ಕಾರವಾರ: ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಾರವಾರ ಬಳಿ ನಿರ್ಮಿಸಿದ ಟನಲ್ ಗಳಲ್ಲಿ ವಾಹನ ಸಂಚಾರಕ್ಕೆ ಮುಚ್ಚಿ 73 ದಿನ ಕಳೆದಿವೆ. ಮಳೆಗಾಲದಲ್ಲಿ ಟನಲ್ ನಲ್ಲಿ ಮಳೆ ನೀರು ಸೋರುತ್ತಿದೆ. ಸುರಂಗ ಕುಸಿಯಬಹುದು ಎಂಬ ನೆಪದಲ್ಲಿ ಮುಚ್ಚಲಾದ ಸುರಂಗ (ಟನಲ್) ಮಾರ್ಗ ಇನ್ನೂ ತೆರೆದಿಲ್ಲ. ಪ್ರಯಾಣಿಕರಿಗೆ ಏನಾದರೂ ಆದರೆ ಯಾರು ಜವಾಬ್ದಾರಿ ಎಂದು ಜನಪ್ರತಿನಿಧಿ ತಕರಾರು ತೆಗೆದ ಕಾರಣ, ಟನಲ್ ಫಿನಿಶಿಂಗ್ ಕಾರ್ಯ ಸಹ ಸ್ವಲ್ಪ ಮಟ್ಟಿಗೆ ಬಾಕಿ ಇದ್ದ ಕಾರಣ ಹೆದ್ದಾರಿಯ ಎರಡು ಟನಲ್ ಮುಚ್ಚಲ್ಪಟ್ಟವು.
ಇದರ ಪರಿಣಾಮ ವಾಹನ ಸವಾರರು ಬಿಣಗಾ ಘಟ್ಟದಿಂದ 4 ಕಿಮೀ ಸುತ್ತು ಹಾಕಿ ಕಾರವಾರ ತಲುಪಬೇಕಾಗಿದೆ. ವಾಹನ ಸಂಚಾರ ಬಂದ್ ಆದರೂ ಐಆರ್ ಬಿ, ಜನಪ್ರತಿನಿಧಿಗಳು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸುರಂಗ ಮಾರ್ಗ ಪುನಃ ಆರಂಭದ ಬಗ್ಗೆ ತಲೆ ಕಡೆಸಿಕೊಂಡಿಲ್ಲ. ಸುರಂಗ ಮಾರ್ಗ ಬಂದ್ ಆಗಿದ್ದರೂ ಟೋಲ್ ನಲ್ಲಿ ಶುಲ್ಕ ವಸೂಲಿ ದರ ಇಳಿಕೆಯಾಗಿಲ್ಲ.
ಟನಲ್ ಬಳಕೆಯಾದುದು 6 ತಿಂಗಳು ಮಾತ್ರ: ಕಾರವಾರ ನಗರದ ಪಕ್ಕವೇ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುತ್ತದೆ. ಪ್ಲೈಓವರ್ ಸಹ ನಿರ್ಮಾಣವಾಗಿದೆ. ಫ್ಲೈಓವರ್ ಜೊತೆಗೆ ಎರಡು ಸುರಂಗಳ ಪೈಕಿ ಮೊದಲ ಸುರಂಗ ಜನವರಿ 2023 ರಲ್ಲಿ ಪ್ರಾರಂಭವಾಯಿತು. ಎರಡನೇ ಸುರಂಗ ಜೂನ್ 2023ರಲ್ಲಿ ಆರಂಭವಾಯಿತು. ಕೇವಲ ಆರು ತಿಂಗಳು ಮಾತ್ರ ಟನಲ್ ಪ್ರಯೋಜನ ವಾಹನ ಸವಾರರಿಗೆ ಸಿಕ್ಕಿತ್ತು. ಈಗ 73 ದಿನಗಳಿಂದ ಸುತ್ತಿ ಬಳಸಿ ಕಾರವಾರ ತಲುಪುವ ಶಿಕ್ಷೆ ಜಾರಿಯಲ್ಲಿದೆ.
