Advertisement
ಆಟಗಾರರ ಅವಿಶ್ರಾಂತ ಸ್ಥಿತಿಯನ್ನು ತಡೆಯುವುದಕ್ಕೆ ಏನು ಮಾಡಬೇಕು ಎಂಬ ಪ್ರಶ್ನೆಗಳೆದ್ದಿವೆ. ಈಗಾಗಲೇ ಅದಕ್ಕೆ ಹಲವು ರೀತಿ ಪರ್ಯಾಯ ದಾರಿಗಳನ್ನು ಆಲೋಚಿಸಲಾಗಿದೆ. ಇದಾವುದು ಇನ್ನೂ ಜಾರಿಯಾಗುತ್ತಿಲ್ಲ. ಇದು ಭಾರತೀಯ ಕ್ರಿಕೆಟಿಗರನ್ನು ಯಂತ್ರಗಳನ್ನಾಗಿ ಮಾಡಲಾಗಿದೆಯೇ ಎಂಬ ಪ್ರಶ್ನೆ ಮೂಡಿಸಿದೆ.
ಈ ಅತಿಯಾದ ಕ್ರಿಕೆಟ್ ಕಾರಣ ಆಟಗಾರರು ಅತಿಯಾದ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಕ್ರಿಕೆಟ್ ಒಂದು ಆಟದ ಸ್ವರೂಪ ಕಳೆದುಕೊಂಡು ಉದ್ಯಮದ ಸ್ವರೂಪ ತಾಳಿರುವುದರಿಂದ ತಂಡದಲ್ಲಿ ಸ್ಥಾನ ಪಡೆದುಕೊಳ್ಳುವುದು ಒಂದು ದೊಡ್ಡ ಸವಾಲು. ಅದನ್ನು ಉಳಿಸಿಕೊಳ್ಳಲು ನಿರಂತರ ಹೋರಾಡುವುದು ಇನ್ನೊಂದು ಸವಾಲು. ಇದರ ಮಧ್ಯೆ ಕ್ರಿಕೆಟ್ ಅತಿಯಾಯಿತು ವಿಶ್ರಾಂತಿ ಕೊಡಿ ಎಂದು ಕೇಳುವುದೂ ಕಷ್ಟಕರವಾಗಿದೆ.
Related Articles
ಭಾರತ ತಂಡದಲ್ಲಿ ಈಗ ಎಂತಹ ಪೈಪೋಟಿಯಿದೆಯೆಂದರೆ ದಿಗ್ಗಜರಿಗೂ ವಿಶ್ರಾಂತಿ ಪಡೆದುಕೊಳ್ಳುವುದು ಹೆದರಿಕೆಯ ವಿಷಯ. ನಾಯಕ ವಿರಾಟ್ ಕೊಹ್ಲಿ ಮೂರೂ ಮಾದರಿಯಲ್ಲಿ ಆಡಿ ದಣಿದಿದ್ದರೂ, ಇದು ಅತಿಯಾಯಿತು ಎಂಬ ಮಟ್ಟಕ್ಕೆ ತಲುಪಿದ್ದರೂ ವಿಶ್ರಾಂತಿ ಪಡೆಯುವ ಗೋಜಿಗೆ ಹೋಗಿಲ್ಲ. ಇದನ್ನು ಗಮನಿಸಿದರೆ ಅವರಿಗೂ ಅಲ್ಪ ಕಾಲದ ಮಟ್ಟಿಗಾದರೂ ತಮ್ಮ ನಾಯಕತ್ವ ಬಿಡುವ ಬಗ್ಗೆ ಮನದ ಮೂಲೆಯಲ್ಲಿ ಅಳುಕಿದೆ ಎಂದನಿಸಿದೇ ಇರದು. ಅವರ ಜಾಗದಲ್ಲಿ ಇನ್ನಾರಾದರೂ ಬಂದು ಯಶಸ್ವಿಯಾದರೆ ಭವಿಷ್ಯದಲ್ಲಿ ಕೊಹ್ಲಿ ನಾಯಕತ್ವ ಉಳಿಯುತ್ತದೆ ಎಂದು ಖಚಿತವಾಗಿ ಹೇಳಲು ಕಷ್ಟ. ಇದೇ ಸ್ಥಿತಿ ಉಳಿದ ಆಟಗಾರರಿಗೂ ಇದೆ. ವೇಗದ ಬೌಲಿಂಗ್, ಸ್ಪಿನ್, ಟೆಸ್ಟ್ ಆರಂಭಕಾರ, ಏಕದಿನ ಆರಂಭಕಾರ, ಮಧ್ಯಮಕ್ರಮಾಂಕ ಇವೆಲ್ಲದಕ್ಕೂ ಬೇಕಾದಷ್ಟು ಆಟಗಾರರು ಸಾಲುಗಟ್ಟಿ ನಿಂತಿದ್ದಾರೆ. ಒಮ್ಮೆ ವಿಶ್ರಾಂತಿ ಪಡೆದರೆ ಆ ಸ್ಥಾನಕ್ಕೆ ಬರುವ ಆಟಗಾರ ಜಾಗವನ್ನು ಬಲವಾಗಿ ಆಕ್ರಮಿಸಿಕೊಂಡು ಬಿಡುತ್ತಾರೆ.
Advertisement
ಇತ್ತೀಚೆಗೆ ಮುರಳಿ ವಿಜಯ್ ಗಾಯಗೊಂಡಾಗ ಆ ಸ್ಥಾನಕ್ಕೆ ಬದಲೀ ಆಟಗಾರನಾಗಿ ಬಂದ ಶಿಖರ್ ಧವನ್ ಅದ್ಭುತವಾಗಿ ಆಟವಾಡಿ ಖಾಯಂ ಆಟಗಾರರಾದರು. ಈಗ ಮುರಳಿ ವಿಜಯ್ ಮತ್ತೆ ಸ್ಥಾನ ಪಡೆಯುವುದು ಕಷ್ಟವೇ ಆಗಿದೆ. ಕೆಲವು ತಿಂಗಳ ಹಿಂದೆ ತ್ರಿಶತಕ ಬಾರಿಸಿದ ಕನ್ನಡಿಗ ಕರುಣ್ ನಾಯರ್ ಈಗ ಭಾರತ ತಂಡದಲ್ಲಿ ಸ್ಥಾನವನ್ನೇ ಹೊಂದಿಲ್ಲ ಎನ್ನುವುದನ್ನು ಇಲ್ಲಿ ನೆನಪಿಸಿಕೊಂಡರೆ ವಿಶ್ರಾಂತಿ ಪಡೆಯಲು ಆಟಗಾರರು ಅಂಜುವುದೇಕೆ ಎಂದು ಅರ್ಥವಾಗುತ್ತದೆ!
