Advertisement

ಬಂಡೆಯನು ಕಂಡಾಗಲೆಲ್ಲ ಅಹಲ್ಯೆಯೇ ನೆನಪಾಗುತ್ತಾಳಲ್ಲ!

01:38 PM Jan 26, 2018 | |

ಪುರಾಣದ ಕಥೆಗಳು ಮೇಲ್ನೋಟಕ್ಕೆ ಮಿಥ್ಯಸೃಷ್ಟಿಯೆಂದು ಅನಿಸಿದರೂ ಸಾವಿರ ಸಾವಿರ ವರ್ಷಗಳಿಂದ ಜನಪದ ಮಣ್ಣ ಬದುಕಲ್ಲಿ ಆಳವಾಗಿ ಬೇರೂರಿ ವಿಸ್ತಾರವಾಗಿ ಹರಿದುಕೊಂಡು ಬಂದಿರುವ ಜೀವನದಿ. ಅವು ಭೂತಕಾಲದಲ್ಲಿ ಹುಟ್ಟಿದರೂ ವಾಸ್ತವ ಜಗತ್ತಿನಲ್ಲಿ ಇನ್ನೊಮ್ಮೆ ಮತ್ತೂಮ್ಮೆ ಮಗದೊಮ್ಮೆ ಮರುಜೀವವನ್ನು ಪಡೆಯುತ್ತಲೇ ಇರುತ್ತವೆ. ಪುರಾಣದ ಕಥೆಗಳಿಗೆ ಕಾವ್ಯಗಳೇ ಆಧಾರ. ರಾಮಾಯಣ, ಮಹಾಭಾರತ ಪುರಾಣಕಾವ್ಯಗಳು ಭಾರತೀಯ ಮಣ್ಣ ಆಧ್ಯಾತ್ಮಿಕ ಕಣ್ಣುಗಳು. ಇವು ಮತ್ತೆ ಮತ್ತೆ ಹೊಸದಾಗುತ್ತ ಬದುಕಿನ ಹೊಸ ಮಗ್ಗುಲುಗಳ ಹುಡುಕಾಟ ನಡೆಸುತ್ತಲೇ ಇವೆ. ಇದಕ್ಕೊಂದು ನಿದರ್ಶನ ರಾಮಾಯಣದ ಅಹಲ್ಯೆ.

Advertisement

ಬ್ರಹ್ಮನ ಮಾನಸಸೃಷ್ಟಿಯಿವಳು. ಕುಲೀನೆಯಾದರೂ ಶೋಷಣೆ ತಪ್ಪದವಳು. ಮಣ್ಣ ಬದುಕಲೆ ಮೊಳೆತ ಧರ್ಮ ದೇವರಿಗೂ ಹೊರತಲ್ಲ  ಇಲ್ಲಿ ಮಣ್ಣಮೋಹ. ಅದಕ್ಕೇ ದೇವನೆನಿಸಿಕೊಂಡು ಅಹಲ್ಯೆಯ ಪತಿ ಗೌತಮರಿಂದಲೇ ಹವಿಸ್ಸನ್ನು ಪಡೆದ ಇಂದ್ರ ಅವಳ ಪತಿಯ ವೇಷದಲ್ಲೇ ಬಂದು ಕೂಡಿ ಅವಳ ಜೀವನವನ್ನೇ ನಾಶ ಮಾಡಿದ. ಮನುಷ್ಯನಾಗಿ ಬಂದ ರಾಮ ಅವಳ ಬದುಕನ್ನು ಉದ್ಧಾರ ಮಾಡಿದ. ಅವಳ ತಪ್ಪಿಲ್ಲದಿದ್ದರೂ ಹೆಣ್ಣಾದ ತಪ್ಪಿಗೆ ಅವಳು ಗೌತಮನ ಶಾಪಕ್ಕೆ ತುತ್ತಾಗಿ ಕಲ್ಲಾಗಲೇಬೇಕಾಯಿತು. ತಪ್ಪು$ಮಾಡಿದ ದೇವೇಂದ್ರ ತಲೆಯೆತ್ತಿ ಬಾಳಿದ.  ಇಂದಿಗೂ ಲೈಂಗಿಕ ಶೋಷಣೆಗೊಳಗಾದ ಹೆಣ್ಣನ್ನೇ ಸಮಾಜ ತಪ್ಪಿತಸ್ಥಳಂತೆ ನೋಡುತ್ತದೆಯಲ್ಲ, ಶೀಲ ಎನ್ನುವುದು ಹೆಣ್ಣಿಗೆ ಮಾತ್ರ ಸಂಬಂಧಿಸಿದ ಪದವೆಂಬಂತೆ!

