ಆರನೇ ತರಗತಿಯ ಪ್ರತಿಮಾ, ಜಪಾನೀ ವ್ಯಕ್ತಿಯ ಹೆಸರಿನಲ್ಲಿ ಇನ್‌ಸ್ಟಗ್ರಾಮ್ ಖಾತೆ ಇಟ್ಟುಕೊಂಡಿದ್ದು, ಅಪರಿಚಿತ ಹುಡುಗರೊಂದಿಗೆ ಚಾಟ್ ಮಾಡಿದ್ದಾಳೆ. ಸೆಲ್ಫಿಯನ್ನು ಕಳಿಸಿದ್ದಾಳೆ. ಶಾಲೆಯಲ್ಲಿ ಬೇರೆ ಹುಡುಗಿಯರಿಗೂ ಈ ರೋಮಾಂಚನ ಅನಿಸುವ ಅನುಭವದ ಬಗ್ಗೆ ಮಾಹಿತಿ ಹಂಚಿಕೊಂಡು, ಇನ್‌ಸ್ಟಗ್ರಾಮ್‌ನ ಹುಚ್ಚು ಹಿಡಿಸಿದ್ದಾಳೆ. ಬೇರೆ ಹುಡುಗಿಯರು ಖಾತೆ ಹೊಂದಲು ಮುಂದುವರಿದಾಗ, ಶಾಲೆಯಲ್ಲಿ ಗುಲ್ಲಾಗಿದೆ. “ವಿ- ಚಾಟ್’ ಮತ್ತು “ಶೇರ್ ಚಾಟ್’ ಎಂಬ ಆ್ಯಪ್ ಮೂಲಕವೂ ತನ್ನ ಫೋಟೋಗಳನ್ನು ಹುಡುಗರಿಗೆ ಕಳಿಸಿದ್ದಾಳೆ. ಬಳಸಿದ ನಂತರ, ಸಿಕ್ಕಿಹಾಕಿಕೊಳ್ಳಬಾರದೆಂದು ಆ್ಯಪ್ ಅನ್‌ಇನ್‌ಸ್ಟಾಲ್ ಮಾಡುತ್ತಿದ್ದಳು.
ಇತ್ತೀಚೆಗೆ ಶಾಲೆಯಲ್ಲಿ ಶೈಕ್ಷಣಿಕ ಮಾಹಿತಿಯ ರವಾನೆಗೆ ವಾಟ್ಸಾಪ್ ಬಳಸುತ್ತಿರುವುದರಿಂದ ಮಕ್ಕಳ ಕೈಗೆ ಮೊಬೈಲು ಬರುವುದು ಅನಿವಾರ್ಯ. ಚಿಕ್ಕ ಮಕ್ಕಳು ವಿವೇಚನೆಯಿಂದ ಮೊಬೈಲ್ ಬಳಸಲು ಸಾಧ್ಯವಿಲ್ಲ. ಪ್ರತಿಮಾ ಕೆಲವು ದಿನ ಮೊಬೈಲ್ ಬಳಕೆ ಸರಿಯಾಗಿಯೇ ಮಾಡಿದ್ದಾಳೆ. ಆ ಹೊತ್ತಿನಲ್ಲಿ ಪ್ರತಿಮಾ ರಾತ್ರಿಯೆಲ್ಲಾ ನಿದ್ದೆಗೆಡುತ್ತಿದ್ದಳು. ಕೇಳಿದರೆ, ಓದುವ ನೆಪ. ಆಗ, ಪ್ರತಿಮಾ ಮೇಲೆ ಅನುಮಾನ ಬಂದು ತಂದೆ, “ಸ್ಪೈ ಸಾಫ್ಟ್ವೇರ್’ ಅಳವಡಿಸಿದ್ದರು. ಇವಳ ಪ್ರತಿಯೊಂದು ಚಾಟ್ ಅವರಿಗೆ ತಲುಪುತ್ತಿತ್ತು. ಕಂಗಾಲಾದ ತಂದೆ, ಶಾಲೆಗೆ ಹೋಗಿ ಮೊಬೈಲ್ ಬಳಕೆಯ ಅವಶ್ಯಕತೆಯ ಬಗ್ಗೆ ಜಗಳ ಆಡಿದ್ದಾರೆ. ಶಾಲೆಯವರು ಮಕ್ಕಳ ಬಗ್ಗೆ ಪೋಷಕರು ನಿಗಾ ಇಡಬೇಕೆಂದು ದಬಾಯಿಸಿದ್ದಾರೆ.
