ಭಾರತದಲ್ಲಿ ಈಗ ಬಿಡುಗಡೆಯಾಗುತ್ತಿರುವ ಅನೇಕ ಮೊಬೈಲ್ ಫೋನ್‍ಗಳು 5ಜಿ ನೆಟ್ ವರ್ಕ್ ಅನ್ನು ಬೆಂಬಲಿಸುವ ಸೌಲಭ್ಯ ನೀಡುತ್ತಿವೆ. ಹೊಸದಾಗಿ ಫೋನ್ ಕೊಳ್ಳುವ ಕೆಲವರು, ಮುಂದೆ 5 ಜಿ ಬರುವುದರಿಂದ 5ಜಿ ಸೌಲಭ್ಯ ಇರುವ ಫೋನ್‍ಗಳನ್ನೇ ಕೊಳ್ಳೋಣ ಎಂದು ಹೆಚ್ಚಿನ ದರವಾದರೂ ಸರಿ ಎಂದು 5ಜಿ ಇರುವ ಫೋನ್‍ಗಳನ್ನು ಈಗಲೇ ಕೊಳ್ಳುತ್ತಿದ್ದಾರೆ.
ಆದರೆ ಎಲ್ಲರನ್ನೂ ಕಾಡುವ ಕಟ್ಟ ಕಡೆಯ ಪ್ರಶ್ನೆ ಎಂದರೆ, ಭಾರತದಲ್ಲಿ 5ಜಿ ನೆಟ್‍ವರ್ಕ್ ದೊರಕುವುದು ಯಾವಾಗ?! ಈ ಪ್ರಶ್ನೆಗೆ ಉತ್ತರ ಭಾರತ ಸರ್ಕಾರದ ಮೇಲಿದೆ. ಅದು 5ಜಿ ತರಂಗಾಂತರಗಳನ್ನು ಮೊಬೈಲ್ ನೆಟ್‍ವರ್ಕ್ ಕಂಪೆನಿಗಳಿಗೆ ಹರಾಜು ಮೂಲಕ ನೀಡಬೇಕಿದೆ.
ಅನೇಕ ದೇಶಗಳಲ್ಲಿ ಈಗಾಗಲೇ 5ಜಿ ನೆಟ್‍ವರ್ಕ್ ಲಭ್ಯವಾಗುತ್ತಿದೆ. ಭಾರತದಲ್ಲೂ 5ಜಿ ಸೌಲಭ್ಯ ನೀಡಲು ರಿಲಯನ್ಸ್ ಜಿಯೋ ಹಾಗೂ ಭಾರ್ತಿ ಏರ್ ಟೆಲ್ ತುದಿಗಾಲಿನಲ್ಲಿ ನಿಂತಿವೆ. ಕಳೆದ ಡಿಸೆಂಬರ್ ನಲ್ಲಿ ಜಿಯೋ 2021ರ ದ್ವಿತೀಯಾರ್ಧದಲ್ಲಿ ಅಂದರೆ, ಇನ್ನು ಆರು ತಿಂಗಳ ನಂತರ 5ಜಿ ನೆಟ್ ವರ್ಕ್ ಒದಗಿಸುವುದಾಗಿ ಪ್ರಕಟಿಸಿದೆ.
ಇದನ್ನೂ ಓದಿ:ಶೀಘ್ರದಲ್ಲಿ ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಡಲಿದೆ Realme X7 5G
ಇನ್ನು ಭಾರ್ತಿ ಏರ್ ಟೆಲ್ ಜ. 28ರಂದು ಹೈದರಾಬಾದ್ ಪ್ರದೇಶದಲ್ಲಿ 5ಜಿ ನೆಟ್ ವರ್ಕ್ ನ ಪ್ರಾಯೋಗಿಕ ಪರೀಕ್ಷೆ ನಡೆಸಿದೆ. ಭಾರತದಲ್ಲಿ 5ಜಿ ನೆಟ್ ವರ್ಕ್ ನ ಪ್ರಾಯೋಗಿಕ ಪರೀಕ್ಷೆ ನಡೆಸಿದ ಮೊದಲ ಆಪರೇಟರ್ ತಾನು ಎಂದು ಏರ್ ಟೆಲ್ ಹೇಳಿಕೊಂಡಿದೆ. 5ಜಿ ನೆಟ್‍ವರ್ಕ್ ಗಾಗಿ ಏರ್ ಟೆಲ್ ಕಂಪೆನಿಯು ಎರಿಕ್‍ಸನ್ ಸಹಯೋಗ ಹೊಂದಿದ್ದು ತಾನೀಗ 5ಜಿ ಸೌಲಭ್ಯ ನೀಡಲು ಸಿದ್ಧ ಹಾಗಾಗಿ ನಮ್ಮದು ಈಗ 5ಜಿ ರೆಡಿ ನೆಟ್‍ವರ್ಕ್ ಎಂದು ತಿಳಿಸಿದೆ.
ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ಭಾರ್ತಿ ಏರ್ ಟೆಲ್ ಸಿಇಒ ಗೋಪಾಲ್ ವಿಠಲ್, ಏರ್ ಟೆಲ್ ಈಗ ಪ್ರಾಯೋಗಿಕ ಪರೀಕ್ಷೆ ಮಾತ್ರ ನಡೆಸಿದ್ದು, ನೈಜವಾದ 5ಜಿ ಅನುಭವ ದೊರಕಬೇಕಾದರೆ ಕೇಂದ್ರ ಸರ್ಕಾರ 2.5 ನಿಂದ 3.7 ಗಿಗಾಹಟ್ಜ್ ನ ಮಿಡ್ ಬ್ಯಾಂಡ್ ತರಂಗಾಂತರವನ್ನು ಮಂಜೂರು ಮಾಡಬೇಕು ಎಂದು ಹೇಳಿದ್ದಾರೆ.
ಸಿಮ್ ಬದಲಿಸುವ ಅಗತ್ಯವಿಲ್ಲ: 5ಜಿ ತರಂಗಾಂತರ ಲಭ್ಯವಾದ ಬಳಿಕ ಏರ್ ಟೆಲ್ ಈಗ ಇರುವುದಕ್ಕಿಂತ 10 ಪಟ್ಟು ವೇಗದ ಡೌನ್‍ಲೋಡ್, ಅಪ್‍ಲೋಡ್ ನೀಡುತ್ತದೆ. ಅಲ್ಲದೇ ಹೊಸ 5ಜಿ ನೆಟ್‍ವರ್ಕ್ ಗಾಗಿ, ಗ್ರಾಹಕರು ಈಗಿನ 4ಜಿ ಸಿಮ್‍ಗಳನ್ನು ಬದಲಿಸುವ ಅಗತ್ಯವಿಲ್ಲ ಎಂದು ಸಹ ಏರ್ ಟೆಲ್ ತಿಳಿಸಿದೆ.
5ಜಿ ತರಂಗಾಂತರಗಳನ್ನು ಕೇಂದ್ರ ಸರ್ಕಾರ, ಕಳೆದ ವರ್ಷವೇ ಹರಾಜು ಹಾಕಬೇಕಿತ್ತು. ಆದರೆ ಟೆಲಿಕಾಂ ರಂಗದ ಆರ್ಥಿಕ ಕಷ್ಟಗಳಿಂದಾಗಿ ಹರಾಜು ನಡೆಯಲಿಲ್ಲ. ಮಾರ್ಚ್ 1 ರಂದು ಮತ್ತೆ 4ಜಿ ತರಂಗಾಂತರದ ಹರಾಜು ನಡೆಯಲಿದೆ. ಇದಾದ ಬಳಿಕ ಅಂದರೆ ವರ್ಷದ ದ್ವಿತೀಯಾರ್ಧದಲ್ಲಿ 5ಜಿ ಹರಾಜು ನಡೆಯುವ ಸಾಧ್ಯತೆ ಇದೆ.
10 ಲಕ್ಷ 5ಜಿ ಫೋನ್‍ಗಳು: ಏರ್ ಟೆಲ್ ತಿಳಿಸಿರುವ ಮಾಹಿತಿಯ ಪ್ರಕಾರ ಈಗಾಗಲೇ ಅವರ ನೆಟ್ ವರ್ಕ್‍ನಲ್ಲಿ 10 ಲಕ್ಷ ಜನರು 5ಜಿ ಸವಲತ್ತು ಹೊಂದಿರುವ ಫೋನ್‍ಗಳನ್ನು ಹೊಂದಿದ್ದಾರಂತೆ! ಏರ್ ಟೆಲ್ ಇರಲಿ, ಜಿಯೋ ಇರಲಿ, ಹೆಚ್ಚು ಜನ ಗ್ರಾಹಕರು 5ಜಿ ಸಾಮರ್ಥ್ಯದ ಫೋನ್ ಗಳನ್ನು ಹೊಂದಿದ್ದಾಗಲಷ್ಟೇ ಅವರು ತಮ್ಮ ಹೊಸ ಸವಲತ್ತನ್ನು ಗ್ರಾಹಕರಿಗೆ ನೀಡಿ ಅದರಿಂದ ಲಾಭ ಪಡೆಯಲು ಸಾಧ್ಯ! ಹೀಗಾಗಿ ನೆಟ್‍ವರ್ಕ್‍ದಾತ ಕಂಪೆನಿಗಳು (ಜಿಯೋ, ಏರ್ ಟೆಲ್, ವೊಡೋಫೋನ್) ಸರ್ಕಾರ ನೀಡುವ 5 ಜಿ ತರಂಗಾಂತರದ ಜೊತೆಗೆ, ಹೆಚ್ಚು ಗ್ರಾಹಕರು 5ಜಿ ಫೋನ್‍ಗಳನ್ನು ಬಳಸಲಿ ಎಂಬುದನ್ನೂ ಕಾಯುತ್ತಿವೆ!