“ವಾಲ್ಮೀಕಿ ರಾಮಾಯಣ’ದಲ್ಲಿ ವಿಶ್ವಾಮಿತ್ರಮುನಿಯೇ ರಾಮ ಲಕ್ಷ್ಮಣರಿಗೆ ಅಹಲ್ಯೆಯ ಕತೆ ಹೇಳಿ ಕಲ್ಲನ್ನು ತೋರಿ ಶಾಪವಿಮೋಚನೆ ಮಾಡುವಂತೆ ಹೇಳುತ್ತಾನೆ. ಆದರೆ, ರಾಮಾಯಣ ದರ್ಶನಂ ಮಹಾಕಾವ್ಯದಲ್ಲಿ ಕುವೆಂಪು ಅವರ ರಾಮ ತನ್ನ ಬೆಳಕಲೇ ನಡೆಯುವ ಚಲನಶೀಲ ವ್ಯಕ್ತಿತ್ವದವ, ನೃತ್ಯಶೀಲ. ಅದಕ್ಕೇ ನೀರವವನ್ನು ಬರೆದಂತೆ, ನಿಶ್ಚಲವನ್ನು ಕೊರೆದಂತೆ, ನಿಶ್ಯಬ್ದವಾಗಿದ್ದ ಮೌನಬನವು ಅವನ ಪಾದಸ್ಪರ್ಶಕ್ಕೆ ಚೈತ್ರಲಕ್ಷ್ಮೀಯ ಸ್ಪರ್ಶವಾದಂತೆ ಉಸಿರಾಡತೊಡಗುತ್ತದೆ. ನಾಳನಾಳದಲ್ಲೂ ಗಾಳಿಯಲಿ ಶಕ್ತಿಸಂಚರಿಸಿ ಕೊಂಬೆಕೊಂಬೆಗಳಲ್ಲೂ ಹೂವರಳಿ ಹಕ್ಕಿಗಳ ಇಂಚರದೊಡನೆ ದುಂಬಿಗಳು ಓಂಕಾರವನ್ನು ಝೇಂಕರಿಸುತ್ತವೆ. ರಾಮ ಹೂವು ಅರಳುವ ನಿಶ್ಯಬ್ದ ಮೌನವನ್ನೂ ಆಲಿಸಬಲ್ಲವ, ನೇಸರನ ಹೆಜ್ಜೆಯ ಸದ್ದನ್ನೂ ಕೇಳಬಲ್ಲ ಸೂಕ್ಷ್ಮ ಹೃದಯದವನು. ಕೆತ್ತುವ ಮುನ್ನವೇ ಕಲ್ಲಿನೊಳಗೆ ರೂಪ ಕಾಣುವ ಶಿಲ್ಪಿಯಂತೆ ಚೇತನ ಕಳಕೊಂಡು ಜಡವಾದ ಶಿಲೆಯೊಳಗೆ ತಪಸ್ವಿನಿಯನ್ನು ಕಂಡವನು ಇವರೊಳಗಿನ ಅಂತಃಕರಣದ ರಾಮ.

