Advertisement
ರಾಜ್ಯದ ವಿಶ್ವವಿದ್ಯಾಲಯಗಳಲ್ಲಿನ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಶಾಸ್ತ್ರದ ವಿಷಯಗಳಲ್ಲಿ ಸೆಮಿಸ್ಟರ್ ಪದ್ಧತಿಯನ್ನು ಅಳವಡಿಸಿಕೊಂಡು ಒಂದು ದಶಕ ಪೂರ್ತಿಗೊಂಡಿರುವ ಸಂದರ್ಭದಲ್ಲಿ ಈ ವ್ಯವಸ್ಥೆಯ ಸಾಧಕ ಬಾಧಕಗಳ ಬಗ್ಗೆ ಅವಲೋಕನ ಮಾಡುವುದು ಅವಶ್ಯಕ. ಶಿಕ್ಷಣ ತಜ್ಞರ ಶಿಫಾರಸಿನಂತೆ; ತಾಂತ್ರಿಕ, ವೈದ್ಯಕೀಯ ಶಿಕ್ಷಣ ಸಂಸ್ಥೆಗಳಂತೆ ಸಾಂಪ್ರದಾಯಿಕ ಶಿಕ್ಷಣಗಳಾದ ಕಲೆ, ವಿಜ್ಞಾನ ಮತ್ತು ವಾಣಿಜ್ಯ ವಿಷಯಗಳಿಗೂ ಸೆಮಿಸ್ಟರ್ ಪದ್ಧತಿಯನ್ನು ಜಾರಿಗೆ ತಂದಿರುವುದು ಎಷ್ಟು ಸಮಂಜಸ? ಸೆಮಿಸ್ಟರ್ ವ್ಯವಸ್ಥೆಯಲ್ಲಿ ವಾರ್ಷಿಕವಾಗಿ ಎರಡು ಪರೀಕ್ಷೆಗಳು ನಡೆಯುತ್ತಿವೆ. ಪ್ರತಿ ಸೆಮಿಸ್ಟರಿಗೆ ಸರಿ ಸುಮಾರು ನಾಲ್ಕು ತಿಂಗಳು ತರಗತಿಗಳನ್ನು ನಡೆಸಿ, ನಿಗದಿ ಪಡಿಸಿದ ಪಠ್ಯಕ್ರಮವನ್ನು ಮುಗಿಸುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಅಸೈನ್‌ಮೆಂಟ್‌ಗಳನ್ನು ಕೊಡಬೇಕು. ಇನ್ನು ಇದೇ ಅವಧಿಯಲ್ಲಿ ಎರಡು ವರ್ಗ ಪರೀಕ್ಷೆಗಳನ್ನು ನಡೆಸುವುದರ ಮೂಲಕ ಶಿಕ್ಷಕರು ತಮ್ಮ ವಿಷಯಗಳಲ್ಲಿ ವಿದ್ಯಾರ್ಥಿಗಳಿಗೆ ಆಂತರಿಕ ಅಂಕಗಳನ್ನು ಕೊಡಬೇಕು. ಬೋಧನಾ ಅವಧಿ ಮುಗಿದ ಒಂದು ವಾರದಲ್ಲಿಯೇ ವಿಶ್ವವಿದ್ಯಾಲಯದ ಪರೀಕ್ಷೆಗಳು ನಡೆಯುತ್ತವೆ.
