Advertisement

ಜೈಲು ಸೇರಿದ ರೈತರು, ರಾಜಕೀಯ ಭೀಷ್ಮ ಎಲ್ಲಿದ್ದಾರೆ; ಹಾಲಪ್ಪ ವ್ಯಂಗ್ಯ

03:58 PM Jul 22, 2023 | Shreeram Nayak |

ಸಾಗರ: ಮಡಸೂರು ಗ್ರಾಮದ 7 ರೈತರನ್ನು ಜೈಲಿಗೆ ಕಳಿಸಿ ಕೆಲವರು ತಮಾಷೆ ನೋಡುತ್ತಿರುವ ಸಂದರ್ಭದಲ್ಲಿ ರಾಜಕೀಯ ಭೀಷ್ಮ ಎಂದು ಹೇಳಿಕೊಳ್ಳುತ್ತಿದ್ದವರು ಯಾವ ಬಿಲ ಸೇರಿಕೊಂಡಿದ್ದಾರೆ ಎಂದು ಮಾಜಿ ಸಚಿವ ಎಚ್. ಹಾಲಪ್ಪ ಹರತಾಳು ತೀಕ್ಷ್ಣವಾಗಿ ಹಿರಿಯ ರಾಜಕಾರಣಿ, ಮಾಜಿ ಸಚಿವ ಕಾಗೋಡು ತಿಮ್ಮಪ್ಪನವರ ಮೇಲೆ ಪ್ರತ್ಯಕ್ಷ, ಪರೋಕ್ಷ ರೀತಿಯಲ್ಲಿ ಸತತವಾಗಿ ವ್ಯಂಗ್ಯದ ಚಾಟಿ ಬೀಸಿದರು.

Advertisement

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರು ಜೈಲಿಗೆ ಹೋಗಿದ್ದರೂ ಭೂಹೀನರಿಗೆ ಭೂಮಿ ಕೊಟ್ಟಿದ್ದಾರೆ ಎಂದು ಕರೆಸಿಕೊಳ್ಳುವ, ರೈತರಿಗೆ ಅನ್ಯಾಯವಾಗುತ್ತದೆ ಎಂದರೆ ರಕ್ತ ಕುದಿಯುತ್ತದೆ ಎನ್ನುವ ಕಾಗೋಡು ಪ್ರತಿಕ್ರಿಯೆ ನೀಡದಿರುವುದು ಅತ್ಯಾಶ್ಚರ್ಯವಾಗಿದೆ. ಈ ಸಾಗರದ ಭೀಷ್ಮ ದ್ರೌಪದಿ ವಸ್ತ್ರಾಹರಣ ಕಾಲದಲ್ಲಿ ಕೌರವರು ಮಾಡಿದ್ದನ್ನೆಲ್ಲ ನೋಡಿಕೊಂಡು ಸುಮ್ಮನಿದ್ದಂತೆ ಮೌನವಾಗಿದ್ದಾರೆ ಎಂದು ನೇರ ಟೀಕೆ ಮಾಡಿದರು.

ಮಡಸೂರು ಗ್ರಾಮದ ಸ.ನಂ. 71ರಲ್ಲಿ 9 ರೈತರಿಗೆ 70ರ ದಶಕದಲ್ಲಿ ಜಮೀನು ಮಂಜೂರಾಗಿದೆ. ಕೆಲವು ರೈತರು ಜಮೀನು ಸಾಗುವಳಿ ಮಾಡಿಲ್ಲ. ಈಚೆಗೆ ರೈತರು ಜಮೀನು ಸಾಗುವಳಿಗೆ ಮುಂದಾಗಿದ್ದಾಗ ತಹಶೀಲ್ದಾರ್ ಸ್ಥಳಕ್ಕೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ರೈತರು ಮತ್ತು ಅಧಿಕಾರಿಗಳ ಜೊತೆ ಮಾತಿನ ಚಕಮಕಿ ನಡೆದಿದೆ. ಆದರೆ ರೈತರು ತಮ್ಮನ್ನು ಕೊಲೆ ಮಾಡಲು ಪ್ರಯತ್ನ ನಡೆಸಿದ್ದಾರೆ ಎಂದು ತಹಶೀಲ್ದಾರ್ ಪೊಲೀಸರಿಗೆ ದೂರು ನೀಡಿ ರೈತರನ್ನು ಜೈಲಿಗೆ ಕಳಿಸಿರುವುದು ಮಾತ್ರ ದುರದೃಷ್ಟಕರ ಸಂಗತಿ. ಹಲ್ಲೆಯಾಗಿದ್ದರೆ ಸಣ್ಣಪುಟ್ಟ ಗಾಯ ತಹಶೀಲ್ದಾರ್‌ಗಾಗಲೀ, ಇತರೆ ಅಧಿಕಾರಿಗಳಿಗಾಗಲಿ ಆಗಬೇಕಾಗಿತ್ತು. ರೈತರು ಸಹಜವಾಗಿ ಜಮೀನು ಸವರಲು ಕತ್ತಿ, ಕುಡುಗೋಲು ತೆಗೆದುಕೊಂಡು ಹೋಗಿದ್ದಾರೆ. ಆದರೆ ತಮ್ಮ ಮೇಲೆ ಮಚ್ಚಿನಿಂದ ಹಲ್ಲೆ ನಡೆಸುವ ಪ್ರಯತ್ನ ಆಗಿದೆ ಎಂದು ತಹಶೀಲ್ದಾರ್ ಹೇಳಿರುವುದು ಸತ್ಯಕ್ಕೆ ದೂರವಾದ ಸಂಗತಿ. ರೈತರ ಮೇಲೆ ಐದಾರು ಕೇಸು ಹಾಕಿ 13 ದಿನಗಳಿಂದ ಜೈಲಿನಲ್ಲಿ ಇರಿಸಲಾಗಿದೆ ಎಂದು ಹೇಳಿದರು.