ನನ್ನ ಬಳಿ ಕೌನ್ಸೆಲಿಂಗ್‌ಗಾಗಿ ಬಂದಿರುವ ಮಕ್ಕಳು, ಜಪಾನೀ ಮೂಲದ, ಜನಪ್ರಿಯ ಮಾಂಗ ಮತ್ತು ಅನಿಮೆ ಕಾಟೂìನಿನಲ್ಲಿ ಬರುವ ಪಾತ್ರಗಳಿಂದ ಮಕ್ಕಳು ಪ್ರಭಾವಿತರಾಗಿದ್ದಾರೆ. ಅಂತರ್ಜಾಲದಲ್ಲಿ ಈ ಕಾಟೂìನು ಪಾತ್ರಗಳ ವಿವಿಧ ಅಭಿಮಾನಿ ಬಳಗವಿದೆ. ಅಪ್ರಾಪ್ತ ವಿಷಯದ ಮಾತಿಗೆ ಅಪರಿಚಿತರು ಇಲ್ಲೇ ಸಿಗುವುದು. ನಮಗೂ ಆ ರೀತಿಯ ಒಬ್ಬ ಫ್ರೆಂಡ್ ಇದ್ದರೆ ಎನ್ನುವ ಕನಸು, ಸಾಮಾಜಿಕ ಜಾಲತಾಣಗಳಲ್ಲಿ ನನಸಾಗುತ್ತದೆ. ಅವರೊಂದಿಗೆ ಏನು ಬೇಕಾದರೂ ಹಂಚಿಕೊಳ್ಳಬಹುದು ಎಂಬ ಭಾವನೆ ಮಕ್ಕಳಲ್ಲಿದೆ. ಕೆಲವು ಕಾಮಣ್ಣರು ತಪ್ಪು ದಾರಿಗೆ ಮಕ್ಕಳನ್ನು ಎಳೆಯುತ್ತಾರೆ.
ಪ್ರೌಢಾವಸ್ಥೆಯಲ್ಲಿ ಅನುರಾಗ ಮೂಡುವುದು ಸಹಜ. ಮಕ್ಕಳು ಅಪ್ರಾಪ್ತ ವರ್ತನೆಯನ್ನು ತೋರಿದಾಗ, ಮಕ್ಕಳಿಗೆ ಹೊಡೆಯಬೇಡಿ- ಬಯ್ಯಬೇಡಿ. ಮೊಂಡಾಗುತ್ತಾರೆ. ಕೆಲವು ಮಕ್ಕಳು ಧೈರ್ಯದ ಕೆಲಸಕ್ಕೆ ಕೈ ಹಾಕಬೇಕೆಂಬ ಮನೋಭಿಲಾಷೆ ಉಳ್ಳವರಾಗಿದ್ದು, ಯೂಟ್ಯೂಬ್ ಚಾನೆಲ್ ಹೊಂದಿರುತ್ತಾರೆ. ಅಂತರ್ಜಾಲದಲ್ಲಿ ಚೆಸ್ ಆಡುವ ಮಕ್ಕಳು ಬೇರೆಯವರೊಂದಿಗೆ ಚೆಸ್ ಆಡುತ್ತಿರುತ್ತಾರೆ. ಅಂತರ್ಜಾಲವನ್ನು ನೀಡುವ ಸಮಯವನ್ನು ಮೊಟಕುಗೊಳಿಸಿ. ಮಕ್ಕಳಿಗೆ ಅಂತರ್ಜಾಲದಲ್ಲಿ ಅಪಾಯವಿದೆ ಎಂದು ತಿಳಿ ಹೇಳಿ. ಸೈಬರ್ ಕ್ರೈಮ್ ಬಗ್ಗೆ ಮಾಹಿತಿ ನೀಡಿ. ಮಕ್ಕಳು ನೋಡಲು ದೊಡ್ಡವರಾಗಿ ಕಾಣಿಸುತ್ತಾರೆಯೇ ಹೊರತು, ಅಪಾಯದ ಮುನ್ನೆಚ್ಚರಿಕೆ ಇರುವುದಿಲ್ಲ. ಮಾರ್ಗದರ್ಶನ ನೀಡಿ. ಹೊರಗಡೆ ಆಟೋಟಗಳಲ್ಲಿ ಭಾಗಿಯಾಗಲು ಉತ್ತೇಜನ ಕೊಡಿ. ಫೇಸ್‌ಬುಕ್- ವಾಟ್ಸಾéಪ್ ಚಟುವಟಿಕೆಯನ್ನು ದೊಡ್ಡವರೂ ಕಡಿಮೆ ಮಾಡಬೇಕು. ಮಕ್ಕಳ ಬೆಳವಣಿಗೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ದೊಡ್ಡವರು ವಿಕಾಸ ಹೊಂದಬೇಕು.
ಡಾ. ಶುಭಾ ಮಧುಸೂದನ್, ಚಿಕಿತ್ಸಾ ಮನೋವಿಜ್ಞಾನಿ