Related Articles
Advertisement
ಇನ್ನು, ಸೆಮಿಸ್ಟರ್ ಪದ್ಧತಿಯಲ್ಲಿ ಪಠ್ಯೇತರ ಚಟುವಟಿಕೆಗಳಾದ ಕ್ರೀಡೆ, ಭಾಷಣ, ಗಾಯನ ಸ್ಪರ್ಧೆ, ನಾಟಕ ಇತ್ಯಾದಿ ಸಾಂಸ್ಕೃತಿಕ ಚಟುವಟಿಕೆಗಳಿಗೆ ಅವಕಾಶ ಕಡಿಮೆ. ವಿದ್ಯಾರ್ಥಿಯ ಸರ್ವಾಂಗೀಣ ಅಭಿವೃದ್ಧಿ ಕೇವಲ ಪಠ್ಯವನ್ನು ಕಲಿಯುವುದರಿಂದ ಸಾಧ್ಯವಿಲ್ಲ. ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳೂ ಮುಖ್ಯ. ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ನಡೆದರೂ ಕೇವಲ ಕಾಟಾಚಾರದ ಕ್ರಿಯೆಗಳಾಗಿವೆಯಷ್ಟೆ!
ಈಗ ಮಹಾವಿದ್ಯಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ವಾರ್ಷಿಕ ವೇಳಾಪಟ್ಟಿಯತ್ತ ಗಮನ ಹರಿಸೋಣ. ಜೂನ್ ಮಧ್ಯ ಭಾಗದಲ್ಲಿ ಅಥವಾ ಜುಲೈ ಮೊದಲನೆ ವಾರದಲ್ಲಿ ತರಗತಿಗಳು ಪ್ರಾರಂಭವಾಗುತ್ತವೆ. ಅಕ್ಟೋಬರ್ ತಿಂಗಳ ಮಧ್ಯೆ /ಅಂತಿಮಕ್ಕೆ ತರಗತಿಗಳು ಮುಕ್ತಾಯವಾಗುತ್ತವೆ. ಈ ನಾಲ್ಕು ತಿಂಗಳ ಅವಧಿಯಲ್ಲಿ ಪ್ರತಿ ವಿಷಯದಲ್ಲಿ ಬರುವ ಐದರಿಂದ ಆರು ಅಧ್ಯಾಯಗಳನ್ನು ಬೋಧಿಸಬೇಕು. ವಿವರವಾಗಿ ಬೋಧನೆಯಲ್ಲಿ ತೊಡಗಿದರೆ ಐದು ಅಧ್ಯಾಯಗಳ ಪೈಕಿ ಮೂರು ಅಧ್ಯಾಯಗಳನ್ನು ಮುಗಿಸಲೂ ಆಗುವುದಿಲ್ಲ. ಜೂನ್ ನಡುವೆ/ಜುಲೈ ಮೊದಲನೆಯ ವಾರ ವರ್ಗಗಳು ಪ್ರಾರಂಭವಾದರೂ ಬಹಳಷ್ಟು ಶಿಕ್ಷಕರು ಉತ್ತರ ಪತ್ರಿಕೆಗಳ ಮೌಲ್ಯ ಮಾಪನದ ಕಾರ್ಯದಲ್ಲಿರುತ್ತಾರೆ! ಅವರು ಮೌಲ್ಯಮಾಪನ ಮುಗಿಸಿಕೊಂಡು ಬರುವುದು ಕಾಲೇಜು ಪ್ರಾರಂಭವಾದ ಒಂದು ವಾರದಿಂದ ಹಿಡಿದು 15 ದಿನದ ನಂತರವೇ. ಹೀಗಾಗಿ ಶಿಕ್ಷಕರಿಗೆ ತಮಗೆ ತೃಪ್ತಿಯಾಗುವಂತೆ ಪಾಠ ಮಾಡಲು ಸಮಯಾವಕಾಶವೇ ಇಲ್ಲ. ಮೊದಲನೆಯ ಅವಧಿ ಮುಕ್ತಾಯವಾಗುತ್ತಿದ್ದಂತೆ ವಿವಿಯ ವಾರ್ಷಿಕ ಪರೀಕ್ಷೆಗಳು ಪ್ರಾರಂಭವಾಗುತ್ತವೆ. ಶಿಕ್ಷಕರು ಆ ಪರೀಕ್ಷೆ ಕಾರ್ಯಗಳನ್ನು ಮಾಡಬೇಕು, ಪರೀಕ್ಷೆಗಳು ಮುಕ್ತಾಯ ಆಗುವ ಪೂರ್ವದಲ್ಲಿಯೇ ಮೌಲ್ಯಮಾಪನಕ್ಕೆ ಕರೆ ಬರುತ್ತದೆ! ವಾಪಸ್ ಬಂದ ನಂತರ ಮತ್ತೆ ಅವಸರ ಅವಸರವಾಗಿ ಪಾಠ, ಸೆಮಿನಾರು, ಅಸೈನ್‌ಮೆಂಟ್, ವರ್ಗ ಪರೀಕ್ಷೆಗಳು, ಆ ಪರೀಕ್ಷೆಗಳ ಮೌಲ್ಯಮಾಪನ ಮತ್ತೆ ಒಂದು ಚಕ್ರ ಮುಕ್ತಾಯ!
