ಕೂಡ್ಲಿಗಿ: ಚುನಾವಣೆಗಳು ಬಂದಾಗಷ್ಟೇ ಬಿಜೆಪಿಯವರಿಗೆ ಹಿಂದುತ್ವ ಹಾಗೂ ರಾಮಮಂದಿರ ನೆನಪಾಗುತ್ತೆ. ಇಂತಹ ಬಿಜೆಪಿಯವರಿಂದ ದೇಶ ರಕ್ಷಣೆ ಮಾಡಲು ಸಾಧ್ಯವೇ. ಇಂತಹವರಿಗೆ ಮತದಾರರು ತಕ್ಕಪಾಠ ಕಲಿಸಬೇಕೆಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕರೆ ನೀಡಿದರು.
ಪಟ್ಟಣದ ಸಂತೆ ಮೈದಾನದಲ್ಲಿ ಬುಧವಾರ ರಾತ್ರಿ ಕೂಡ್ಲಿಗಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಚುನಾವಣಾ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ದೇಶದ ಹಿತದೃಷ್ಟಿಯಿಂದ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಅವರನ್ನು ಗೆಲ್ಲಿಸಬೇಕು. ಬಿಜೆಪಿಯವರು ಜನರನ್ನು ಭಾವನಾತ್ಮಕವಾಗಿ ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆ. ಇದನ್ನು ಜನತೆ ತಿಳಿದುಕೊಳ್ಳಬೇಕೆಂದರು.
ಕೂಡ್ಲಿಗಿ ಕ್ಷೇತ್ರದಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿಕೊಳ್ಳಲು ಆಗಲಿಲ್ಲ. ಅನಿವಾರ್ಯ ಕಾರಣಗಳಿಂದ ಕಾಂಗ್ರೆಸ್‌ನಲ್ಲಿ ವ್ಯತ್ಯಾಸಗಳಿದ್ದವು. ಈಗ ಎಲ್ಲರೂ ಒಂದೇ ವೇದಿಕೆಯಲ್ಲಿ ಬಂದಿರುವುದ್ದರಿಂದ ಕೂಡ್ಲಿಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅತ್ಯಧಿಕ ಬಹುಮತ ಪಡೆಯುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಶ್ರೀರಾಮುಲು ಅವರು ರಾಜ್ಯದಲ್ಲಿ ಮಹದಾಯಿ, ಕಾವೇರಿಯ ವಿವಾದ ಸಮಸ್ಯೆ ಬಂದಾಗ ಎಲ್ಲಿಯೂ ಧ್ವನಿ ಎತ್ತಿಲ್ಲ. ಇಂತಹವರಿಂದ ಹೇಗೆ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯ ಎಂದರು.
ಕಾಂಗ್ರೆಸ್ ಹಿರಿಯ ಮುಖಂಡ ಎಚ್. ಕೆ.ಪಾಟೀಲ್ ಮತನಾಡಿ, ವಿ.ಎಸ್.ಉಗ್ರಪ್ಪ ಅವರು ಈಗಾಗಲೇ ಕೂಡ್ಲಿಗಿ ಕ್ಷೇತ್ರದ ಜನತೆಗೆ ಗೆಲ್ಲುವ ಮುಂಚೆಯೇ ಸೇವೆ ಮಾಡಿದ್ದಾರೆ. ಕೂಡ್ಲಿಗಿ ತಾಲೂಕಿನ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಯೋಜನೆಯನ್ನು ಕೂಡ್ಲಿಗಿ, ಪಾವಗಡಕ್ಕೆ ತರಲು ಅವಿರತ ಶ್ರಮಿಸಿದ್ದಾರೆ. ನಾನು ನೀರಾವರಿ ಸಚಿವರಾಗಿದ್ದಾಗ ನನ್ನನ್ನು ನಿರಂತರವಾಗಿ ಸಂಪರ್ಕಿಸಿ ಬರಗಾಲದ ಪ್ರದೇಶವಾದ ಕೂಡ್ಲಿಗಿ, ಪಾವಗಡದ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರಿನ ಯೋಜನೆ ಜಾರಿಗೆ ತಂದಿದ್ದು ಈ ಕಾಮಗಾರಿ ಈಗ ಪ್ರಕ್ರಿಯೆಯಲ್ಲಿದೆ. ಚುನಾವಣೆಗೂ ಮುಂಚೆಯೇ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಕೂಡ್ಲಿಗಿ ತಾಲೂಕಿನ ಜನತೆಯನ್ನು ಫ್ಲೋರೈಡ್ ಮುಕ್ತ ನೀರು ಕುಡಿಯುವಂತೆ ಯೋಜನೆ ರೂಪಿಸಿ ಕಾರ್ಯರೂಪಕ್ಕೆ ತಂದಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಲೋಕೇಶ್ ನಾಯಕ ಅವರನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಾಂಗ್ರೆಸ್‌ಗೆ ಬರಮಾಡಿಕೊಂಡರು. ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಂಜುನಾಥ್, ವಿಧಾನ ಪರಿಷತ್ ಸದಸ್ಯೆ ಜಯಮ್ಮ, ಕೂಡ್ಲಿಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುಳಿಗಿ ವೀರೇಂದ್ರ, ಮಾಜಿ ಶಾಸಕರಾದ ಎನ್ .ಟಿ.ಬೊಮ್ಮಣ್ಣ, ಶಿರಾಜ್ ಷೇಕ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವಯೋಗಿ, ಕಾಂಗ್ರೆಸ್ ಮುಖಂಡರಾದ ಲೋಕೇಶ್ ನಾಯಕ, ಮಹಿಳಾ ಮುಖಂಡರಾದ ನಾಗಮಣಿ, ಗುಜ್ಜಲ ರಘು, ಕೆ.ಶಿವಪ್ಪ ನಾಯಕ, ತುಪ್ಪಕನಹಳ್ಳಿ ರಮೇಶ್, ಉದಯ ಜನ್ನು, ಸುರೇಶ್ ಹೆಗ್ಡೆ, ಬೋರಣ್ಣ, ದಿಬ್ಬದಹಳ್ಳಿ ಸಿದ್ದೇಶ್, ಸಯ್ಯದ್ ಶುಕುರ್, ಕೋಗಳಿ ಮಂಜುನಾಥ್, ನಾಗರಕಟ್ಟೆ ರಾಜಣ್ಣ, ಕಾಟೇರ್ ಹಾಲೇಶ್, ಮಂಜುನಾಥ್ ಮಯೂರ, ಗುಡೇಕೋಟೆ ನೌಷಾದ್, ಜಯರಾಂ ನಾಯಕ ಇದ್ದರು.