ಅದೊಂದು ಸುಂದರವಾದ ಊರು. ಎಲ್ಲವೂ ಪರ್ಫೆಕ್ಟ್ ಅನ್ನುವಷ್ಟು ಸೌಂದರ್ಯ. ಹೀಗಾಗಿ ಅಲ್ಲಿ ವಾಸಿಸುತ್ತಿದ್ದವರಿಗೂ ತಮ್ಮ ಊರಿನ ಬಗ್ಗೆ ಹೆಮ್ಮೆ ಎಂದೆನಿಸುತ್ತಿತ್ತು. ಆ ಊರಿನ ಬಗ್ಗೆ ಸಾಕಷ್ಟು ಮಂದಿಯಿಂದ ಕೇಳಿ ತಿಳಿದಿದ್ದ ವಿದೇಶೀಯನೊಬ್ಬ ಬಹಳ ಕುತೂಹಲದಿಂದ ಅಲ್ಲಿಗೆ ಬರುತ್ತಾನೆ. ಊರಿನ ಸೌಂದರ್ಯದ ಕನಸು ಹೊತ್ತು ಬರುತ್ತಿದ್ದವನಿಗೆ ರಸ್ತೆಯ ಬದಿಯಲ್ಲಿದ್ದ ಕೊಳ ಕಾಣದೆ ಅದಕ್ಕೆ ಬೀಳುತ್ತಾನೆ. ಅವನ ಬಟ್ಟೆಯಲ್ಲೆಲ್ಲ ಕೊಳದ ಕೆಸರು ಮೆತ್ತಿಕೊಳ್ಳುತ್ತದೆ. ಇದರಿಂದ ಸಿಟ್ಟುಗೊಂಡ ಆತ ಊರೊಳಗೆ ಪ್ರವೇಶಿಸುತ್ತಾನೆ.
ರಸ್ತೆ ಬದಿಯಲ್ಲಿ ವ್ಯಾಪಾರಿಯೊಬ್ಬ ಕುಳಿತಿರುತ್ತಾನೆ. ಅವನ ಬಳಿ ಬಣ್ಣ ಬಣ್ಣದ ಹೂವುಗಳಿರುತ್ತದೆ. ಅದನ್ನು ನೋಡಿದ ವಿದೇಶೀ ಯುವಕ ಇದೇನು ಹೂವು, ಅಷ್ಟೇನೂ ಚೆನ್ನಾಗಿಲ್ಲ ಎನ್ನುತ್ತಾನೆ. ಅಷ್ಟರಲ್ಲಿ ವ್ಯಾಪಾರಿಗೂ ಅನ್ನಿಸ ತೊಡಗುತ್ತದೆ. ತನ್ನಲ್ಲಿರುವ ಹೂವುಗಳು ಈಗಾಗಲೇ ಬಾಡಿದೆಯೇ?, ಇದನ್ನು ಇನ್ನು ಯಾರೂ ಖರೀದಿಸುತ್ತಾನೆ ಎಂಬ ಚಿಂತೆ ಹೊತ್ತು ಕೂರುತ್ತಾನೆ. ಅಲ್ಲಿಂದ ಮುಂದೆ ಹೋದ ವಿದೇಶಿಯನಿಗೆ ಚಿನ್ನದ ವ್ಯಾಪಾರಿ ಕಾಣಿಸುತ್ತಾನೆ. ಅವನಲ್ಲಿದ್ದ ಚಿನ್ನದ ವಿನ್ಯಾಸಗಳನ್ನು ನೋಡಿದ ವೀದೇಶೀಯ ಇದೇನು ಚಿನ್ನ. ಇದಕ್ಕಿಂತ ಅತ್ಯುತ್ತಮ ವಿನ್ಯಾಸದ ಚಿನ್ನ ನಮ್ಮ ದೇಶದಲ್ಲಿ ದೊರೆಯುತ್ತದೆ. ಇದೆಲ್ಲ ತುಂಬಾ ಕಳಪೆ ಎಂದೆನಿಸುತ್ತದೆ ಎನ್ನುತ್ತಾನೆ. ಆಗ ಚಿನ್ನದ ವ್ಯಾಪಾರಿಗೂ ಇರಬಹುದೇನೋ ಎಂಬ ಪ್ರಶ್ನೆ ಕಾಡತೊಡಗುತ್ತದೆ. ಹೀಗೆ ವೀದೇಶಿ ಯುವಕ ಹೋದಲ್ಲೆಲ್ಲ ಏನಾದರೊಂದು ನೆಪ ಹೇಳಿ ಪ್ರತಿಯೊಂದರಲ್ಲೂ ಲೋಪ ಹುಡುಕುತ್ತಾನೆ. ಅದನ್ನೇ ಸತ್ಯವೆಂದು ಭಾವಿಸುವ ಊರಿನವರು ಚಿಂತೆಗೊಳಗಾಗುತ್ತಾನೆ.