ಹೀಗಾಗಿ, 10 ಸಾವಿರದಿಂದ 15 ಸಾವಿರದವರೆಗಿನ ಮೊಬೈಲ್ ಫೋನ್‍ಗಳಲ್ಲಿ 5ಜಿ ಸೌಲಭ್ಯ ಬಂದಾಗ ಹೆಚ್ಚು ಗ್ರಾಹಕರು 5ಜಿ ಫೋನ್ ಹೊಂದುತ್ತಾರೆ ಎಂಬುದು ಏರ್ ಟೆಲ್ ಅಧಿಕಾರಿಯೊಬ್ಬರ ಅಭಿಪ್ರಾಯ.
ಇದನ್ನೂ ಓದಿ: ಫೆ. 2 ಕ್ಕೆ ಭಾರತೀಯ ಮಾರುಕಟ್ಟೆಗೆ “ಸ್ಯಾಮ್ ಸಂಗ್ ಗ್ಯಾಲಕ್ಸಿ M02” ಲಗ್ಗೆ
ಈ ಎಲ್ಲ ಬೆಳವಣಿಗೆಗಳನ್ನೂ ನೋಡಿದಾಗ ಕೇಂದ್ರ ಸರ್ಕಾರ ಜುಲೈ-ಆಗಸ್ಟ್ ನಲ್ಲಿ ಹರಾಜು ನಡೆಸಿ 5ಜಿ ತರಂಗಾಂತರ ನೀಡಿದರೆ, ಅಕ್ಟೋಬರ್ ನವೆಂಬರ್ ನಲ್ಲಿ ಕಂಪೆನಿಗಳು 5ಜಿ ನೆಟ್ ವರ್ಕ್ ಅನ್ನು ಗ್ರಾಹಕರಿಗೆ ಆರಂಭಿಕವಾಗಿ ಆಯ್ದ ಸರ್ಕಲ್ ಗಳಲ್ಲಿ ನೀಡಬಹುದು. ತದನಂತರ ಅದನ್ನು ಎಲ್ಲೆಡೆ ವಿಸ್ತರಿಸಿ ಎಲ್ಲೆಡೆ 5ಜಿ ಸೌಲಭ್ಯ ದೊರಕಬೇಕೆಂದರೆ 2022ರ ಮಧ್ಯಭಾಗ ಆಗಬಹುದು.
5ಜಿಯಿಂದ ಲಾಭವೇನು?
5ಜಿ ಸಂಪೂರ್ಣ ಅನುಷ್ಠಾನಗೊಂಡರೆ, ಅದು ಈಗಿನ 4ಜಿ ಗಿಂತ 100 ಪಟ್ಟು ವೇಗವಾಗಿ ಡಾಟಾ ವರ್ಗಾಯಿಸುತ್ತದೆ. ಅಂದರೆ ಒಂದು ಎಚ್‍ಡಿ ಸಿನಿಮಾ ಸಂಪೂರ್ಣವಾಗಿ ಡೌನ್‍ಲೋಡ್ ಆಗಲು ಈಗಿನ 4ಜಿಯಲ್ಲಿ 50 ನಿಮಿಷ ತೆಗೆದುಕೊಂಡರೆ, 5ಜಿಯಲ್ಲಿ ಅದು ಕೇವಲ 9 ನಿಮಿಷದಲ್ಲಿ ಡೌನ್‍ಲೋಡ್ ಆಗುತ್ತದೆ! ಹೀಗಾಗಿ ನಿಮ್ಮ ಮೇಲ್‍ನಲ್ಲಿರುವ ಫೋಟೋಗಳು, ವಾಟ್ಸಪ್ ವಿಡಿಯೋಗಳು ಕ್ಷಣಾರ್ಧದಲ್ಲಿ ನಿಮ್ಮ ಮೊಬೈಲ್‍ನಲ್ಲಿ ಡೌನ್ ಲೋಡ್ ಆಗುತ್ತವೆ!
ಕೆ.ಎಸ್. ಬನಶಂಕರ ಆರಾಧ್ಯ