Advertisement
ಹೊಸಂಗಡಿ ಪೇಟೆ ಬಳಿಯಿಂದ ಮುತ್ತಿನಕಟ್ಟೆ ಕಡೆಗೆ 2 ಕಿ.ಮೀ. ದೂರವಿದ್ದು, ಈ ಪೈಕಿ ಆರಂಭದಲ್ಲಿ ಸುಮಾರು 500 ಮೀ.ವರೆಗೆ ಡಾಮರು ಮಾಡಲಾಗಿತ್ತು. ಈಗ ಆ ಡಾಮರೆಲ್ಲ ಕಿತ್ತು ಬರೀ ಜಲ್ಲಿ ಕಲ್ಲಿನ ರಸ್ತೆಯಾಗಿ ಮಾತ್ರ ಉಳಿದಿದೆ. ಈ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಸಂಕಷ್ಟ ಎದುರಾಗಿದೆ.
Related Articles
Advertisement
ಈ ಮಾರ್ಗಕ್ಕೆ ವರ್ಷದ ಹಿಂದೆ ಪಂಚಾಯತ್ ಅನುದಾನವನ್ನು ಬೀದಿದೀಪದ ಅಳವಡಿಕೆಗೆ ಮೀಸಲಿಟ್ಟರೂ, ಇನ್ನೂ ಅದು ಕಾರ್ಯರೂಪಕ್ಕೆ ಬಂದಿಲ್ಲ. ಬೀದಿದೀಪವಿಲ್ಲದೆ ಕತ್ತಲಿನಲ್ಲಿ ಈ ಮಾರ್ಗದಲ್ಲಿ ನಡೆದುಕೊಂಡು ಹೋಗುವುದು ಸಹ ಕಷ್ಟ. ಸುಮಾರು 80 ಸಾವಿರ ರೂ. ಅನುದಾನವಿದ್ದು, ಇನ್ನು ಅನುದಾನ ಬರಲಿದ್ದು, ಒಟ್ಟಿಗೆ ಕಾಮಗಾರಿ ನಡೆಸುವ ಯೋಜನೆ ಪಂಚಾಯತ್‌ನದ್ದು. ಆದರೆ ಈಗ ಇದ್ದಷ್ಟು ಅನುದಾನದಲ್ಲಿ ಒಂದಷ್ಟಾದರೂ ದೀಪ ಅಳವಡಿಸಿದರೆ ಈ ಮಾರ್ಗದಲ್ಲಿ ಸಂಚರಿಸುವವರಿಗೆ ಅನುಕೂಲವಾಗಬಹುದು ಎನ್ನುವುದು ಜನರ ಒತ್ತಾಯವಾಗಿದೆ.
ಈ ಮಾರ್ಗದಲ್ಲಿ ಸುಮಾರು 50 ಕ್ಕೂ ಮಿಕ್ಕಿ ಮನೆಗಳಿದ್ದು, ಇವರೆಲ್ಲ ಎಲ್ಲದಕ್ಕೂ ಹೊಸಂಗಡಿ ಪೇಟೆಯನ್ನೇ ಆಶ್ರಯಿಸಿದ್ದಾರೆ. ಆದರೆ ಹೊಸಂಗಡಿ ಪೇಟೆಗೆ ಬರುವುದೇ ಕಷ್ಟ. ಏನಾದರೂ ಪಡಿತರ, ದಿನಸಿ ತೆಗೆದುಕೊಂಡು ಹೋಗಲು ಈ ರಸ್ತೆಯ ಅವ್ಯವಸ್ಥೆ ನೋಡಿ ವಾಹನ ಬಾಡಿಗೆಗೆ ಕರೆದರೂ ಹೆಚ್ಚಿನವರು ಹಿಂದೇಟು ಹಾಕುತ್ತಾರೆ. ಇದರಿಂದ ನಿತ್ಯ ಇಲ್ಲಿನ ಜನ ಸಂಕಷ್ಟ ಪಡುವಂತಾಗಿದೆ.
ಎಲ್ಲರಿಗೂ ಸಂಕಷ್ಟ
ಹೊಸಂಗಡಿ – ಮುತ್ತಿನಕಟ್ಟೆ ರಸ್ತೆ ಹಲವು ವರ್ಷಗಳಿಂದ ಹಾಳಾಗಿದೆ. ಈ ಮಾರ್ಗದಲ್ಲಿ ಸಂಚರಿಸುವುದೇ ಸವಾಲಾಗಿದೆ. ಎಲ್ಲರಿಗೂ ಈ ಮಾರ್ಗದ ಸಂಚಾರ ಕಷ್ಟ. ಯಾರಿಗಾದರೂ ಅನಾರೋಗ್ಯ ಉಂಟಾದರೆ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಇಲ್ಲಿನ ಜನಪಡುವ ಕಷ್ಟ ಅವರಿಗೆ ಗೊತ್ತು. ಆದಷ್ಟು ಬೇಗ ಈ ಮಾರ್ಗವನ್ನು ಅಭಿವೃದ್ಧಿಪಡಿಸಲಿ. -ಆನಂದ ಕಾರೂರು, ಸ್ಥಳೀಯರು
ಮನವಿ ಸಲ್ಲಿಕೆ
ಪಂಚಾಯತ್ ಅನುದಾನದಲ್ಲಿ ಈ ರಸ್ತೆಯ ಅಭಿವೃದ್ಧಿ ಕಷ್ಟ. ಹಿಂದೆ ಜಿ.ಪಂ. ಅನುದಾನದಿಂದ ರಸ್ತೆ ಡಾಮರು ಕಾಮಗಾರಿ ಮಾಡಲಾಗಿತ್ತು. ಈ ಮುತ್ತಿನಕಟ್ಟೆ ರಸ್ತೆ ಅಭಿವೃದ್ಧಿಪಡಿಸುವ ಸಲುವಾಗಿ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಲಾಗಿದೆ. ಈ ಬಾರಿಯಾದರೂ ಆಗಬಹುದು ಅನ್ನುವ ನಿರೀಕ್ಷೆಯಿದೆ. -ಸಂತೋಷ್ ಶೆಟ್ಟಿ, ಸ್ಥಳೀಯ ಗ್ರಾ.ಪಂ. ಸದಸ್ಯರು