ಮಳೆಗಾಲದ ಜೊತೆ ಸುರಂಗ ಸಂಚಾರ ಬಂದ್
ಜೊತೆಗೆ ಮಳೆಗಾಲವೂ ಆರಂಭವಾಯಿತು. ಸುರಂಗದ ಮಧ್ಯೆ ಒಂದು ಕಡೆ ಲೀಕೇಜ್ ಕಾಣಿಸಿತು. ಸುರಂಗದ ಪ್ರವೇಶ ದ್ವಾರದಲ್ಲಿ ಅಪೂರ್ಣ ಕಾಮಗಾರಿ ಕಾರಣ ಜಲಪಾತದ ತರಹ ನೀರು ಸುರಿಯಿತು. ಇದೇ ನೆಪಮಾಡಿ ಸುರಂಗ ಮಾರ್ಗವನ್ನು ಸುರಕ್ಷತೆ ನೆಪದಲ್ಲಿ ಜನಪ್ರತಿನಿಧಿಗಳು ಬಂದ್ ಮಾಡಿಸಿದರು. ಆದರೆ ಅದರ ಪುನರ್ ಆರಂಭಕ್ಕೆ ತಲೆ ಕಡೆಸಿಕೊಳ್ಳಲಿಲ್ಲ. ಪರಿಣಾಮ ಜನರು, ವಾಹನ ಸವಾರರು, ಬಸ್ ಪ್ರಯಾಣಿಕರು, ಕಾರ್ ಪ್ರಯಾಣಿಕರು, ಲಾರಿ ಚಾಲಕರು ಟೋಲ್ ಶುಲ್ಕ ಕಟ್ಟಿಯೂ ಟನಲ್ ಬಳಸದ ಸನ್ನಿವೇಶ ಇದೀಗ ನಿರ್ಮಾಣವಾಗಿದೆ. ಇಲ್ಲಿ ಹೆದ್ದಾರಿ, ಪ್ಲೈಓವರ್, ಟನಲ್ ಇದ್ದರೂ ನಾಲ್ಕು ಕಿಮೀ ಸುತ್ತಿ ಬಳಸಿ ಕಾರವಾರ ತಲುಪಬೇಕಿದೆ. ಸಮಯ,ಹಣ, ಡಿಸೆಲ್, ಪೆಟ್ರೋಲ್ ಹೆಚ್ಚು ವ್ಯಯಿಸಬೇಕಾಗಿ ಬಂದಿದೆ.
ಸುರಕ್ಷತಾ ಪ್ರಮಾಣ ಪತ್ರ: ಐಆರ್ ಬಿ ಕಂಪನಿ ಕಾರವಾರ ಬಳಿಯ ಸುರಂಗ ಮಾರ್ಗದ ಸುರಕ್ಷತೆಗೆ ತನ್ನದೇ ಆದ ಏಜೆನ್ಸಿಯಿಂದ ಪ್ರಮಾಣ ಪತ್ರ ನೀಡಿದೆ. ಆದರೆ ಈ ಸುರಕ್ಷತಾ ಪ್ರಮಾಣ ಪತ್ರವನ್ನು ಶಾಸಕರು, ಉಸ್ತುವಾರಿ ಸಚಿವರು ಒಪ್ಪಲು ತಯಾರಿಲ್ಲ. ಸುರಂಗದಲ್ಲಿ ಅನಾಹುತವಾದರೆ ಅದರ ಜವಾಬ್ದಾರಿಯನ್ನು ಐಆರ್ ಬಿ ಕಂಪನಿ ಹೊರಬೇಕು ಎಂಬುದು ಶಾಸಕರ ವಾದ. ಅಲ್ಲದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರೇ ಸುರಂಗ ಸುರಕ್ಷತಾ ಪ್ರಮಾಣ ಪತ್ರ ನೀಡಬೇಕು ಎಂದು ಹೇಳುತ್ತಿದ್ದಾರೆ. ಆದರೆ ಎನ್‌ಎಚ್ ಎಐ ಇಲ್ಲಿನ ಸುರಂಗ ಸಮಸ್ಯೆ ಇತ್ಯರ್ಥಕ್ಕೆ ತಲೆ ಕೆಡಿಸಿಕೊಂಡಂತಿಲ್ಲ.