ಮಲೆನಾಡಿನಲ್ಲಿ ಯಾವ ರೈತರು ಅಧಿಕಾರಿಗಳನ್ನು ಕೊಲೆ ಮಾಡುವ ಹಂತಕ್ಕೆ ಹೋಗಿದ್ದು, ಜೀವ ಬೆದರಿಕೆ ಹಾಕಿದ ಉದಾಹರಣೆ ಇಲ್ಲ. ತಮ್ಮ ಸ್ವಾಧೀನದಲ್ಲಿರುವ ಜಮೀನು ಉಳಿಸಿಕೊಳ್ಳಲು ಸಣ್ಣಪುಟ್ಟ ಮಾತುಕತೆ ಆಡಿರಬಹುದು. ಮಡಸೂರು ರೈತರನ್ನು ಜೈಲಿಗೆ ಕಳಿಸುವುದರ ಹಿಂದೆ ರಾಜಕೀಯ ದುರುದ್ದೇಶ ಇರುವುದು ಎದ್ದು ಕಾಣುತ್ತಿದೆ. ರೈತರನ್ನು ಜೈಲಿಗೆ ಕಳಿಸಿ ಮಜಾ ನೋಡುವ ಪ್ರವೃತ್ತಿ ಯಾವ ರಾಜಕಾರಣಿಗಳು ಶೋಭೆ ತರುವುದಿಲ್ಲ ಎಂದು ತೀವ್ರವಾಗಿ ಪ್ರತಿಕ್ರಿಯಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರು ತಾವು ರೈತರ ಪರವಾಗಿ ಹೋರಾಟ ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ. ಅವರಿಗೆ 7 ಜನ ರೈತರು 13 ದಿನಗಳಿಂದ ಜೈಲಿನಲ್ಲಿರುವುದು ಗೊತ್ತಿರಬೇಕಿತ್ತು. ಸಚಿವರು ಇದರ ಬಗ್ಗೆ ಗಮನ ಹರಿಸಬೇಕು. ಜೈಲಿಗೆ ಹೋಗಿರುವ ಅಮಾಯಕ ರೈತರನ್ನು ಹೊರಗೆ ತರುವ ನಿಟ್ಟಿನಲ್ಲಿ ನಮ್ಮ ಹಂತದಲ್ಲಿ ಪ್ರಯತ್ನ ನಡೆಸುತ್ತಿದ್ದೇವೆ. ಕ್ಷೇತ್ರವ್ಯಾಪ್ತಿಯಲ್ಲಿ ಇಂತಹ ದಬ್ಬಾಳಿಕೆ ರಾಜಕಾರಣ ಪ್ರಾರಂಭವಾಗಿದೆ. ಈ ದ್ವೇಷದ ರಾಜಕಾರಣ ಎಲ್ಲಿಗೆ ಹೋಗಿ ನಿಲ್ಲುತ್ತದೆಯೋ ಗೊತ್ತಿಲ್ಲ. ಜಿಲ್ಲಾಧಿಕಾರಿಗಳು, ಜಿಲ್ಲಾ ರಕ್ಷಣಾಧಿಕಾರಿಗಳು ಸತ್ಯಾಸತ್ಯತೆಯನ್ನು ಅರಿಯುವ ಪ್ರಯತ್ನ ನಡೆಸಬೇಕು ಎಂದು ಹೇಳಿದರು.

Advertisement

ಗೋಷ್ಠಿಯಲ್ಲಿ ದೇವೇಂದ್ರಪ್ಪ ಯಲಕುಂದ್ಲಿ, ಕೊಟ್ರಪ್ಪ ನೇದರವಳ್ಳಿ, ವಿನಾಯಕರಾವ್ ಮನೆಘಟ್ಟ, ಬಿ.ಟಿ.ರವೀಂದ್ರ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next