ಕೊನೆಗೆ ಒಬ್ಬ ಸನ್ಯಾಸಿಯ ಬಳಿ ಬಂದ ಯುವಕ ನಿಮ್ಮ ಬಟ್ಟೆ ಚೆನ್ನಾಗಿಲ್ಲ. ನೀವು ಕುಳಿತ ಜಾಗ ಸರಿಯಿಲ್ಲ ಎನ್ನುತ್ತಾನೆ. ಆಗ ಸನ್ಯಾಸಿ ತನ್ನ ಕಮಂಡಲದಿಂದ ಶುದ್ಧವಾದ ನೀರನ್ನು ಆತನಿಗೆ ಕುಡಿಯಲು ಕೊಡುತ್ತಾನೆ. ಒಂದು ನಿಮಿಷ ಮೌನವಾಗಿದ್ದು ಧ್ಯಾನ ಮಾಡುವಂತೆ ಹೇಳುತ್ತಾನೆ. ಯುವಕ ಹಾಗೇ ಮಾಡುತ್ತಾನೆ. ಅಷ್ಟರಲ್ಲಿ ಅವನ ಮನಸ್ಸು ಶಾಂತವಾಗುತ್ತದೆ.
ಆಗ ಸನ್ಯಾಸಿ ಹೇಳುತ್ತಾನೆ. ಈಗ ನೋಡು ನನ್ನ ಬಟ್ಟೆಯಲ್ಲಿ ಕೊಳೆಯಿದೆಯೇ ಎನ್ನುತ್ತಾನೆ. ಯುವಕ ಹೌದು ಎನ್ನುತ್ತಾನೆ. ಆಗ ಸನ್ಯಾಸಿ ದೇಹದ ಮೇಲೆ ಹಾಕಿರುವ ಬಟ್ಟೆಯಲ್ಲ. ಮನಸ್ಸಿನ ಬಟ್ಟೆಯ ಮೇಲೆ ಕೊಳೆ ಇದೆಯೇ ಎನ್ನುತ್ತಾನೆ. ಆಗ ಯುವಕನಿಗೆ ತನ್ನ ತಪ್ಪಿನ ಅರಿವಾಗುತ್ತದೆ. ತಾನು ಊರಿನವರ ಬಳಿ ದೂರಿಕೊಂಡು ಬಂದ ವಿಚಾರಗಳು ನೆನಪಾಗುತ್ತದೆ. ಆತ ಸನ್ಯಾಸಿಯಲ್ಲಿ ಕ್ಷಮೆ ಕೇಳಿ, ಆತನ ಶಿಷ್ಯತ್ವವನ್ನು ಸ್ವೀಕರಿಸುವುದಾಗಿ ಹೇಳುತ್ತಾನೆ. ಆಗ ಸನ್ಯಾಸಿ ಮೊದಲು ನೀನು ಊರಿನ ಸೌಂದರ್ಯವನ್ನು ವೀಕ್ಷಿಸಿ ಬಾ. ಆಮೇಲೆ ನೋಡೋಣ ಎನ್ನುತ್ತಾನೆ. ಅಲ್ಲಿಂದ ಹೊರಟ ಯುವಕನಿಗೆ ಊರಿನ ಪ್ರತಿಯೊಂದರಲ್ಲೂ ಸೌಂದರ್ಯ ಕಾಣುತ್ತದೆ. ಮರಳಿ ಬಂದು ಆತ ಸನ್ಯಾಸಿಯ ಶಿಷ್ಯನಾಗುತ್ತಾನೆ.
ಜೀವನದಲ್ಲಿ ನಾವು ಮಾಡುವುದು ಕೂಡ ಇದನ್ನೇ ಅಲ್ವ. ಬೇರೆಯವರು ಹೇಳುವುದನ್ನು ಕೇಳಿ ಸ್ವಂತ ಆಲೋಚನೆ ಮಾಡಲು ಹೋಗುವುದಿಲ್ಲ.
- ವಿದ್ಯಾ ಕೆ. ಇರ್ವತ್ತೂರು