Advertisement
25 ವರ್ಷಗಳ ಹಿಂದೆ ಇಲ್ಲಿ ತೂಗು ಸೇತುವೆಯನ್ನು ನಿರ್ಮಾಣ ಮಾಡಲಾಗಿತ್ತು. ಇದೀಗ ತೂಗು ಸೇತುವೆ ಶಿಥಿಲಗೊಂಡು ಮುರಿದು ಬಿದ್ದಿದ್ದು, ನೇತಾಡುತ್ತಿದೆ. ಕಬ್ಬಿಣದ ರಾಡ್‌ಗಳು ತುಕ್ಕು ಹಿಡಿದಿವೆ. ಕೆಲವೊಂದು ಭಾಗಗಳು ಈ ವರ್ಷ ಸುರಿದ ಮಳೆಯಿಂದ ಹೊಳೆಯಲ್ಲಿ ಅಧಿಕ ನೀರು ಬಂದು ಕೊಚ್ಚಿಕೊಂಡು ಹೋಗಿವೆ. ಸೇತುವೆಯ ಇನ್ನೊಂದಷ್ಟು ಬಿಡಿ ಭಾಗಗಳು ಅಲ್ಲಿ ಜೋತಾಡುತ್ತಿವೆ. ಸುಮಾರು 8 ವರ್ಷಗಳ ಹಿಂದೆಯೇ ಈ ಸೇತುವೆ ಶಿಥಿಲಗೊಂಡಿದೆ. ಬಳಿಕ ಈ ಭಾಗದ ಜನರು ಮಳೆಗಾಲದಲ್ಲಿ ಸಂಪರ್ಕ ಕಳೆದುಕೊಂಡಿದ್ದಾರೆ.
ಅನೇಕ ವರ್ಷಗಳಿಂದ ಇಲ್ಲಿಗೆ ಸರ್ವಋತುವಿನಲ್ಲಿ ವಾಹನ ಓಡಲು ಸಂಪರ್ಕ ಸೇತುವೆ ನಿರ್ಮಾಣ ಮಾಡಬೇಕೆಂದು ಸ್ಥಳೀಯಾಡಳಿತಕ್ಕೆ ಹಾಗೂ ಶಾಸಕರು, ಸಂಸದರಿಗೆ, ರಾಜ್ಯ ಸರಕಾರಕ್ಕೆ, ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಜನಪ್ರತಿನಿಧಿಗಳು ಸೇತುವೆ ನಿರ್ಮಾಣದ ಭರವಸೆ ನೀಡಿದ್ದರೂ ಎರಡು ವರ್ಷಗಳ ಹಿಂದೆ ಮಲೆನಾಡು ಪ್ರದೇಶಾಭಿವೃದ್ಧಿ ಯೋಜನೆ ಅಡಿ 50 ಲಕ್ಷ ರೂ. ಮಂಜೂರುಗೊಂಡಿತ್ತು. ಆದರೆ ಅನುದಾನ ಬಿಡುಗಡೆ ಆಗಿರಲಿಲ್ಲ. ತೊಡಿಕಾನ ಗ್ರಾಮದ ಪೆತ್ತಾಜೆ ಎನ್ನುವಲ್ಲಿ ಸಂಪರ್ಕ ಸೇತುವೆ ನಿರ್ಮಾಣ ಮಾಡಲು ಅನುದಾನ ಬಿಡುಗಡೆಗೊಂಡಿದೆ ಎಂದು ತಿಳಿದುಬಂದಿದೆ. ಆದರೆ ಕಾಡುಪಂಜ ಹಾಗೂ ಊರುಪಂಜದ ಜನಪ್ರತಿನಿಧಿಗಳು ಎರುಕಡಪುದಲ್ಲಿಯೇ ಸೇತುವೆ ನಿರ್ಮಾಣ ಮಾಡಬೇಕೆಂದು ಜನಪ್ರತಿನಿಧಿಗಳನ್ನು ಒತ್ತಾಯಿಸುತ್ತಿದ್ದಾರೆ.
Related Articles
ಕಾಡಪಂಜ ಹಾಗೂ ಊರುಪಂಜ ಪರಿಸರದಲ್ಲಿ 42ಕ್ಕೂ ಅಧಿಕ ಮನೆಗಳು ಇವೆ. ಈ ಭಾಗದ ಜನರು ತಮ್ಮ ದಿನನಿತ್ಯದ ವ್ಯವಹಾರಗಳಿಗೆ ಸಂಪಾಜೆ ಗ್ರಾ.ಪಂ. ವ್ಯಾಪ್ತಿಯ ಕಲ್ಲುಗುಂಡಿ ಪೇಟೆಯನ್ನು ಅವಲಂಬಿಸಿದ್ದಾರೆ. ಇದೀಗ ಇಲ್ಲಿ ಸೇತುವೆ ನಿರ್ಮಾಣವಾಗದ ಪರಿಣಾಮ ಈ ಭಾಗದ ಜನರು 7 ಕಿ.ಮೀ. ಸುತ್ತು ಬಳಸಿ ಮಳೆಗಾಲ ಕಲ್ಲುಗುಂಡಿ ಪೇಟೆಯನ್ನು ಸೇರಬೇಕಾಗಿದೆ.
Advertisement