ರ ಒಳಗಿನ ಪಟ್ಟಿಗೆ ಸೇರಿವೆ. 

ಉಳಿದ ಐಐಟಿಗಳು 351 ರಿಂದ 600 ರ ಪಟ್ಟಿಯಲ್ಲಿದೆ. 

ದೆಹಲಿ ವಿಶ್ವವಿದ್ಯಾಲಯ 601 ರಿಂದ 800ರ ಪಟ್ಟಿಗೆ ಸೇರಿದೆ. ಅಂದರೆ ನಾವು, ನಮ್ಮ ಎಂಜಿನಿಯರ್‌ ಮತ್ತು ಇತರ ತಾಂತ್ರಿಕ ಪದಗಳನ್ನು ರಾಶಿರಾಶಿಯಾಗಿ ಉತ್ಪಾದಿಸುತ್ತಿದ್ದೇವೆಯೇ ಹೊರತು, ಗುಣಮಟ್ಟದಲ್ಲಿ ಗಾತ್ರದಂತಿಲ್ಲ ಎನ್ನುವುದನ್ನು ಗಮನಿಸಬೇಕು. ವಿದ್ಯಾಸಂಸ್ಥೆಗಳು ಹೊಸ ಆವಿಷ್ಕಾರಗಳ ಕಿಡಿಯನ್ನು ಹಚ್ಚುವಲ್ಲಿ ಸಹಾಯವಾಗಬೇಕು. ಕೇವಲ ಪರೀûಾ ದೃಷ್ಟಿಯಿಂದ ಪದ್ಯ ಮತ್ತು ಗಣಿತಗಳನ್ನೂ ಬಾಯಿಪಾಠ ಮಾಡಿ ಒಪ್ಪಿಸುವ ಶಿಕ್ಷಣ ವ್ಯವಸ್ಥೆಯಿಂದ ಹೊಸ ಆವಿಷ್ಕಾರ ಹೊರಹೊಮ್ಮದು. ಉದ್ಯಮ ಮತ್ತು ಉದ್ಯಮಶೀಲತೆ, ಅದರಲ್ಲೂ ವಿಶೇಷವಾಗಿ ಹೊಸ ತಂತ್ರಜಾnನದಿಂದ ಹೊರಹೊಮ್ಮುವ ಉದ್ಯಮಗಳು ಸುಮ್ಮನೆ ಹೇಗೋ ಎಲ್ಲಿಯೋ ಕೇವಲ ಸರ್ಕಾರದ ಸಹಾಯಧನದಿಂದ ಹುಟ್ಟಿಕೊಳ್ಳುವುದಿಲ್ಲ. ಪೂರಕ ವಿದ್ಯಾಭ್ಯಾಸ, ವಿಶ್ವವಿದ್ಯಾಲಯ, ಉದ್ಯಮ ಮತ್ತು ವಿಶ್ವವಿದ್ಯಾಲಯಗಳ ಒಡಂಬಡಿಕೆ, ಕೊಡುಕೊಳ್ಳುವಿಕೆ ಮೊಟ್ಟಮೊದಲನೆಯ ವಿಷಯವಾಗಿರುತ್ತದೆ. ನಂತರ ಹೊಸ ಆಲೋಚನೆಗೆ ಹಣ ಹೂಡುವ ಪರಿಸರವೂ ಪ್ರಮುಖ. ನಮ್ಮಲ್ಲಿ ಹೊಸ ಯೋಜನೆಗಳಿಗೆ ಕೊರತೆ ಏನಿಲ್ಲ. ಆದರೆ ಈ ಹೊಸ ಯೋಜನೆ ಇಟ್ಟುಕೊಂಡು ನಮ್ಮ ಸರ್ಕಾರಿ ಬ್ಯಾಂಕ್‌ಗಳಿಗೆ ಹೋದರೆ ಸಾಲ ಕೊಡಲು,  ಗಿರಿವಿ ಇಡಲು ಏನು ತಂದಿರುವೆ ಎಂದು ಮೊದಲು ಕೇಳುತ್ತಾರೆ. 

ನಮ್ಮ ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಹೊಸ ವಿಚಾರಕ್ಕೆ ಮುಂದೆ ಬಂದು ಸಾಲ ಕೊಡುವವರು ಬೆರಳೆಣಿಕೆಯಷ್ಟು ಎನ್ನಬಹುದು. ಇದಾಗಲೇ ಕೇಂದ್ರ ಸರ್ಕಾರದ ವಿಮೆ ಯೋಜನೆಯಡಿ 2 ಕೋಟಿಯವರೆಗೆ ಯಾವುದೇ ಸ್ಥಿರ ಆಸ್ಥಿಯ ಭದ್ರತೆಗೆ ಒದಗಿಸದೇ ಸಣ್ಣ ಉದ್ಯಮಗಳಿಗೆ ಕೊಡಬೇಕೆಂದು ನಿಯಮವಿದ್ದರೂ ಕಾರ್ಯರೂಪಕ್ಕೆ ತಂದದ್ದು ಅತ್ಯಂತ ವಿರಳ. ಅನೇಕ ಬ್ಯಾಂಕ್‌ ಶಾಖೆಗಳಲ್ಲಿ ಇದರ ಸೊಲ್ಲೇ ಎತ್ತುವುದಿಲ್ಲ. ನಮ್ಮಲ್ಲಿ ಪ್ರ„ವೆಟ್‌ ಈಕ್ವಿಟಿ ಮತ್ತು ವೆಂಚರ್‌ ಕ್ಯಾಪಿಟಲ್‌ ಪ್ರಾರಂಭಿಕ ಹಂತದಲ್ಲಿ ಸಿಗುವುದು ಸುಲಭವಲ್ಲ. ಸಾಧನೆ ಮಾಡಿ ತೋರಿಸಿದಲ್ಲಿ ಇಡೀ ಕಂಪನಿಯನ್ನೇ ಕೊಂಡುಕೊಳ್ಳಲು ದೈತ್ಯ ಕಂಪನಿಗಳು ಸದಾ ಸಿದ್ಧರಾಗಿರುತ್ತಾರೆ. ಇಂಥ ಉತ್ತಮ ಪ್ರಾರಂಭಿಕ ತಂತ್ರಜಾnನ ಸಂಸ್ಥೆಗಳನ್ನು ನಮ್ಮ ಬೆಂಗಳೂರಿನಲ್ಲಿಯೇ ಮೈಕ್ರೋಸಾಫ್ಟ್, ಫೇಸ್‌ಬುಕ್‌ ನಂತಹ ಸಂಸ್ಥೆಗಳು ಅಪಾರ ಹಣ ಕೊಟ್ಟು ಕೊಂಡುಕೊಂಡಿರುವ ಅನೇಕ ಉದಾಹರಣೆಗಳಿವೆ. 

– ಡಾ. ಕೆ.ಸಿ. ರಘು

Advertisement

Udayavani is now on Telegram. Click here to join our channel and stay updated with the latest news.

Next