ಬಿಣಗಾ ನಾಗರಿಕರ ಆಗ್ರಹ: ಈತನ್ಮಧ್ಯೆ ಬಿಣಗಾ ನಾಗರಿಕರು ಜಿಲ್ಲಾಧಿಕಾರಿಗೆ ಮನವಿ ನೀಡಿ ಸುರಂಗ ಮಾರ್ಗ ಸಂಚಾರ ಪುನಃ ಆರಂಭಿಸುವಂತೆ ಮನವಿ ಮಾಡಿದ್ದಾರೆ. ಜನರ ಮತ್ತು ವಾಹನ ಸವಾರರ ಅನುಕೂಲಕ್ಕೆ ಮಾಡಿದ ಸುರಂಗ ಮಾರ್ಗ ಮಳೆಗಾಲ ಮುಗಿದರೂ ಬಂದ್ ಇಟ್ಟಿರುವ ಬಗ್ಗೆ ಆಕ್ಷೇಪ ಎತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸ್ಥಳೀಯ ಶಾಸಕರು, ಸುರಂಗಮಾರ್ಗ ಬಳಸಲು ಬಯಸುವ ಸಂಘ ಸಂಸ್ಥೆಯವರು ಮುಂದೆ ಆಗುವ ಅನಾಹುತದ ಹೊಣೆ ಹೊರಬೇಕು ಎಂದು ಬಿಟ್ಟಿದ್ದಾರೆ.
ವಾಸ್ತವ ಏನು?
ಸುರಂಗ ಮಾರ್ಗ ನಿರ್ಮಿಸುವಾಗ ಸಾಕಷ್ಟು ವೈಜ್ಞಾನಿಕ ವಿಧಾನ ಅಳವಡಿಸಿಕೊಂಡೆ ನಿರ್ಮಿಸಿರುತ್ತಾರೆ. ಆದರೆ ಇದನ್ನು ಸ್ಪಷ್ಟವಾಗಿ ಮಾಧ್ಯಮದ ಮುಂದೆ ಹೇಳುವ ಧೈರ್ಯವನ್ನು ಐಆರ್ ಬಿ ಕಂಪನಿ ಮಾಡುತ್ತಿಲ್ಲ. ಹೆದ್ದಾರಿ ಉಪಯೋಗ ಇರುವುದು ಜನತೆಗೆ. ಆದರೆ ಐಆರ್ ಬಿ ಮತ್ತು ಜನಪ್ರತಿನಿಧಿಗಳ ಮುಸುಕಿನ ಗುದ್ದಾಟಕ್ಕೆ ಕಷ್ಟ ಅನುಭವಿಸುವವರು ನಾಗರಿಕರು, ಪ್ರಯಾಣಿಕರು, ವಾಹನ ಸವಾರರು. ಇದನ್ನು ನೋಡಿ ತಮಾಷೆ ನೋಡುತ್ತಿರುವವರು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಎಂಜಿನಿಯರ್ಸ ಹಾಗೂ ಎನ್ ಎಚ್ ಎಐ ಅಧಿಕಾರಿಗಳು. ಜಿಲ್ಲಾಡಳಿತ ಈ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಇನ್ನಾದರೂ ಬಿಸಿ ಮುಟ್ಟಿಸುವ ಕಾರ್ಯ ಮಾಡಬೇಕಿದೆ.
ನಾಗರಾಜ್ ಹರಪನಹಳ್ಳಿ