ಕಾಡನ್ನು ಪ್ರವೇಶಿಸುತ್ತಿದ್ದಂತೆ ಅನಿಮಿತ್ತ ಶೋಕದಿಂದ ರಾಮಾತ್ಮವು ಕರಗಿ ಕಣಳಿಂದ ನೀರು ಹರಿಯಿತಂತೆ. ತಾಯಿ ಕೌಸಲೆ ಗೋಳಿಡುತ್ತ ತನ್ನ ಹೆಸರ ಹಿಡಿದು ಕರೆವಂತೆ ಕಲ್ಲು ಹುಲ್ಲು  ಮರಮರದ ಹೃದಯದಿಂದ ಸಂಕಟವು ರಾಮನೊಬ್ಬನಿಗೆ ಮಾತ್ರ ಕೇಳಿತಂತೆ. ತಳಿರ ತುದಿಯಲ್ಲಿ  ಹೊಳೆವ ಇಬ್ಬನಿ ತಂಗಾಳಿಗೆ ತರತರನೆ ಕಂಪಿಸುವಂತೆ ಚಿನ್ಮಯಾವೇಶದಿಂದ ಅವನ ಮೈ ಸ್ಪಂದಿಸಿತು. ಕೈಯಲ್ಲಿ ಹಿಡಿದ ಬಿಲ್ಲು ನಡುಗಿತು. ಬೆನ್ನ ಮೇಲಿನ ಬತ್ತಳಿಕೆ ಕುಣಿಯಿತು. ಗಾಳಿಗೊಲಿಯುವ ಬಳ್ಳಿ ಜೋಲ್ವಂತೆ ತಲೆಯ ಮೇಲಾಡಿತು ಕಾಕಪಕ್ಷಿಯ ಕುರುಳು. ವೃಕ್ಷವು ಏದುಸಿರನ್ನು ಬಿಟ್ಟಿತು. ವದನದಿಂದ ತೇಜವು ಚೆಲ್ಲಿತು. ನೋಡುತ್ತಿದ್ದಂತೆ ಬಾಹ್ಯಸಂಜ್ಞಾnಶೂನ್ಯನೆಂಬಂತೆ ಭಾವದ ಸಮಾಧಿಯಿಂದ ಮಧುಮತ್ತನಂತೆ ರಘುನಂದನನು ನರ್ತಿಸಲು ತೊಡಗಿದನು ಎನ್ನುತ್ತಾರೆ ರಸಋಷಿ ಕುವೆಂಪು. ನೃತ್ಯಕ್ಕೆ ಚೌಕಟ್ಟು ಉಂಟೆ? ಕುಣಿಕೆ ಬಿಚ್ಚಿದೊಡನೆ ಕಿವಿಗೆ ಗಾಳಿ ಹೊಕ್ಕ ಕರುವಿನಂತಾದ ರಾಮ. ಇಲ್ಲಿ ರಾಮನೇ ಮೈಮರೆತು ಅಂತರ್ಮುಖೀಯಾಗುತ್ತ ತಪಸ್ವಿಯಾಗುವಂತೆ ಭಾಸವಾಗುತ್ತದೆ ನಮಗೆ. ಇಲ್ಲಿದೆ ತಾದಾತ್ಮ. ಬಂಡೆಯೇ ತನ್ನೆಡೆಗೆ ಸೆಳೆಯುತ್ತದೆ.

