Advertisement

ಅವರು ಮುಟ್ಟಿದಾಗ ಬೈಕ್‌ಗೆ ಜೀವ ಬಂತು!

06:00 AM Nov 20, 2018 | |

ಸ್ನೇಹಿತನ ಬರ್ತ್‌ಡೇಗೆಂದು ಅಂದು ರಾಯಚೂರಿಗೆ ಹೋಗಿದ್ದೆ. ಎಲ್ಲ ಸಂಭ್ರಮ ಮುಗಿಯುವಾಗ ತಡರಾತ್ರಿ ಆಗಿತ್ತು. ಸ್ನೇಹಿತ, “ಇಲ್ಲೇ ಉಳಿದು, ಬೆಳಗ್ಗೆ ಹೋಗು’ ಎಂದ. ಆದರೆ, ಮರುದಿನ ನನಗೆ ತುರ್ತು ಕೆಲಸ ಇದ್ದಿದ್ದರಿಂದ, ರಾತ್ರಿಯೇ ಹೊರಡಬೇಕಾಯಿತು. ಅಲ್ಲಿಂದ ನನ್ನೂರಿಗೆ 60 ಕಿ.ಮೀ.; ಒಬ್ಬಂಟಿ ಪ್ರಯಾಣ. ಸ್ವಲ್ಪ ದೂರ ಹೋಗುವಷ್ಟರಲ್ಲಿ ಬೈಕ್‌ ಕೈ ಕೊಟ್ಟಿತು. ಅದನ್ನು ರಿಪೇರಿ ಮಾಡಲು ಎಷ್ಟೆಲ್ಲಾ ಪ್ರಯತ್ನಿಸಿಯೂ ವಿಫ‌ಲನಾದೆ. ಹುಟ್ಟುಹಬ್ಬದ ಮೂಡ್‌ನ‌ಲ್ಲಿರುವ ಸ್ನೇಹಿತನಿಗೆ ಈ ಹೊತ್ತಿನಲ್ಲಿ ತೊಂದರೆ ಕೊಡುವುದು ಬೇಡವನಿಸಿತು. ಬೇರೆ ದಾರಿ ಕಾಣದೇ, ಬೈಕನ್ನು ತಳ್ಳಿಕೊಂಡು ಹೊರಟೆ. 

Advertisement

ಮೂರ್ನಾಲ್ಕು ಕಿ.ಮೀ. ಹೋಗುವಷ್ಟರಲ್ಲಿ ಸುಸ್ತಾಗಿಬಿಟ್ಟಿತು. ಯಾರನ್ನಾದರು ಸಹಾಯ ಕೇಳ್ಳೋಣವೆಂದು ದಾರಿಯಲ್ಲಿ ಹೋಗುತ್ತಿರುವ ವಾಹನಗಳತ್ತ ಕೈ ಚಾಚಿದೆ. ನೂರಾರು ವಾಹನಗಳು ನನ್ನನ್ನು ನೋಡಿಯೂ, ನೋಡದವರಂತೆ “ರೊಂಯ್‌’ ಎಂದು ಮುಂದೆ ಹೋಗಿಬಿಡುತ್ತಿದ್ದವು. “ಇಲ್ಲಿ ಯಾರಿಗೆ ಯಾರೂ ಇಲಿÅ…’ ಎಂಬ ಹಾಡು ನೆನಪಾಯಿತು. ಇನ್ನು ಈ ರಾತ್ರಿ ಇಲ್ಲಿಯೇ ಠಿಕಾಣಿ ಅಂದುಕೊಂಡು ನಿರಾಶನಾಗಿ ರಸ್ತೆ ಪಕ್ಕದಲ್ಲಿಯೇ ಕುಳಿತುಬಿಟ್ಟೆ. ರಾತ್ರಿ ಅಲ್ಲಿಯೇ ಇದ್ದುಬಿಡಬೇಕಿತ್ತು, ಯಾಕಾದರು ಬಂದೆನೋ ಅಂತನ್ನಿಸಿ, ನನ್ನನ್ನೇ ಹಳಿದುಕೊಂಡೆ. ತುಸುಹೊತ್ತಿನ ಬಳಿಕ ದೊಡ್ಡ ಕಾರೊಂದು ಬಂದು ನನ್ನೆದುರು ನಿಂತಿತು. ನನಗ್ಯಾಕೊ ಗಾಬರಿ. ಆದರೂ ತೋರಿಸಿಕೊಳ್ಳಲಿಲ್ಲ. ಒಳಗಿನಿಂದ ಮಧ್ಯವಯಸ್ಕರೊಬ್ಬರು ಬಂದು, “ಏನ್‌ ಪ್ರಾಬ್ಲಿಮ್‌?’ ಅಂತ ಕೇಳಿದರು. “ಗಾಡಿ ಯಾಕೋ ಸ್ಟಾರ್ಟ್‌ ಆಗ್ತಿಲ್ಲ’ ಅಂದೆ. ಅವರು ಗಾಡಿಯನ್ನು ಪರೀಕ್ಷಿಸಿ, ಸ್ವಲ್ಪ ಹೊತ್ತಿನಲ್ಲಿಯೇ ಸರಿಪಡಿಸಿದರು. ನನಗಾಗ ಹೋದ ಜೀವ ಮರಳಿ ಬಂದಂತಾಗಿತ್ತು. ಈಗ ನೀವು ಹೊರಡಬಹುದು ಎಂಬಂತೆ ಸನ್ನೆ ಮಾಡಿ, ತಮ್ಮ ಕಾರಿನ ಬಾಗಿಲನ್ನು ದಢಾರನೆ ಹಾಕಿಕೊಂಡು, ಹೊರಟೇ ಬಿಟ್ಟರು. ಗಡಿಬಿಡಿಯಲ್ಲಿ ಅವರಿಗೊಂದು ಥ್ಯಾಂಕ್ಸ್‌ ಹೇಳುವುದನ್ನೂ ಕೂಡ ಮರೆತುಬಿಟ್ಟೆ. ನಡುರಾತ್ರಿ ಬೈಕ್‌ ಓಡಿಸುವಾಗ, ಈಗಲೂ ಆ ಪುಣ್ಯಾತ್ಮನ ನೆನಪಾಗುತ್ತದೆ.

– ನಾಗರಾಜ್‌ ಬಿ. ಚಿಂಚರಕಿ

Advertisement

Udayavani is now on Telegram. Click here to join our channel and stay updated with the latest news.

Next