ಯಾರ್ಯಾರಿಗೆ ದಣಿವು?ನಾಯಕ ವಿರಾಟ್ ಕೊಹ್ಲಿ ಅತಿಯಾಗಿ ಸುಸ್ತಾಗಿರುವ ಆಟಗಾರ. ಇವರೊಂದಿಗೆ ರೋಹಿತ್ ಶರ್ಮ, ಅಜಿಂಕ್ಯ ರಹಾನೆ, ಜಸ್‌ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಕೆ.ಎಲ್.ರಾಹುಲ್, ಹಾರ್ದಿಕ್ ಪಾಂಡ್ಯ ಸೇರಿಕೊಳ್ಳುತ್ತಾರೆ. ಇವರಿಗೆಲ್ಲ ಒಂದಲ್ಲ ಒಂದು ರೀತಿಯಲ್ಲಿ ವಿಶ್ರಾಂತಿ ನೀಡಲೇಬೇಕಾಗಿದೆ. ಖಾಸಗಿ ಬದುಕಿಗೆ ಧಕ್ಕೆ
ಬಿಡುವಿಲ್ಲದ ಕ್ರಿಕೆಟ್‌ನಿಂದ ಆಟಗಾರರು ತಮ್ಮ ಖಾಸಗಿ ಬದುಕನ್ನೇ ಕಳೆದುಕೊಂಡಿದ್ದಾರೆ. ಅವರು ತಮ್ಮ ಮಕ್ಕಳು, ಪತ್ನಿಯರಿಗೆ ಸಮಯ ಕೊಡಲು ಸಾಧ್ಯವೇ ಇಲ್ಲ. ಖಾಸಗಿಯಾಗಿ ತಮ್ಮಿಷ್ಟದ ಸಂಗತಿಗಳಿಗೆ ಗಮನ ಹರಿಸಲು ಆಗುತ್ತಿಲ್ಲ. ಬೇರೆ ಯಾವುದೋ ಕಾರಣಕ್ಕೆ ನೊಂದಿದ್ದರೆ ಸಮಾಧಾನ ಮಾಡಿಕೊಳ್ಳಲು ಪುರುಸೊತ್ತಿಲ್ಲ. ಇನ್ನೂ ಒಂದು ಸಮಸ್ಯೆಯೆಂದರೆ ಆಟಗಾರರು ತಮ್ಮ ಪತ್ನಿಯರನ್ನು ಪ್ರವಾಸದ ವೇಳೆ ಜೊತೆಗೆ ಕರೆದೊಯ್ಯಬೇಕಾದ ಸ್ಥಿತಿ, ಕರೆದೊಯ್ಯದಿದ್ದರೆ ದಾಂಪತ್ಯ ವಿಚ್ಛೇದನದಲ್ಲಿ ಅಂತ್ಯವಾಗುವುದು ಖಾತ್ರಿ! ಜೊತೆಗೆ ಮದುವೆಯಂತಹ ಸಂತೋಷದ ಸಮಯದಲ್ಲೂ ಅವರಿಗೆ ವಿಶ್ರಾಂತಿಯಿರುವುದಿಲ್ಲ. ಇದಕ್ಕೆ ನೇರ ಉದಾಹರಣೆ ಶ್ರೀಲಂಕಾ ಪ್ರವಾಸದ ವೇಳೆಯೇ ನ.23ರಂದು ವೇಗಿ ಭುವನೇಶ್ವರ್ ಕುಮಾರ್ ವಿವಾಹವಾಗಲಿರುವುದು! ಬಹುತೇಕ ಕ್ರಿಕೆಟಿಗರು ಹೀಗೆ, ಕ್ರಿಕೆಟ್ ಮಧ್ಯೆಯೇ ವಿವಾಹವಾಗಿ ತಕ್ಷಣವೇ ತಂಡದ ಸೇವೆಗೆ ತೆರಳಿದ ಉದಾಹರಣೆಗಳಿವೆ. ಬಿಡುವಿಲ್ಲದ ಕ್ರಿಕೆಟ್‌ಗೆ ಪರ್ಯಾಯ ದಾರಿಗಳೇನು?