ನೃತ್ಯಶೀಲ ರಾಮನು ಮುಂದೆ ಮುಂದೆ ಚಲಿಸಿದನು, ಇತರರು ಮಂತ್ರಮುಗ್ಧರಾಗಿ ಹಿಂಬಾಲಿಸಿದರು. ವನತಾಯ ಎದೆಯಲ್ಲಿ ಒರಲೆಯ ಹುತ್ತ ತಬ್ಬಿದ್ದ ಹಾವಸೆಯ ಕಲ್ಲಬಂಡೆ. ಸತಿಯ ರಕ್ಷಣೆಗಾಗಿ ಪತಿಯ ಶಾಪವೇ ರೂಪವಾಯಿತೋ ಎಂಬಂತೆ ಶಿಲೆಯ ಮೇಲೆ ಒರಗಿ ಕಿಚ್ಚುಗಣ್ಣಿಂದ ನಿತ್ಯ ಕಾಯುತ್ತಿದ್ದ ಕಡುಹಳದಿ ಪಟ್ಟೆಯ ಹೆಬ್ಬುಲಿಯೊಂದು ಇವರನ್ನು ಕಂಡದ್ದೇ ಎದ್ದು ಮರೆಯಾಯಿತಂತೆ. ರಾಮ ಲಾಸ್ಯದಲಿ ಬಂಡೆಯನ್ನೇರಿದ. ಪ್ರೇಮ, ಸಾಮೀಪ್ಯ, ಸಾನಿಧ್ಯ ಸಂಸರ್ಗದಿಂದ ತಲ್ಲಣಗೊಳ್ಳುವ ಅಬಲೆಯಂತೆ ಚರಣಚುಂಬನಕೆ ಕಲ್ಲೇ ತಾನು ಬೆಣ್ಣೆಯಾದಂತೆ ಕಂಪಿಸಿತು. ನೇಸರನ ಉರಿಗೆ ಕರ್ಪೂರಶಿಲೆಯಂತೆ ಬಂಡೆ ದ್ರವಿಸಿತು. ದಿವ್ಯ ಮಾಯಾಶಿಲ್ಪಿ ಕಲ್ಪನಾದೇವಿಯನ್ನು ಕಲ್ಲಸೆರೆಯಿಂದ ಬಿಡಿಸಿ ಕೃತಿಸಿದಂತೆ ಹಾಲುಬಿಳಿಯ ನಾರುಡುಗೆಯ, ಕಪ್ಪಿರುಳ ಸೋರ್ಮುಡಿಯ, ಹೊಳೆವ ನೋಂಪಿಯ ಮೊಗದ, ಮಂಜು ಮಾಂಗಲ್ಯದ ತಪಸ್ವಿನೀ ವಿಗ್ರಹವು ಅಡಿದಾವರೆಗೆ ಹಣೆಮಣಿದು ನಿಂತಿತು. ಹೆತ್ತತಾಯಿಯನ್ನು ಮತ್ತೆ ಪಡೆದಂತೆ ಅವಳ ಪಾದಕೆ ಬಿದ್ದನು ರಾಮ. ಶಿವ ಬಂದಂತೆ ಗೌತಮನು ಅಲ್ಲಿ ಬರುತ್ತಾನೆ, ಅಲ್ಲಿಗೆ ಎಲ್ಲ ಸುಖಾಂತ್ಯ.

Advertisement

ಮಂದಾರ ಕೇಶವ ಭಟ್ಟರ ಮಂದಾರ ರಾಮಾಯಣದಲ್ಲಿ ಬಿಸಿಲ ಚುಟಿಗೆ ಬಳಲಿ ಬಾಯಾರಿ ದೂರದ ಆಶ್ರಮದತ್ತ ಹೆಜ್ಜೆ ಹಾಕುತ್ತಾರೆ. ನೋಡನೋಡ ಕಾರ್ಮೋಡ ಕವಿದು ಆಗಸ ಬಿರಿವಂತೆ ಮಳೆ! ಚೆಂಡೆಲಿನಂತಹ (ತೆಂಗಿನಮಿಟ್ಟೆ) ಹನಿಗಳ ಹೊಡೆತಕೆ ಒದ್ದೆಮುದ್ದೆಯಾಗುತ್ತ ಆಶ್ರಮಕೆ ಬಂದವರನ್ನು ಗೌತಮ ಉಪಚರಿಸುತ್ತಾನೆ. “”ಇವ ರಾಮ, ಮುಂದೆ ಅರಸನಾಗುವವನು” ಎಂಬ ಮಾತು ಕೇಳುತ್ತಿದ್ದಂತೆ ಅದುವರೆಗೆ ಅಂಗಳದಲ್ಲೆ ಕಲ್ಲಬೊಂಬೆಯಂತೆಯೇ ಕುಳಿತಿದ್ದ ಹೆಂಗಸು ಅಲ್ಲಿಂದೆದ್ದು ಬಂದು ಮೆಟ್ಟಿಲ ಬುಡದಲಿ ನಿಂದು ನ್ಯಾಯ ಕೇಳುತ್ತಾಳೆ.