ಮಹಾವಿದ್ಯಾಲಯಗಳ ಪ್ರಾಧ್ಯಾಪಕರು ಯುಜಿಸಿ ವೇತನ ಪಡೆದು ಆರಾಮದಿಂದ ಇರುತ್ತಾರೆ, ಅವರಿಗೆ ರಜಾ ಅವಧಿ ಸಾಕಷ್ಟು ಇರುತ್ತದೆ ಎಂದು ಜನ ಸಾಮಾನ್ಯರು ತಿಳಿದಿರುತ್ತಾರೆ. ಆದರೆ ಸೆಮಿಸ್ಟರ್ ಪದ್ಧತಿ ಜಾರಿಗೆ ಬಂದಾಗಿನಿಂದ ವಿಶ್ವವಿದ್ಯಾಲಯ ಹಾಗೂ ಮಹಾವಿದ್ಯಾಲಯಗಳಲ್ಲಿ ಕಾರ್ಯ ನಿರ್ವಹಿಸುವ ಪ್ರಾಧ್ಯಾಪಕರು ರಜಾ ರಹಿತ ಉದ್ಯೋಗಿಗಳಾಗಿದ್ದಾರೆ. ಪದವಿ ಹಂತದಲ್ಲಿ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಯ ದೃಷ್ಟಿಯಲ್ಲಿ ಸೆಮಿಸ್ಟರ್ ವ್ಯವಸ್ಥೆ ಸರ್ವಥಾ ಸೂಕ್ತವಲ್ಲ. ನಾನು 32 ವರ್ಷಗಳ ಶಿಕ್ಷಕ ವೃತ್ತಿಯಲ್ಲಿ 22 ವರ್ಷ ನಾನ್ ಸೆಮಿಸ್ಟರ್ ಪದ್ಧತಿಯಲ್ಲಿ ಮತ್ತು ಹತ್ತು ವರ್ಷ ಸೆಮಿಸ್ಟರ್ ಪದ್ಧತಿಯಲ್ಲಿ ಕಾರ್ಯನಿರ್ವಸಿದ ಅನುಭವದಲ್ಲಿ ಹೇಳುವುದಾದರೆ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಪಡೆಯುವಲ್ಲಿ ಸೆಮಿಸ್ಟರ್ ಪದ್ಧತಿ ಯಾವುದೇ ಕಾರಣಕ್ಕೂ ಸೂಕ್ತವಾದದುದಲ್ಲ. ಶಿಕ್ಷಣ ತಜ್ಞರು, ವಿಶ್ವವಿದ್ಯಾಲಯಗಳು, ಸರಕಾರ ಈ ವಿಷಯವನ್ನು ಪುನರ್ ಪರೀಶಿಲನೆಗೆ ಒಳಪಡಿಸುವುದು ವಿಹಿತ ಎಂದು ನನ್ನ ಭಾವನೆ.
ಪ್ರೊ| ಎಸ್.ಎ. ತಾಂಬೆ