ಕ್ರಿಕೆಟಿಗರಿಗೆ ವಿಶ್ರಾಂತಿ ನೀಡಲು ಬಿಸಿಸಿಐ ಚಿಂತಿಸುತ್ತಿರುವ ದಾರಿ ಮೂರೂ ಮಾದರಿಗಳಿಗೆ ಬಹುತೇಕ ಪ್ರತ್ಯೇಕ ತಂಡವನ್ನೇ ರಚಿಸುವುದು. ಅಷ್ಟು ಆಟಗಾರರ ಸಂಪತ್ತು ಬಿಸಿಸಿಐಗಿದೆ. ಈಗಾಗಲೇ ಟೆಸ್ಟ್‌ಗೆ ಬಿಸಿಸಿಐ ಬೇರೆ ಬೌಲರ್‌ಗಳನ್ನೇ ಬಳಸಿಕೊಳ್ಳುತ್ತಿದೆ. ಬ್ಯಾಟ್ಸ್‌ಮನ್‌ಗಳೂ ಅಷ್ಟೇ. ಏಕದಿನ, ಟಿ20 ಹೆಚ್ಚು ಕಡಿಮೆ ಒಂದೇ ತಂಡ ಆಡುತ್ತಿದೆ. ಈ ಮಾರ್ಗದ ಸಮಸ್ಯೆಯೆಂದರೆ ಕೆಲವೊಮ್ಮೆ ಮೂರೂ ಮಾದರಿಯಲ್ಲಿ ಆಡಬಹುದಾದ ರವೀಂದ್ರ ಜಡೇಜ, ಅಶ್ವಿನ್, ಅಜಿಂಕ್ಯ ರಹಾನೆ, ಕೆ.ಎಲ್.ರಾಹುಲ್‌ರಂತಹ ಆಟಗಾರರು ಅನಿವಾರ್ಯವಾಗಿ ಯಾವುದಾದರೂ ಒಂದು ಮಾದರಿಗೆ ಮಾತ್ರ ಅಂಟಿಕೊಳ್ಳಬೇಕಾಗುವುದು. ಇನ್ನೊಂದು ಮಾರ್ಗ ಆವರ್ತನ ಪದ್ಧತಿಯಂತೆ 3, 4 ಆಟಗಾರರಿಗೆ ವಿಶ್ರಾಂತಿ ನೀಡುತ್ತಾ ಹೋಗುವುದು. ಸದ್ಯ ಬಿಸಿಸಿಐ ಇದನ್ನೂ ಪರಿಶೀಲಿಸುತ್ತಿದೆ. 2017ರ ಭಾರತದ ಕ್ರಿಕೆಟ್ ವೇಳಾಪಟ್ಟಿ
ಜ.5ರಿಂದ ಫೆ.1-ಇಂಗ್ಲೆಂಡ್ ವಿರುದ್ಧ 3 ಏಕದಿನ, 3 ಟಿ20
ಫೆ.9ರಿಂದ 13-ಬಾಂಗ್ಲಾ ವಿರುದ್ಧ ಏಕೈಕ ಟೆಸ್ಟ್
ಫೆ.23ರಿಂದ ಮಾ.25-ಆಸೀಸ್ ವಿರುದ್ಧ 4 ಟೆಸ್ಟ್
ಏ.5ರಿಂದ ಮೇ-21: 47 ದಿನಗಳ ನಿರಂತರ ಐಪಿಎಲ್
ಮೇ 28ರಿಂದ ಜೂ.18-ಇಂಗ್ಲೆಂಡ್‌ನಲ್ಲಿ ಏಕದಿನ ಚಾಂಪಿಯನ್ಸ್ ಟ್ರೋಫಿ
ಜೂ.23ರಿಂದ ಜು.9-ವಿಂಡೀಸ್‌ನಲ್ಲಿ 5 ಏಕದಿನ, 1ಟಿ20
ಜು.21ರಿಂದ ಸೆ.6-ಶ್ರೀಲಂಕಾದಲ್ಲಿ 5 ಏಕದಿನ, 1 ಟಿ20 ಪಂದ್ಯ
ಸೆ.17ರಿಂದ ಅ.3-ಆಸೀಸ್ ವಿರುದ್ಧ 5 ಏಕದಿನ, 3 ಟಿ20 ಪಂದ್ಯ
ಅ.22ರಿಂದ ನ.7-ನ್ಯೂಜಿಲೆಂಡ್ ವಿರುದ್ಧ 3 ಏಕದಿನ, 3 ಟಿ20 ಪಂದ್ಯ
ನ.16ರಿಂದ ಡಿ.24-ಶ್ರೀಲಂಕಾ ವಿರುದ್ಧ 3 ಟೆಸ್ಟ್, 3 ಏಕದಿನ, 3 ಟಿ20 ಪಂದ್ಯ
ಡಿ.31ರಿಂದ ಫೆ.24-ಆಫ್ರಿಕಾದಲ್ಲಿ 3 ಟಿ20, 6 ಏಕದಿನ, 3 ಟೆಸ್ಟ್