“”ನನ್ನ ತಂದೆ ಬ್ರಹ್ಮದೇವರು. ನನ್ನ ವಿವಾಹದ ಯೋಚನೆಯಲ್ಲಿದ್ದರು. ಆಗಲೇ ಬಂದ ದೇವೇಂದ್ರನ ಚಂದ ಕಂಡು ಮರುಳಾಗಿ ಅಪ್ಪಯ್ಯನೊಡನೆ  ತಿಳಿಸಿದೆನು. ಈ ಋಷಿಗಳೆಲ್ಲಿಂದ ಬಂದರೋ ವಿವಾಹಪ್ರಸ್ತಾಪ ಮಾಡಿಬಿಟ್ಟರು. ಕೊಡುವೆನೆಂದರೆ ಮಗಳಿಗೊಪ್ಪಿಗೆಯಿಲ್ಲ, ಬಿಡುವೆನೆಂದರೆ ಮುನಿಯು ಮುನಿದರೆ! ಭೂಮಂಡಲವನ್ನು ಮೂರುಮುಕ್ಕಾಲು ಗಳಿಗೆಯೊಳಗೆ ಸುತ್ತುವವರಿಗೆ ಮಗಳು” ಎಂದುಬಿಟ್ಟ ಅಪ್ಪಯ್ಯ. ಇಂದ್ರನು ಐರಾವತವನ್ನೇರಿ ಸುತ್ತತೊಡಗಿದರೆ ಇವರು ನಮ್ಮ ಹಿತ್ತಲಲ್ಲಿದ್ದ ಆಕಳಿಗೆ ಮೂರುಸುತ್ತು ಬಂದು, “”ಭೂಮಿ ಮತ್ತು ದನಕ್ಕೆ ಬೇಧವಿಲ್ಲ. ಕಳೆದಯುಗಕೆ  ಮನುವು, ಈ ಯುಗಕೆ ನಾನು” ಎಂದು ವಿವಾಹವಾಗಿಬಿಟ್ಟರು! ಮೊನ್ನೆ ಇರುಳಲ್ಲಿ ನಿದ್ದೆಯಲಿ ನಾನು ಇಂದ್ರನನ್ನು ಕನವರಿಸಿದೆನಂತೆ.  “”ನನ್ನ ಮನೆಯ ಮೆಟ್ಟುಕಲ್ಲು ಹತ್ತಬೇಡ ನಡೆ” ಎಂದು ರಾತ್ರೋರಾತ್ರಿ ಹೊರಗಟ್ಟಿದರಲ್ಲ, ಇದು ಸರಿಯೆ? ಅಂದು ಭೂಮಿಗೂ ದನಕೂ ಬೇಧವಿಲ್ಲವೆಂದರಲ್ಲ? ಭೂಮಿಯೆಂದು ದನದ ಬೆನ್ನಲಿ ಹೊಂಡ ತೋಡಿ ಸಸಿ ನೆಡಲಾಗುವುದೇ? ಕನಸಲಿ ನಡೆದುದಕ್ಕೇ ಹೀಗೆ ಮಾಡಿದವರು ನಾಳೆ ಕನಸಿನಲಿ ಸತ್ತೆನೆಂದು ಕನವರಿಸಿದರೆ ಎನ್ನ ಸುಟ್ಟು ಕಾಗೆಗನ್ನವಿಡಲಾರರೇ? ಇದರಲ್ಲಿ ನನ್ನ ತಪ್ಪೇನಿದೆ ಹೇಳಿ? ಅಂದಿನಿಂದ ಅನ್ನನೀರು ಮುಟ್ಟದೆಯೇ ಬಿಸಿಲು ಮಳೆಗೆ ಕುಳಿತಲ್ಲಿಂದ ಏಳದೆಯೇ ಕಲ್ಲಿನಂತಿದ್ದವಳು ಈಗ ಎದ್ದು ಬಂದೆ” ಎನ್ನುತ್ತಾಳೆ. ಇದಕ್ಕೆ ರಾಮ ಕೊಡುವ ನ್ಯಾಯದಿಂದಾಗಿ ರಾಮನು ಸ್ತ್ರೀಸಂವೇದನೆಯ ಒಂದು ಭಾಗವಾಗಿಯೇ ಕಾಣಿಸುತ್ತಾನೆ.

ಕಪ್ಪುಬಂಡೆಗಳನ್ನು ಕಂಡಾಗೆಲ್ಲ ಅಹಲ್ಯೆಯೇ ನೆನಪಾಗುತ್ತಾಳಲ್ಲ!

ಕಾತ್ಯಾಯಿನಿ ಕುಂಜಿಬೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next